| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಲೋಕಸಭಾ ಫಲಿತಾಂಶ ರಾಜ್ಯದ ಮಟ್ಟಿಗೆ ಮೂರು ಪಕ್ಷಗಳಿಗೂ ಎಚ್ಚರಿಕೆ ಗಂಟೆಯಾಗಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಪಾಯವೇನೂ ಆಗುವುದಿಲ್ಲವೇ ಎಂಬ ಚರ್ಚೆ ಹುಟ್ಟು ಹಾಕಿದೆ.
ಚುನಾವಣೆ ಫಲಿತಾಂಶದ ನಂತರ ರಾಜ್ಯ ಸರ್ಕಾರ ಉಳಿಯುವುದಿಲ್ಲವೆಂಬ ಅಭಿಪ್ರಾಯವನ್ನು ಮೈತ್ರಿ ಪಕ್ಷದ ನಾಯಕರು ಸಾಕಷ್ಟು ಬಾರಿ ಹೇಳಿದ್ದರು. ಬಿಜೆಪಿ ಹೆಚ್ಚಿನ ಬಹುಮತದೊಂದಿಗೆ ಅಧಿಕಾರ ಹಿಡಿಯುವುದರಿಂದ ಹಳೆಯ ಚಾಳಿಯಂತೆ ಆಪರೇಷನ್ ಕಮಲ ನಡೆಸಲಿದೆ ಎಂಬ ಆತಂಕ ಕಾಂಗ್ರೆಸ್​ನಲ್ಲಿಯೂ ಇತ್ತು. ಏಕೆಂದರೆ ಬಿಜೆಪಿ ನಾಯಕರು ಕಾಂಗ್ರೆಸ್​ನ ಕೆಲ ಶಾಸಕರನ್ನು ಸಂರ್ಪಸಿದ್ದರು ಎಂಬ ಮಾತಿದೆ.
ಆದರೆ, ಈಗ ಕೇಂದ್ರದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮಿತ್ರಪಕ್ಷಗಳ ಬಿಗಿ ಹಿಡಿತದಲ್ಲಿಯೇ ಸಾಗಬೇಕಾಗಿದೆ. ಹಿಂದಿನ ಬಾರಿ ಮಾಡಿದಂತೆ ಮಾಡಲಾಗದ ಸ್ಥಿತಿಯಲ್ಲಿದೆ ಏಕೆಂದರೆ ಒಟ್ಟಾರೆ ಬಿಜೆಪಿ ದುರ್ಬಲವಾಗಿದೆ. ಆದ್ದರಿಂದ ಅತಿರೇಕಗಳಿಗೆ ಹೋಗುವುದಿಲ್ಲವೆಂಬ ಗಟ್ಟಿಯಾದ ಅಭಿಪ್ರಾಯ ರಾಜ್ಯ ಕಾಂಗ್ರೆಸ್ ಸರ್ಕಾರದ ಮಟ್ಟದಲ್ಲಿದೆ. ಆದ್ದರಿಂದ ಸರ್ಕಾರ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಲು ಯಾವುದೇ ಅಡ್ಡಿ ಎದುರಾಗದು ಎಂಬ ಅನಿಸಿಕೆ ಬಲವಾಗಿ ಮೂಡಿದೆ.
ಇದರ ನಡುವೆಯೇ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಇನ್ನಷ್ಟು ಅಗ್ರೆಸಿವ್ ಆಗುತ್ತಾರಾ ಎಂಬ ಅನುಮಾನವೂ ಇದೆ. ಏಕೆಂದರೆ ಬಿಜೆಪಿಯನ್ನು ಬಲಗೊಳಿಸಬೇಕಾದರೆ ಎಲ್ಲ ಪ್ರಯತ್ನ ಮಾಡಬೇಕಾಗುತ್ತದೆ. ಆದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಮೈ ಎಲ್ಲ ಕಣ್ಣಾಗಿರಬೇಕು ಎಂಬ ಚರ್ಚೆಯೂ ಪಕ್ಷದಲ್ಲಿ ನಡೆದಿದೆ.
ಕಳೆದ ಅವಧಿಯಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ನೀಡಲಿಲ್ಲವೆಂಬ ಕಾರಣಕ್ಕೆ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಲಾಯಿತು. ಬರ ಪರಿಹಾರಕ್ಕೆ ಸುಪ್ರೀಂಕೋರ್ಟ್​ನ ಮೆಟ್ಟಿಲು ಹತ್ತಬೇಕಾಯಿತು. ಆದ್ದರಿಂದ ರಾಜ್ಯ ಸರ್ಕಾರದ ಮೇಲೆ ಮೋದಿ ಹಾಗೂ ಅಮಿತ್ ಷಾಗೆ ಸಿಟ್ಟಿದೆ. ಯಾವುದೇ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಮಿತ್ರಪಕ್ಷಗಳು ಬಿಡುವುದಿಲ್ಲ. ಇಂತಹ ಹೋರಾಟಗಳ ಅಗತ್ಯ ಬೀಳುವುದಿಲ್ಲ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿವೆ.
