ಬೆಂಗಳೂರು:ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಬಾಹುಳ್ಯದ ಲೋಕಸಭೆ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಜಾಡು ಅರಿತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೋಡಿ ‘ಒಕ್ಕಲಿಗರಿಗೆ ಆದ್ಯತೆ’ ಅಸ್ತ್ರ ಪ್ರಯೋಗಿಸಿದೆ.
ಮೊದಲ ಹಂತದ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳ ಪೈಕಿ ಏಳು ಜನ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಪ್ರಚಾರ ಸಭೆಗಳಲ್ಲಿ ಪದೇಪದೆ ಹೇಳುತ್ತಿದ್ದಾರೆ. ವಾಸ್ತವವಾಗಿ ಆರು ಜನ ಒಕ್ಕಲಿಗ ಅಭ್ಯರ್ಥಿಗಳಿದ್ದಾರೆ. ಹಿಂದುಳಿದ ವರ್ಗದ ಸೌಮ್ಯರೆಡ್ಡಿಯನ್ನು ಸೇರಿಸಿಕೊಂಡು ಏಳು ಜನ ಎಂದು ಕಾಂಗ್ರೆಸ್ ಕ್ಲೇಮ್ ಮಾಡಿದೆ. ಕಾಂಗ್ರೆಸ್ ಬಿಟ್ಟ ಒಕ್ಕಲಿಗ ಅಸ್ತ್ರ ನಿಷ್ಕ್ರಿಯಗೊಳಿಸಲು ಬಿಜೆಪಿ-ಜೆಡಿಎಸ್ ಜಂಟಿ ಅಸ್ತ್ರ ಪ್ರಯೋಗಕ್ಕೆ ಉತ್ಸುಕರಾಗಿವೆ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಪ್ರವಾಸವು ಮತ್ತೆ ಪರಿಷ್ಕರಣೆಯಾಗಿದೆ ಎಂದು ಹೇಳಲಾಗುತ್ತಿದೆ.
ಮೋದಿಗೆ ಗೌಡರ ಸಾಥ್ ಸಾಧ್ಯತೆ:ಮಂಗಳೂರಿನಲ್ಲಿ ಏ.14ರಂದು ನಡೆಸಲು ಉದ್ದೇಶಿಸಿದ್ದ ಮೋದಿಯವರ ಸಾರ್ವಜನಿಕ ಸಭೆಯು ಮೈಸೂರಿಗೆ ಶಿಫ್ಟ್ ಆಗಿದೆ. ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಜಂಟಿ ಕಹಳೆ ಮೊಳಗಿಸಲು ಬಿಜೆಪಿ ಯೋಚಿಸಿದೆ. ಸದ್ಯಕ್ಕೆ ಮೋದಿಯವರ ಮೈಸೂರು ಸಮಾವೇಶ ನಿಗದಿಯಾಗಿದೆ. ಇದೇ ವೇದಿಕೆಗೆ ದೇವೇಗೌಡರನ್ನು ಕರೆತರುವ ಬಗ್ಗೆ ಜೆಡಿಎಸ್ ನಾಯಕರೊಂದಿಗೆ ಕರೆತರಲು ಚಿಂತನೆ ನಡೆದಿದೆ.
ಮೈಸೂರಿನ ಸಮಾವೇಶಕ್ಕೆ ಸಾಧ್ಯವಾಗದಿದ್ದರೆ ಬೆಂಗಳೂರು ಭಾಗದಲ್ಲಿ ಏ.19ರ ಕಾರ್ಯಕ್ರಮವನ್ನು ಮೋದಿ-ಗೌಡರ ಜಂಟಿ ಸಮಾವೇಶವಾಗಿ ರೂಪಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಲ್ಕು ಕ್ಷೇತ್ರಗಳು ಕೇಂದ್ರೀಕೃತ:ಮೈಸೂರಿನಲ್ಲಿ ಏ.14ರ ಸಂಜೆ 4ಕ್ಕೆ ಬಹಿರಂಗ ಸಮಾವೇಶ ನಡೆಯಲಿದೆ. ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಕೇಂದ್ರೀಕರಿಸಲಾಗಿದೆ. ನಾಲ್ಕು ಕ್ಷೇತ್ರಗಳ ಜನರು, ಉಭಯ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಸೇರಿಸಿ ಜನಬಲ ಪ್ರದರ್ಶಿಸಲು ಬಿಜೆಪಿ ಆಲೋಚಿಸಿದೆ.
ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿ, ಹಾಸನ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ. ಎನ್​ಡಿಎ ಮೈತ್ರಿಕೂಟದ ತಲಾ ಇಬ್ಬರು ಅಭ್ಯರ್ಥಿಗಳ ಪರವಾಗಿ ಮೋದಿಯವರನ್ನು ಮತಬೇಟೆಗೆ ಇಳಿಯಲು ಮೈಸೂರು ಆಯ್ದುಕೊಂಡಿದ್ದಾರೆ. ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿರುವ ಕಾರಣ ಉಭಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಮಂಗಳೂರಿನಲ್ಲಿ ರೋಡ್ ಶೋ:ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಮೋದಿಯವರ ರೋಡ್ ಶೋ ಮಂಗಳೂರಿಗೆ ಶಿಫ್ಟ್ ಆಗಿದೆ. ಏ.14ರ ಸಂಜೆ 6ಕ್ಕೆ ಮಂಗಳೂರಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆಯವರೆಗೆ ಒಂದೂವರೆ ಕಿ.ಮೀ. ರೋಡ್ ಶೋ ನಡೆಯಲಿದೆ. ಇವೆರಡು ಕಾರ್ಯಕ್ರಮಗಳಲ್ಲದೆ, ಬಹಿರಂಗ ಪ್ರಚಾರಕ್ಕೆ ತೆರೆಬೀಳುವ ಮುನ್ನ ಮೋದಿಯವರು ಇನ್ನೆರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ತುಮಕೂರು-ಚಿತ್ರದುರ್ಗ ಒಳಗೊಂಡು ತುಮಕೂರು, ಬೆಂಗಳೂರಿನ ಮೂರು, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಒಳಗೊಂಡು ಇನ್ನೊಂದು ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಗ್ಗಟ್ಟು ಪ್ರದರ್ಶನ:ಒಕ್ಕಲಿಗರ ರಾಜಕಾರಣದ ವಿಚಾರವಾಗಿ ಕಾಂಗ್ರೆಸ್ ಹಾಗೂ ದೋಸ್ತಿ ಪಕ್ಷಗಳು ಒಕ್ಕಲಿಗರನ್ನು ಓಲೈಸಲು ಪೈಪೋಟಿಗೆ ಇಳಿದಿವೆ. ಈ ನಡುವೆ ಬೆಂಗಳೂರಿನ ವಿಜಯನಗರ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆಯುವ ನೆಪದಲ್ಲಿ ಎನ್​ಡಿಎ ಅಭ್ಯರ್ಥಿಗಳು ಬುಧವಾರ ಒಗ್ಗಟ್ಟು ಪ್ರದರ್ಶಿಸಿದರು.
ಶ್ರೀಮಠಕ್ಕೆ ಉಭಯ ಪಕ್ಷಗಳ ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ, ಪಿ.ಸಿ.ಮೋಹನ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಉಭಯ ಪಕ್ಷಗಳ ಶಾಸಕರು, ಮುಖಂಡರು ಜತೆಯಲ್ಲಿದ್ದರು.
