|ಡಾ.ಕೆ. ಚಿದಾನಂದಗೌಡ
‘ಕುಪ್ಪಳಿಯನ್ನು ಕಾಂಕ್ರೀಟ್ ಕಾಡು ಮಾಡುವ ಯತ್ನ’ ಎಂಬ ವಿಜಯವಾಣಿಯ (14-2-2023) ಲೇಖನವನ್ನು ಓದಿದೆ. ಅದರಲ್ಲಿ ಕುಪ್ಪಳಿ ಪರಿಸರವು ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಕಾಂಕ್ರೀಟ್ ಕಾಡಾಗುತ್ತಿದೆ ಎಂಬುದನ್ನು ವಿವರಿಸಲಾಗಿತ್ತು. ಫೇಸ್​ಬುಕ್​ನಲ್ಲಿ ಸುಬೋಧ್ ಕುಪ್ಪಳಿಯವರು ಹಾಕಿದ ವಿಡಿಯೋ ಮತ್ತು ಫೇಸ್​ಬುಕ್​ನಲ್ಲಿ ಜಗದೀಶ್ ಜಾಣಜಾಣೆಯರು ಹಾಕಿದ ವಿಡಿಯೋ ಇವುಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಯಾರೋ ನನಗೆ ಕಳಿಸಿದ್ದರು. ಸುಬೋಧ್ ವಿಡಿಯೋದಲ್ಲಿ ಕವಿಮನೆಯ ಬಳಿಯ ಶೌಚಗೃಹ, ಇಂಗುಗುಂಡಿ, ದುರ್ವಾಸನೆ, ಸೊಳ್ಳೆಗಳ ಕಾಟ ಇವುಗಳಿಂದಾಗಿ ಕವಿಮನೆಗೆ ಹತ್ತಿರದಲ್ಲಿ ವಾಸಿಸುತ್ತಿರುವ ಮತ್ತು ಕುವೆಂಪು ಕುಟುಂಬಕ್ಕೆ ಸೇರಿದ ಅವರು ಅನುಭವಿಸುತ್ತಿರುವ ತೊಂದರೆಗಳ ಕುರಿತು ವಿವರಿಸಿದ್ದರು. ಜಾಣಜಾಣೆಯರ ವಿಡಿಯೋ ಮತ್ತು ಪತ್ರಿಕೆಯ ಲೇಖನದಲ್ಲಿ ಕವಿಮನೆಗೆ ಬಹಳ ದೂರದಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಕ್ಯಾಂಟೀನಿನ ಕಟ್ಟಡದಿಂದಾಗಿ ಆಗುತ್ತಿರುವ ಪರಿಸರದ ನಾಶದ ಕುರಿತಾಗಿ ವಿವರಗಳಿದ್ದವು. ಆ ಲೇಖನ ಮತ್ತು ವಿಡಿಯೋಗಳನ್ನು ನೋಡಿ, ಪರಿಸರಪ್ರೇಮಿಯೂ, 2002-2006ರ ನಾಲ್ಕು ವರ್ಷ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಕಾರಣದಿಂದಾಗಿ ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಉಪಾಧ್ಯಕ್ಷನೂ ಆಗಿದ್ದ, ಕುವೆಂಪು ಮತ್ತು ತೇಜಸ್ವಿ ಇಬ್ಬರಿಗೂ ಬಂಧುವೂ ಆಗಿದ್ದ ನನಗೆ ಬಹಳ ದುಃಖವೂ ದಿಗಿಲೂ ಉಂಟಾಯಿತು. ಫೆಬ್ರವರಿ 10ರಂದು ಶಿವಮೊಗ್ಗದಲ್ಲಿ ಮಿತ್ರರೊಬ್ಬರ ಮಗನ ಮದುವೆಗೆ ಹೋಗಬೇಕೆಂದಿದ್ದ ನಾನು, ಫೆ. 9ರಂದು ಕುಪ್ಪಳಿಗೆ ಹೋಗಿ, ತೇಜಸ್ವಿ ಸ್ಮಾರಕ ಮತ್ತು ಕುವೆಂಪು ಅವರ ಕವಿಮನೆಯ ಪರಿಸರಗಳಲ್ಲಿ ಯಾವ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ನೋಡಿ ತಿಳಿಯಲು ನಿರ್ಧರಿಸಿದೆ.
