ಬೆಂಗಳೂರು:ಅ.15ರಿಂದ ಸಿನಿಮಾ ಥಿಯೇಟರ್​ಗಳ ಆರಂಭಕ್ಕೆ ಕೇಂದ್ರ ಸರ್ಕಾರ ಹಸಿರುನಿಶಾನೆ ತೋರಿಸಿದೆ. ಆದರೆ, ಈಗ ಚಿತ್ರಮಂದಿರ ತೆರೆದರೆ, ಸಿನಿಮಾ ಬಿಡುಗಡೆ ಮಾಡುವವರ ಮುಂದೆ ಹಲವು ಸವಾಲುಗಳಿವೆ. ಅಲ್ಲದೇ ಲಾಭ- ನಷ್ಟದ ಲೆಕ್ಕಾಚಾರವಿದೆ. ಆದ್ದರಿಂದ ಅ.15ರಿಂದ ನಿಜಕ್ಕೂ ಚಿತ್ರಪ್ರದರ್ಶನ ಪ್ರಾರಂಭವಾಗುತ್ತದಾ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ.
ಈ ಸಂಬಂಧ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮಹತ್ವದ ಸಭೆ ಗುರುವಾರ ನಡೆದಿದ್ದು, ಈ ಸಭೆಯಲ್ಲಿ ಸಿನಿಮಾ ಪ್ರದರ್ಶನ ಪ್ರಾರಂಭಿಸುವ ನಿರ್ಧಾರ ಮಾಡಲಾಗಿದೆ. ಅದಕ್ಕೆ ಸರಿಯಾಗಿ, ಲಾಕ್​ಡೌನ್​ಗಿಂತ ಮೊದಲು ಬಿಡುಗಡೆಯಾಗಿದ್ದ ‘ಲವ್ ಮಾಕ್ಟೇಲ್’, ‘ಜಂಟಲ್​ವ್ಯಾನ್’, ‘ಶಿವಾರ್ಜುನ’, ‘ದಿಯಾ’ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಆಯಾ
ಚಿತ್ರಗಳ ನಿರ್ವಪಕರು ಮುಂದಾಗಿದ್ದಾರೆ. ಈ ಪೈಕಿ ‘ಲವ್ ಮಾಕ್ಟೇಲ್’ ಮತ್ತು ‘ಶಿವಾರ್ಜುನ’ ಚಿತ್ರಗಳು ಮುಂದಿನ ಶುಕ್ರವಾರದಿಂದ (ಅ.16) ಪುನಃ ಹಿರಿತೆರೆ ಮೇಲೆ ಮೂಡಿಬರಲಿವೆ.
ಚಿತ್ರಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಹಲವು ನಿರ್ವಪಕರು ಚಿತ್ರ ಬಿಡುಗಡೆ ಮಾಡುವುದು ಕಷ್ಟ ಎಂದು ಹೇಳಲಾಗಿತ್ತು. ಅದಕ್ಕೆ ಕಾರಣ, ಚಿತ್ರ ಪ್ರದರ್ಶನಕ್ಕೆ ಏಕಪರದೆಯ ಚಿತ್ರಮಂದಿರಗಳಲ್ಲಿ ಬಾಡಿಗೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇಕಡಾವಾರು ಪದ್ಧತಿ ಇದೆ. ಏಕಪರದೆಯ ಚಿತ್ರಮಂದಿರಗಳಲ್ಲಿ ವಾರಕ್ಕೆ ಎಷ್ಟು ಕಲೆಕ್ಷನ್ ಆದರೂ ಇಂತಿಷ್ಟು ಅಂತ ಬಾಡಿಗೆ ಕಟ್ಟಬೇಕು. ಕಲೆಕ್ಷನ್ ಕಡಿಮೆಯಾದರೆ ನಿರ್ಮಾಪಕರೇ ಕೈಯಿಂದ ಹಣ ಸೇರಿಸಿ ಬಾಡಿಗೆ ಕಟ್ಟಬೇಕಿತ್ತು. ಮಲ್ಟಿಪ್ಲೆಕ್ಸ್ ಮಾದರಿಯಲ್ಲಿ ಶೇಕಡಾವಾರು ಪದ್ಧತಿ ತರಬೇಕು ಎಂಬ ಬೇಡಿಕೆ ಇದೆ. ಈಗ ಶೇ.50 ಪ್ರೇಕ್ಷಕರಿಗೆ ಅವಕಾಶ ನೀಡಿ ಚಿತ್ರ ಪ್ರದರ್ಶನ ಮಾಡಬೇಕು ಎಂದು ಸರ್ಕಾರ ಹೇಳಿದೆ. ಅದೇ ಹಳೆಯ ಬಾಡಿಗೆ ವ್ಯವಸ್ಥೆಯಾದರೆ ಚಿತ್ರ ಬಿಡುಗಡೆ ಅಸಾಧ್ಯ ಎಂಬ ಮಾತು ನಿರ್ವಪಕರ ವಲಯದಲ್ಲಿ ಕೇಳಿಬಂದಿತ್ತು.
