ನವದೆಹಲಿ:ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಸಹಜವಾಗಿ ರಾಜ್ಯದಲ್ಲಿ ಹೆಚ್ಚು ಸೀಟುಗಳನ್ನು ನಿರೀಕ್ಷಿಸುತ್ತಿರುವ ಎಐಸಿಸಿ ವರಿಷ್ಠರು, ರಾಜ್ಯದ 28 ಸಚಿವರೊಂದಿಗೆ ಮಹತ್ವದ ಸಭೆ 20ಕ್ಕಿಂತಲೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲಿಸಿಕೊಂಡು ಬರುವ ಟಾಸ್ಕ್ ನಿಗದಿ ಪಡಿಸಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಸಚಿವರೊಂದಿಗೆ ಗುರುವಾರ ಮಹತ್ವದ ಸಮಾಲೋಚನೆ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಚುನಾವಣೆ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು. ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ಹಿಡಿತದಲ್ಲಿಟ್ಟುಕೊಳ್ಳುವುದು, ಗ್ಯಾರಂಟಿ ಯೋಜನೆ ಪ್ರಚಾರ ಸಮಾವೇಶ ಆಯೋಜನೆ, ಮತದಾರರ ಪಟ್ಟಿ ಪರಿಷ್ಕರಣೆಗೆ ಗಮನ, ಅಭ್ಯರ್ಥಿ ಆಯ್ಕೆ ವೇಳೆ ಗೆಲ್ಲುವರನ್ನು ಮಾತ್ರ ಪರಿಗಣಿಸುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹಾಗೂ ಮತಗಳಿಕೆ ಹೆಚ್ಚಿಗೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಬೇಕೆಂದು ಸೂಚನೆ ನೀಡಿದರು.
ಫೆಬ್ರವರಿ 12ರಿಂದ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಅಷ್ಟರೊಳಗೆ ವಿಧಾನಸಭಾ ಕ್ಷೇತ್ರವಾರು ಗ್ಯಾರಂಟಿ ಸಮಾವೇಶ ನಡೆಸಲು ಸಹ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಜ.21ರಂದು ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದು, ಅಲ್ಲಿಂದ ಚುನಾವಣೆ ತಯಾರಿಗೆ ಮತ್ತೊಂದು ಸುತ್ತಿನ ತಯಾರಿ ಆರಂಭವಾಗಲಿದೆ. ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಎಲ್ಲಾ ಸಚಿವರು ಪಾಲ್ಗೊಳ್ಳುವರು.
ಸಮಾವೇಶಕ್ಕೆ ಎಲ್ಲಾ ಹಂತದ ಪದಾಧಿಕಾರಿಗಳು ಬರಬೇಕು, ಬೂತ್ ಹಂತದವರನ್ನೂ ಕರೆತರಬೇಕು, ದೊಡ್ಡ ಶಕ್ತಿಪ್ರದರ್ಶನ ಆಗಬೇಕೆಂದು ಕರೆಕೊಡಲಾಗಿದೆ. ಸರ್ಕಾರ ಉಳಿಯಲು ಲೋಕ ಗೆಲ್ಲಬೇಕು ರಾಜ್ಯದಲ್ಲಿ ನಮ್ಮ ಸರ್ಕಾರ ಉಳಿಯಬೇಕೆಂದರೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರಕ್ಕೆ ಅನಿಶ್ಚಿತತೆ ಕಾಡಲಿದೆ. ದಕ್ಷಿಣ ಭಾರತದಲ್ಲಿ ಕನಿಷ್ಠ 60-70 ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲೇಬೇಕು. ಕರ್ನಾಟಕದಲ್ಲಿ ಗೆಲ್ಲದಿದ್ದರೆ, ಎಐಸಿಸಿ ಅಧ್ಯಕ್ಷರ ರಾಜ್ಯದಲ್ಲಿಯೇ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಬರುತ್ತವೆ. ಶ್ರಮ ಹಾಕದಿದ್ದರೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸಭೆಯಲ್ಲಿ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ತಲೆದಂಡದ ಎಚ್ಚರಿಕೆ:ಸಚಿವರಿಗೆ ಗೆಲ್ಲಿಸಿಕೊಂಡು ಬರುವ ತಾಕತ್ತಿರಬೇಕು. ಹೆಚ್ಚು ಕ್ಷೇತ್ರಗಳನ್ನು ಗೆದ್ದಿಲ್ಲವೆಂದರೆ ಸಚಿವರಾಗಿ ಉಳಿಯಲು ಯಾವ ನೈತಿಕತೆ ಇರಲಿದೆ ಎಂದು ಪ್ರಶ್ನಿಸಿರುವ ವರಿಷ್ಠರು, ಗೆಲ್ಲಿಸದಿದ್ದರೆ ತಲೆದಂಡ ಅನಿವಾರ್ಯ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ನಿಮ್ಮ ಜಿಲ್ಲೆಯಲ್ಲೇ ಸೋತರೆ ಯಾವ ನೈತಿಕತೆ ಮೇಲೆ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತೀರಿ? ಸಣ್ಣಮಟ್ಟಿನ ನಿರ್ಲಕ್ಷವೂ ನಷ್ಟಕ್ಕೆ ಕಾರಣವಾಗಬಹುದು ಎಂದು ವರಿಷ್ಠರು ಎಚ್ಚರಿಸಿದ್ದಾರೆ.
