ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿಲ್ಲ. ಬಿಜೆಪಿ ಜೆಡಿಎಸ್​ನವರು ನನ್ನ ಜೀವಮಾನದಲ್ಲೇ ಕಾಣದಷ್ಟು ಕೆಟ್ಟ ರಾಜಕಾರಣ ಹಾಗೂ ವೈಯಕ್ತಿಕ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ತೆರೆದ ಪುಸ್ತಕ, ಪ್ರತಿ ಪುಟಗಳೂ ಪಾರದರ್ಶಕ ಮತ್ತು ಪ್ರಾಮಾಣಿಕ. ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಪಾತ್ರ ನಯಾಪೈಸೆ ಇರುವುದಿಲ್ಲವೆಂದು ಹೇಳಿದರೂ, ದಾಖಲೆಗಳನ್ನು ಕೊಟ್ಟರೂ ನಂಬಲು ತಯಾರಿಲ್ಲ. ಮೈಸೂರು ಮುಡಾದ ವಿಚಾರದಲ್ಲಿಯೂ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ರ್ಚಚಿಸಿದರು, ವಿರೋಧ ಪಕ್ಷದವರು ನೆಪಕ್ಕೂ ಜನರ ಸಂಕಷ್ಟಗಳ ಬಗ್ಗೆ ಚಕಾರ ಎತ್ತಲಿಲ್ಲ ಎಂದು ಟೀಕಿಸಿದರು. ಬಿಜೆಪಿ, ಜೆಡಿಎಸ್​ನವರು ಹತಾಶರಾಗಿದ್ದಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ನಮಗೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ.13 ಮತಗಳನ್ನು ಈ ಚುನಾವಣೆಯಲ್ಲಿ ಹೆಚ್ಚು ಗಳಿಸಿದೆವು. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ತಪ್ಪು ದಾರಿಯಲ್ಲಿ ವಾಮಮಾರ್ಗ ಹಿಡಿದಿದ್ದಾರೆ ಎಂದು ಕುಟುಕಿದರು.
ಹಿಟ್ಲರ್, ಪೇಶ್ವೆ ವಾದಿ ಮನಸ್ಥಿತಿ:ಕರ್ನಾಟಕದಲ್ಲಿ ಕುಸಿಯುತ್ತಿರುವ ಜನಪ್ರಿಯತೆಯನ್ನು ಮರು ಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿದರೆ ನಿಜವೂ ಸುಳ್ಳಿನಂತೆ ಆಗುತ್ತದೆ ಎಂಬ ಹಿಟ್ಲರ್​ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ ಎಂದು ಟೀಕಿಸಿದರು.
ಗುಲಗಂಜಿಯಷ್ಟೂ ದೋಷ ಇಲ್ಲ:ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೇ ಮಾಡಬಾರದೆಂಬ ನಿಲುವು ಬಿಜೆಪಿ, ಜೆಡಿಎಸ್​ನವರದ್ದು. ಹಿಂದೆ ದೇವರಾಜ ಅರಸು, ಧರ್ಮಸಿಂಗ್ ವಿಚಾರದಲ್ಲೂ ಹೀಗೆ ಆಯಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಲ್ಯಾಣದ ಬಿಜ್ಜಳನನ್ನು ಇದೇ ಪೇಶ್ವೆ ಮನಸ್ಥಿತಿಯ ಜನರೇ ಕೊಲೆ ಮಾಡಿದರು. ಈಗ ನನ್ನ ವಿಚಾರಕ್ಕೂ ಬಂದಿದ್ದಾರೆ. ಬಂದದ್ದು ಒಳ್ಳೆಯದೆ ಆಯಿತು. ಜನ ನೋಡುತ್ತಿದ್ದಾರೆ, ಆದ್ದರಿಂದಲೇ ಮುಡಾ ವಿಚಾರದಲ್ಲಿ ಒಂದು ಗುಲಗಂಜಿಯಷ್ಟು ನ್ಯೂನತೆ ಇಲ್ಲದಿದ್ದರೂ ದೊಡ್ಡ ಆರೋಪ ಮಾಡಿಕೊಂಡು ಕೂತಿದ್ದಾರೆ ಎಂದರು.
ಕಾಗಕ್ಕ-ಗುಬ್ಬಕ್ಕನ ಕಥೆ:ನಿಮ್ಮ ಹಿಂದೆ ನಿಂತು ಆಟ ಆಡುತ್ತಿರುವ ಸೈದ್ಧಾಂತಿಕ ಗುರುಗಳಿಗೆ ಕರ್ನಾಟಕದ ಜನರ ಮನಸ್ಥಿತಿ ಅರ್ಥವಾಗುತ್ತಿದೆ ಎಂದು ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಜನ ನಮ್ಮಿಂದ ದೂರ ಸರಿಯುತ್ತಿದ್ದಾರೆ ಎಂದು ಕಾಗಕ್ಕ-ಗುಬ್ಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ. ಬಿಜೆಪಿ- ಜೆಡಿಎಸ್​ನವರ ಮಿದುಳು ಖಾಲಿಯಾಗಿದೆ. ಹಾಲಿನ ರೇಟು ಹೆಚ್ಚು ಮಾಡಲಿಲ್ಲ ಎಂದು ತಿಳಿಸಿ ಹೇಳಿದರೂ ಹಾಲಿನ ರೇಟು ಹೆಚ್ಚು ಮಾಡಿದರು ಎಂದು ಪ್ರಚಾರ ಮಾಡಿದರು ಎಂದರು.