ವರಮಾನ ಹಂಚಿಕೆ ಅವರವರಿಗೆ ಬಿಟ್ಟಿದ್ದು:ಸಭೆಯಲ್ಲಿ ಈ ವಿಷಯದ ಕುರಿತಾಗಿ ಚರ್ಚೆ ನಡೆದಿದ್ದು, ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಪ್ರದರ್ಶನಗೊಳ್ಳುವ ಚಿತ್ರಗಳ ವಿತರಕರು ಅಥವಾ ನಿರ್ವಪಕರ ಜತೆ ಆಯಾ ಚಿತ್ರಮಂದಿರಗಳ ಮಾಲೀಕರು ಮಾತುಕತೆ ನಡೆಸಿ, ಅವರ ಪಾಲಿನ ವರಮಾನದ ವಿಷಯದಲ್ಲೂ ಅವರೇ ಸ್ವಯಂ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗಾಗಿ, ಮುಂದಿನ ಕೆಲವು ತಿಂಗಳುಗಳ ಕಾಲ ನಿರ್ದಿಷ್ಟ ಬಾಡಿಗೆ ಅಥವಾ ಶೇಕಡಾವಾರು ಹಂಚಿಕೆಯ ಬದಲು, ಸದ್ಯದ ಪರಿಸ್ಥಿತಿ ಮತ್ತು ಚಿತ್ರದ ಗಾತ್ರ ನೋಡಿಕೊಂಡು ಚಿತ್ರಮಂದಿರಗಳ ಮಾಲೀಕರು, ನಿರ್ವಪಕರು ಅಥವಾ ವಿತರಕರೇ ಒಂದು ಒಡಂಬಡಿಕೆಗೆ ಬಂದು ವರಮಾನವನ್ನು ಹಂಚಿಕೊಳ್ಳುವ ಬಗ್ಗೆ ತೀರ್ವನಕ್ಕೆ ಬರಲಾಗಿದೆ. ಹಾಗೆಯೇ, ನಿತ್ಯ ಎಷ್ಟು ಪ್ರದರ್ಶನಗಳನ್ನು ಮಾಡಬೇಕೆಂಬುದನ್ನು ನಿರ್ವಪಕರು ಅಥವಾ ವಿತರಕರ ವಿವೇಚನೆಗೆ ಬಿಡಲಾಗಿದೆ.
ಹಲವು ವಿಷಯಗಳ ಕುರಿತು ತೀರ್ಮಾನ:ಸ್ವಚ್ಛತೆಯ ವಿಷಯದ ಬಗ್ಗೆ ಗಮನಹರಿಸುವುದು, ಸಂಘವು ಸರ್ಕಾರದ ಎದುರು ಇಟ್ಟಿರುವ ಮನವಿ ಈಡೇರಿಸಲು ಒತ್ತಡ ತರುವುದು, ಚಿತ್ರಮಂದಿರಗಳಲ್ಲಿ ಚಿತ್ರವೀಕ್ಷಣೆ ಸುರಕ್ಷಿತವಾಗಿದೆ ಎಂಬ ಭರವಸೆಯನ್ನು ಪ್ರೇಕ್ಷಕರಿಗೆ ಮೂಡಿಸುವುದು, ಚಿತ್ರಮಂದಿರಗಳ ಎದುರು ಪ್ರೇಕ್ಷಕರ ಸರದಿ ಸಾಲು ಕಡಿಮೆ ಮಾಡಿ ಆನ್​ಲೈನ್ ಬುಕಿಂಗ್ ವ್ಯವಸ್ಥೆಯನ್ನು ಹೆಚ್ಚಿಸುವುದು, ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಬ್ಯಾನರ್ ಮೂಲಕ ಚಿತ್ರಮಂದಿರದ ಒಳಗೆ ಮತ್ತು ಹೊರಗೆ ಪ್ರಚಾರ ಮಾಡುವುದು ಮುಂತಾದ ಹಲವು ವಿಷಯಗಳನ್ನು ಈ ಸಭೆಯಲ್ಲಿ ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚಿತ್ರಬಿಡುಗಡೆ ಮಾಡಿದರೆ ಜನ ಚಿತ್ರಮಂದಿರಕ್ಕೆ ಬರುತ್ತಾರಾ ಎಂಬುದೇ ಮುಖ್ಯ ಪ್ರಶ್ನೆ. ದೇಶದಲ್ಲಿ ಕರೊನಾ ಹಾವಳಿ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಜನ ಭಯ ಬಿಟ್ಟು ಚಿತ್ರಮಂದಿರಗಳಿಗೆ ಬರುತ್ತಾರಾ ಎಂಬ ಪ್ರಶ್ನೆ ಚಿತ್ರಪ್ರದರ್ಶಕರು, ನಿರ್ವಪಕರು ಮತ್ತು ವಿತರಕರನ್ನು
