ಹಾವಿನಿಂದ ತೆಗೆಯಲಾದವಿಷದಲ್ಲಿ ಹಲವು ಕಲ್ಮಶಗಳೂ ಸೇರಿಕೊಂಡಿರುತ್ತವೆ. ಈ ಕಲ್ಮಶಗಳು ಔಷಧದ ಪರಿಣಾಮವನ್ನು ಕಡಿಮೆ ಮಾಡುವುದರಿಂದ ಆರಂಭದಲ್ಲೇ ಅದನ್ನು ಸೋಸುವ ಅಗತ್ಯವಿದೆ. ಇದೀಗ ನಮ್ಮಲ್ಲಿ ಆ ತಂತ್ರಜ್ಞಾನವೂ ಅಭಿವೃದ್ಧಿಯಾಗುತ್ತಿದ್ದು ಇನ್ನೂ ಸಂಪೂರ್ಣವಾಗಿ ಜಾರಿಗೆ ಬರಲು ಸಮಯ ಬೇಕಿದೆ.
ಕಳೆದ ವಾರ ರಾಜ್ಯ ಸರ್ಕಾರವು ಹಾವು ಕಡಿತ ಮತ್ತು ಅದರಿಂದಾಗುವ ಮರಣ ಪ್ರಕರಣಗಳನ್ನು ‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020’ರ ಅನ್ವಯ ಅಧಿಸೂಚಿತ ಕಾಯಿಲೆಯೆಂದು ಘೊಷಿಸುವ ಮೂಲಕ ಈ ಕ್ರಮ ಕೈಗೊಂಡ ಮೊದಲ ರಾಜ್ಯ ಎಂಬ ದಾಖಲೆಗೆ ಪಾತ್ರವಾಯಿತು. ಇದರ ಅನ್ವಯ ರಾಜ್ಯದ ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಸ್ಥೆಗಳು ತಮ್ಮಲ್ಲಿ ದಾಖಲಾಗುವ ಹಾವು ಕಡಿತದ ಎಲ್ಲ ಪ್ರಕರಣಗಳನ್ನೂ ಸಮಗ್ರ ಮಾಹಿತಿ ವೇದಿಕೆಯಲ್ಲಿ ನೋಂದಾಯಿಸಬೇಕೆಂದು ಸೂಚಿಸಲಾಗಿದೆ. ಅಷ್ಟಕ್ಕೂ ಸರ್ಕಾರ ಈ ಕ್ರಮ ತೆಗೆದುಕೊಳ್ಳುವುದಕ್ಕೆ ಕಾರಣವೂ ಇದೆ. ಹಾವು ಕಡಿತವೊಂದು ಉಷ್ಣವಲಯದ ನಿರ್ಲಕ್ಷಿಸಲಾಗಿರುವ ರೋಗವೆಂದು ಬಣ್ಣಿಸಲಾಗುತ್ತಿದ್ದು, ಕೆಲವರ್ಷಗಳ ಹಿಂದೆ ಇದಕ್ಕಾಗಿ ಕೇಂದ್ರ ಸರ್ಕಾರ ಸಹ ರಾಷ್ಟ್ರೀಯ ಕ್ರಿಯಾಯೋಜನೆ ರೂಪಿಸಿದೆ. ಆದರೆ ಈ ಹಾವುಕಡಿತದ ಚಿಕಿತ್ಸೆಯ ಮೂಲಸೌಕರ್ಯಗಳನ್ನೊಮ್ಮೆ ಗಮನಿಸಿದರೆ ಈ ಕ್ಷೇತ್ರದಲ್ಲಿ ಮಾಡಬೇಕಾದ್ದು ಬೆಟ್ಟದಷ್ಟಿದೆ.
ಜಗತ್ತಿನಲ್ಲಿ ಜರುಗುವ ಹಾವುಕಡಿತದ ಘಟನೆಗಳಲ್ಲಿ ಹೆಚ್ಚಿನವು ಆಗ್ನೇಯ ಏಷ್ಯಾದಿಂದ ವರದಿಯಾಗುತ್ತವೆ. ಹೀಗಾಗಿ ಈ ಘಟನೆಗಳಿಂದ ಮೃತಪಟ್ಟವರ ಸಂಖ್ಯೆ ಸಹಜವಾಗಿ ಇಲ್ಲೇ ಹೆಚ್ಚು. ಒಟ್ಟಾರೆಯಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಜರುಗುವ ಹಾವು ಕಡಿತದಿಂದಾಗುವ ಮರಣಗಳ ಪಾಲು ಇದರ ಜಾಗತಿಕ ಸಂಖ್ಯೆಯ ಶೇಕಡ ಎಪ್ಪತ್ತರಷ್ಟಿದೆ. ಆ ಎಪ್ಪತ್ತರಲ್ಲಿ ಐವತ್ತರ ದೇಣಿಗೆ ಭಾರತದ್ದೇ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ ಹಾವುಕಡಿತದ ನಲವತ್ತು ಲಕ್ಷ ಘಟನೆಗಳು ಜರುಗಿ, ಸರಾಸರಿ ಐವತ್ತೆಂಟು ಸಾವಿರ ಮರಣಗಳು ಸಂಭವಿಸುತ್ತಿವೆ.
