ಬೆಂಗಳೂರು:ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮೀಸಲು ಬೇಡಿಕೆ ಕಗ್ಗಂಟನ್ನು ಸಾವಧಾನವಾಗಿ ಬಿಡಿಸಲು ಹೊರಟ ಬಿಜೆಪಿ ಸರ್ಕಾರ, ಒಕ್ಕಲಿಗರು ಹಾಗೂ ಪಂಚಮಸಾಲಿ (ಲಿಂಗಾಯತ) ಸಮುದಾಯಕ್ಕೆ ಶುಭ ಸುದ್ದಿ ನೀಡಿದೆ.
ಪ್ರವರ್ಗ 2ಎ ಮತ್ತು 2ಬಿ ಜತೆಗೆ 2ಸಿ ಮತ್ತು 2ಡಿಯನ್ನು ಹೊಸದಾಗಿ ರಚಿಸಿ ರಾಜ್ಯದ ಎರಡು ಪ್ರಬಲ ಸಮುದಾಯಗಳ ಬೇಡಿಕೆ ಈಡೇರಿಸಲು ಬಸವರಾಜ ಬೊಮ್ಮಾಯಿ ಸರ್ಕಾರ ತೀರ್ವನಿಸಿದೆ. ಗುರುವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭಾ ಅಧಿವೇಶನದ ಬಳಿಕ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ಮುಂದಿಟ್ಟುಕೊಂಡು ಚರ್ಚೆ ಆರಂಭಿಸಿದ ಸಂಪುಟ ಸಭೆಯಲ್ಲಿ ಕಾವೇರಿದ ವಾತಾವರಣ ಉಂಟಾಗಿತ್ತು. 2ಎ ಅಥವಾ 2ಬಿ ಮೀಸಲನ್ನು ಮುಟ್ಟದಂತೆ ಕೆಲ ಸಚಿವರು ಅಭಿಪ್ರಾಯ ಮಂಡಿಸಿದರು. ಆದರೆ, ಸಿಎಂ ಬೊಮ್ಮಾಯಿ ಸರಳ ಸೂತ್ರವನ್ನು ಮುಂದಿಟ್ಟು, ಮೀಸಲು ಕಗ್ಗಂಟನ್ನು ಬಿಡಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮತ್ತು ಎಸ್ಟಿ ಮೀಸಲು ಹೆಚ್ಚಳ ಮಾಡಬೇಕೆಂಬ ಕೂಗಿಗೆ ಮಾನ್ಯತೆ ನೀಡಿ ವಿಧೇಯಕ ಮಂಡಿಸಿದ್ದ ಸರ್ಕಾರ, ಈಗ ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದ ಮನವಿಗೂ ಪುರಸ್ಕಾರ ನೀಡಿದೆ.
2ಸಿ, 2ಡಿಗೆ ಲಾಭಆರ್ಥಿಕವಾಗಿ ಹಿಂದುಳಿದವರಿಗೆ ಇಡಬ್ಲ್ಯುಎಸ್‌ ಕೋಟಾದಡಿ ಶೇ.10ರಷ್ಟು ಮೀಸಲು ನೀಡಲಾಗುತ್ತಿದೆ. ಇದು ಶಿಕ್ಷಣ ಹಾಗೂ ಉದ್ಯೋಗಕ್ಕೆ ಮೀಸಲಾಗಿದೆ. ಇಡಬ್ಯು್ಲಎಸ್​ನಡಿ ಬ್ರಾಹ್ಮಣರು ಹಾಗೂ ವೈಶ್ಯರು ಸೇರಿದಂತೆ ಕೆಲವೇ ಜಾತಿಗಳು ಬರುತ್ತವೆ. ಇವರ ಜನಸಂಖ್ಯೆಯನ್ನು ಪರಿಗಣಿಸಿ ಮೀಸಲು ಪ್ರಮಾಣ ನಿಗದಿ ಮಾಡಲಾಗುತ್ತದೆ. ಜನಗಣತಿ ವರದಿ ಪರಿಗಣಿಸಿ ಇಡಬ್ಲ್ಯುಎಸ್‌​ನಡಿ ಶೇ.3ರಷ್ಟು ಮೀಸಲು ಸಿಗಲಿದೆ. ಅಂದರೆ, ಉಳಿದಿದ್ದರಲ್ಲಿ 2ಸಿಗೆ ಶೇ.2, 2ಡಿಗೂ ಹೆಚ್ಚುವರಿಯಾಗಿ ಮೀಸಲು ಸಿಗಲಿದೆ. ವಾರ್ಷಿಕ 8.5 ಲಕ್ಷ ರೂ. ಆದಾಯ ಮಿತಿ ಇರುವವರಿಗೆ ಈ ಮೀಸಲು ಬಳಸಿಕೊಳ್ಳಲು ಅವಕಾಶವಿದೆ. ಇನ್ನು, ಸೌಲಭ್ಯಗಳ ವಿಚಾರಕ್ಕೆ ಬಂದರೆ, ಹಿಂದುಳಿದ ವರ್ಗಗಳ ಆಯೋಗ ಮಾಡುವ ಶಿಫಾರಸನ್ನು ಸರ್ಕಾರ ಪರಿಗಣಿಸಲಿದೆ.