ಒಕ್ಕಲಿಗ ಪಾಲಿಟಿಕ್ಸ್ ತಿರುಗುಬಾಣ ಅಳುಕು:ಕಾಂಗ್ರೆಸ್​ನವರು ಆರು ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದರೆ, ಬಿಜೆಪಿ ಮೂರು, ಜೆಡಿಎಸ್ ಎರಡು ಸೇರಿ ಐದು ಒಕ್ಕಲಿಗರಿದ್ದಾರೆ. ಹಿಂದುಳಿದ ವರ್ಗದವರಿಗೂ ಆದ್ಯತೆ ನೀಡಿದ್ದೇವೆ ಎಂದು ದೋಸ್ತಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ‘ಒಕ್ಕಲಿಗ ರಾಜಕಾರಣ’ದ ಬಿಸಿ ಚರ್ಚೆ, ಪರಸ್ಪರ ಸೆಳೆಯುವ ತಂತ್ರಗಾರಿಕೆ ಜೋರಾಗಿದೆ. ‘ಜಾತಿ ಲೆಕ್ಕಾಚಾರ’ ಹೆಚ್ಚೆಚ್ಚು ಬಿಂಬಿಸಿದರೆ ಎರಡನೇ ಹಂತದ 14 ಕ್ಷೇತ್ರಗಳಲ್ಲಿ ತಿರುಗುಬಾಣವಾಗಲಿದೆ ಎಂಬ ಅಳುಕು ಕಾಂಗ್ರೆಸ್ ನಾಯಕರಿಗಿದೆ. ಒಕ್ಕಲಿಗರಿಗೆ ಹೆಚ್ಚು ಕೊಟ್ಟಿದ್ದೇವೆ ಎಂದರೆ ಬೇರೆ ಸಮುದಾಯದವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದೇ ಅರ್ಥವೆಂದು ಬಿಜೆಪಿ ನಾಯಕರ ವ್ಯಾಖ್ಯಾನಿಸಿದ್ದಾರೆ. ಜಾತಿ ರಾಜಕಾರಣ ಮುಂದುವರಿದರೆ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಕೈ’ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳಲಿದೆ ಎಂಬ ಸೂಕ್ಷ್ಮ ಎಚ್ಚರಿಕೆಯನ್ನು ಆ ಭಾಗದ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
ಮೆಹಂದಿಯಲ್ಲಿ ಕಮಲ:ಮೋದಿಯವರ ಮೈಸೂರು ಮತ್ತು ಮಂಗಳೂರು ಕಾರ್ಯಕ್ರಮಗಳಿಗೆ ಕಾರ್ಯಕರ್ತರು ಕಮಲ ಅರಳಿದ ಮೆಹಂದಿ ಹಚ್ಚಿಕೊಂಡು ಭಾಗಿಯಾಗಬೇಕು ಎಂದು ಪಕ್ಷ ಕೋರಿದೆ. ಬೂತ್ ಅಧ್ಯಕ್ಷರ ಜತೆಗೆ ನಡೆಸಿದ ಸಂವಾದದಲ್ಲಿ ಮೋದಿ ವ್ಯಕ್ತಪಡಿಸಿದ ಅಭಿಲಾಷೆ ಕಾರ್ಯರೂಪಕ್ಕೆ ತರಲು ರಾಜ್ಯ ನಾಯಕರು ಮುಂದಾಗಿದ್ದಾರೆ.
ಕನ್ನಡದಲ್ಲೂ ‘ನಮೋ’ ಖಾತೆ:ನರೇಂದ್ರ ಮೋದಿಯವರು ಸಾಮಾಜಿಕ ಜಾಲ ತಾಣ ಎಕ್ಸ್​ನಲ್ಲಿ ಹೊಂದಿರುವ ಖಾತೆಯು ಇನ್ನು ಮುಂದೆ ಕನ್ನಡದಲ್ಲೂ ನಿರ್ವಹಣೆಯಾಗಲಿದೆ. ಮೋದಿ ಭಾಷಣ, ಸಂದೇಶ, ವಿಡಿಯೋಗಳನ್ನು ಈ ಖಾತೆಯಲ್ಲಿ ಅಪ್​ಲೋಡ್ ಮಾಡಲಾಗುತ್ತಿದೆ. ಅಂದ ಹಾಗೆ ಮೋದಿಯವರು ಯುಗಾದಿ ಹಬ್ಬದ ಶುಭಾಶಯ ಸಂದೇಶವನ್ನು ಮಂಗಳವಾರ ಕನ್ನಡದಲ್ಲೇ ಹಂಚಿಕೊಳ್ಳುವ ಮೂಲಕ ಕರ್ನಾಟಕದ ಜನರ ಹೃದಯ ಗೆಲ್ಲಲು ಪ್ರಯತ್ನಿಸಿದ್ದಾರೆ.
ಲೋಕಸಭಾ ಚುನಾವಣೆ ಆದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ನೋಡಿಕೊಂಡು ಸುಮ್ಮನೆ ಕೂರುತ್ತಾರೆ ಎಂಬ ವಿಶ್ವಾಸ ನನಗಂತೂ ಇಲ್ಲ. ಚುನಾವಣೆ ಬಳಿಕ ಕಾಂಗ್ರೆಸ್ ಧೂಳಿಪಟ ಆಗಲಿದೆ. ರಾಜ್ಯ ಸರ್ಕಾರದ ವೈಫಲ್ಯದ ಪರಿಣಾಮ ಬಿಜೆಪಿ, ಜೆಡಿಎಸ್ ಹೊಸ ದಾಖಲೆ ಸೃಷ್ಟಿಸಲಿವೆೆ.
| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 1 =
Remember me