ಭಾರತದಲ್ಲಿ ಕಂಡುಬರುವ 310 ಪ್ರಭೇದದ ಹಾವುಗಳಲ್ಲಿ 66 ಹಾವುಗಳು ವಿಷಕಾರಿಗಳಾಗಿವೆ, ಅವುಗಳ ಪೈಕಿ ನಾಲ್ಕು ಜಾತಿಯ ಅಂದರೆ Russell’s viper (ಮಂಡಲದ ಹಾವು), saw&scaled vipers (ಗರಗಸ ಮಂಡಲ), Spectacled cobra (ನಾಗರಹಾವು), Common Krait (ಕಟ್ಟು ಹಾವುಗಳು) ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ವಿಷಕಾರಿ ಹಾವುಗಳು. ಸಾವು-ನೋವಿಗೆ ಕಾರಣವಾಗುವ ಹಾವಿನ ಕಡಿತಕ್ಕೆ ತಯಾರಾಗುವ ಪ್ರತ್ಯೌಷಧ ತಯಾರಿಸಲು ಹಾವಿನ ವಿಷವನ್ನು ಸಣ್ಣ ಪ್ರಮಾಣದಲ್ಲಿ ಕುದುರೆಯಂಥ ಸಾಕುಪ್ರಾಣಿಗಳ ದೇಹದಲ್ಲಿ ಚುಚ್ಚುಮದ್ದಿನ ಮೂಲಕ ಸೇರಿಸಲಾಗುತ್ತದೆ. ಆ ಪ್ರಾಣಿಯ ದೇಹದಲ್ಲಿ ವಿಷಕ್ಕೆ ಪ್ರತಿಯಾಗಿ ತಯಾರಾಗುವ ಪ್ರತಿಕಾಯಗಳನ್ನು ಅವುಗಳ ರಕ್ತದ ಮೂಲಕ ಕಲೆಹಾಕಿ ಸೋಸಿ ವಿಂಗಡಿಸಿ ಔಷಧ ತಯಾರಿಸಲಾಗುತ್ತದೆ. ಅಂದರೆ ಔಷಧ ತಯಾರಿಸಲು ಅಷ್ಟೇ ಪ್ರಮಾಣದ ಹಾವಿನ ವಿಷದ ಜರೂರತ್ತೂ ಇದೆಯಂತಾಯಿತಲ್ಲವೇ.
ಹಾವುಗಳನ್ನು ಹಿಡಿದು ವಿಷವನ್ನು ಕಲೆಹಾಕುವ ಬುಡಕಟ್ಟು ಜನಾಂಗವೊಂದು ತಮಿಳುನಾಡಿನಲ್ಲಿದೆ. ಭಾರತದಲ್ಲಿ ತಯಾರಾಗುವ ಹಾವಿನ ಪ್ರತ್ಯೌಷಧಕ್ಕೆ ಬೇಕಾದ ವಿಷವನ್ನು ಅವುಗಳಿಗೆ ಘಾಸಿಮಾಡದೇ ಹೊರತೆಗೆಯುವ ಈ ಪಂಟರ್​ಗಳ ಕೈಚಳಕದ ಮೇಲೆಯೇ ನಮ್ಮಲ್ಲಿಯ ಹಾವಿನ ಕಡಿತದ ಪ್ರತ್ಯೌಷಧ ತಯಾರಿಕೆ ನಿರ್ಭರವಾಗಿದೆ. ಅಷ್ಟಕ್ಕೂ ಆ ಪಂಗಡ ಈ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಥನವೂ ಕುತೂಹಲಕಾರಿ.
