ಬೆಂಗಳೂರು:ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಖಡಕ್ಕಾಗಿ ತಿಳಿಸಿದರು.
ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿಗಳ ಜತೆ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಇಡೀ ಕಾಂಗ್ರೆಸ್ ಹಾಗೂ ಸರ್ಕಾರ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಕೇವಲ ಕಾಂಗ್ರೆಸ್ ಅಲ್ಲ, ಇಡೀ ಇಂಡಿಯಾ ಒಕ್ಕೂಟ ನಮ್ಮ ಮುಖ್ಯಮಂತ್ರಿಗಳ ಬೆನ್ನಿಗೆ ನಿಲ್ಲಲಿದೆ. ನಾವು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ. ಇದರ ಜತೆಗೆ ರಾಜಕೀಯವಾಗಿಯೂ ಜನರ ಮಧ್ಯೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಹಿಂದುಳಿದ ವರ್ಗದ ನಾಯಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಕೇಂದ್ರ ಬಿಜೆಪಿ ಸರ್ಕಾರ ದೊಡ್ಡ ಪಿತೂರಿ ನಡೆಸಿದೆ. ಇದನ್ನು ಧಿಕ್ಕರಿಸಿ ನಾವು ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಕಚೇರಿ ಬಿಜೆಪಿ ಪಕ್ಷದ ಕೈಗೊಂಬೆಯಾಗಬಾರದು. ಜನಪರ ಕೆಲಸ ಮಾಡುವ ಈ ಸರ್ಕಾರ ತೆಗೆಯುವ ಹುನ್ನಾರ ನಡೆಯುತ್ತಿದ್ದು, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಯಾವುದಾದರೂ ತನಿಖೆಗೆ ಅನುಮತಿ ನೀಡಬೇಕಾದರೆ, ಪ್ರಾಥಮಿಕ ತನಿಖೆ ನಡೆಸಿ ಆ ತನಿಖೆಯ ವರದಿಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವವರ ವಿಚಾರಣೆ ಅಗತ್ಯವಿದೆ ಎಂದು ಮನವರಿಕೆ ಮಾಡಿದ್ದರೆ ಆಗ ವಿಚಾರಣೆ ನಡೆಸಲು ಅನುಮತಿ ನೀಡಬಹುದು. ಆದರೆ ಇಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲನೆ ಆಗಿಲ್ಲ. ಈ ಹಿಂದೆಯೂ ಬೇಕಾದಷ್ಟು ಘಟನೆಗಳಿವೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಅವರ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ವರದಿ ಇದ್ದು, ಅದರ ಆಧಾರದ ಮೇಲೆ ವಿಚಾರಣೆಗೆ ಅನುಮತಿ ಕೇಳಲಾಗಿದೆ. ಈ ಮನವಿಗಳನ್ನೇ ರಾಜ್ಯಪಾಲರು ಇನ್ನು ತೀರ್ಮಾನ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರು ದೂರು ಬಂದ 24 ತಾಸಿನಲ್ಲೇ ಸರ್ಕಾರಕ್ಕೆ ಶೋಕಾಸ್ ನೊಟೀಸ್ ನೀಡಿ ವಿವರಣೆ ಕೇಳುತ್ತಾರೆ. ನಮ್ಮ ಮನವಿಯನ್ನು ತಿರಸ್ಕರಿಸಿ ಈಗ ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಆದೇಶ ನೀಡಿರುವ ಬಗ್ಗೆ ಪತ್ರ ಕಳುಹಿಸಿದ್ದಾರೆ. ಇದು ಸರ್ಕಾರಕ್ಕೆ ರಾಜ್ಯದ ಜನರು ಕೊಟ್ಟಿರುವ ಆಶೀರ್ವಾದದ ವಿರುದ್ಧ ನಡೆದಿರುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಕುಮಾರಸ್ವಾಮಿ ಅವರು ಮುಂದಿನ 8-10 ತಿಂಗಳಲ್ಲಿ ಈ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಪೂರಕವಾಗಿ ಈ ಷಡ್ಯಂತ್ರ ನಡೆಯುತ್ತಿದೆ ಎಂದರು.
ಸಚಿವರಾದ ಎಚ್.ಕೆ. ಪಾಟೀಲ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 5 =
Remember me
