ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಕನಸು ಬಿತ್ತಿದ್ದ ಎತ್ತಿನಹೊಳೆ ಯೋಜನೆ ಹಳ್ಳ ಹಿಡಿದಿದೆ. ದಶಕದಿಂದ ಯೋಜನೆ ವೆಚ್ಚ ಹೆಚ್ಚುತ್ತಿದೆಯೇ ಹೊರತು ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಇದರಿಂದಾಗಿ ಈ ವರ್ಷವೂ ಫಲಾನುಭವಿಗಳ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಯುವುದಿಲ್ಲ ಎಂಬ ಕಟುಸತ್ಯ ಬಯಲಾಗಿದೆ.
ಸಂಘ-ಸಂಸ್ಥೆ, ಪರಿಸರವಾದಿಗಳ ವಿರೋಧದ ನಡುವೆಯೇ 2008ರಲ್ಲಿ ಅಂದಿನ ಸರ್ಕಾರ 8 ಸಾವಿರ ಕೋಟಿ ರೂ. ಮೊತ್ತದ ಎತ್ತಿನಹೊಳೆ ಯೋಜನೆಗೆ ಮಂಜೂರಾತಿ ನೀಡಿತ್ತು. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆಯೊಂದಿಗೆ ಕಾಮಗಾರಿಗೆ ಚಾಲನೆ ದೊರೆಯಿತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಯೋಜನೆ ವೆಚ್ಚವನ್ನು 13 ಸಾವಿರ ಕೋಟಿ ರೂ.ಗೆ ಪರಿಷ್ಕೃರಿಸಿ ಮಂಜೂರಾತಿ ನೀಡಿತ್ತು. ಯೋಜನೆಯ ಪ್ರಮುಖ ಅಂಶಗಳಾದ ಏತ ಕಾಮಗಾರಿ ಮತ್ತು ಕಾಲುವೆ ನಿರ್ವಣದ ಕಾಮಗಾರಿಗೆ ಚುರುಕು ನೀಡಿತ್ತು. ಆದರೆ ಆರಂಭದ ಉತ್ಸಾಹ ದಿನಕಳೆದಂತೆ ಕುಗ್ಗಲಾರಂಭಿಸಿತು. ತರುವಾಯ ಬಂದ ಮೈತ್ರಿ ಸರ್ಕಾರ ಆದ್ಯತೆ ನೀಡದ ಕಾರಣ ಯೋಜನೆಯ ನಿರ್ಮಾಣ ಕಾರ್ಯ ಸಮರ್ಪಕವಾಗಿ ನಡೆಯಲೇ ಇಲ್ಲ. ನಂತರ, ಯೋಜನೆ ಒಟ್ಟಾರೆ ವೆಚ್ಚ 13,000 ಕೋಟಿ ರೂ.ನಿಂದ 25,000 ಕೋಟಿ ರೂ.ಗೆ ಏರಿಕೆಯಾಯಿತು. ಅಷ್ಟಾದರೂ,ಭೂಸ್ವಾಧೀನ ಪ್ರಕ್ರಿಯೆ ಸೇರಿ ನಾನಾ ಸಮಸ್ಯೆಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. 2020ರ ಜೂನ್​ನೊಳಗೆ ಪೂರ್ತಿಯಾಗಬೇಕಿದ್ದ ಯೋಜನೆ, 2024ರ ಜೂನ್ ಸಮೀಪಿಸುತ್ತಿದ್ದರೂ ಪೂರ್ಣಗೊಳ್ಳುವ ಬಗ್ಗೆ ಸ್ಪಷ್ಟತೆಯೇ ಇಲ್ಲ.