ಮುಂದೇನು?
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪ್ರಸ್ತುತ ಮಧ್ಯಂತರ ವರದಿ ನೀಡಿದೆ. ಮೂರು ತಿಂಗಳಲ್ಲಿ ಪೂರ್ಣ ವರದಿ ಸಲ್ಲಿಸಲಿದ್ದು, ಅದಾದ ಬಳಿಕ ಸರ್ಕಾರ ಕೇಂದ್ರಕ್ಕೆ ತನ್ನ ಶಿಫಾರಸು ಸಲ್ಲಿಸಲಿದೆ.
ಅಂತಿಮ ಸಾಧ್ಯತೆ
ನಿರ್ಣಯ ಪ್ರತಿ ನೋಡಿ ಮುಂದಿನ ನಿರ್ಧಾರ
ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡುವ ವಿಚಾರದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ನಮ್ಮ ಸಮುದಾಯಕ್ಕೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಿದೆ ಎಂದು ಸ್ಪಷ್ಟಪಡಿಸಿಲ್ಲ. ಸಚಿವ ಸಂಪುಟದ ನಿರ್ಣಯದ ಪ್ರತಿಗಳು ಕೈಗೆ ಸಿಗುವವರೆಗೆ ಕಾದು ನೋಡುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಎಂದು ಸರ್ಕಾರ ಹೇಳಿದ್ದು, ಒಂದು ಹಂತಕ್ಕೆ ಸಮಾಧಾನ ತಂದಿದೆ. ಸಂಪುಟದ ನಿರ್ಣಯದ ಪ್ರತಿಗಳು 2-3 ದಿನದಲ್ಲಿ ದೊರೆಯುವ ನಿರೀಕ್ಷೆ ಇದೆ. ನಮ್ಮ ಸಮುದಾಯಕ್ಕೆ ಎಷ್ಟು ಪ್ರಮಾಣ ಮೀಸಲಾತಿ ನೀಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಕೊಂಡು ಮುಂದಿನ ನಡೆ ತಿಳಿಸುತ್ತೇವೆ. ಅಲ್ಲಿಯವರೆಗೆ ಸಮುದಾಯದವರು ಮೀಸಲಾತಿ ಬಗ್ಗೆ ನಿರಾಸೆಯಾಗಬಾರದು ಹಾಗೂ ಮೀಸಲಾತಿಯನ್ನು ಸರ್ಕಾರ ಘೊಷಿಸಿದೆ ಎಂದು ವಿಜಯೋತ್ಸವ ಮಾಡಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 2ಎ ಮೀಸಲಾತಿ ಬೇಡಿಕೆಗೆ ಸಮನಾದ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ನೀಡಿದ ಭರವಸೆಯಲ್ಲಿ ಸ್ಪಷ್ಟತೆ ಇಲ್ಲ. ಆದರೆ, ನಮ್ಮ ಬೇಡಿಕೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದೆಯಷ್ಟೇ. ಆದರೆ, ಎಷ್ಟು ಪ್ರಮಾಣ ಮೀಸಲಾತಿ ಎಂದು ಗೊತ್ತಾಗುವವರೆಗೂ ಕಾಯುತ್ತೇವೆ ಎಂದರು.
ಜನಸಂಖ್ಯೆ ಆಧಾರ
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕಂದಾಯ ಸಚಿವ ಆರ್. ಅಶೋಕ್, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಇಂಧನ ಸಚಿವ ಸುನಿಲ್​ಕುಮಾರ್, ಆರೋಗ್ಯ ಸಚಿವ ಕೆ. ಸುಧಾಕರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಸಂಪುಟದ ನಿರ್ಣಯವನ್ನು ಹಂಚಿಕೊಂಡರು. ಬಹುದಿನಗಳ ಬೇಡಿಕೆಯನ್ನು ನಮ್ಮ ಸರ್ಕಾರ ಪರಿಗಣಿಸಿ ಈ ನಿರ್ಧಾರ ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ಬಂದ ನಂತರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುತ್ತದೆ. 3-4 ತಿಂಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದು ಮಾಧುಸ್ವಾಮಿ ಹೇಳಿದರು. 2ಸಿ ಮತ್ತು 2ಡಿನಡಿ ಬರುವ ಒಕ್ಕಲಿಗ ಮತ್ತು ಪಂಚಮಸಾಲಿ ಲಿಂಗಾಯತರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗಲಿದೆ. ರಾಜಕೀಯದಲ್ಲಿ ಮೀಸಲು ಹಿಂದೆ ಯಾವ ಪ್ರವರ್ಗದಲ್ಲಿ ಪಡೆಯುತ್ತಿದ್ದರೋ ಅದೇ ಮುಂದುವರಿಯಲಿದೆ ಎಂದರು.
