ಬೆಂಗಳೂರು:ಕಳೆದೆರಡು ವರ್ಷಗಳಲ್ಲಿ ಕರ್ನಾಟಕದಲ್ಲಿ 1,025 ಚದರ ಕಿ.ಮೀ. ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ತನ್ಮೂಲಕ ಅದು ಅರಣ್ಯ ಪ್ರದೇಶ ವಿಸ್ತೀರ್ಣ ಹೆಚ್ಚಳದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಇಲಾಖೆಯ ಭಾರತೀಯ ಅರಣ್ಯ ಸರ್ವೆಕ್ಷಣೆ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ಅರಣ್ಯ ಸ್ಥಿತಿ ವರದಿ- 2019ರ ದ್ವೈವಾರ್ಷಿಕ ವರದಿಯಲ್ಲಿ ಈ ಅಂಶ ತಿಳಿಸಲಾಗಿದೆ.
2017ರಲ್ಲಿ ಬಿಡುಗಡೆಯಾಗಿದ್ದ ವರದಿಯಲ್ಲಿನ ಅಂಕಿ ಅಂಶಗಳಿಗೆ ಹೋಲಿಸಿದಲ್ಲಿ ದೇಶಾದ್ಯಂತ 3,976 ಚದರ ಕಿ.ಮೀ. ಅರಣ್ಯ ವಿಸ್ತೀರ್ಣ ಹೆಚ್ಚಳವಾಗಿದೆ. ಆಂಧ್ರ ಪ್ರದೇಶ (990 ಚದರ ಕಿ.ಮೀ), ಕೇರಳ (823 ಚದರ ಕಿ.ಮೀ.) ಹಾಗೂ ಜಮ್ಮುಮತ್ತು ಕಾಶ್ಮೀರ (371 ಚದರ ಕಿ.ಮೀ) ಕ್ರಮವಾಗಿ ಕರ್ನಾಟಕದ ನಂತರದ ಸ್ಥಾನಗಳಲ್ಲಿವೆ.
ಉತ್ತಮ ಸಂರಕ್ಷಣಾ ಕ್ರಮಗಳು, ರಕ್ಷಣೆ, ಅರಣ್ಯೀ ಕರಣ ಚಟುವಟಿಕೆ, ವೃಕ್ಷಾರೋಪಣ ಅಭಿಯಾನ ಹಾಗೂ ಅರಣ್ಯ ಕೃಷಿಯಿಂದಾಗಿ ಅರಣ್ಯ ವಿಸ್ತೀರ್ಣ ಹಿಗ್ಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2017ರಲ್ಲಿ ಕರ್ನಾಟಕದಲ್ಲಿ 37,550 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯ ಪ್ರದೇಶವಿತ್ತು. ಐಆರ್​ಎಸ್ ರಿಸೋರ್ಸ್​ಸ್ಯಾಟ್-2 ಎಲ್​ಐಎಸ್​ಎಸ್ ಐಐಐ ಉಪಗ್ರಹದ ದತ್ತಾಂಶದ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಇದನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ಆರನೇ ಸ್ಥಾನ:ಒಟ್ಟು ಅರಣ್ಯ ಪ್ರದೇಶ ವಿಸ್ತೀರ್ಣದಲ್ಲಿ ಕರ್ನಾಟಕ 6ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕರ್ನಾಟಕದ ಒಟ್ಟು ಭೂಭಾಗದ (1.92 ಲಕ್ಷ ಚದರ ಕಿ.ಮೀ) ಶೇ.20.11 ಅರಣ್ಯವಿದೆ. ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಮಧ್ಯಪ್ರದೇಶ ಹೊಂದಿದೆ. ಒಟ್ಟಾರೆ ದೇಶದ 32.9 ಲಕ್ಷ ಚದರ ಕಿ.ಮೀ. ಭೂಭಾಗದ ಶೇ.23.34 ಅರಣ್ಯ ಪ್ರದೇಶ ಈ ರಾಜ್ಯದಲ್ಲಿದೆ.
ವೃಕ್ಷ ವೈವಿಧ್ಯತೆಯಲ್ಲೂ ಮುಂದು:ವೃಕ್ಷ, ಕುರುಚಲು ಹಾಗೂ ಗಿಡಮೂಲಿಕೆ ಎಂಬ ಮೂರು ವಿಭಾಗದಲ್ಲಿ ವೈವಿಧ್ಯತೆಯನ್ನು ವರದಿಯಲ್ಲಿ ವಿವರಿಸಲಾಗಿದೆ. ಈ ಪೈಕಿ ವೃಕ್ಷ ವೈವಿಧ್ಯತೆಯಲ್ಲಿ ಕರ್ನಾಟಕದ ಮೊದಲನೇ ಸ್ಥಾನದಲ್ಲಿದೆ. ಕುರುಚಲು (140) ಹಾಗೂ ಗಿಡಮೂಲಿಕೆ (40) ಸೇರಿ 505 ವಿಧಗಳ ವೃಕ್ಷಗಳು ಕಂಡುಬಂದಿವೆ. ಅರುಣಾಚಲ ಪ್ರದೇಶದಲ್ಲಿ ಅತಿಹೆಚ್ಚು ಕುರುಚಲು (435) ಹಾಗೂ ಜಮ್ಮುಮತ್ತು ಕಾಶ್ಮೀರದಲ್ಲಿ ಅತಿ ಹೆಚ್ಚು ಗಿಡಮೂಲಿಕೆಗಳು (272) ಇವೆ. ಒಟ್ಟಾರೆ ಮೂರೂ ವಿಭಾಗ ಸೇರಿಸಿದರೆ ಅರುಣಾಚಲ ಪ್ರದೇಶ ಮೊದಲ ಸ್ಥಾನದಲ್ಲಿದ್ದು (737), ನಂತರದಲ್ಲಿ ಕ್ರಮವಾಗಿ ತಮಿಳುನಾಡು (652) ಮತ್ತು ಕರ್ನಾಟಕ (505) ಇವೆ.