ಬಣ್ಣ ಬಯಲು:ಪ್ಯಾಕೇಜ್-2ರಲ್ಲಿ ಗುತ್ತಿಗೆ ಪಡೆದಿರುವ ಜಿ. ಶಂಕರ್ ಕಂಪನಿ ನಿರ್ವಿುಸಿರುವ ಪಂಪ್​ಹೌಸ್​ನ ಪೋರ್ ಬೇ ವಾಲ್ (ತಡೆಗೋಡೆ) ಸಣ್ಣ ಮಳೆಗೆ ಕುಸಿದಿದೆ. ಮಾನ್ಸೂನ್ ಆರಂಭಕ್ಕೆ ಮೊದಲೇ ಈ ಘಟನೆ ಸಂಭವಿಸಿದರೆ ಮುಂಗಾರು ಆರ್ಭಟದ ವೇಳೆ ಕಾಮಗಾರಿಯ ಗತಿ ಏನೆಂಬ ಆತಂಕ ಮೂಡಿದೆ. ಇದೇ ಪ್ಯಾಕೇಜ್​ನಡಿ ಅಳವಡಿಸಿರುವ ಬೃಹತ್ ಗಾತ್ರದ ಪೈಪ್​ಲೈನ್ ಕೂಡ ಭೂತಳದಿಂದ ಹೊರಬಂದಿದೆ. ಈ ಪೈಪ್​ಲೈನ್​ಗಳನ್ನು ಪುನಃ ಭೂತಳಕ್ಕೆ ಅಳವಡಿಸದಿದ್ದರೆ ಪ್ರಸಕ್ತ ವರ್ಷ ನೀರು ಎತ್ತುವಳಿ ಮಾಡುವುದಕ್ಕೆ ಸಾಧ್ಯವಿಲ್ಲ. ಗುತ್ತಿಗೆ ದಾರರ ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎತ್ತಿನಹೊಳೆ ಯೋಜನೆಯಡಿ ನೀರು ಎತ್ತುವಳಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮರೆತುಬಿಟ್ಟರಾ ಡಿಕೆಶಿ?:ಸಿದ್ದರಾಮಯ್ಯ 2.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಡಿ.ಕೆ. ಶಿವ ಕುಮಾರ್ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಉತ್ಸಾಹದಲ್ಲಿ ಎತ್ತಿನಹೊಳೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಅವರು 2023ರ ಜುಲೈನೊಳಗೆ ನೀರು ಎತ್ತುವಳಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆರಂಭಿಕ ಹಂತದಲ್ಲಿ ನೀರು ಎತ್ತುವಳಿಗೆ ಅನುಕೂಲವಾಗುವಂತೆ ವಿದ್ಯುತ್ ಸಂಪರ್ಕ, ಹಳೆಯದಾಗಿದ್ದ ಪೈಪ್​ಲೈನ್​ಗಳ ದುರಸ್ತಿ ನಡೆದಿತ್ತು. ಸದ್ಯ ಹಾಸನ ಸೇರಿ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ನೀರಿನ ಹರಿವು ಹೆಚ್ಚಾಗುವ ಆತಂಕ ಕಾಡುತ್ತಿದೆ. ಹೀಗಾಗಿ ಜೂನ್ ಅಥವಾ ಜುಲೈನಲ್ಲಿ ಪ್ರಾಯೋಗಿಕವಾಗಿ ನೀರು ಎತ್ತುವಳಿ ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ತಡೆಗೋಡೆ ಕುಸಿಯುತ್ತಿದೆ.
ಏನಿದು ಯೋಜನೆ?:ಯೋಜನೆಯ ಹೃದಯ ಭಾಗವಾದ ಭೈರಗೊಂಡ್ಲು ಅಣೆಕಟ್ಟು ಸ್ಥಳ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಂಚಿನಲ್ಲಿದೆ. ಇದು 7 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಲಿದೆ. ನೇತ್ರಾವತಿ ಉಪನದಿಯಾದ ಎತ್ತಿನ ಹೊಳೆಯಿಂದ 24 ಟಿಎಂಸಿ ಪ್ರಮಾಣದ ನೀರನ್ನು ಪೂರ್ವಕ್ಕೆ ತಿರುಗಿಸಿ, ಏತ ಕಾಮಗಾರಿ ಮುಖಾಂತರ ಮೇಲೆತ್ತಿ 260 ಕಿ.ಮೀ. ಉದ್ದದ ಕಾಲುವೆ ಮೂಲಕ ನೀರು ಹರಿಸಿ ಭೈರಗೊಂಡ್ಲು ಜಲಾಶಯ ಭರ್ತಿ ಮಾಡು ವುದು. ಬಳಿಕ ಅಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಆದರೆ ರಾಜಕಾರಣಿಗಳ ಪ್ರಭಾವದಿಂದ ಯೋಜನೆಯ ಮೂಲ ಸ್ವರೂಪವೇ ಬದಲಾಗಿ ಹಾಸನ, ತುಮಕೂರು, ರಾಮ ನಗರ ಮತ್ತು ಬೆಂಗಳೂರು ನಗರವನ್ನು ಸೇರಿಸಲಾಗಿದೆ.