ಕವಿಮನೆಯ ಬಳಿಯ ಕ್ಯಾಂಟೀನ್ ಮತ್ತು ಶೌಚಗೃಹಗಳನ್ನು ಬೇರೆಡೆಗೆ ವರ್ಗಾಯಿಸಲು ನಿರ್ಧರಿಸಿದ ಕಾರಣಗಳಲ್ಲಿ ಎರಡು ಮುಖ್ಯಾಂಶಗಳನ್ನು ನಾನು ಗಮನಿಸಿದೆ: 1. ಕವಿಮನೆಯ ನೆರೆಕರೆಯ ಮನೆಗಳಿಗೆ ಆಗುತ್ತಿರುವ ತೊಂದರೆಗಳು, 2.ಕವಿಮನೆಯ ಸುತ್ತಲಿನ ಪರಿಸರದ ಮಾಲಿನ್ಯ.
ಕವಿಮನೆಗೆ ಅನತಿದೂರದಲ್ಲೇ ಕುವೆಂಪು ಕುಟುಂಬಸ್ತರೇ ಆದ, ಮತ್ತು ಕುವೆಂಪು ಅವರ ಆದಿಮನೆಯನ್ನು ಮ್ಯೂಸಿಯಂ ಮಾಡಲು ಸರ್ಕಾರಕ್ಕೆ ಬಿಟ್ಟುಕೊಟ್ಟ ಇಬ್ಬರ ಮನೆಗಳಿವೆ. ಕೆಲವು ವಿಶೇಷ ತಿಂಗಳು ಮತ್ತು ದಿನಗಳಲ್ಲಿ 3000-4000 ಸಂದರ್ಶಕರು ಕುಪ್ಪಳಿಯ ಕುವೆಂಪುಮನೆ ನೋಡಲು ಬರುವ ಮಾಹಿತಿ ಮಾರಾಟವಾಗುವ ಟಿಕೇಟುಗಳ ಸಂಖ್ಯೆಗಳಿಂದ ನನಗೆ ಸ್ಪಷ್ಟವಾಯಿತು. ಪ್ರವಾಸಿಗಳು ಬಸ್ಸುಗಳಲ್ಲಿ ಮತ್ತು ಕಾರುಗಳಲ್ಲಿ ಬರುತ್ತಾರೆ, ಮತ್ತು ಶೌಚಗೃಹಗಳನ್ನು ಬಳಸುತ್ತಾರೆ. ಇವು ಕವಿಶೈಲ ಬೆಟ್ಟದ ಬುಡದಲ್ಲೇ ಇರುವುದರಿಂದ ಶೌಚಗೃಹದ ಎರಡೂ ಇಂಗುಗುಂಡಿಗಳು ಮಳೆಗಾಲದಲ್ಲಿ ಮೇಲಿಂದ ಹರಿವ ನೀರಿನಿಂದಾಗಿ ತುಂಬಿಕೊಂಡು ಉಕ್ಕಿ ಹರಿದು ದುರ್ವಾಸನೆ ಹರಡುತ್ತವೆ. ಕವಿಮನೆಯ ಮತ್ತು ಅಂಗಳದ ಮುಕ್ಕಾಲು ಎಕರೆ ಆವರಣದ ಸುತ್ತ ಕುವೆಂಪು ಕುಟುಂಬಸ್ತರ ಜಮೀನುಗಳಿರುವುದರಿಂದ ಇಂಗುಗುಂಡಿಯ ಕಲ್ಮಷವನ್ನು ಇತರರಿಗೆ ತೊಂದರೆಯಾಗದಂತೆ ಹೊರಗೆ ಕಳಿಸುವುದೂ ಅಸಾಧ್ಯವಾಗಿದೆ. ಹೀಗಾಗಿ ಶೌಚಗೃಹ ಸ್ಥಳಾಂತರ ಅತ್ಯವಶ್ಯಕ.