ಕಾಡುತ್ತಿದೆ. ಹಾಗಾಗಿ ಸದ್ಯಕ್ಕೆ ಬೆರಳಣಿಕೆಯಷ್ಟು ನಿರ್ವಪಕರು ಮಾತ್ರ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಪ್ರೇಕ್ಷಕರು ಕರೊನಾ ನಿಯಮಗಳನ್ನು ಪಾಲಿಸಿ ಚಿತ್ರಮಂದಿರಕ್ಕೆ ಬಂದರೆ ಆಗ ಇನ್ನಷ್ಟು ಹೊಸ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
‘ಮದರಂಗಿ’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್ ಮಾಕ್ಟೇಲ್’ ಚಿತ್ರವನ್ನು ನಿರ್ವಪಕ ಮತ್ತು ವಿತರಕ ಜಾಕ್ ಮಂಜು ಮರುಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಜನರನ್ನು ಚಿತ್ರಮಂದಿರಗಳತ್ತ ಕರೆತರುವುದಕ್ಕೆ ಟಿಕೆಟ್ ದರವನ್ನು ಸಹ ಕಡಿಮೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಜನ ಚಿತ್ರಮಂದಿರಕ್ಕೆ ಬರಬೇಕೆಂಬುದೇ ಮೂಲ ಉದ್ದೇಶ. ವ್ಯಾಪಾರ ಸದ್ಯಕ್ಕೆ ನಗಣ್ಯ. ಹಾಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿದ್ದೇವೆ. ಏಕಪರದೆ ಚಿತ್ರಮಂದಿರಗಳಲ್ಲಿ ಸೆಕೆಂಡ್ ಕ್ಲಾಸ್ ಟಿಕೆಟ್​ನ ಬೆಲೆ 40 ರೂ. ಮತ್ತು ಬಾಲ್ಕನಿ ಟಿಕೆಟ್​ನ ಬೆಲೆಯನ್ನು 50 ರೂ. ನಿಗದಿಗೊಳಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಬಾಡಿಗೆ ಅಥವಾ ಷೇರು ಮುಖ್ಯವಲ್ಲ. ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿದರೆ, ನಾಳೆ ಬೇರೆಯವರು ಧೈರ್ಯವಾಗಿ ಬಿಡುಗಡೆ ಮಾಡುತ್ತಾರೆ. ಚಿತ್ರರಂಗ ಯಥಾಸ್ಥಿತಿಗೆ ಬರಬೇಕೆಂದರೆ, ಸಿನಿಮಾಪ್ರದರ್ಶನ ಪ್ರಾರಂಭವಾಗಲೇಬೇಕು. ಎಲ್ಲರೂ ಬಿಡುಗಡೆ ಮಾಡಿದರೆ, ಆಗ ಚಿತ್ರರಂಗ ಹಿಂದಿನ ಹಳಿಗೆ ಬರುತ್ತದೆ. ಇದರಿಂದ ಹಣ ಮಾಡಬೇಕೆಂಬ ಉದ್ದೇಶವಿಲ್ಲ’ ಎನ್ನುತ್ತಾರೆ ಜಾಕ್ ಮಂಜು.
‘ಮತ್ತೆ ಬರ್ತಿದ್ದಾರೆ ಚಿರು ಎಂದ್ರು ಮೇಘನಾ…’: ಇದು ಮಗುವಿಗೆ ಸಂಬಂಧಪಟ್ಟದ್ದಲ್ಲ, ಇನ್ನೊಂದು ಸಿಹಿ ಸಮಾಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 4 =
Remember me
