ಬೆಂಗಳೂರು:ರೈತರ ಹಿತರಕ್ಷಣೆಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು, ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮೇಲ್ಮನೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್​ನ ನಾಗರಾಜ್ ಯಾದವ್ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ರೈತರು ತಾವು ಬೆಳೆದ ಬೆಳೆಯನ್ನು ಬೇಕಾದಲ್ಲಿ ಮಾರಾಟ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ‘ನನ್ನ ಬೆಳೆ ನನ್ನ ಹಕ್ಕು’ ಧ್ಯೇಯವಾಕ್ಯದಡಿ ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಈ ತಿದ್ದುಪಡಿ ತರಲಾಗಿದ್ದು, ಇದರಿಂದಾಗಿ ತೊಂದರೆಯಾಗಿದೆ ಯಾವುದೇ ರೈತರು ದೂರು ನೀಡಿಲ್ಲ. ಈ ಹಿಂದೆ ರೈತರು ಬೆಳೆ ಬೆಳೆಗಳನ್ನು ಎಪಿಎಂಸಿ ಆವರಣಕ್ಕೆ ತಂದು ಮಾರಾಟ ಮಾಡಬೇಕು ಎಂಬ ನಿಯಮವಿತ್ತು. ಉಲ್ಲಂಘಿಸಿದ ರೈತರ ದಂಡ ವಿಧಿಸಲಾಗುತ್ತಿತ್ತು. ಅಷ್ಟೇ ಅಲ್ಲ, ವಿಚಕ್ಷಣಾ ದಳವನ್ನು ನೇಮಿಸಲಾಗಿತ್ತು. ನಿಯಮ ಉಲ್ಲಂಘಿಸಿದ ರೈತರಿಗೆ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವಿತ್ತು. ಹಿಂದಿನ ಮೂರು ವರ್ಷಗಳಲ್ಲಿ ದಂಡದ ರೂಪದಲ್ಲಿ ರೈತರಿಂದ 25 ಕೋಟಿ ರೂ. ವಸೂಲಿ ಮಾಡಿದ ನಿದರ್ಶನಗಳಿವೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿಯಮ ಕೈಬಿಟ್ಟು ರೈತರನ್ನು ಸ್ವತಂತ್ರಗೊಳಿಸಲಾಗಿದೆ ಎಂದು ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸರ್ಕಾರ ಮಧ್ಯೆ ಪ್ರವೇಶಿಸುತ್ತದೆ. ಜಿಲ್ಲಾ ಟಾಸ್ಕ್ ಫೋಸ್ ಸಮಿತಿ ಶಿಫಾರಸು ಮೇರೆಗೆ ಸಚಿವ ಸಂಪುಟದ ಉಪ ಸಮಿತಿ ಬೆಂಬಲ ಬೆಲೆಗೆ ಖರೀದಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ಕಡ್ಡಾಯ ಅಸಾಧ್ಯ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳು, ಡಿಸಿಸಿ ಬ್ಯಾಂಕ್​ಗಳು ಚಿನ್ನಾಭರಣ ಸಾಲದ ಮೇಲಿನ ಬಡ್ಡಿದರ ಕಡಿತಕ್ಕೆ ಸರ್ಕಾರ ಸಲಹೆ ನೀಡಬಹುದು. ಆದರೆ ಏಕರೂಪವಾಗಿ ದರ ನಿಗದಿ ಕಡ್ಡಾಯಗೊಳಿಸುವುದು ಅಸಾಧ್ಯವೆಂದು ಎಸ್.ಟಿ.ಸೋಮಶೇಖರ್ ತಳ್ಳಿಹಾಕಿದರು. ಜೆಡಿಎಸ್​ನ ಮರಿತಿಬ್ಬೇಗೌಡರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕಳೆದ ಅಧಿವೇಶನದಲ್ಲಿ ಈ ಪ್ರಸ್ತಾಪ ಮಂಡಿಸಿದ್ದಿರಿ. ಎಲ್ಲ 21 ಡಿಸಿಸಿ ಬ್ಯಾಂಕ್​ಗಳ ಸಭೆ ಕರೆದು ರ್ಚಚಿಸಿದ್ದು, ಸಿಬ್ಬಂದಿ ವೇತನ, ನಿರ್ವಹಣೆ ಇತ್ಯಾದಿ ವೆಚ್ಚ ಸರಿದೂಗಿಸುವ ಅನಿವಾರ್ಯತೆ ವಿವರಿಸಿದ್ದಾರೆ. ಆದರೂ ಸಾಧ್ಯವಾದಷ್ಟು ಬಡ್ಡಿ ದರ ತಗ್ಗಿಸಲು ಸಲಹೆ ನೀಡಿರುವೆ. ಒಂದೆರಡು ಡಿಸಿಸಿ ಬ್ಯಾಂಕ್​ಗಳಲ್ಲಿ ಮಾತ್ರ ಹೆಚ್ಚಿದ್ದು, ಉಳಿದ ಡಿಸಿಸಿ ಬ್ಯಾಂಕ್​ಗಳು ಶೇ.7.50 ರಿಂದ 10ರ ಆಸುಪಾಸಿನಲ್ಲಿ ವಿಧಿಸುತ್ತಿವೆ ಎಂದರು.