ರಾಜಣ್ಣ, ಜಾರಕಿಹೊಳಿಗೆ ತರಾಟೆ:ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತಂತೆ ಪದೇಪದೆ ಹೇಳಿಕೆ ನೀಡುತ್ತಿರುವ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರಿಗೆ ವರಿಷ್ಠರು ಎಚ್ಚರಿಕೆ ನೀಡಿದರೆಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ ನಂತರವೂ ಹೇಳಿಕೆ ನೀಡುವ ಮೂಲಕ ಬಿಜೆಪಿ ಬಾಯಿಗೆ ಆಹಾರ ನೀಡಬೇಡಿ, ಗ್ಯಾರಂಟಿಗಳ ಮೂಲಕ ಸರ್ಕಾರ ಜನರ ಮನಸ್ಸಿಗೆ ಹತ್ತಿರದಲ್ಲಿರುವಾಗ ಲೋಕಸಭಾ ಚುನಾವಣೆಗೆ ಲಾಭ ಮಾಡಿಕೊಳ್ಳಬೇಕು. ಅದು ಬಿಟ್ಟು ಮುಜುಗರವ ಉಂಟು ಮಾಡುವುದು ಸರಿಯಲ್ಲವೆಂದು ಹೇಳಿದರೆನ್ನಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ಕೆಲ ಸಚಿವರು ಬಂದು ನನ್ನ ಬಳಿ ಪ್ರಸ್ತಾಪ ಮಾಡಿದಾಗ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಿದ್ದೆ, ಆದರೆ, ಕನ್ನಡದ ಮಾಧ್ಯಮವೊಂದರಲ್ಲಿ ನಮ್ಮ ಮಾತುಕತೆ ಯಥಾವತ್ ಪ್ರಕಟವಾಗಿದೆ ಎಂದರೆ ಏನರ್ಥ ಎಂದು ಸುರ್ಜೆವಾಲ ಅಸಮಾಧಾನ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ. ಶಾಸಕರು ಪಕ್ಷದ ಆಸ್ತಿಯೇ ಹೊರತು ವೈಯಕ್ತಿಕವಾಗಿ ಯಾರ ಬೆಂಬಲಿಗರಲ್ಲ, ಅದನ್ನು ಗಮನದಲ್ಲಿಟ್ಟುಕೊಂಡು ಮಂತ್ರಿಗಳಾದವರು ಮುಂದುವರಿಯಬೇಕು. ಡಿಸಿಎಂ ವಿಷಯ ಸೇರಿ ಎಲ್ಲವನ್ನೂ ಬಿಟ್ಟು ಲೋಕಸಭಾ ಚುನಾವಣೆ ಗೆಲ್ಲುವ ಕಡೆ ಗಮನ ಹರಿಸಿ ಎಂಬ ಸೂಚನೆ ನೀಡಿದರೆನ್ನಲಾಗಿದೆ.