ಸಿಬಿಐ, ಐಟಿ, ಇಡಿಗಳ ಬಳಕೆಯ ಮೂಲಕ ಪ್ರತಿಪಕ್ಷಗಳನ್ನು ಹಣಿಯುವ ಪ್ರಯತ್ನ ಸಾಕಷ್ಟು ನಡೆದಿತ್ತು. ಆದರೆ ಇನ್ಮುಂದೆ ಅಂತಹ ಪ್ರಯತ್ನಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳನ್ನು ಗುರುತಿಸಲಾಗುತ್ತಿದೆ.
ಎಲ್ಲ ಪಕ್ಷಗಳಿಗೂ ಎಚ್ಚರಿಕೆ:ಈ ಫಲಿತಾಂಶ ರಾಜ್ಯದ ಮಟ್ಟಿಗೆ ಹೇಳುವುದಾದರೆ ಸರ್ಕಾರದ ಜತೆಗೆ ಮೂರು ಪಕ್ಷಗಳಿಗೂ ಎಚ್ಚರಿಕೆಯ ಗಂಟೆಯೇ ಆಗಿದೆ. ಸರ್ಕಾರ ನಡೆಸುವವರು ಮೈಯೆಲ್ಲ ಕಣ್ಣಾಗಿರುವುದು ಒಂದೆಡೆಯಾದರೆ, ಕಾಂಗ್ರೆಸ್​ನಲ್ಲಿ ಒಳೇಟು ನೀಡುವುದು, ಗುಂಪುಗಾರಿಕೆ, ಅಸಮಾಧಾನ, ಕೇವಲ ಅಧಿಕಾರಕ್ಕೆ ಹಾತೊರೆಯುವುದು ಬಿಡಬೇಕು. ಸಂಘಟನೆಯನ್ನು ಬಲಗೊಳಿಸಬೇಕು, ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕೆಂಬ ಸೂಚನೆಯನ್ನು ನೀಡಿದೆ.
ಅದೇ ರೀತಿಯಲ್ಲಿ ಬಿಜೆಪಿ ಕಳೆದ ಬಾರಿಯ ಒಂಭತ್ತು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಯಲ್ಲಿ ಕೆಲವರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡದಿದ್ದರೆ ಇನ್ನಷ್ಟು ಸೋಲುಗಳಾಗುತ್ತಿದ್ದವು. ಗೆದ್ದಿರುವ ಕೆಲವರು ಸ್ವಂತ ಶಕ್ತಿಯ ಮೇಲೆ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಎಚ್ಚರಿಕೆ ಅಗತ್ಯವಾಗಿದೆ. ಸಂಘಟನೆ ಹಾಗೂ ಒಮ್ಮತ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂಬ ಸಂದೇಶ ನೀಡಿದೆ. ಜೆಡಿಎಸ್ ತನ್ನ ಮತಬ್ಯಾಂಕ್ ಅನ್ನು ಬಿಜೆಪಿ ಕಡೆ ತಿರುಗಿಸಿದೆ. ಎರಡು ಕ್ಷೇತ್ರ ಗೆದ್ದಿದ್ದರು ಹಳೆಯ ಮೈಸೂರು ಭಾಗದಲ್ಲಿದ್ದ ಸ್ವಂತ ಶಕ್ತಿಯನ್ನು ಕಳೆದುಕೊಳ್ಳುತ್ತದೆಯೇ, ಮುಂದಿನ ಭವಿಷ್ಯವೇನು ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.