ರಜಾದಿನಗಳಲ್ಲಿ ಎಷ್ಟೋ ಪ್ರವಾಸಿ ಬಸ್ಸುಗಳು ಬೆಳಗ್ಗೆ ಸುಮಾರು 5 ಗಂಟೆಗೆ ಕವಿಮನೆಯ ಮುಂದೆ ಬಂದು ನಿಲ್ಲುತ್ತವೆ. ಕೆಲ ಪ್ರವಾಸಿಗಳು ಸುತ್ತಲಿನ ಪ್ರದೇಶದಲ್ಲಿ ಉಪಾಹಾರ ಸೇವಿಸಿ, ಕಾಗದದ ತಟ್ಟೆ, ಲೋಟಗಳನ್ನು ಅಲ್ಲಲ್ಲಿಯೇ ಎಸೆದು, ಅಲ್ಲಿರುವ ಶೌಚಗೃಹ ಉಪಯೋಗಿಸಿ, ಶೌಚಗೃಹ ತೆರವಾಗಿ ಇಲ್ಲದಿದ್ದರೆ, ಕವಿಶೈಲದ ಕೆಳಭಾಗವನ್ನೇ ಬಯಲು-ಶೌಚವಾಗಿ ಬಳಸುತ್ತಾರೆ. ಇದರಿಂದ ಕವಿಮನೆಯ ಪರಿಸರ ಮತ್ತು ಹತ್ತಿರದಲ್ಲೇ ಇರುವ ಕುವೆಂಪು ಕುಟುಂಬಸ್ತರ ಎರಡು ಮನೆಗಳ ಪರಿಸರವೂ ಮಲಿನಗೊಂಡು ದುರ್ವಾಸನೆ ಮತ್ತು ಸೊಳ್ಳೆಗಳ ಕಾಟಕ್ಕೂ ಕಾರಣವಾಗುತ್ತದೆ. ಇದಲ್ಲದೆ ಪ್ರವಾಸಿಗಳು ತಿಂದುಳಿದ ತಿಂಡಿಗಳನ್ನು ಎಸೆಯುವುದರಿಂದ ಕವಿಮನೆಯ ಪರಿಸರಕ್ಕೆ ಬರುವ ಮಂಗಗಳ, ನಾಯಿಗಳ, ಮತ್ತು ದನಕರುಗಳ ಸಂಖ್ಯೆಯೂ ಹೆಚ್ಚಾಗಿ, ದೊಡ್ಡ ಸಮಸ್ಯೆಯೇ ಆಗುತ್ತಿದೆಯೆಂದು ನೌಕರರು ಹೇಳುತ್ತಾರೆ. ಕ್ಯಾಂಟೀನನ್ನು ಸ್ಥಳಾಂತರಿಸಿದರೆ ಪರಿಸರ ಮಾಲಿನ್ಯ ತಡೆ ಸಾಧ್ಯವಾಗಬಹುದು.
ಈಗಿರುವ ಕ್ಯಾಂಟೀನ್ ಕಟ್ಟಡವನ್ನು ಹೋಮ್​ಥಿಯೇಟರ್ ಆಗಿ ಪರಿವರ್ತಿಸಿ, ಸಂದರ್ಶಕರು ಬರುವ ಕಾಲಾವಧಿಯಲ್ಲಿ ನಿರಂತರವಾಗಿ ಕುವೆಂಪು ಸಾಕ್ಷ್ಯಚಿತ್ರವನ್ನು ಅಲ್ಲಿ ತೋರಿಸುವ ಸದುದ್ದೇಶವನ್ನು ಕವಿಮನೆಯ ನಿರ್ವಾಹಕರು ಇಟ್ಟುಕೊಂಡಿದ್ದಾರೆ. ಇದು ಸ್ತುತ್ಯಕಾರ್ಯ. ಹೊಸದಾಗಿ ಕಟ್ಟಿಸುತ್ತಿರುವ ಕುವೆಂಪು ಮಾಹಿತಿಕೇಂದ್ರದಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಸ್ಥಳಾವಕಾಶ ಇರುತ್ತದೆ. ಅದರ ಹೊರಭಾಗದಲ್ಲಿ ಶೌಚಗೃಹಗಳನ್ನು ಕಟ್ಟಲಾಗುತ್ತದೆ. ಇದಕ್ಕಾಗಿ ಕುವೆಂಪು ಜೈವಿಕ ಧಾಮಕ್ಕೆ ಸೇರಿರದ, ದೊಡ್ಡ ಮರಗಳಿಲ್ಲದ, ಸಣ್ಣ ಕಾಡುಗಿಡ ಮತ್ತು ಪೊದೆಗಳಿರುವ ಜಾಗವನ್ನು ಪ್ರತಿಷ್ಠಾನದವರು ಆರಿಸಿಕೊಂಡಿದ್ದಾರೆ. ಈ ಸ್ಥಳದ ಮುಂದೆಯೇ ಕೃಷಿಕರೊಬ್ಬರ ಮನೆಯೂ ಇದೆ. ಇದು ತೇಜಸ್ವಿಸ್ಮಾರಕಕ್ಕಿಂತ ಸುಮಾರು 300 ಅಡಿ ಅಂತರದಲ್ಲಿದೆ. ಸನಿಹದಲ್ಲಿಯೇ ಬಯಲು ಪ್ರದೇಶವಿದ್ದು, ಇದು ಪ್ರವಾಸೀ ಬಸ್ಸುಗಳನ್ನು ನಿಲ್ಲಿಸಲು ಯೋಗ್ಯ ಸ್ಥಳವೂ ಆಗಿರುವಂತೆ ಕಂಡುಬರುತ್ತದೆ. ಇಲ್ಲಿ ಹೋಟೆಲು ಮಾಡುವ ಯೋಚನೆಯೇ ಇಲ್ಲವೆಂದೂ, ಬಹಳ ಸಣ್ಣ ಮಟ್ಟದ ಸ್ವಯಂ-ಚಾಲಿತವಾದ ಕ್ಯಾಂಟೀನ್ ಇರಿಸುವ ಯೋಜನೆಯಿದೆಯೆಂದೂ ಇಲ್ಲಿಯ ಕಾರ್ಯನಿರ್ವಾಹಕರು ತಿಳಿಸಿದರು.