ತಪ್ಪೆಂದು ಯಾವ ಕಾನೂನು ಹೇಳಿದೆ?:ನಿಮ್ಮ ಪತ್ನಿ ಅವರ ಅಣ್ಣ ನೀಡಿದ ದಾನವನ್ನು ತಿರಸ್ಕರಿಸಬೇಕಿತ್ತು. ಅಕ್ಸೆಪ್ಟ್ ಮಾಡಬಾರದಿತ್ತು ಎಂಬುದು ಕೆಲವರ ವಾದ. ನಾವೆಷ್ಟೇ ಪ್ರಗತಿಪರವಾಗಿ ಯೋಚಿಸಿದರೂ, ಊಟ, ಬಟ್ಟೆಗೆ ಯಾವ ಸಮಸ್ಯೆ ಇಲ್ಲದಿದ್ದರೂ ತವರುಮನೆ ಎನ್ನುವುದು ಎಂದೂ ತೀರದ ಮೋಹವಾಗಿರುತ್ತದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಪ್ರತಿ ವರ್ಷ ತವರು ಮನೆಯವರು ಕೊಡುವ ಅರಿಶಿಣ-ಕುಂಕುಮವೇ ಹೆಣ್ಣುಮಕ್ಕಳಿಗೆ ಅತಿ ದೊಡ್ಡ ಭಾವನಾತ್ಮಕ ಸಂಗತಿಯಾಗಿರುತ್ತದೆ. ಹಾಗಾಗಿ ತವರು ಮನೆಯವರು ಕೊಟ್ಟ ಉಡುಗೊರೆ ತಿರಸ್ಕರಿಸು ಎಂದು ಜಬರ್ದಸ್ತು ಮಾಡಿ ಹೇಳುವಷ್ಟು ಅಸೂಕ್ಷ್ಮತೆ ನನಗೆ ಇರಲಿಲ್ಲ ಎಂದಿದ್ದಾರೆ. ಅಣ್ಣ-ತಮ್ಮಂದಿರು, ತಂದೆ-ತಾಯಂದಿರು ಹೆಣ್ಣು ಮಕ್ಕಳಿಗೆ ದಾನಪತ್ರದ ಮೂಲಕ ಆಸ್ತಿ ಕೊಡುವುದು ತಪ್ಪು ಎಂದು ದೇಶದ ಯಾವ ಕಾನೂನು ಹೇಳಿದೆ? ಕರ್ನಾಟಕದ ಸಂಸ್ಕೃತಿಯಾದರೂ ತಪ್ಪು ಎಂದು ಭಾವಿಸಿದೆಯೇ? ತಪ್ಪು ಎಂದು ನಾಡಿನ ಹೆಣ್ಣು ಮಕ್ಕಳು, ಜನ ಹೇಳಿದರೆ ಒಪ್ಪುತ್ತೇನೆ. ಸಂಸ್ಕೃತಿಯ ಬಗ್ಗೆ ಬಹಳ ಮಾತನಾಡುವ ಬಿಜೆಪಿಯವರು ಮಾತ್ರ ಇದನ್ನು ತಪ್ಪು ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಮೋದಿಯವರಂತಲ್ಲ:ನನ್ನ ಪತ್ನಿಗೆ ದಾನ ಬಂದಾದ ಮೇಲೆ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದೇನೆ. 2013ರ ಚುನಾವಣೆಯ ಅಫಿಡವಿಟ್​ಗಳಲ್ಲಿ ನಮೂದಿಸಿಲ್ಲ ಎಂದು ಕೇಳುತ್ತಾರೆ. ಕಣ್ತಪ್ಪಿನಿಂದ ನಮೂದಿಸಿಲ್ಲ. ಆದರೆ ಆ ನಂತರದ ಎಲ್ಲ ಚುನಾವಣೆಗಳಲ್ಲೂ ನಮೂದಿಸಿದ್ದೇನೆ. ನಾನು ಮೋದಿಯವರಂತಲ್ಲ. ಹೆಂಡತಿಯ ಬಗೆಗಿನ ಮಾಹಿತಿಯನ್ನೇ ಅಫಿಡವಿಟ್​ಗಳಲ್ಲಿ ಗೊತ್ತಿಲ್ಲ ಎಂದು ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಕ್ಕರಾಯನ ಕೆರೆ ಭಾಷಣ:ಸದನದಲ್ಲಿ ಗಲಾಟೆ ಮಾಡಿದ್ದು, ಅಸಂಸದೀಯವಾಗಿ ನಡೆದುಕೊಂಡಿದ್ದು, ಸಾರ್ವಜನಿಕರ ಹಣ ಪೋಲು ಮಾಡಿದ್ದು ಬಿಟ್ಟರೆ ಒಂದೇ ಒಂದು ದಾಖಲೆ ನೀಡಲಿಲ್ಲ. ದಾಖಲೆಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡದೆ ಬರೀ ಜಕ್ಕರಾಯನಕೆರೆ ಭಾಷಣ ಮಾಡುವುದು, ಅದನ್ನು ಮಾಧ್ಯಮಗಳು ವರದಿ ಮಾಡುವುದನ್ನು ಬಿಟ್ಟರೆ ಬೇರೆ ಏನಾದರೂ ನಡೆಯಿತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾನೂ ವಿರೋಧ ಪಕ್ಷದ ನಾಯಕನಾಗಿ ಸುದೀರ್ಘ ಅವಧಿ ಕೆಲಸ ಮಾಡಿದ್ದೇನೆ. ದಾಖಲೆಗಳಿಲ್ಲದೆ ಒಂದೇ ಒಂದು ಮಾತನ್ನೂ ಆಡಿಲ್ಲ. ಆದರೆ ಇವರು ದಾಖಲೆಗಳಿಲ್ಲದೆ ಎರಡು ವಾರ ಸದನವನ್ನು ದಿಕ್ಕುತಪ್ಪಿಸಿದರು, ಪಾವಿತ್ರ್ಯತೆ ಹಾಳು ಮಾಡಿದರು. ಸಂಸದೀಯ ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗ ಬಾರದೋ ಅದಕ್ಕೆ ಮಾದರಿಯಾದರು. ಇಂಥ ಬೇಜವಾಬ್ದಾರಿ ಮತ್ತು ಬಾಲಿಶ ವರ್ತನೆಯ ವಿರೋಧ ಪಕ್ಷವನ್ನು ನಾನು ನೋಡಿಯೇ ಇಲ್ಲ ಎಂದು ತಿವಿದರು.
ಜನ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮನುವಾದವನ್ನು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ. ಇದು ನಿಮಗೂ ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಇವರ ಮತಗಳಿಕೆ ಕಡಿಮೆಯಾಗುತ್ತಿದೆ. ಹಾಗಾಗಿಯೇ ಮುಖ್ಯಮಂತ್ರಿ ಅವರನ್ನು ಕೇಂದ್ರವಾಗಿಟ್ಟುಕೊಂಡು ವೈಯಕ್ತಿಕ ದಾಳಿ ಪ್ರಾರಂಭಿಸಿದ್ದಾರೆ. ಒಳ್ಳೆಯದು ಯಾವುದೂ ಗಾಯದ ರೂಪದಲ್ಲೇ ಉಳಿಯಬಾರದು. ಗಾಯದ ಒಳಗಿರುವ ಕೆಟ್ಟ ರಕ್ತ ಒಡೆದು ಹೊರ ಬರಬೇಕು. ಆಗಲೇ ಮನುಷ್ಯ ಆರೋಗ್ಯವಂತನಾಗುವುದು. ಹಾಗೆಯೆ ಬಿಜೆಪಿ-ಜೆಡಿಎಸ್​ನವರ ಕೋಮುವಾದಿ-ಫ್ಯೂಡಲ್ ತಲೆಯೊಳಗೂ ದ್ವೇಷ, ಅಸಹನೆ ಎಂಬ ಕೀವು-ಕೆಟ್ಟ ರಕ್ತ ತುಂಬಿದೆ. ಅದು ಒಡೆದು ಹೊರ ಬರಬೇಕು ಎಂದಿದ್ದಾರೆ.