ತಮಿಳುನಾಡಿನ ಬುಡಕಟ್ಟುಗಳಲ್ಲಿ ಇರುಳರ ಪಂಗಡವೂ ಒಂದು. ತಮಿಳುನಾಡು ಮತ್ತು ಕೇರಳವನ್ನು ಹೊಂದಿಕೊಂಡಿರುವ ಭಾಗದ ಅರಣ್ಯ ಪ್ರದೇಶ ಇವರುಗಳ ಮೂಲಸ್ಥಾನ. ಹೀಗಾಗಿ ಇವರುಗಳಿಗೆ ಕಾಡು ಮತ್ತು ಅಲ್ಲಿ ಬೆಳೆಯುವ ಔಷಧಯುಕ್ತ ಗಿಡಮೂಲಿಕೆಗಳ ಬಗ್ಗೆ ಅಪಾರ ತಿಳಿವಳಿಕೆಯಿದೆ. ಈ ಕಾರಣದಿಂದಲೇ ಇವರನ್ನು ‘ಇರುಳವೈದ್ಯರ್’ ಎಂದೂ ಕರೆಯಲಾಗುತ್ತದೆ. ಇರುಳರಿಗೆ ಹಾವುಗಳನ್ನು ಹಿಡಿಯುವ ಕಲೆ ರಕ್ತದಲ್ಲೇ ಬಂದಿದ್ದು, ಇದು ಹೆಚ್ಚಿನವರ ಕುಲಕಸುಬೂ ಹೌದು. ತಾವು ಪೂಜಿಸುವ ದೇವತೆ ಕನ್ನಿಯಮ್ಮನ ಜೊತೆಗೆ ನಾಗವೂ ಬೆಸೆದುಕೊಂಡಿರುವುದರಿಂದ ಇವರುಗಳು ಹಾವಿನ ಮಾಂಸವನ್ನು ಸೇವಿಸದಿದ್ದರೂ ವಿದೇಶಕ್ಕೆ ರಫ್ತಾಗುವ, ಸಿಕ್ಕಾಪಟ್ಟೆ ಬೆಲೆಬಾಳುವ ಚರ್ಮಕ್ಕಾಗಿ ಹಾವುಗಳನ್ನು ಹಿಡಿದು ಮಾರುವುದು ಇವರ ಮುಖ್ಯ ಕಾಯಕವಾಗಿತ್ತು.
1972ರಲ್ಲಿ ಜಾರಿಗೆ ಬಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನ್ವಯ ಸಂರಕ್ಷಿತ ಜೀವಿಗಳ ಪಟ್ಟಿಯಲ್ಲಿ ಹಾವುಗಳೂ ಸೇರಿದ್ದರಿಂದ ಈ ಇರುಳರ ಹೊಟ್ಟೆಪಾಡಿಗೆ ಸಂಚಕಾರ ಬಂತು. ಕಾನೂನಿನ ಕುಣಿಕೆಯ ತೂಗುಗತ್ತಿ ಅವರ ಕುಲಕಸುಬಿಗೆ ಸಂಚಕಾರ ತಂದು ಈ ಕಾಡಿನ ಮಕ್ಕಳು ಬೀದಿಗೆ ಬಂದರು. ಇಂಥ ಸನ್ನಿವೇಶದಲ್ಲಿ ಇರುಳರ ಪಾಲಿಗೆ ಬೆಳಕಾಗಿ ಬಂದವರು ಅಂತಾರಾಷ್ಟ್ರೀಯ ಖ್ಯಾತಿಯ ಪರಿಸರ ತಜ್ಞ, ಹಾವುಗಳ ಸಂರಕ್ಷಕ ರೊಮುಲಸ್ ವಿಟೇಕರ್. ಈ ಹಿಂದೆ ಇವರು ಭಾರತಲ್ಲಿ ನಡೆಸಿದ ಹಲವು ಹಾವು ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಇರುಳರ ತಂಡದೊಡನೆ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಅವರಿಗೆ ಅ ಜನರ ಪರಿಣಿತಿಯ ಬಗ್ಗೆ ಅರಿವಿತ್ತು. ತಲೆತಲಾಂತರದಿಂದ ಬಂದ ಇರುಳರ ಕೌಶಲವನ್ನು ನಶಿಸಿಹೋಗಬಿಡಲು ಅವರ ಮನಸ್ಯಾಕೋ ಒಪ್ಪಲಿಲ್ಲ. ಆಗ ಹುಟ್ಟಿದ್ದೇ ಹಾವಿನ ವಿಷದ ಬ್ಯಾಂಕ್​ನ ಯೋಚನೆ.