ಪಶ್ಚಿಮ ಘಟ್ಟದಲ್ಲಿ ರಾಜ್ಯದ ಶೇ.60 ಅರಣ್ಯ ಪ್ರದೇಶವಿದೆ. ಇಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ವೃಕ್ಷ ಹಾಗೂ ಕುರುಚಲು ವೈವಿಧ್ಯತೆ ಕಂಡುಬಂದಿರುವುದಾಗಿ ವರದಿ ತಿಳಿಸಿದೆ.
ಆಂಧ್ರಪ್ರದೇಶದಲ್ಲಿ ಪ್ರತಿ ವರ್ಷ 20-30 ಕೋಟಿ ಸಸಿ ನೆಡಲಾಗುತ್ತದೆ. ಕರ್ನಾಟಕದಲ್ಲಿ 6-8 ಕೋಟಿ ಸಸಿ ನೆಡಲಾಗುತ್ತದೆ. ಈ ಪೈಕಿ 2-3 ಕೋಟಿಯಷ್ಟು ಸಸಿಗಳನ್ನು ರೈತರು ತಮ್ಮ ಜಮೀನಿನಲ್ಲಿ ಬೆಳೆಸುತ್ತಿದ್ದಾರೆ. ಇದನ್ನು ಕೃಷಿ ಅರಣ್ಯ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿಯೂ ನಾವು ದೇಶದಲ್ಲೆ ಅತಿಹೆಚ್ಚು ಅರಣ್ಯ ಪ್ರದೇಶ ವಿಸ್ತರಿಸಿ ಕೊಂಡಿದ್ದೇವೆ. ಇಲಾಖೆ ಸಿಬ್ಬಂದಿ ಪರಿಶ್ರಮ, ಕಾಯ್ದೆ ಜಾರಿ ಜತೆಗೆ ಎಲ್​ಪಿಜಿ ಇಂಧನ ವ್ಯಾಪಕ ವಿತರಣೆಯೂ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.
| ಪುನಾಟಿ ಶ್ರೀಧರ್ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ
ಶಿವಮೊಗ್ಗದಲ್ಲಿ ಹೆಚ್ಚು ಅರಣ್ಯನಾಶ
ರಾಜ್ಯದಲ್ಲಿ ಒಟ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೂ ಹಿಂದಿನ ವರದಿಗೆ ಹೋಲಿಸಿದರೆ ಅಂದಾಜು 50 ಚದರ ಕಿ.ಮೀ. ಅರಣ್ಯವನ್ನು ಶಿವಮೊಗ್ಗ ಕಳೆದುಕೊಂಡಿದೆ. ಅರಣ್ಯನಾಶ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸದ್ಯ 4,270 ಚದರ ಕಿ.ಮೀ. ಅರಣ್ಯವಿದೆ. ಆದರೂ ಒಟ್ಟಾರೆ ಭೂಭಾಗದ ಶೇ.50 ಅರಣ್ಯ ಪ್ರದೇಶ ಶಿವಮೊಗ್ಗದಲ್ಲಿದ್ದು, ಆರನೇ ಸ್ಥಾನದಲ್ಲಿದೆ. 308.04 ಚದರ ಕಿ.ಮೀ ಅರಣ್ಯ ವಿಸ್ತೀರ್ಣ ಹೆಚ್ಚಳದೊಂದಿಗೆ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಉಡುಪಿ (145.38), ದಕ್ಷಿಣ ಕನ್ನಡ (139.66), ಮಂಡ್ಯ (127.32), ಕೋಲಾರ (61.39) ಸ್ಥಾನ ಹಂಚಿಕೊಂಡಿವೆ.
ಹಚ್ಚ ಹಸಿರು ಕೊಡಗು
ಕೊಡಗಿನ ಒಟ್ಟು ಭೂಭಾಗದ ಶೇ.79.56 ಅರಣ್ಯದಿಂದ ಆವೃತವಾಗಿದ್ದು, ರಾಜ್ಯದಲ್ಲೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಉತ್ತರ ಕನ್ನಡದ (ಶೇ.79.04), ಉಡುಪಿಯ (ಶೇ.63.75), ದಕ್ಷಿಣ ಕನ್ನಡ (ಶೇ.63.05), ಚಿಕ್ಕಮಗಳೂರಿನ (ಶೇ.54.87) ಸ್ಥಾನ ಪಡೆದಿವೆ. ಕೇವಲ ಶೇ.0.24 ಅರಣ್ಯ ಹೊಂದಿರುವ ವಿಜಯಪುರ ಕೊನೇ ಸ್ಥಾನದಲ್ಲಿದೆ. ರಾಯಚೂರು (ಶೇ.0.52), ಕೊಪ್ಪಳ (ಶೇ.0.60), ಬೀದರ್ (ಶೇ.1.62) ಕಲಬುರಗಿ (ಶೇ.1.78) ಭೂಭಾಗ ಅರಣ್ಯ ಹೊಂದಿವೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × three =
Remember me