ಈಗಾಗಲೇ ಸರ್ಕಾರವು 2024ರ ಜುಲೈ 14ರಂದು ನಿವೃತ್ತ ನ್ಯಾಯಾಧೀಶ ಪಿ.ಬಿ ದೇಸಾಯಿಯವರ ವಿಚಾರಣಾ ಆಯೋಗ ರಚಿಸಲಾಗಿದೆ. ಆಯೋಗವು ಕೆಲಸ ಪ್ರಾರಂಭಿಸಿದೆ ಎಂದು ವಿವರಿಸಿದ್ದಾರೆ.
ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ದಾರೆ ಎಂದು ಬಿಜೆಪಿಯವರು ಸದನದಲ್ಲಿ ಕೂಗುತ್ತಿದ್ದರು. ನನ್ನ ಇಡೀ ಜೀವಿತಾವಧಿಪೂರ್ತಿ ದಲಿತ- ದಮನಿತ, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ನೊಂದವರ ಪರವಾಗಿ ಬದುಕಿದ್ದೇನೆ, ಮುಂದೆಯೂ ಬದುಕುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ನಮ್ಮ ಕುಟುಂಬಕ್ಕೆ ಈ ಜಮೀನುಗಳು 2010ರಿಂದ ಈಚೆಗೆ ಬಂದಿವೆ. ಅದಕ್ಕೂ ಮೊದಲು ನಮಗೆ ಸಂಬಂಧ ಪಟ್ಟಿಲ್ಲ. ಆದರೂ ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ದಾರೆ ಎಂದಿದ್ದರಿಂದಾಗಿ ಕೆಲವು ಮಾಹಿತಿಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿರುವೆ ಎಂದರು.

ಕೆಸರೆ ಗ್ರಾಮದ ಸರ್ವೆ ನಂ.464ರ ಜಮೀನು ನಿಂಗ ಬಿನ್ ಜವರ ಎನ್ನುವವರಿಗೆ ಹರಾಜಿನ ಮೂಲಕ ಬಂದಿದೆ. 1935ರ ಆಗಸ್ಟ್ 2ರಲ್ಲಿ ಜವರನ ಮಗ ನಿಂಗ ಎನ್ನುವವರು ಜಮೀನಿಗಾಗಿ ಅರ್ಜಿ ಕೊಟ್ಟಿದ್ದಾರೆ. ಅವರ ಅರ್ಜಿಯನ್ನು ಪರಿಗಣಿಸಿ ಆಗಿನ ಜಿಲ್ಲಾಡಳಿತ ಹರಾಜಿನ ಮೂಲಕ ಜಮೀನು ನೀಡಲು ತೀರ್ವನಿಸಿ 1935ರ ಸೆ.26ರಲ್ಲಿ ಹರಾಜು ನೋಟಿಸು ಹೊರಡಿಸಿ 1935 ಅಕ್ಟೋಬರ್ 13ರಂದು ಹರಾಜು ಮಾಡಲು ತೀರ್ವನಿಸಿದ್ದಾರೆ. ಅದರಂತೆ ಹರಾಜು ನಡೆದಿದೆ. ಅದೇ ವರ್ಷ ಅ.31ರಂದು ಹಣ ಕಟ್ಟಿಸಿಕೊಂಡು ಹಕ್ಕುಪತ್ರ ಕೊಟ್ಟಿದ್ದಾರೆ.
1 ರೂಪಾಯಿಗೆ 3.16 ಎಕರೆ ಜಮೀನು ಹರಾಜಾಗಿದೆ. ಈ ಅಂಶ ಕಡತದಲ್ಲಿ ದಾಖಲಿಸಿದ್ದಾರೆ. ಹೀಗಾಗಿ ನಿಂಗನಿಗೆ ಜಮೀನು ಹರಾಜಿನ ಮೂಲಕ ಬಂದ ಕಾರಣ ಈ ಪ್ರಕರಣ ಪಿಟಿಸಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಸ್ವಯಾರ್ಜಿತ ಜಮೀನುಗಳಾಗುತ್ತವೆ ಎಂಬುದು ಈ ರಾಜ್ಯದ ಪ್ರತಿ ರೈತನಿಗೂ ಗೊತ್ತಿದೆ. ಭೂಮಿ ನುಂಗುವುದರಲ್ಲಿ ಪರಿಣತರಾಗಿರುವ ಬಿಜೆಪಿ-ಜೆಡಿಎಸ್​ನವರು ಎಲ್ಲಾ ಗೊತ್ತಿದ್ದು ಪಿಟಿಸಿಎಲ್ ವ್ಯಾಪ್ತಿಗೆ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಗೊತ್ತಿದ್ದೂ ಸುಳ್ಳು ಹೇಳುವುದು ಕ್ರಿಮಿನಲ್ ಅಪರಾಧವಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲಿಂದಾಚೆಗೆ ನಿಂಗ ಬಿನ್ ಜವರ ಎಂಬುವವರ ಕುಟುಂಬದಲ್ಲಿಯೇ ಜಮೀನು ಇರುತ್ತವೆ. ಐಎಲ್-ಆರ್​ಆರ್ ಸೇರಿ ಎಲ್ಲ ದಾಖಲಾತಿಗಳು ಅವರ ಹೆಸರಿನಲ್ಲಿಯೇ ಇರುವುದು ಕಂಡು ಬರುತ್ತದೆ. ಈ ಜಮೀನಿನ ಮೇಲೆ ಭೋಗ್ಯ, ಆಧಾರ ಇತ್ಯಾದಿಗಳಾಗಿ ಅವುಗಳು ಖುಲಾಸೆಯಾಗಿರುವುದೂ ದಾಖಲೆಗಳ ಮೂಲಕ ಕಂಡು ಬರುತ್ತವೆ.1993 ಜೂನ್ 20ರಂದು ದೇವರಾಜು ಎನ್ನುವವರ ಹೆಸರಿಗೆ ಖಾತೆ ಮ್ಯುಟೇಶನ್ ಮಾಡಿದ್ದಾರೆ. ಲೇಟ್ ನಿಂಗ ಬಿನ್ ಜವರ ಅವರಿಗೆ ಮೂರು ಗಂಡು ಮಕ್ಕಳಿದ್ದು ಮೂರನೇ ಮಗನಾದ ಜೆ.ದೇವರಾಜು ಅವರ ಹೆಸರಿಗೆ ಖಾತೆ ಮಾಡಬಹುದಾಗಿ ಮೊದಲನೇ ಅಣ್ಣ ಮಲ್ಲಯ್ಯ ಮತ್ತು ಎರಡನೇ ಅಣ್ಣ ಮೈಲಾರಯ್ಯ ಇವರ ಪತ್ನಿ ಪುಟ್ಟಗೌರಮ್ಮ, ಇವರ ಮಗ ಎಂ.ಮಂಜುನಾಥಸ್ವಾಮಿ ಒಪ್ಪಿ ಹೇಳಿಕೆ ನೀಡಿದ್ದಾರೆ. ಅದರ ಆಧಾರದ ಮೇಲೆ ರಾಜಸ್ವ ನಿರೀಕ್ಷಕರು ಮೈಸೂರು ನಗರ ನಿವಾಸಿಯಾದ ಲೇಟ್ ನಿಂಗ ಬಿನ್ ಜವರನವರ ಮೂರನೇ ಮಗ ದೇವರಾಜು ಹೆಸರಿಗೆ ಪೌತಿ ಬದಲಾವಣೆ ಮೇಲೆ ಖಾತೆ ದಾಖಲು ಮಾಡಿದೆ ಎಂದು ದಾಖಲಿಸಿದ್ದಾರೆ.