ಹೀಗಿರಲಿದೆಯೇ ಮೀಸಲು ಲೆಕ್ಕ?
ರಾಜ್ಯದಲ್ಲಿ ಇಡಬ್ಲು್ಯಎಸ್​ನ ಶೇ.10 ಮೀಸಲನ್ನೂ ಪರಿಗಣಿಸುವುದರಿಂದ ಶೇ.66ರಷ್ಟು ತಲುಪಿದಂತಾಗಿದೆ. ಆದರೆ, ಈ ರೀತಿ ಶೇ.50 ಮೀರಿದಂತೆ ಮೀಸಲು ವಿಸ್ತರಿಸಲು ಅವಕಾಶವಿದೆ ಎಂದು ಸರ್ಕಾರ ವಾದಿಸಿದೆ. ಪರಿಶಿಷ್ಟ ಜಾತಿ ಶೇ.17, ಪರಿಶಿಷ್ಟ ಪಂಗಡ ಶೇ.7, ಪ್ರವರ್ಗ1- ಶೇ.4, ಪ್ರವರ್ಗ 2ಎ- ಶೇ.15, ಪ್ರವರ್ಗ 2ಬಿ- ಶೇ.4, ಪ್ರವರ್ಗ 2ಸಿ- ಶೇ.7, ಪ್ರವರ್ಗ 2ಡಿ- ಶೇ.9, ಇಡಬ್ಲು್ಯಎಸ್ (ಬ್ರಾಹ್ಮಣ, ವೈಶ್ಯ, ನಾಯರ್, ಮೊದಲಿಯಾರ್)-ಶೇ.2.
2ಸಿ, 2ಡಿ ಸೂತ್ರ
2ಎ ಮತ್ತು 2 ಬಿ ಜತೆಗೆ ಹೊಸದಾಗಿ ರಚನೆಯಾ ಗುವ 2ಸಿ ಮತ್ತು 2ಡಿ ಪ್ರವರ್ಗಕ್ಕೆ 3ಎ ಮತ್ತು 3 ಬಿನಲ್ಲಿರುವ ಸಮುದಾಯಗಳನ್ನು ವರ್ಗಾಯಿಸಲಾಗುತ್ತದೆ. ಅಂದರೆ, 3ಎನಲ್ಲಿರುವ ಒಕ್ಕಲಿಗರು 2ಸಿಗೂ, 3ಬಿನಲ್ಲಿರುವ ಲಿಂಗಾಯತರನ್ನು 2ಡಿಗೂ ವರ್ಗಾಯಿಸಲು ಸಂಪುಟ ಸಭೆ ತಾತ್ವಿಕವಾಗಿ ಒಪ್ಪಿದೆ. 2ಎ ಮತ್ತು 2ಬಿನಲ್ಲಿರುವ ಸಮುದಾಯಗಳಿಗೆ ಯಾವುದೇ ಮೀಸಲು ಕಡಿತ ಮಾಡದೆ ಹೊಸ ಲೆಕ್ಕಾಚಾರ ರೂಪಿಸಲಾಗಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ.
ಯಾರಿಗೆಲ್ಲ ಲಾಭ?
ಪ್ರವರ್ಗ ಬದಲಿಸಬೇಕೆಂಬ ಒಕ್ಕಲಿಗರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ನಮ್ಮ ಸಮುದಾಯದ ಬೇಡಿಕೆ ಈಡೇರಿಸಿದ್ದಾರೆ. ಮುಖ್ಯಮಂತ್ರಿಯವರಿಗೆ ಅಭಿನಂದನೆಗಳು.| ಆರ್.ಅಶೋಕ್ ಕಂದಾಯ ಸಚಿವ
ಲಿಂಗಾಯತರ ಮೀಸಲು ಬೇಡಿಕೆ ಸಂಬಂಧ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆದಿದ್ದವು. ಇದೀಗ ಸರ್ಕಾರ ಮಾನ್ಯ ಮಾಡಿದ್ದು, ನಮ್ಮ ಸಮಾಜದ ಪರವಾಗಿ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.| ಮುರುಗೇಶ್ ನಿರಾಣಿ ಕೈಗಾರಿಕೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 9 =
Remember me
