ಹಾವೇರಿ:ನೆರೆ ಪರಿಹಾರ ವಿತರಣೆ ವೇಳೆ ನಡೆದಿರುವ ಅಕ್ರಮ ಪ್ರಕರಣದಲ್ಲಿ ಅಮಾಯಕನೊಬ್ಬನನ್ನು ಸಿಕ್ಕಿಹಾಕಿಸುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಶಿಗ್ಗಾಂವಿ ತಾಲೂಕಿನ ಗಂಜಿಗಟ್ಟಿ ಗ್ರಾಮ ಸಹಾಯಕನ ಮಗ ಮಹಾಂತೇಶ ನಿಂಗಪ್ಪ ಓಲೇಕಾರ (23) ಎಂಬುವರ ವಿರುದ್ಧ ಕಂದಾಯ ನಿರೀಕ್ಷಕರು ದೂರು ನೀಡಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಾವು ಪಾರಾಗಲು ಯತ್ನಿಸುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ.
‘ಮಹಾಂತೇಶ ಯಾರೂ ಇಲ್ಲದ ವೇಳೆ ತಹಸೀಲ್ದಾರ್ ಕಚೇರಿಗೆ ಬಂದು, ಶಿಗ್ಗಾಂವಿ ತಹಸೀಲ್ದಾರ್​ಗೆ ರಾಜೀವ್ ಗಾಂಧಿ ಹೌಸಿಂಗ್ ಕಾಪೋರೇಷನ್ ಲಿಮಿಟೆಡ್ ನೀಡಿದ್ದ ಯೂಸರ್ ಐಡಿ, ಪಾಸ್​ವರ್ಡ್ ಬಳಸಿ ಬನ್ನೂರ, ಬನ್ನಿಕೊಪ್ಪ, ಮುಗಳಿ, ಗಂಜಿಗಟ್ಟಿ ಗ್ರಾಮದಲ್ಲಿ ಬೀಳದ ಮನೆಗಳನ್ನು ನಮೂದು ಮಾಡಿದ್ದಾನೆ’ ಎಂದು ಕಂದಾಯ ನಿರೀಕ್ಷಕ ಈಶ್ವರಗೌಡ ಪಾಟೀಲ ಹಾವೇರಿ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಅಪಾಧಿತ ಯಾರೂ ಇಲ್ಲದ ಸಮಯದಲ್ಲಿ ತಹಸೀಲ್ದಾರ್ ಕಚೇರಿಗೆ ಬಂದು ಹಿರಿಯ ಅಧಿಕಾರಿಗಳ ಸಾಥ್ ಇಲ್ಲದೆ ಕಂಪ್ಯೂಟರ್ ಬಳಸಿ ಅಕ್ರಮ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ, ಆಪಾದಿತ ಮಹಾಂತೇಶನು ತಹಸೀಲ್ದಾರ್ ಕಚೇರಿಗೆ ಸಂಬಂಧಿಸಿದ ಸಿಬ್ಬಂದಿಯೇ ಅಲ್ಲ. ಆದರೂ ಅವನು ಹೇಗೆ ಕಚೇರಿಯೊಳಗೆ ಬಂದ? ತಹಸೀಲ್ದಾರ್ ಯೂಸರ್ ಐಡಿ, ಪಾಸ್​ವರ್ಡ್ ಹೇಗೆ ಕಳ್ಳತನ ಮಾಡಿದ? ಅವನು ಅನರ್ಹ ಫಲಾನುಭವಿಗಳನ್ನು ನಮೂದಿಸಿದ ತಕ್ಷಣ ಅವರಿಗೆ ಪರಿಹಾರ ಹೇಗೆ ಜಮೆಯಾಯಿತು ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.