ಬಿ.ಎಂ ಮಲ್ಲಿಕಾರ್ಜುನಸ್ವಾಮಿ ನನ್ನ ಭಾಮೈದುನ. ದೇವರಾಜುರಿಂದ 2004ರ ಆಗಸ್ಟ್ 25ರಂದು ಕ್ರಯಕ್ಕೆ ಪಡೆದಿದ್ದಾರೆ. ಅವರು ಕ್ರಯಕ್ಕೆ ಪಡೆದ ನಂತರವೇ ನನ್ನ ಪತ್ನಿಗೆ ದಾನ ಪತ್ರ ನೀಡಿರುತ್ತಾರೆ. 2010ರ ಅಕ್ಟೋಬರ್ 20ರಲ್ಲಿ ಕೆಸರೆ ಗ್ರಾಮದ ಸರ್ವೆ ನಂಬರ್ 464 ರಲ್ಲಿ 3.16 ಎಕರೆ ಜಮೀನನ್ನು ಬಿ.ಎಂ ಮಲ್ಲಿಕಾರ್ಜುನಸ್ವಾಮಿ ಅವರು ನನ್ನ ಪತ್ನಿಯಾದ ಬಿ.ಎಂ. ಪಾರ್ವತಿಯವರಿಗೆ ದಾನಪತ್ರ ನೀಡಿರುವುದು ಮೈಸೂರು ಉತ್ತರ ಸಬ್ ರಿಜಿಸ್ಟಾರ್ ಕಚೆೇರಿಯಲ್ಲಿ ನೋಂದಣಿಯಾಗಿರುತ್ತದೆ. ಇಲ್ಲಿಂದ ಆಚೆಗೆ ಈ 3.16 ಎಕರೆ ಭೂಮಿಯ ಮೇಲೆ ನನ್ನ ಪತ್ನಿಗೆ ಅಧಿಕಾರ ಬಂದಿದೆ ಎಂದು ಸಿಎಂ ವಿವರಿಸಿದ್ದಾರೆ.
ಈ ಜಮೀನನ್ನು ಕೆಸರೆ-ದೇವನೂರು ಬಡಾವಣೆ ನಿರ್ವಿುಸಲು ಭೂ ಸ್ವಾಧೀನ ಮಾಡಲು 1992ರ ಸೆ.18ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಮತ್ತು 1997ರ ಸೆ.20ರಂದು ಅಂತಿಮ ಅಧಿಸೂಚನೆ ಹೊರಬಿದ್ದಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಜವರನ ಮಗ ಜಿ.ದೇವರಾಜು 1996ರ ಆ.13ರಂದು ಭೂಮಿಗಳನ್ನು ಭೂ ಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ. ಅಂದರೆ ಅಂತಿಮ ಅಧಿಸೂಚನೆ ಆಗುವುದಕ್ಕೆ ಮೊದಲೇ ಅರ್ಜಿ ಕೊಟ್ಟಿದ್ದಾರೆ.

ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ.462ರಲ್ಲಿ 0.37 ಎಕರೆ ಮತ್ತು ಸ.ನಂ 464ರಲ್ಲಿ 3.16 ಎಕರೆ ಖುಷ್ಕಿ 4.13 ಎಕರೆ ಜಮೀನು ನನ್ನ ತಂದೆಯವರಿಂದ ಪಿತ್ರಾರ್ಜಿತವಾಗಿ ಬಂದಿದ್ದು ನನ್ನ ಸ್ವಾಧೀನಾನುಭವದಲ್ಲಿದೆ. ನಾನು ಈ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇನೆ. ಈ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಟ್ಟು ನಾವುಗಳು ಕೃಷಿ ಜೀವನ ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಬರೆದಿದ್ದಾರೆ.
ಆ ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ ಅವರು 1996 ಆ.14ರಂದು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸುವುದು ಎಂದು ಕಾರ್ಯದರ್ಶಿ-2 ಅವರಿಗೆ ಬರೆದಿದ್ದಾರೆ. 1997ರ ಆ.30ರಂದು ಮುಡಾ ಆಯುಕ್ತರು ಭೂ ಸ್ವಾಧೀನದಿಂದ ಕೈ ಬಿಡುವ ಕುರಿತು ಪಾಸಿಟಿವ್ ಮಾಹಿತಿಯೊಂದಿಗೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ. ಸರ್ಕಾರದಿಂದ ಪತ್ರ ಬರೆದು ಸುಮಾರು ಒಂದು ವರ್ಷದ ನಂತರ ಮುಡಾ ಆಯುಕ್ತರು ಮಾರುತ್ತರ ಪತ್ರ ಕಳಿಸಿದ್ದಾರೆ.