ಒಟ್ಟಾರೆಯಾಗಿ, ಸ್ಥಳ ಪರಿಶೀಲಿಸಿ ಅನೇಕರೊಡನೆ ವಿಚಾರ ವಿನಿಮಯ ಮಾಡಿದಾಗ ನಾನು ಗಮನಿಸಿದ ಮುಖ್ಯಾಂಶಗಳು ಇವು: ್ಞವಿಮನೆಯ ಪರಿಸರದ ನೈರ್ಮಲ್ಯ ಕಾಪಾಡಲು ಮತ್ತು ಕುವೆಂಪು ಕುಟುಂಬಸ್ತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಹತ್ತಿರದಲ್ಲಿರುವ ಕ್ಯಾಂಟೀನ್ ಮತ್ತು ಶೌಚಗೃಹಗಳನ್ನು ದೂರಕ್ಕೆ ಸ್ಥಳಾಂತರಿಸುವ ಅಗತ್ಯವಿದೆ. ್ಞೊಸ ಮಾಹಿತಿಕೇಂದ್ರವು ಹಳೆಯ ಮಾದರಿಯ ಸಣ್ಣ ಹಂಚಿನ ಕಟ್ಟಡವಾಗಿದ್ದು, ತೇಜಸ್ವಿ ಸ್ಮಾರಕದಿಂದ ಸಾಕಷ್ಟು ದೂರದಲ್ಲೂ ಮತ್ತು ಕುವೆಂಪು ಜೈವಿಕಧಾಮದಿಂದ ಹೊರಗೂ ಇದೆ. ್ಞೊಡ್ಡ ವಾಹನಗಳ ನಿಲುಗಡೆ ನಿಯಂತ್ರಿಸುವುದು ನೈರ್ಮಲ್ಯ ದೃಷ್ಟಿಯಿಂದ ಅತ್ಯಗತ್ಯ. ್ಞುಪ್ಪಳಿಯನ್ನು ಕಾಂಕ್ರೀಟ್ ಕಾಡು ಮಾಡದೆ, ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಪರಿಸರವನ್ನು ಹಾಳುಮಾಡದೆ ಅದನ್ನು ಉಳಿಸಿ ಬೆಳೆಸುವ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಕುವೆಂಪು ಪ್ರತಿಷ್ಠಾನವು ಜನಮುಖಿಯೂ, ಪ್ರವಾಸೋದ್ಯಮದ ಸಹಕಾರಿಯೂ ಆಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ್ಞೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಕುವೆಂಪು ಅವರು ವಿಶ್ವಮಾನವ ಸಂದೇಶದಲ್ಲಿ ಹೇಳುವಂತೆ ಪೂರ್ಣದೃಷ್ಟಿಯಿಂದ ನೋಡಿ, ಸಂವಹನ ಮಾಡಿದರೆ, ಅರ್ಧಸತ್ಯದ ವಿವರಗಳು ಶ್ರೀಸಾಮಾನ್ಯನನ್ನು ತಲುಪುವುದಿಲ್ಲ ಎನ್ನುವುದು ನನ್ನ ಅನುಭವ ಮತ್ತು ಅನಿಸಿಕೆ.
(ಲೇಖಕರು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