ಅಂತಿಮ ಹಂತ:ಯಶಸ್ವಿನಿ ಯೋಜನೆ ಮರು ಜಾರಿಗೆ ಬೇಕಾದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಸಿಎಂ ಬೊಮ್ಮಾಯಿ ಘೋಷಿಸಿದ 300 ಕೋಟಿ ರೂ. ಪೈಕಿ 100 ಕೋಟಿ ರೂ. ಬಿಡುಗಡೆಯಾಗಿದೆ. ಕಾಂಗ್ರೆಸ್​ನ ಮಧು ಜಿ.ಮಾದೇಗೌಡರ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಿಂದಿನ ಲೋಪ-ದೋಷ ಮರುಕಳಿಸದಂತೆ ಎಚ್ಚರಿಕೆವಹಿಸಿ ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿದ್ದು, 1,650 ಕಾಯಿಲೆಗಳು ಚಿಕಿತ್ಸೆ ವ್ಯಾಪ್ತಿಗೆ ಬರಲಿವೆ. ಹೊಸದಾಗಿ ಟ್ರಸ್ಟ್ ರಚನೆ, ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪೂರ್ವ ನಿರ್ಧಾರದಂತೆ ಅ.2ಕ್ಕೆ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಎಸ್.ಟಿ.ಸೋಮಶೇಖರ್ ಪುನರುಚ್ಚರಿಸಿದರು.
ಡಬಲ್ ಇಂಜಿನ್ ವರ್ಸಸ್ ಸ್ಪೀಡ್ ಇಂಜಿನ್:ರೈತರ ಚಳವಳಿಗೆ ಮಣಿದು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದು, ನಿಮ್ಮದು ಡಬಲ್ ಇಂಜಿನ್ ಸರ್ಕಾರವೆನ್ನುತ್ತೀರಿ. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ ಎಂದು ಕಾಂಗ್ರೆಸ್​ನ ನಾಗರಾಜ್ ಯಾದವ್ ತಿವಿದರು. ಸೋಮಶೇಖರ್ ಉತ್ತರ ನೀಡುತ್ತಿರುವ ಮಧ್ಯೆ ಈ ವ್ಯಂಗ್ಯದ ಬಾಣ ಬಿಟ್ಟಾಗ ಆಡಳಿತ ಪಕ್ಷದ ಸದಸ್ಯರು ಉತ್ತರ ಕೇಳುವಷ್ಟು ವ್ಯವಧಾನವಿರಲಿ, ಅಷ್ಟು ಸ್ಪೀಡ್ ಎಂದರು. ಸಭಾಪತಿ ರಘುನಾಥ್ ಮಲ್ಕಾಪುರೆ ಸ್ಪೀಡ್ ಇಂಜಿನ್ ನಿಲ್ಲುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಚಿವ ಮುನಿರತ್ನಸದನವಿದು, ಟಿವಿ ಪರದೆಯಲ್ಲವೆಂದು ಕಾಲೆಳೆದರು. ನಾಗರಾಜ್ ಯಾದವ್, ಒಬ್ಬ ಸಚಿವರು ಉತ್ತರಿಸುತ್ತಿರುವಾಗ ಮತ್ತೊಬ್ಬ ಸಚಿವರ ಮಾತು ಎಷ್ಟು ಸರಿ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭಾಪತಿ ಮಧ್ಯೆ ಪ್ರವೇಶಿಸಿ, ಕಲಾಪವನ್ನು ಹಳಿಗೆ ತಂದರು.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