ವಿರೋಧ ಪಕ್ಷದವರು ಮಾತೆತ್ತಿದರೆ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿಗಳಿದ್ದರು, ಅವರೇ ಪ್ರಭಾವ ಬೀರಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನಾನು ಉಪಮುಖ್ಯಮಂತ್ರಿಯಾಗಿ ಪ್ರಭಾವ ಬೀರಿದ್ದರೆ ಮುಡಾದಿಂದ ಒಂದು ವರದಿಯನ್ನು ಸರ್ಕಾರಕ್ಕೆ ಕಳುಹಿಸಲು 1 ವರ್ಷ ಬೇಕಾಗುತ್ತಿತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭೂ ಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಬಾಲಸುಬ್ರಹ್ಮಣ್ಯನ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇತ್ತು. ಈ ಸಮಿತಿ ಪರಿಶೀಲಿಸಿ ಡಿ ನೋಟಿಫೈ ಮಾಡಿದೆ. ಈ ಜಮೀನನಲ್ಲಿ ಯಾವುದೇ ಪ್ಲಾನ್ ಸಿದ್ಧಪಡಿಸಿಲ್ಲ. ಡಿ-ನೋಟಿಫೈ ಮಾಡುವುದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಈ ಕುರಿತು ಮುಡಾದಲ್ಲೂ ನಿರ್ಣಯವಾಗಿದೆ ಎಂದು ಹೇಳಿ ಡಿನೋಟಿಫೈ ಮಾಡಲು ತೀರ್ವನಿಸಿದ್ದಾರೆ. ಇದರ ಅಧಾರದ ಮೇಲೆ ಈ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಕಂಡುಬರುತ್ತದೆ.
ನನ್ನ ಪತ್ನಿಗೆ ಪರ್ಯಾಯ ನಿವೇಶನ ಹೇಗೆ ಕೊಟ್ಟರು ಎಂಬುದಕ್ಕೂ ಸಿದ್ದರಾಮಯ್ಯ, ಸ್ಪಷ್ಟನೆ ನೀಡಿ ವಿವರಿಸಿದ್ದಾರೆ.  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984 ರಿಂದ ಒಟ್ಟು 13 ಬಡಾವಣೆಗಳಲ್ಲಿ 235.30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ. 2014ರ ಜೂ.23ರಲ್ಲಿ ಮತ್ತು 2021ರ ಅ.25ರಲ್ಲಿ ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗ ಕೊಡಬೇಕೆಂದು ಅರ್ಜಿ ಹಾಕಲಾಗಿದೆ. ನನ್ನ ಪತ್ನಿ ನನ್ನ ಜಾಗವನ್ನು ಮುಡಾ ಬಳಸಿಕೊಂಡಿದೆ. ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ. ಮುಡಾದವರು ಕೊಟ್ಟಿದ್ದಾರೆ.
ಭೂ ಸ್ವಾಧೀನಪಡಿಸದೆ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಹಾಗೆ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ.50:50ರ ಅನುಪಾತದಲ್ಲಿ ಜಾಗ ಕೊಡಬೇಕೆಂದು ಮುಡಾ ಸೆ.14, 2020ರಲ್ಲಿ ನಿರ್ಣಯ ಮಾಡಿದೆ. ಈ ನಿರ್ಣಯವನ್ನು ಸರ್ಕಾರ ರದ್ದು ಮಾಡಿದೆ. ಅಷ್ಟಕ್ಕೆ ಸುಮ್ಮನಿರದೆ 2020ರ ಡಿ.7ರಂದು ಮತ್ತೆ ಚರ್ಚೆ ಮಾಡಿ ಇನ್ನೊಂದು ನಿರ್ಣಯ ಮಾಡಿದೆ. ಆ ಸಭೆಯಲ್ಲಿ ಜಿ.ಟಿ.ದೇವೇಗೌಡ ಅವರು ಶೇ.50:50ರ ಅನುಪಾತದಲ್ಲಿ ಒಪ್ಪಿಕೊಳ್ಳುವ ರೈತರಿಗೆ ಅದೇ ರೀತಿ ಸೂಕ್ತ ನಿರ್ಣಯ ಕೈಗೊಳ್ಳಲು ಶೇ.50;50ರ ಅನುಪಾತಕ್ಕೆ ಒಪ್ಪಿಕೊಳ್ಳದ ಹಾಗೂ ಸಹಮತಿ ಸೂಚಿಸದ ಪ್ರಕರಣಗಳಲ್ಲಿ ಪ್ರತ್ಯೇಕ ಸಭೆ ಕರೆಯಲು ಸೂಚಿಸಿದರು ಎಂದು ದಾಖಲಾಗಿದೆ.

ಮರಿತಿಬ್ಬೇಗೌಡ ಅವರು, ಶೇ.50:50 ಅನುಪಾತದಲ್ಲಿ ರೈತರನ್ನು ಬಲವಂತಪಡಿಸಲು ಬರುವುದಿಲ್ಲವೆಂದು, ಈ ಕಾರಣ ರೈತರ ಕೋರಿಕೆ ಪರಿಗಣಿಸಬೇಕು, ಭೂ ಸ್ವಾಧೀನಪಡಿಸದೆ ಉಪಯೋಗಿಸಿಕೊಂಡಿರುವ ಸ್ವತ್ತುಗಳಿಗೆ ಅಷ್ಟೇ ವಿಸ್ತೀರ್ಣದ ಸ್ವತ್ತುಗಳನ್ನು ನೀಡುವುದು ಸೂಕ್ತವೆಂದು ಹೇಳಿದ್ದಾರೆ. ಸಭೆಯಲ್ಲಿ ಅಂದಿನ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್ ಮುಂತಾದವರು ಮಾತನಾಡಿದ್ದಾರೆ. ಅಂತಿಮವಾಗಿ ಈ ರೀತಿ ನಿರ್ಣಯಿಸಿದ್ದಾರೆ, ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಾಧೀನಪಡಿಸದೆ ಉಪಯೋಗಿಸಿಕೊಂಡಿರುವಂತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು ನಿರ್ಣಯಿಸಲಾಗಿದೆ. ಇದೆಲ್ಲ ಆದ ಮೇಲೆ ನನ್ನ ಪತ್ನಿ 2021ರ ಅ.23ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರ ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ.50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3.16 ಎಕರೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ.