ಕಾಯಿದೆಯ ಏಟಿಗೆ ಕಂಗೆಟ್ಟು ಹೊಟ್ಟೆಪಾಡಿಗಾಗಿ ಶಹರದತ್ತ ಮುಖಮಾಡಿದ್ದ ಇರುಳರನ್ನು ರೊಮುಲಸ್ ವಿಟೇಕರ್ ಒಂದೆಡೆ ಸೇರಿಸಿದರು. ಇಷ್ಟು ವರ್ಷ ಪರೋಕ್ಷವಾಗಿ ಹಾವುಗಳ ಸಾವಿಗೆ ಕಾರಣವಾಗುತ್ತಿದ್ದ ಇರುಳರ ಕೌಶಲವನ್ನು ಹೇಗೆ ಅವುಗಳ ಸಂರಕ್ಷಣೆ ಜೊತೆಗೆ ತಮ್ಮ ಜೀವನೋಪಾಯಕ್ಕೂ ಬಳಸಿಕೊಳ್ಳಬಹುದೆಂದು ಅವರು ವಿವರಿಸಿದರು. ಅಲ್ಲಿ ಜನ್ಮತಳೆಯಿತು ಭಾರತದ ಪ್ರಥಮ ಮತ್ತು ಏಕೈಕ ಹಾವಿನ ವಿಷ ಸಂಗ್ರಹಿಸುವ ಸ್ವಯಂಸೇವಾ ಸಂಘ. ಕಾಡಿಗೆ ಹೋಗಿ ವಿಷಕಾರಿ ಹಾವುಗಳನ್ನು ಹಿಡಿದು ಅವುಗಳಿಂದ ವಿಷವನ್ನು ತೆಗೆಯುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಜೋಪಾನವಾಗಿ ಕಾಪಿಟ್ಟು ಮತ್ತೆ ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇದು ಸಂಘದ ಸದಸ್ಯರ ಕಾಯಕ. ಈ ಪೂರ್ತಿ ಕಾರ್ಯಾಚರಣೆ ಅತೀ ಸೂಕ್ಷ್ಮವಾಗಿದ್ದು ಕಾನೂನಿನ ಪರಿಮಿತಿಯಲ್ಲಿ ಹೊಂದಿಕೊಂಡು ಹೋಗಬೇಕಾದ ಜರೂರತ್ತಿದ್ದರಿಂದ 1978ರಲ್ಲಿ ಚೆನ್ನೆ ೖನ ಹೊರವಲಯದಲ್ಲಿ ಸ್ಥಾಪಿತವಾದ ಈ ಸಂಘಕ್ಕೆ ಆರಂಭದಲ್ಲೇ ಹಲವು ಸವಾಲುಗಳು ಎದುರಾದವು. ಹಾವು ಹಿಡಿಯುವುರಲ್ಲಿ ಪರಿಣಿತಿ ಹೊಂದಿದ್ದ ಇರುಳರನ್ನು ಅದರಿಂದ ವಿಷ ತೆಗೆಯುವುದರಲ್ಲಿ ತರಬೇತಿ ನೀಡುವುದು, ವಿಷ ತೆಗೆದ ಹಾವುಗಳನ್ನು ಮತ್ತೆ ಕಾಡಿಗೆ ಬಿಟ್ಟಾಗ ಅವುಗಳ ಪ್ರಾಣಕ್ಕೇನೂ ಅಪಾಯವಾಗದೆಂಬುದನ್ನು ಸಾಬೀತು ಮಾಡುವುದು. ಎಲ್ಲದಕ್ಕೂ ಮುಖ್ಯವಾಗಿ ತೆಗೆದ ವಿಷವನ್ನು ಕಾಪಿಟ್ಟು ಸಂಸ್ಕರಿಸಿ, ಮಾರುಕಟ್ಟೆಗೆ ಪರಿಚಯಿಸುವುದು.
ವಿಟೇಕರ್ ಅವರ ಮಾರ್ಗದರ್ಶನದಲ್ಲಿ ಈ ಒಂದೊಂದು ಸವಾಲನ್ನೂ ಸಮರ್ಥವಾಗಿ ಎದುರಿಸಿದ ಇರುಳಾ ಹಾವುಹಿಡಿಯುವವರ ಸಂಘವು ನಾಲ್ಕೈದು ಸಾವಿರ ರೂಪಾಯಿ ವಾರ್ಷಿಕ ವ್ಯವಹಾರದಿಂದ ಪ್ರಾರಂಭಿಸಿ ಇದೀಗ ಮೂವತ್ತು ಮಿಲಿಯನ್ ರೂಪಾಯಿಯ ಹಂತವನ್ನು ತಲುಪಿದೆ. ಈ ಮೂಲಕ ಸಂಘವು ಭಾರತದ ಅತಿದೊಡ್ಡ ಹಾವಿನ ವಿಷದ ಬ್ಯಾಂಕ್ ಆಗಿ ಹೊರಹೊಮ್ಮಿದೆ.