ಅಮಾಯಕನಿಗೆ ಶಿಕ್ಷೆ?:ನೆರೆ ಅಕ್ರಮದಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಸಂಶಯ ವ್ಯಕ್ತವಾದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು, ‘ನೆರೆಯಲ್ಲಿ ಅನರ್ಹ ಫಲಾನುಭವಿಗಳಿಗೆ ಪರಿಹಾರ ಹೋಗಿದೆ. ಅದನ್ನು ತನಿಖೆಗೆ ಕೊಡುತ್ತೇನೆ’ ಎಂದು ಹೇಳಿದ್ದರು. ಹೀಗಾಗಿ, ಪ್ರಕರಣದಿಂದ ಪಾರಾಗಲು ಅಮಾಯಕ ಯುವಕನ ಮೇಲೆ ದೂರು ನೀಡಲಾಗಿದೆ. ಇಲ್ಲವೇ, ಈ ಯುವಕನಿಂದ ಇವರೇ ಅಕ್ರಮಗಳನ್ನು ಮಾಡಿಸಿ ನಂತರ ಅವನೊಬ್ಬನನ್ನೇ ಬಲಿಪಶು ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಸಂಶಯ ತಲೆದೋರಿದೆ. ಇನ್ನು ಈ ಯುವಕ ಅನರ್ಹ ಫಲಾನುಭವಿಗಳನ್ನು ಸೇರ್ಪಡೆಗೊಳಿಸಿದ್ದರೂ ಅವರಿಗೆ ಪರಿಹಾರ ನೀಡುವ ಅಧಿಕಾರ ತಹಸೀಲ್ದಾರ್​ಗೆ ಇದೆ. ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಮೇಲುಸ್ತುವಾರಿ ಅಧಿಕಾರಿಗಳು ಗಮನಿಸದೆ ಹೇಗೆ ಪರಿಹಾರ ಜಮೆ ಮಾಡಿದರು? ಇದೆಲ್ಲವೂ ತನಿಖೆಯಲ್ಲಿ ಬಹಿರಂಗಗೊಳ್ಳಬೇಕಿದೆ ಎಂಬ ಮಾತುಗಳು ತಹಸೀಲ್ದಾರ್ ಕಚೇರಿ ಸಿಬ್ಬಂದಿಯಿಂದಲೇ ಕೇಳಿಬರತೊಡಗಿವೆ.
ಮಾಹಿತಿ ಒದಗಿಸಲು ವಿಳಂಬ:ಡಿ.29ರಂದು ತಹಸೀಲ್ದಾರ್ ಯೂಸರ್ ಐಡಿ ಹಾಗೂ ಪಾಸ್​ವರ್ಡ್ ಕಳ್ಳತನ ಮಾಡಿ ಅಕ್ರಮವಾಗಿ ಅನರ್ಹ ಫಲಾನುಭವಿಗಳನ್ನು ಸೇರ್ಪಡೆ ಮಾಡಿರುವ ಕುರಿತು ಶಿಗ್ಗಾಂವಿ ಠಾಣೆಯಲ್ಲಿ ಕಂದಾಯ ನಿರೀಕ್ಷಕ ಈಶ್ವರಗೌಡ ಪಾಟೀಲ ಅವರಿಂದ ದೂರು ದಾಖಲಾಗಿದೆ. ಇದು ಸೈಬರ್ ಕ್ರೖೆಂ ಆಗಿದ್ದರಿಂದ ಜ.24ರಂದು ಹಾವೇರಿ ಸೈಬರ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಸೈಬರ್ ಪೊಲೀಸರು ತನಿಖೆಯ ಬೆನ್ನು ಹತ್ತಿದ್ದು, ಕಚೇರಿಯಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಸೇರಿ ಅನೇಕ ದಾಖಲೆಗಳನ್ನು ನೀಡುವಂತೆಯೂ ದೂರುದಾರರಿಗೆ ಸೂಚಿಸಿದ್ದರು. ಆದರೆ, ಅವರಿಗೆ ಸಮರ್ಪಕ ದಾಖಲೆಗಳನ್ನು ತಹಸೀಲ್ದಾರ್ ಕಚೇರಿಯಿಂದ ತ್ವರಿತಗತಿಯಲ್ಲಿ ಒದಗಿಸಿಲ್ಲ. ಆದರೂ ಬೆನ್ನುಬಿಡದ ಸೈಬರ್ ಕ್ರೖೆಂ ಪೊಲೀಸರು, ಇದರಲ್ಲಿ ತಪ್ಪಿತಸ್ಥರು ಯಾರು ಎಂಬ ತನಿಖೆಯನ್ನು ಚುರುಕುಗೊಳಿಸಿದ್ದು, ಶೀಘ್ರದಲ್ಲಿಯೇ ಪ್ರಕರಣದಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎಂಬ ಮಾಹಿತಿ ‘ವಿಜಯವಾಣಿ’ಗೆ ಲಭ್ಯವಾಗಿದೆ.