ಜನರ ಹಿತಾಸಕ್ತಿಗೆ ವಿರುದ್ಧ:ಪಿಟಿಸಿಎಲ್ ಪ್ರಕರಣವೊಂದನ್ನು ಆಧರಿಸಿ ನ್ಯಾಯಾಲಯದಲ್ಲಿ ಒಂದು ತೀರ್ಪು ಬಂತು. ಅದನ್ನು ಆಧರಿಸಿ ಎಸಿ, ಡಿಸಿ ಕೋರ್ಟುಗಳು, ನ್ಯಾಯಾಲಯಗಳು ಪರಿಶಿಷ್ಟ ಜಾತಿ/ ಪಂಗಡಗಳ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಆದೇಶಗಳು ಬಂದರೂ ಅದರ ಕುರಿತು ಬಿಜೆಪಿಯವರಾಗಲಿ, ಜೆಡಿಎಸ್​ನವರಾಗಲಿ ತುಟಿ ಪಿಟಿಕ್ಕೆನ್ನದೆ ಕೂತಿದ್ದರು. ಈಗ ಈ ಸಮುದಾಯಗಳ ಬಗ್ಗೆ ಬಹಳ ದೊಡ್ಡ ಭಾಷಣ ಮಾಡುತ್ತಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಪ.ಜಾತಿ/ಪ.ಪಂಗಡಗಳ ಕಾಳಜಿ ಇದ್ದರೆ ಪಿಟಿಸಿಎಲ್ ಕಾಯ್ದೆಯನ್ನು ಏಕೆ ತಿದ್ದುಪಡಿ ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು ತಿದ್ದುಪಡಿ ಮಾಡಿದೆವು. ಪಿಟಿಸಿಎಲ್ ಜಮೀನುಗಳಿಗೂ ಲಿಮಿಟೇಶನ್ ಕಾಯ್ದೆ ಅನ್ವಯವಾಗುತ್ತದೆ ಎಂಬ ಸುಪ್ರೀಂಕೋರ್ಟಿನ ಆದೇಶಕ್ಕೆ ಪರ್ಯಾಯವಾಗಿ ಕಾಯ್ದೆಯಲ್ಲಿದ್ದ ಸಣ್ಣ ಲೋಪವನ್ನು ತಿದ್ದುಪಡಿ ಮಾಡಿದೆವು ಎಂದಿದ್ದಾರೆ.
1300ಕ್ಕೂ ಹೆಚ್ಚು ನಿವೇಶನ ಹಂಚಿಕೆ:ವಿರೋಧ ಪಕ್ಷದವರು ಪಾರ್ವತಿಯವರಿಗೆ ಮಾತ್ರ ಈ ರೀತಿ ಶೇ.50:50 ಅನುಪಾತದಲ್ಲಿ ನಿವೇಶನಗಳನ್ನು ನೀಡಿದ್ದಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಇದುವರೆಗಿನ ಲೆಕ್ಕದ ಪ್ರಕಾರ ಅಂದಾಜು 1300ಕ್ಕೂ ಹೆಚ್ಚು ನಿವೇಶನಗಳವರೆಗೆ ಹಂಚಿಕೆ ಮಾಡಿದ್ದಾರೆ. ಏಕೆಂದರೆ ಮುಡಾದಲ್ಲಿ ದಾಖಲೆಗಳನ್ನೇ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಕೇಳಿದ್ದೇನೆ ಎಂದು ಸಿಎಂ ಹೇಳಿದ್ದಾರೆ. 2020ರ ಮೇ 3ರಿಂದ ಈಚೆಗೆ ಸುಮಾರು 909 ನಿವೇಶನಗಳನ್ನು 50:50 ಆಧಾರದಲ್ಲಿ ಕೊಟ್ಟಿದ್ದಾರೆ. ಸುಮಾರು 310 ನಿವೇಶನಗಳನ್ನು ಇನ್ಸೆಂಟೀವ್ ರೂಪದಲ್ಲಿ ಕೊಟ್ಟಿದ್ದಾರೆ. 109 ನಿವೇಶನಗಳನ್ನು ಬದಲಿ ನಿವೇಶನ/ ಜಾಗದ ರೂಪದಲ್ಲಿ ಕೊಟ್ಟಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಬದಲಿ ನಿವೇಶನ ಮಂಜೂರಾಗಿರುವ ಕುರಿತಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ದಾಖಲೆ ಬಿಡುಗಡೆ ಮಾಡಿದರು. ಕುಮಾರಸ್ವಾಮಿಯವರು ಮೈಸೂರಿನ ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತದಲ್ಲಿ ತಮಗೆ ಮಂಜೂರಾದ 21 ಸಾವಿರ ಚದರ ಅಡಿ ಜಾಗವು ಪೂರ್ಣ ವಿಸ್ತೀರ್ಣ ಲಭ್ಯವಿಲ್ಲ, ಒತ್ತುವರಿಯಾಗಿದೆ. ಕೈಗಾರಿಕೆ ಪ್ರಾರಂಭಿಸಲು ಅನುಕೂಲವಾಗುವಂತೆ ಬದಲಿ ನಿವೇಶನ ನೀಡುವಂತೆ, 2017, 2019 ಹಾಗೂ 2020ರ ನವೆಂಬರ್ 15ರಂದು ಮನವಿ ಸಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಕುಮಾರಸ್ವಾಮಿ ಅವರಿಗೆ 1984ರಲ್ಲಿ ನಿವೇಶನ ಮಂಜೂರಾಗಿತ್ತು. ಅದು ಒತ್ತುವರಿಯಾಗಿದೆ ಕೈಗಾರಿಕೆ ಸ್ಥಾಪಿಸಬೇಕೆಂದು ಕೋರಿದ್ದರು. ಮೂಲ ಅಳತೆಯ ವಿಸ್ತೀರ್ಣಕ್ಕಿಂತ 7936 ಚದರ ಅಡಿ ಕಡಿಮೆ ಇರುವುದರಿಂದ ಬದಲಿ ನಿವೇಶನ ನೀಡುವ ಪ್ರಸ್ತಾವನೆಯೂ ಸಲ್ಲಿಕೆಯಾಗಿತ್ತು. ಪ್ರಾಧಿಕಾರದ ಸಭೆಯೂ ಈ ಪ್ರಸ್ತಾವನೆ ಒಪ್ಪಿ ಬದಲಿ ನಿವೇಶನ ನೀಡಲು ನಿರ್ಣಯ ಕೈಗೊಂಡಿತು ಎಂಬ ಅಂಶ ಸರ್ಕಾರ ಬಿಡುಗಡೆ ಮಾಡಿದ ದಾಖಲೆಯಲ್ಲಿದೆ.