ವಿವಾದಿತ ಹೇಳಿಕೆಗೆ ಬ್ರೇಕ್:ಚುನಾವಣೆ ವೇಳೆ ವಿನಾಕಾರಣ ವಿವಾದಾಸ್ಪದ ಹೇಳಿಕೆ ನೀಡುವುದನ್ನು ತಪ್ಪಿಸಬೇಕು. ಮಾಧ್ಯಮಕ್ಕೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಬಿಜೆಪಿ ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಉದಾಹರಣೆ ನಮ್ಮ ಕಣ್ಣಮುಂದಿದೆ ವರಿಷ್ಠರು ಕಿವಿಮಾತು ಹೇಳಿದ್ದಾರೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ, ಮುಂದಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸವಾಲುಗಳನ್ನು ಎದುರಿಸಲು ತಂತ್ರಗಳನ್ನು ಮಾಡುತ್ತಲೇ ಇರಬೇಕು. ಕೊಟ್ಟ ಜವಾಬ್ದಾರಿ ನಿಭಾಯಿಸಿ ಪಕ್ಷವನ್ನು ಗೆಲ್ಲಿಸಲೇಬೇಕು ಎಂದು ಖರ್ಗೆ, ವೇಣುಗೋಪಾಲ್ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಿದೆ ಎಂದು ಭಾವಿಸುವ ಅಗತ್ಯವೇ ಇಲ್ಲ. ಶಿಸ್ತಿನ ಗೆರೆ ದಾಟಿದರೆ ಕಠಿಣ ಕ್ರಮವನ್ನು ಎದುರಿಸಲೇಬೇಕಾಗುತ್ತದೆ. ಕಾಲಕ್ಕನುಗುಣವಾಗಿ ಹೈಕಮಾಂಡ್ ನೀಡುವ ಸಲಹೆಗಳನ್ನು ಪಾಲಿಸುತ್ತಿರಬೇಕು. ಮನಸೋಇಚ್ಛೆ ಮಾತನಾಡಿದರೆ ಏನೂ ಆಗದು ಎಂಬ ಭ್ರಮೆಯಿಂದ ಹೊರಬನ್ನಿ ಎಂಬ ಖಡಕ್ ಸಂದೇಶ ರವಾನೆಯಾಗಿದೆ. ಬೂತ್ ಮಟ್ಟದಿಂದಲೂ ಪಕ್ಷವನ್ನು ಬಲಪಡಿಸಬೇಕು. ಕಳೆದ ಬಾರಿ 25 ಸ್ಥಾನ ಬಿಜೆಪಿ ಗೆದ್ದಿತ್ತಾದರೂ, ವಿಧಾನಸಭೆ ಚುನಾವಣೆ ನಾವು ಗೆದ್ದಿರುವುದರಿಂದ ವಾತಾವರಣ ನಮ್ಮ ಕಡೆ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾಯಕರ ನಡುವೆ ಬಿರುಕು ಮೂಡಬಾರದು. ಪರಸ್ಪರ ಸಮನ್ವಯ ಕಾಪಾಡಿಕೊಂಡು ಕೆಲಸ ಮಾಡಿ ಎಂದು ಸಚಿವರಿಗೆ ಸಲಹೆ ನೀಡಲಾಗಿದೆ. ಕರ್ನಾಟಕ ಸೇರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮುಖಂಡರೂ ಸಭೆಯಲ್ಲಿ ಭಾಗಿಯಾಗಿದ್ದರು.
ಮಿಷನ್ ಸೌತ್:ತೆಲಂಗಾಣ ಹಾಗೂ ಕರ್ನಾಟಕದ ಮೇಲೆ ಕೈ ವರಿಷ್ಠರು ಹೆಚ್ಚು ನಿಗಾ ವಹಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಅಧಿಕಾರವಿರುವುದರಿಂದ ಹೆಚ್ಚು ಸೀಟು ಗಳಿಸುವ ಅನಿವಾರ್ಯತೆ ಪಕ್ಷದ ಮುಂದಿದೆ. ಸರ್ಕಾರ ಸುರಕ್ಷಿತವಾಗಿ ಇರಬೇಕೆಂದರೆ ಲೋಕಸಭೆ ಗೆಲ್ಲಬೇಕು ಎಂದು ವಿಶೇಷವಾಗಿ ತೆಲಂಗಾಣ ಮತ್ತು ಕರ್ನಾಟಕದ ಮುಖಂಡರಿಗೆ ವರಿಷ್ಠರು ತಿಳಿಸಿದ್ದಾರೆ.
ಕರ್ನಾಟಕದ ತಂತ್ರಗಾರಿಕೆ:ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಿದ ತಂತ್ರಗಾರಿಕೆಯ ಬಗ್ಗೆ ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರೂ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿ ಸಮನ್ವಯದಿಂದ ತಂತ್ರಗಾರಿಕೆ ರೂಪಿಸಿದರು. ಅದು ಫಲ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಅದೇ ತಂತ್ರಗಾರಿಕೆ ರೂಪಿಸುತ್ತೇವೆ. ಚುನಾವಣೆ ಹೇಗೆ ಮಾಡಬೇಕೆಂಬುದು ನಮಗೆ ಗೊತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಖಡಕ್ ಆಗಿ ಹೇಳಿದರೆಂದು ಮೂಲಗಳು ಹೇಳಿವೆ.
ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಎಐಸಿಸಿ ಅಧ್ಯಕ್ಷರು ಈಗಾಗಲೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ
| ಡಾ.ಜಿ. ಪರಮೇಶ್ವರ ಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