ಮಳೆ, ನೀರಿನ ಹರಿವು, ನೀರಿನ ಶೇಖರಣೆ ಪ್ರಮಾಣ ಹಾಗೂ ನೀರನ್ನು ತಿರುಗಿಸುವ ಕುರಿತ ಅಂಕಿ-ಅಂಶ ಕಾಲ್ಪನಿಕವಾಗಿವೆ. ನೀರಿನ ಲಭ್ಯತೆ ಕುರಿತು ನಡೆಸಿದ್ದ ಅಧ್ಯಯನದಲ್ಲಿ ತಪ್ಪಾಗಿದೆ. ಹೀಗಾಗಿ, ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವೆಂದು 2012ರಲ್ಲೇ ಕೇಂದ್ರೀಯ ಜಲ ಆಯೋಗ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. ರಾಜ್ಯ ಸರ್ಕಾರ ಕೂಡ ಜಲ ವಿಜ್ಞಾನದ ಬಗ್ಗೆ ಅಧ್ಯಯನ ನಡೆಸಿಲ್ಲ. ಯೋಜನೆಯಿಂದ ಬರಪೀಡಿತ ಜಿಲ್ಲೆಗಳಿಗೆ ಅನುಕೂಲವಾಗುವ ಬದಲು ಗುತ್ತಿಗೆದಾರರಿಗೆ ಹೆಚ್ಚು ವರದಾನವಾಗಿದೆ.
| ಆರ್. ಆಂಜನೇಯ ರೆಡ್ಡಿ,ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ಪಂಪ್ ಹೌಸ್ ಬೇ ವಾಲ್ ಕುಸಿದು ವಾರ ಕಳೆದಿದ್ದರೂ ಸರಿಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಯೋಜನೆ ಜಾರಿ ಹೊಣೆ ಹೊತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭೂತಳ ದಿಂದ ಹೊರ ಬಂದಿರುವ ಬೃಹತ್ ಪೈಪ್​ಲೈನ್ ವೀಕ್ಷಿಸಿದರೂ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿಲ್ಲ. ಬೃಹತ್ ತಡೆಗೋಡೆ ಕುಸಿದು ಬಿದ್ದಿರುವುದು, ಯೋಜನೆ ಜಾರಿಗೆ ಅಡ್ಡಿ ಆಗಿರುವ ಪೈಪ್​ಲೈನ್ ಭೂಮಿಯಿಂದ ಹೊರ ಬಂದಿರುವುದನ್ನು ಉನ್ನತ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ, ಸಭೆಯಲ್ಲಿ ಅಧಿಕಾರಿ ಗಳು ಈ ಬಗ್ಗೆ ಚಕಾರ ಎತ್ತಿಲ್ಲ.
ಪ್ರಸಕ್ತ ವರ್ಷದ ಜೂನ್​ನಲ್ಲಿ ಎಲ್ಲ 8 ವಿಯರ್​ಗಳ ಮೂಲಕ 42 ಕಿ.ಮೀ. ದೂರ ನೀರು ಹರಿಸುವ ಕುರಿತು ರ್ಚಚಿಸಲು ನಿಗಮ ಅಧಿಕಾರಿಗಳು, ಸಲಹೆಗಾರರು ಸೇರಿ ಹಲವು ಪ್ರಮುಖರ ಸಭೆಯನ್ನು ಇದೇ ತಿಂಗಳು ಕರೆಯಲಾಗಿತ್ತು. ಆದರೆ, ಈ ಸಭೆಯಲ್ಲಿ ಅವಘಡದ ಬಗ್ಗೆ ಚರ್ಚೆ ನಡೆದಿಲ್ಲ ಎನ್ನಲಾಗಿದೆ. ಪ್ಯಾಕೇಜ್-2 ಹೊರತುಪಡಿಸಿ 8 ವಿಯರ್​ಗಳ ಬಳಕೆಯೊಂದಿಗೆ ಗುರುತ್ವಾಕರ್ಷಣೆ ಮೂಲಕ 42 ಕಿ.ಮೀ. ನೀರು ಹರಿಸುವುದು ಅಸಾಧ್ಯವಾಗಿದ್ದರೂ ಉನ್ನತ ಅಧಿಕಾರಿಗಳ ಸಭೆಯಲ್ಲಿ ನೈಜ ವಿಚಾರವನ್ನು ಮುಚ್ಚಿಡಲಾಗಿದೆ. ಒಟ್ಟಾರೆ, ಕಳಪೆ ಕಾಮಗಾರಿಯಿಂದ ಮುಂದಿನ ಬೇಸಿಗೆ ವೇಳೆಗೆ ಬೆಂಗಳೂರಿಗೆ ಕುಡಿಯುವ ನೀರು ತರಬೇಕೆಂಬ ಸರ್ಕಾರದ ಮಹತ್ವಾಕಾಂಕ್ಷೆಗೆ ದೊಡ್ಡ ಹಿನ್ನಡೆಯಾಗಿದೆ.
ತಮಿಳುನಾಡಿನ ವಿವಿಧ ಕಡೆ ವರ್ಷಧಾರೆ: ಸಿಡಿಲು ಬಡಿದು ಇಬ್ಬರು ಮೃತ್ಯು, ಸಾವಿನ ಸಂಖ್ಯೆ 4ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