ಎಚ್.ಡಿ. ಕುಮಾರಸ್ವಾಮಿಯವರಿಗೆ 75-280 ಅಡಿ ಅಂದರೆ 21,000 ಚದರ ಅಡಿಗಳ ನಿವೇಶನವು 1984ರ ನವೆಂಬರ್ 7ರಂದು ಮಂಜೂರಾಗಿದ್ದು, 1985ರ ಜನವರಿ 16ರಂದು ಸ್ವಾಧೀನ ಪತ್ರ ನೀಡಲಾಗಿದೆ. ನಂತರದಲ್ಲಿ ನಿವೇಶನದ ಸ್ವಾಧೀನ ಪತ್ರದಲ್ಲಿನ ಚೌತರ್ಪಿನಂತೆ 21 ಸಾವಿರ ಚದರ ಅಡಿ ಬದಲು ಭೌತಿಕವಾಗಿ 13,064 ಚದರ ಅಡಿ ಮಾತ್ರ ಲಭ್ಯವಿರುವುದಾಗಿ ತಾಂತ್ರಿಕ ಶಾಖೆ ವರದಿ ಮಾಡಿತ್ತು. ಮೂಲ ಅಳತೆಯ ವಿಸ್ತೀರ್ಣಕ್ಕಿಂತ 7936 ಚದರ ಅಡಿಗಳಷ್ಟು ಕಡಿಮೆ ಇರುವುದರಿಂದ ಬದಲಿ ನಿವೇಶನ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆದು, ಅರ್ಜಿದಾರರಿಗೆ ಮಂಜೂರು ಮಾಡಿದ್ದ ನಿವೇಶನದ ಅಳತೆ ಕಡಿಮೆಯಾಗಿರುವುದರಿಂದ ಅರ್ಜಿದಾರರ ಕೋರಿಕೆ ಅನುಸಾರ ಬದಲಿ ನಿವೇಶನ ಮಂಜೂರು ಮಾಡಲು ಸಭೆ ತೀರ್ವನಿಸಿತು.
ಕೊನೆಗೆ 21 ಸಾವಿರ ಚದರ ಅಡಿಗಳಿಗೆ ತಾಳೆ ಹೊಂದುವ ಯಾವುದೇ ನಿವೇಶನಗಳು ಲಭ್ಯ ಇಲ್ಲ ಎಂದು ಹಾಗೂ ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತ ಬಡಾವಣೆ ನಿವೇಶನ ಸಂಖ್ಯೆ 23/ಇ ಭೌತಿಕವಾಗಿ ಖಾಲಿ ಇದ್ದು, ಇದರ ಅಳತೆ 32,800 ಚದರ ಅಡಿಗಳಾಗಿವೆ, ಅದು ಯಾರಿಗೂ ಹಂಚಿಕೆಯಾಗದಿರುವ ಬಗ್ಗೆ ಪರಿಶೀಲಿಸಿ ಬದಲಿ ನಿವೇಶನ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಮುಂದಿನ ಪ್ರಕ್ರಿಯೆಯಾಗಿ ಬದಲಿ ನಿವೇಶನ ನೀಡಲು ಆಯುಕ್ತರು ಆದೇಶ ನೀಡಿದ್ದಾರೆ.
ದಾರಿ ತಪ್ಪಿಸುವ ಪ್ರಯತ್ನ :ಕೆಲವು ನಾಯಕರು ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದರು, ಅವರೇ ಇದನ್ನೆಲ್ಲ ಮಾಡಿಸಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. 3,24,700 ರೂಪಾಯಿಗಳ ಮೌಲ್ಯದ 3.16 ಗುಂಟೆ ಜಮೀನಿಗೆ ಉಪಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಾಚಿಕೆ-ಸೂಕ್ಷ್ಮತೆ ಇರುವವರು ಯಾರೂ ಈ ರೀತಿ ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.
ಈಗ ಈ ಭೂಮಿಗಳಿಗೆ ಬೆಲೆ ಬಂದಿದೆ. ಹಿಂದೆ ಯಾವ ಬೆಲೆಯೂ ಇರಲಿಲ್ಲ. ನಾನು ಬಿಜೆಪಿಯವರು ಇದನ್ನೊಂದು ವಿವಾದ ಎಂದು ಮಾಡಿದ ಮೇಲೆ 25-8-2004 ರಲ್ಲಿ ದೇವರಾಜು ಎಂಬುವವರಿಂದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಕ್ರಯಪತ್ರವನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ 5,95,000 ರೂಪಾಯಿಗಳಿಗೆ ಕ್ರಯವಾಗಿದೆ. ಅದಕ್ಕೂ ಮೊದಲು 15-02-1999 ರಲ್ಲಿ ಮುಡಾದ ಭೂ ಸ್ವಾಧೀನಾಧಿಕಾರಿ 3,24,700 ರೂಪಾಯಿಗಳಿಗೆ ಅವಾರ್ಡ ಪಾಸು ಮಾಡಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ನನಗೆ ತಿಳಿದದ್ದಿಷ್ಟು. ಅವಾರ್ಡ ಪಾಸು ಮಾಡಿ ಕೋರ್ಟಿಗೆ ತುಂಬಲು ಹೋಗಿದ್ದಾರೆ. ಆದರೆ ಕೋರ್ಟಿನವರು ಈ ಅವಾರ್ಡ ಕ್ರಮಬದ್ಧವಾಗಿಲ್ಲವೆಂದು ವಾಪಸ್ ಮಾಡಿದ್ದಾರೆ. ಆದರೆ ಅದರ ನಂತರ ಮುಡಾ ದವರು ಯಾವ ಕ್ರಮವನ್ನೂ ವಹಿಸಲಿಲ್ಲ.
