ರುದ್ರಣ್ಣ ಹರ್ತಿಕೋಟೆಬೆಳಗಾವಿ:ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಮುನ್ನೋಟ ನೀಡದೆ ಮಾಮೂಲಿ ಜಾಡಿಗೆ ಬಿದ್ದ ಕಲಾಪದಂತೆಯೇ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದೆ.
ಹತ್ತು ದಿನ ನಡೆಯಬೇಕಿತ್ತಾದರೂ ನಡೆದಿದ್ದು ಎಂಟು ದಿನಗಳು ಮಾತ್ರ. ರಾಜಕೀಯ ಕಾರಣಗಳಿಗಾಗಿಯೇ ಒಂದು ದಿನ ಮೊದಲೇ ಮೊಟಕಾಗಿದೆ. ಎಂಟು ದಿನಗಳಲ್ಲಿ ಅರ್ಥಗರ್ಭಿತ ಚರ್ಚೆ ನಡೆದಿದ್ದು ಕಡಿಮೆಯೇ. ಮುಖ್ಯಮಂತ್ರಿಗಳು ದೆಹಲಿ ಪ್ರವಾಸ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ವಿವಿಧ ಕ್ಷೇತ್ರಗಳಿಗೆ ತೆರಳುತ್ತಿದರಿಂದ ಕಲಾಪಕ್ಕೆ ಬಂದು ಹೋಗುತ್ತಿದ್ದರು.
ಬೆಳಗಾವಿ ಅಧಿವೇಶನ ನಡೆದಾಗಲೆಲ್ಲ ಎರಡು ದಿನ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರಗಳಿಗೆ ಮೀಸಲಿರುತ್ತಿತ್ತು. ಆದರೆ ಈ ಬಾರಿ ಅಧಿವೇಶನ ಮುಕ್ತಾಯಕ್ಕೆ ಒಂದು ದಿನ ಮೊದಲು ಆರಂಭವಾಯಿತಷ್ಟೇ. ಆದರೆ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ.
ಬೆಳಗಾವಿಯಲ್ಲಿ ನಡೆದ ಹನ್ನೊಂದನೇ ಅಧಿವೇಶನ ಇದು. ಇಲ್ಲಿ ಅಧಿವೇಶನ ನಡೆಸಲು ಆರಂಭಿಸಿದ ಸಂದರ್ಭದಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಿತ್ತು. ಅಧಿವೇಶನದ ಮೂಲಕ ಅವರ ಪ್ರಭಾವವನ್ನು ಸಾಕಷ್ಟು ತಗ್ಗಿಸಲಾಗಿದೆ. ಅದರ ಮುಂದಿನ ಭಾಗವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ಪರಿಹಾರ ರೂಪಿಸಿ ಇಲ್ಲಿನ ಜನರಲ್ಲಿ ಸರ್ಕಾರ ನಮ್ಮ ಪರವಾಗಿದೆ ಎಂಬ ವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿತ್ತು. ಆದರೆ ಸರ್ಕಾರ ಹಾಗೂ ಪ್ರತಿಪಕ್ಷ ನಡೆದುಕೊಂಡ ರೀತಿ ನೋಡಿದಾಗ ಕಾಟಾಚಾರದ ಅಧಿವೇಶನ ಎಂಬುದು ಈ ಭಾಗದ ಜನರಿಗೆ ಭಾಸವಾಗಿದೆ.
ಮೊದಲ ವಾರದಲ್ಲಿ ಹೆಚ್ಚಿನ ಚರ್ಚೆಗಳಾಗಲಿಲ್ಲ. ಪ್ರತಿ ಪಕ್ಷಗಳು ತರುವ ವಿಚಾರಗಳು ಹೆಚ್ಚಿನ ಚರ್ಚೆಯಾಗದಂತೆ ಅಥವಾ ಉತ್ತರ ಬಾರದಂತೆ ನೋಡಿಕೊಳ್ಳುವಲ್ಲಿ ಆಡಳಿತ ಪಕ್ಷ ಜಾಣ್ಮೆ ತೋರಿಸಿದ್ದು ಅಧಿವೇಶನದ ವಿಶೇಷವೂ ಹೌದು. ರಚನಾತ್ಮಕವಾದ ಚರ್ಚೆಗೆ ಸಮಯವನ್ನು ಸದನ ನೀಡಲಿಲ್ಲ.