ಆರೋಪ ನಿರಾಕರಿಸಿದ ಮಹಾಂತೇಶ:‘ವಿಜಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಮಹಾಂತೇಶ ಓಲೇಕಾರ, ಆರೋಪ ನಿರಾಕರಿಸಿದ್ದಾನೆ. ನನ್ನ ತಂದೆಯವರು ಗಂಜಿಗಟ್ಟಿ ಗ್ರಾಮ ಸಹಾಯಕರಾಗಿದ್ದಾರೆ. ಅವರಿಗೆ ಹುಷಾರಿಲ್ಲದ ಕಾರಣ ನೆರೆ ಸಮಯ ಸಹಾಯಕ್ಕೆಂದು ಹೋಗಿದ್ದೆ. ನಾನು ಎಸ್ಸೆಸ್ಸೆಲ್ಸಿ ಓದಿದ್ದು, ಕೃಷಿ ಮಾಡುತ್ತಿದ್ದೇನೆ. ಕಂಪ್ಯೂಟರ್ ಆಪರೇಟ್ ಮಾಡಲು ನನಗೆ ಪೂರ್ಣ ಬರುತ್ತಿರಲಿಲ್ಲ. ಆದರೂ ಆರ್​ಐ ಐ.ಎಂ. ಪಾಟೀಲ ಎಂಬುವವರು ತಹಸೀಲ್ದಾರ್ ಕಚೇರಿಯಲ್ಲಿಯೇ ಪಾಸ್​ವರ್ಡ್ ಓಪನ್ ಮಾಡಿಕೊಟ್ಟು ಅದರಲ್ಲಿ ಕೆಲವರ ಹೆಸರನ್ನು ನಮೂದು ಮಾಡಲು ತಿಳಿಸಿದ್ದರು. ಅದರಂತೆ ನಾನು ನಮೂದು ಮಾಡಿದ್ದೇನೆ. ಯಾವ ಪಾಸ್​ವರ್ಡ್ ಕದ್ದಿಲ್ಲ. ಒಂದು ಮನೆಗೆ 1 ಲಕ್ಷ ರೂ. ಪಡೆದಿರುವ ಆರೋಪ ಕೇಳಿಬಂದಾಗ, ‘ಕೆಲವರ ನೌಕರಿ ಹೋಗುತ್ತದೆ. ನೀನು ಹೊರಗಿನವ. ನಿನಗೆ ಏನೂ ಆಗೋಲ್ಲ. ನಾನೇ ತಪ್ಪು ಮಾಡಿದ್ದೇನೆಂದು ಒಪ್ಪಿಕೋ’ ಎಂದು ನನಗೆ ಐ.ಎಂ.ಪಾಟೀಲ ಒತ್ತಾಯ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಇದರ ಬಗ್ಗೆ ಯಾವ ತನಿಖೆಗೂ ಸಿದ್ಧನಿದ್ದೇನೆ ಎಂದು ಮಹಾಂತೇಶ ಹೇಳಿದ್ದಾನೆ.
ಅಕ್ರಮ ಬಯಲಿಗೆಳೆದ ವಿಜಯವಾಣಿ
ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ರಾಜೀವ್ ಗಾಂಧಿ ಹೌಸಿಂಗ್ ಕಾಪೋರೇಷನ್ ವತಿಯಿಂದ ಪರಿಹಾರ ನೀಡಲಾಗಿದ್ದು, ಇದರಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಬೀಳದಿರುವ ಮನೆಗಳನ್ನು ಕೂಡ ಬಿದ್ದಿವೆ ಎಂದು ಸುಳ್ಳು ಮಾಹಿತಿ ದಾಖಲಿಸಿ ಪರಿಹಾರ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಸಂಗತಿಯನ್ನು ‘ವಿಜಯವಾಣಿ’ ವಿಶೇಷ ವರದಿಗಳ ಮೂಲಕ ಬಹಿರಂಗಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತಹಸೀಲ್ದಾರ್​ಗೆ ಸೇರಿದ ಪಾಸ್​ವರ್ಡ್ ದುರ್ಬಳಕೆ ಮಾಡಿಕೊಂಡಿರುವ ಕುರಿತು ಆರ್​ಐ ದೂರು ನೀಡುವ ಬಗೆಗೆ ತಹಸೀಲ್ದಾರ್ ಚಂದ್ರಶೇಖರ ಗಾಳಿ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಡಿ.29ರಂದು ದೂರು ಬಂದಿತ್ತು. ಅದು ನಮ್ಮ ವ್ಯಾಪ್ತಿಗೆ ಬರದೆ ಇದ್ದುದರಿಂದ ಅದನ್ನು ಹಾವೇರಿ ಸಿಇಎನ್ ಠಾಣೆಗೆ ವರ್ಗಾಯಿಸಿದ್ದೇವೆ.
| ಬಸವರಾಜ ಹಳಬಣ್ಣನವರ ಸಿಪಿಐ ಶಿಗ್ಗಾಂವಿ
ತಹಸೀಲ್ದಾರ್ ಯೂಸರ್ ಐಡಿ ಪಾಸ್​ವರ್ಡ್ ದುರ್ಬಳಕೆ ಪ್ರಕರಣ ಜ.24ರಂದು ನಮ್ಮ ಠಾಣೆಗೆ ಬಂದಿದೆ. ತನಿಖೆಯು ಪ್ರಗತಿಯಲ್ಲಿದೆ.
| ಚಿದಾನಂದ ಸಿಪಿಐ ಸೈಬರ್ ಕ್ರೖೆಂ ಠಾಣೆ, ಹಾವೇರಿ
| ಪರಶುರಾಮ ಕೆರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + thirteen =
Remember me