ಇರುಳರ ಕತೆಯೇನೋ ರೋಚಕವಾಗಿದೆ. ಆದರೆ ಹೆಚ್ಚುಕಮ್ಮಿ ಸಂಪೂರ್ಣವಾಗಿ ಇರುಳರ ಸಂಘದ ಮೇಲೆಯೇ ಭಾರತೀಯ ವಿಷ ಸಂಗ್ರಹಣೆಯು ನಿರ್ಭರವಾಗಿರುವುದು ಇದೀಗ ದೊಡ್ಡ ತೊಂದರೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಂಡ ನಡೆಸಿದ ಅಧ್ಯಯನವೊಂದು ಭಾರತದಲ್ಲಿ ಉಪಯೋಗಿಸಲಾಗುತ್ತಿರುವ ಹಾವಿನ ವಿಷೌಷಧ ಕ್ಷಮತೆ ಬಗ್ಗೆ ಪ್ರಶ್ನೆ ಮೂಡಿಸಿದೆ. ಅಧ್ಯಯನ ತಂಡವು ಗಮನಿಸಿದಂತೆ ಭಾರತದಲ್ಲಿ ಕಾಣಬರುವ ಹಾವುಗಳ ವಿಷದ ತೀಕ್ಷ ್ಣತೆಯಲ್ಲಿಯೇ ಪ್ರಾದೇಶಿಕವಾಗಿ ಭಿನ್ನತೆಯಿದೆ. ಉದಾಹರಣೆಗೆ ಚಾಮರಾಜನಗರದಲ್ಲಿ ಕಂಡುಬರುವ ಮಂಡಲದ ಹಾವಿನ ವಿಷದಲ್ಲಿರುವ
ತೀಕ್ಷ ್ಣತೆಗೂ ರಾಯಬರೇಲಿಯಲ್ಲಿರುವ ಮಂಡಲದ ಹಾವಿನ ತೀಕ್ಷ ್ಣೆಗೂ ತುಂಬ ವ್ಯತ್ಯಾಸವಿದೆ. ಒಂದೇ ಔಷಧ ಈ ಎರಡೂ ಪ್ರದೇಶದ ಹಾವುಕಡಿತದ ರೋಗಿಯ ಮೇಲೆ ಭಿನ್ನ ರೀತಿಯಲ್ಲಿ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ನಮ್ಮಲ್ಲಿ ಔಷಧಕ್ಕೆ ಬಳಕೆಯಾಗುವ ವಿಷ ಹೆಚ್ಚಾಗಿ ತಮಿಳುನಾಡಿನ ಮೂಲದ್ದಾಗಿರುವ ಕಾರಣಕ್ಕೆ ಎಲ್ಲ ಪ್ರದೇಶಗಳಲ್ಲಿಯೂ ಅದು ಒಂದೇ ರೀತಿಯ ಪರಿಣಾಮ ಬೀರಲಾರದು. ಮತ್ತೊಂದು ತೊಂದರೆಯೆಂದರೆ ಈ ಮೊದಲು ಹೇಳಿದಂತೆ ವಿಷೌಷಧ ತಯಾರಿಕೆಯಲ್ಲಿ ನಾಲ್ಕು ದೊಡ್ಡಣ್ಣ ಹಾವುಗಳ ವಿಷವಷ್ಟೆ ಬಳಕೆಯಾಗುವುದರಿಂದ ಆ ಔಷಧವು ಉಳಿದ ಹಾವುಗಳ ಕಡಿತದ ಮೇಲುಂಟುಮಾಡುವ ಪರಿಣಾಮವೂ ಸ್ವಲ್ಪ ಕಡಿಮೆಯೇ. ಇಂತಹ ಸನ್ನಿವೇಶದಲ್ಲಿ ಹೆಚ್ಚಿನ ಪ್ರಮಾಣದ ವಿಷೌಷಧ ಬಳಕೆ ರೋಗಿಗಳ ಮೇಲೆ ಗಂಭೀರ ಅಡ್ಡ ಪರಿಣಾಮವನ್ನುಂಟು ಮಾಡಬಹುದು.