ಚರ್ಚೆಗೆ ಬಾರದ ವಿಷಯಗಳು
ಮೀಸಲಾತಿಯೇ ಹೆಚ್ಚು ಚರ್ಚೆ
ಅಧಿವೇಶನದಲ್ಲಿ ಹೆಚ್ಚಿನ ಚರ್ಚೆಗೆ ಒಳಗಾಗಿದ್ದು ಮೀಸಲಾತಿ ವಿಚಾರ. ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸದನದಲ್ಲಿ ವಿಧೇಯಕ ಅಂಗೀಕಾರವಾಗಿದ್ದು ಒಂದೆಡೆಯಾದರೆ, ಪಂಚಮಸಾಲಿ ಮೀಸಲಾತಿ ಸೇರಿದಂತೆ ಸಾಕಷ್ಟು ಸಮುದಾಯಗಳ ಮೀಸಲಾತಿಯ ವಿಚಾರ ಸುವರ್ಣಸೌಧದ ಒಳಗೆ ಹಾಗೂ ಹೊರಗೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಉ.ಕರ್ನಾಟಕ್ಕೆ ಸಿಕ್ಕ ಸಿಹಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ, ಪರಿಹಾರ, ಅಭಿವೃದ್ಧಿ ಬಗ್ಗೆ ಸಮರ್ಥ ಚರ್ಚೆಯಾಗದಿದ್ದರೂ ಕೊನೆಯ ದಿನ ಕಳಸಾ-ಬಂಡೂರಿ ವಿಚಾರದಲ್ಲಿ ಸಿಹಿ ಸುದ್ದಿ ಸಿಕ್ಕಿದ್ದು ವಿಶೇಷ. ಆದರೆ ಆ ಸಂತಸ ಅನುಭವಿಸುವುದಕ್ಕೂ ಶಾಸಕರ ಸಂಖ್ಯೆ ವಿರಳವಾಗಿತ್ತು.
ಬಾರದ ಉತ್ತರಗಳು
ನೀರಾವರಿ ವಿಚಾರ, ಪ್ರಾಣಿಗಳ ಹಾವಳಿ, ಚರ್ಮಗಂಟು ರೋಗ, ರೈತರ ಸಂಕಷ್ಟ, ನಿರುದ್ಯೋಗ ಮೊದಲಾದ ವಿಚಾರಗಳು ಸಮರ್ಪಕ ಚರ್ಚೆಗೆ ಒಳಪಡಲಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಶಾಸಕರಿಗೆ ಕಲಾಪದತ್ತ ಗಮನ ಇರಲಿಲ್ಲ. ಕಲಾಪಕ್ಕೆ ಬಂದು ಸಹಿ ಹಾಕಿ ಹೋಗುವುದಕ್ಕೆ ಬಹುತೇಕ ಶಾಸಕರು ಆಸಕ್ತಿ ತೋರಿಸಿದರು. ಅದರಿಂದ ಶಾಸಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.
ಕಾಂಗ್ರೆಸ್ ಭಯೋತ್ಪಾದನೆಯ ಪರವೆಂದು ಬಿಂಬಿಸುವ ಪ್ರಯತ್ನವನ್ನು ಆಡಳಿತ ಪಕ್ಷ ಮಾಡಿದರೆ, ಅದಕ್ಕೆ ತಿರುಗೇಟು ನೀಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದ್ದೂ ಸಹ ಚುನಾವಣೆಯ ದೃಷ್ಟಿಯಿಂದಲೇ ಎಂಬುದು ನಿಜ. ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್ ಪೋಟೋ, ಅದಕ್ಕೆ ಪ್ರತಿಯಾಗಿ ಕುವೆಂಪು, ನಾರಾಯಣಗುರು, ಕನಕದಾಸ, ವಾಲ್ಮೀಕಿ ಸೇರಿ ಇತರರ ಪೋಟೋ ಹಾಕುವಂತೆ ಕಾಂಗ್ರೆಸ್ ಒತ್ತಾಯ ಸಹ ಅವರ ಮನಸ್ಸಿನಲ್ಲಿ ಇದ್ದದ್ದು ಮುಂದಿನ ಚುನಾವಣೆಯ ಮತ ಕ್ರೋಡೀಕರಣ ಮಾತ್ರ.