ಮುಂದಿರುವ ಸವಾಲುಗಳು:ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 19 ಸ್ಥಾನಗಳನ್ನು ಗೆದ್ದಿದ್ದರೂ ಮಿಶ್ರಫಲವೇ. ಫಲಿತಾಂಶವನ್ನು ವಿಶ್ಲೇಷಣೆ ಮಾಡಿ ನೋಡುವುದಾದರೆ ಸಾಕಷ್ಟು ರಾಜಕೀಯ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ಫಲಿತಾಂಶದ ಮೂಲಕ ನೋಡಿದಾಗ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್​ನ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಬಿ.ಎಲ್.ಸಂತೋಷ್ ದೊಡ್ಡ ಪ್ರಮಾಣದ ಗೆಲುವು ಸಾಧಿಸಿದ್ದಾರೆ. ಸಂತೋಷ್ ಕಲಬುರಗಿ ಹಾಗೂ ತುಮಕೂರಿನಲ್ಲಿ ಕಾರ್ಯತಂತ್ರ ಮಾಡುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಮತ್ತೆ ಹಿಡಿತ ಸಾಧಿಸುವ ಪ್ರಯತ್ನ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ .ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ತೃಪ್ತಿದಾಯಕ ಅಷ್ಟೇ. ಮುಂದಿನ ದಿನಗಳಲ್ಲಿ ಎರಡು ಪಕ್ಷದ ನಾಯಕರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ.
ಯಡಿಯೂರಪ್ಪ ಅನಿವಾರ್ಯ:ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಅನಿವಾರ್ಯ ಎಂಬ ಸಂದೇಶವನ್ನೂ ಈ ಚುನಾವಣಾ ಫಲಿತಾಂಶ ನೀಡಿದೆ. ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದ್ದರೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೋರಾಟ ಮಾಡದಿದ್ದಲ್ಲಿ ಇನ್ನಷ್ಟು ಸ್ಥಾನಗಳನ್ನು ಸೋಲಬೇಕಾಗಿತ್ತು. ಯಡಿಯೂರಪ್ಪ ಹೇಳಿದ ರೀತಿಯಲ್ಲಿಯೇ ಟಿಕೆಟ್ ನೀಡಿದ್ದರೆ ಬಿಜೆಪಿ ಇನ್ನಷ್ಟು ಸಾಧನೆ ಮಾಡುವ ಅವಕಾಶ ಇತ್ತು.
ನಾಯಕತ್ವ ಬದಲಾವಣೆಗೆ ವಿರಾಮ:ಆಡಳಿತರೂಢ ಕಾಂಗ್ರೆಸ್​ನಲ್ಲಿ ಈ ಚುನಾವಣೆ ಫಲಿತಾಂಶ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ಸ್ವಕ್ಷೇತ್ರದಲ್ಲೇ ಸೋಲು ಅನುಭವಿಸಿರುವುದು ನಾಯಕತ್ವ ಬದಲಾವಣೆ ಕುರಿತಾದ ವಿದ್ಯಮಾನಗಳಿಗೆ ಕೆಲ ಕಾಲ ವಿರಾಮ ನೀಡಿದರೆ, ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿದ್ದ ಡಾ. ಜಿ.ಪರಮೇಶ್ವರ ಅವರ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚು. ಬಿಜೆಪಿಯಲ್ಲಿ ಕಡಿಮೆ ಸ್ಥಾನ ಬಂದಿದ್ದರೂ ಕಾಂಗ್ರೆಸ್​ಗಿಂತ ಹೆಚ್ಚು ಸ್ಥಾನ ಗಳಿಸಿರುವುದರಿಂದ ವಿಜಯೇಂದ್ರ ಸ್ಥಾನ ಸದ್ಯಕ್ಕೆ ಅಭಾದಿತ.
ಕೆಲವರ ತಲೆದಂಡ?:ಕೋಲಾರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಂಪಾಟ ಮಾಡಿದ್ದ ಸಚಿವ ಕೆ.ಎಚ್. ಮುನಿಯಪ್ಪ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಾರದ ಶಿವಾನಂದ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಸಂತೋಷ್ ಲಾಡ್, ಡಿ. ಸುಧಾಕರ್, ಎಂ.ಸಿ. ಸುಧಾಕರ್, ಬೈರತಿ ಸುರೇಶ್ ಸೇರಿ ಅನೇಕ ಸಚಿವರು ಸೋಲಿನ ಹೊಣೆ ಹೊರಬೇಕಾಗಿದೆ. ಆದ್ದರಿಂದ ಅವರೆಲ್ಲರ ತಲೆದಂಡ ಆಗುವುದೇ ಎಂಬುದು ಕಾಂಗ್ರೆಸ್​ನಲ್ಲಿ ಯಕ್ಷಪ್ರಶ್ನೆಯಾಗಿದೆ.

ಸತತ ಮೂರನೇ ಬಾರಿಗೆ ಎನ್​​ಡಿಎ ಸರ್ಕಾರ ರಚಿಸಲಿದೆ: ಗೆಲುವು ಕೊಟ್ಟ ದೇಶವಾಸಿಗಳಿಗೆ ಮೋದಿ ಧನ್ಯವಾದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