ಅಧ್ಯಯನ ತಂಡವು ಗಮನಿಸಿದಂತೆ ಹಾವಿನಿಂದ ತೆಗೆಯಲಾದ ವಿಷದಲ್ಲಿ ಹಲವು ಕಲ್ಮಶಗಳೂ ಸೇರಿಕೊಂಡಿರುತ್ತವೆ. ಈ ಕಲ್ಮಶಗಳು ಔಷಧದ ಪರಿಣಾಮವನ್ನು ಕಡಿಮೆ ಮಾಡುವುದರಿಂದ ಆರಂಭದಲ್ಲೇ ಅದನ್ನು ಸೋಸುವ ಅಗತ್ಯವಿದೆ. ಇದೀಗ ನಮ್ಮಲ್ಲಿ ಆ ತಂತ್ರಜ್ಞಾನವೂ ಅಭಿವೃದ್ಧಿಯಾಗುತ್ತಿದ್ದು ಇನ್ನೂ ಸಂಪೂರ್ಣವಾಗಿ ಜಾರಿಗೆ ಬರಲು ಸಮಯ ಬೇಕಿದೆ. ಇದರ ಜೊತೆಗೆ ಹಾವಿನ ವಿಷದ ಬ್ಯಾಂಕುಗಳನ್ನು ದೇಶದ ಎಲ್ಲ ಭಾಗಗಳಲ್ಲಿಯೂ ಆರಂಭಿಸಿ ಮತ್ತದನ್ನು ಸಮರ್ಪಕವಾಗಿ ಬಳಸಿ ಎಲ್ಲೆಡೆಗೂ ಅನ್ವಯವಾಗುವ ಸುಧಾರಿತ ವಿಷೌಷಧವನ್ನು ತಯಾರಿಸಬೇಕೆಂಬ ಕೂಗು ಸಹ ಪರಿಣಿತರಿಂದ ಕೇಳಿಬರುತ್ತಿದೆ.
ಅಂಕಿಅಂಶಗಳೇ ಹೇಳುವಂತೆ ಭಾರತದಲ್ಲಿ ಹಾವಿನ ಕಡಿತದಿಂದ ಸಾವನ್ನಪ್ಪುವವರಲ್ಲಿ ಹೆಚ್ಚಿನವರು ಹೊಲಗದ್ದೆಗಳಲ್ಲಿ ದುಡಿಯುವ ಕೂಲಿಕಾರ್ವಿುಕರು ಮತ್ತು ಬಯಲಿನಲ್ಲಿ ಮಲಗುವ ಬಡವರು. ಮತ್ತೊಂದೆಡೆ ಗದ್ದೆಗಳಲ್ಲಿ ಹಾಗೂ ಆಹಾರ ದಾಸ್ತಾನಿನ ಪ್ರದೇಶಗಳಲ್ಲಿ ಹಾವಳಿಯೆಬ್ಬಿಸಿ ಗಮನಾರ್ಹ ಪ್ರಮಾಣದ ಆಹಾರ ಧಾನ್ಯಗಳ ಸೋರಿಕೆಗೆ ಕಾರಣವಾಗುವ ಇಲಿ, ಹೆಗ್ಗಣಗಳ ಸಂಖ್ಯೆಯನ್ನು ನಿಯಂತ್ರಿಸಿ ಸೋರಿಕೆಯನ್ನು ತಡೆಗಟ್ಟುವಲ್ಲಿ ಹಾವುಗಳ ಪಾತ್ರ ದೊಡ್ಡದು. ಹೀಗಾಗಿ ಹಾವೂ ಸಾಯದ ಕೋಲೂ ಮುರಿಯದ ರೀತಿಯಲ್ಲಿ ಈ ವಿಷೌಷಧದ ವಿಷಮ ಪರಿಸ್ಥಿತಿಯನ್ನು ಸಂಭಾಳಿಸಬೇಕಾದ ಜವಾಬ್ದಾರಿ ನಮ್ಮ ಚಿಂತಕರ ಚಾವಡಿಯ ಮೇಲಿದೆ. ಹಾಗಾಗಲಿ ಎಂದು ಆಶಿಸೋಣ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಕೋಲಾ! ವಿಡಿಯೋ ನೋಡಿದ್ರೆ ಕಣ್ಣಂಚಲ್ಲಿ ನೀರು ತರಿಸುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 13 =
Remember me