ಸಭಾಪತಿ ಆಯ್ಕೆ
ಬೆಳಗಾವಿ ಅಧಿವೇಶನ ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆಗೆ ಸಾಕ್ಷಿಯಾಯಿತು. ಉತ್ತರ ಭಾಗದಲ್ಲಿ ಅಧಿವೇಶನ ನಡೆಯುವ ಸಂದರ್ಭ ಈ ಭಾಗದ ಹಂಗಾಮಿ ಸಭಾಪತಿಯನ್ನು ಕೆಳಗಿಳಿಸಿ ಇದೇ ಭಾಗದ ಇನ್ನೊಬ್ಬರಿಗೆ ಆ ಅವಕಾಶ ನೀಡಲಾಯಿತು. ಪದೇ ಪದೇ ಕೆದಕುವ ಮಹಾರಾಷ್ಟ್ರಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಆ ರಾಜ್ಯದ ನಾಯಕರ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ವಿಧಾನಮಂಡಲ ಅಂಗೀಕರಿಸಿತು. ಆದರೆ ಮಹಾರಾಷ್ಟ್ರ ಮತ್ತೊಮ್ಮೆ ರಾಜ್ಯದ ಭೂ ಪ್ರದೇಶದ ಮೇಲೆ ಕಣ್ಣಾಕುವ ನಿರ್ಣಯ ಮಾಡಿದೆ. ಅದಕ್ಕೆ ಅಧಿವೇಶನದ ಮೂಲಕವೇ ಉತ್ತರ ನೀಡಿ ಕರ್ನಾಟಕಕ್ಕೆ ಸೇರಬೇಕಾದ ಮಹಾರಾಷ್ಟ್ರದ ಭೂ ಭಾಗ ಕೇಳುವ ನಿರ್ಣಯ ಮಾಡಲಿಲ್ಲ.
ಸ್ಪೀಕರ್ ಅಸಮಾಧಾನ
ಸಚಿವರೇ ಇಲ್ಲವೆಂದು ಕಲಾಪ ಮುಂದೂಡಿದ ಘಟನೆಗೂ ಇದೇ ಮೊದಲ ಬಾರಿಗೆ ಅಧಿವೇಶನ ಸಾಕ್ಷಿಯಾಯಿತು. ಸಚಿವ ಮಾಧುಸ್ವಾಮಿ ವಿರುದ್ಧ ಸ್ಪೀಕರ್ ಕಿಡಿಕಿಡಿಯಾದರು.
ವಿಧೇಯಕಗಳು ಚರ್ಚೆ
ಬೆಳಗಾವಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧೇಯಕ, ಖಾಸಗಿ ವಿವಿಗಳ ವಿಧೇಯಕ, ಕಾಫಿ ತೋಟಗಳು ಲೀಸ್ ನೀಡುವುದೂ ಸೇರಿದಂತೆ ಕೆಲವು ವಿಧೇಯಕಗಳ ಮೇಲೆ ಚರ್ಚೆಯಾಗಿದ್ದು ವಿಶೇಷ. ಆದರೆ ಗದ್ದಲವಾಗಲಿಲ್ಲ.
ಅಧಿವೇಶನ ಸಂದರ್ಭದಲ್ಲಿಯೂ ಸಂಪುಟ ವಿಸ್ತರಣೆ ಚರ್ಚೆಗೆ ಬಂದಿತ್ತು. ಮುಖ್ಯಮಂತ್ರಿ ದೆಹಲಿಗೆ ಹೋಗಿ ಬಂದ ನಂತರ ಬಿಜೆಪಿ ವಲಯದಲ್ಲಿ ಚರ್ಚೆ ಹೆಚ್ಚಾಗುವಂತೆ ಮಾಡಲಾಗುತ್ತಿತ್ತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