ಲಿಂಗ ಬಿನ್ ಜವರಗೆ ಮೂರು ಮಕ್ಕಳು. ಮಲ್ಲಯ್ಯ, ಮೈಲಾರಯ್ಯ, ದೇವರಾಜ್. ಮಲ್ಲಯ್ಯ ಪೌತಿ ಆಗಿದ್ದು ವಾರಸುದಾರರಿಲ್ಲ. ಮೈಲಾರಯ್ಯ ಪತ್ನಿ ಪುಟ್ಟಗೌರಮ್ಮ, ಪುತ್ರ ಎಂ.ಮಂಜುನಾಥಸ್ವಾಮಿ ಕೂಡ ವಂಶವೃಕ್ಷಕ್ಕೆ ಮೂರು ಜನಸಹಿ ಮಾಡಿದ್ದಾರೆ. ಅಂದರೆ ವಂಶವೃಕ್ಷ ಸರಿ ಇದೆ ಅಂತಾಯ್ತು. 1993ರ ಏಪ್ರಿಲ್ 10ರಲ್ಲಿ ದೇವರಾಜಗೆ ಖಾತೆ ಮಾಡಿಕೊಡಲು ವಿರೋಧ ಇಲ್ಲ ಎಂದು ಬರೆದು ಕೊಡುತ್ತಾರೆ. ಮಲ್ಲಯ್ಯ, ಪುಟ್ಟಗೌರಮ್ಮ, ಮಂಜುನಾಥಸ್ವಾಮಿ ಸಹಿ ಮಾಡಿದ್ದಾರೆ. ಇದನ್ನು ನಾವು ಮಾಡಿಸಿದ್ದಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಷ್ಟೆಲ್ಲಾ ದಾಖಲೆ ಇದ್ದರೂ ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದು ಸಾಬೀತಾಗಿದೆ. 20 ವರ್ಷದ ಹಿಂದೆ ಬರೆದುಕೊಟ್ಟ ದಾಖಲೆ ಇದ್ದರೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ಬಿಜೆಪಿ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ? ಮಾನ ಮರ್ಯಾದೆ ಇಲ್ಲವೇ? ಎಂದು ಪ್ರಶ್ನಿಸಿದರು. 24 ವರ್ಷದ ಮೇಲೆ ಸುಳ್ಳು ಹೇಳಲು ಚಿತಾವಣೆ ಮಾಡಿ ಹೇಳಿಕೆ ಕೊಡಿಸಿದ್ದಾರೆ. ಅವರು ಹತಾಶರಾಗಿ ರಾಜಕೀಯವಾಗಿ ನನಗೆ ಮಸಿ ಬಳಿಯುವ ಪ್ರಯತ್ನ. ಅಲ್ಲದೇ ಆ ಕುಟುಂಬದಲ್ಲಿ ಇಪ್ಪತ್ತು ವರ್ಷದ ಬಳಿಕ ಅನ್ಯೂನ್ಯವಾಗಿದ್ದವರನ್ನು ಎತ್ತಿಕಟ್ಟಿ ಡಿಸಿ ಬಳಿ ಹೇಳಿಕೆ ಕೊಡಿಸಿದವರನ್ನು ಏನೆಂದು ಕರೆಯಬೇಕು. ಬಿಜೆಪಿಯವರು ಮನೆ ಮುರುಕರು ಎಂದು ಕಟುವಾಗಿ ಟೀಕಿಸಿದರು.

ರಾಜಕಾರಣಕ್ಕೆ ಸಂಸತ್ತೂ ಬಳಕೆ:ನಿವೇಶನ ಹಂಚಿಕೆ ಸಂಬಂಧ ಬಿಜೆಪಿ, ಜೆಡಿಎಸ್​ನವರು ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಸಂಸತ್ತಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಸಂಸದರು ಬಜೆಟ್​ನಲ್ಲಿ ರಾಜ್ಯದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ನೆಪಕ್ಕೂ ಪ್ರಶ್ನೆ ಮಾಡಿಲ್ಲ ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇಲ್ಲಿ ವಿಧಾನಸಭೆಯನ್ನು ಅವರ ರಾಜಕಾರಣಕ್ಕೆ ಬಳಸಿಕೊಂಡರು, ಈಗ ಪಾರ್ಲಿಮೆಂಟನ್ನೂ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಿಜೆಪಿಯವರು ಕೇಂದ್ರದಿಂದ ಅನ್ಯಾಯವಾದಾಗ ದನಿ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಡಾದಿಂದ ವಿರೋಧ ಪಕ್ಷದ ನಾಯಕರಿಗೆ ನಿವೇಶನ ಹಂಚಿಕೆರುವ ವಿವರವನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಿಡುಗಡೆ ಮಾಡಿದರು.
.ಹಿನಕಲ್ 1 ಎಕರೆ- ಸಿ.ಎನ್.ಮಂಜೇಗೌಡ
.ಈರನಗೆರೆ 2.25 ಎಕರೆ- ಜಿ.ಟಿ.ದೇವೇಗೌಡ
.ಮಾದಗಳ್ಳಿ 1 ಎಕರೆ- ಜಿ.ಟಿ.ದೇವೇಗೌಡ
.ದೇವನೂರು 2.25 ಎಕರೆ- ಸಿ.ಎನ್.ಮಂಜೇಗೌಡ
.ನಾಚನಹಳ್ಳಿ 1.26 ಎಕರೆ- ಯು.ಎನ್.ಶೇಖರ್
.ಕೆಸರೆ 4.15 ಎಕರೆ- ಸಿ.ಎನ್.ಮಂಜೇಗೌಡ
.ಬೆಲವತ್ತ 0.05 ಎಕರೆ- ಎಚ್.ವಿಶ್ವನಾಥ್
.ಹೂಟಗಳ್ಳಿ 0.01 ಎಕರೆ- ಗಂಗರಾಜು
.ಕುಪ್ಪಲೂರು 0.16 ಎಕರೆ- ಗಂಗರಾಜು
.ಮೈಸೂರು 7.08 ಎಕರೆ- ಸಿ.ಎನ್.ಮಂಜೇಗೌಡ
.ಹಿನಕಲ್ 0.34 ಎಕರೆ- ಜೂ ಮಹದೇವಸ್ವಾಮಿ
.ಅಯ್ಯಜನಹುಂಡಿ 0.09 ಎಕರೆ- ಜೂ ಶಿವಕುಮಾರ್
.ದಟ್ಟಗಳ್ಳಿ 0.09 ಎಕರೆ- ಸಾ.ರಾ.ಮಹೇಶ್
.ಬೋಗಾದಿ 2.11 ಎಕರೆ- ಸಾ.ರಾ.ಮಹೇಶ್
ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
