|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ನ್ಯಾಯ ನೀಡುವ ನ್ಯಾಯಾಲಯಗಳಿಗೇ ಯಾಮಾರಿಸಿ ಕಾನೂನುಬದ್ಧವಾಗಿ ‘ಭೂಮಿ ಕಬ್ಜ’ ಮಾಡುವ ವಂಚಕ ಜಾಲವೊಂದು ಕರ್ನಾಟಕದಲ್ಲಿ ಸಕ್ರಿಯವಾಗಿದೆ. ಮೂಲ ಮಾಲೀಕರಿಗೇ ಗೊತ್ತಿಲ್ಲದಂತೆ ನಕಲಿ ದಾಖಲೆ ಸೃಷ್ಟಿಸಿ, ಸಂಬಂಧವಿಲ್ಲದ ಇಬ್ಬರು ಕೋರ್ಟ್​ನಲ್ಲಿ ಪರಸ್ಪರ ದಾವೆ ಹೂಡಿಕೊಂಡು ಕೊನೆಗೆ ಸಂಧಾನದ ನೆಪದಲ್ಲಿ ರಾಜೀ ಡಿಕ್ರಿಯ ತೀರ್ಪು ಪಡೆದು ಆಸ್ತಿಗಳನ್ನು ‘ಲೀಗಲ್’ ಆಗಿಯೇ ಕಬಳಿಸಿರುವ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಂಗಳೂರು ಸೇರಿ ಅನೇಕ ನಗರ, ಪಟ್ಟಣ ಪ್ರದೇಶಗಳಲ್ಲಿ ಬೆಲೆ ಬಾಳುವ ಸೈಟು, ಮನೆ, ಕಟ್ಟಡ, ಫ್ಲ್ಯಾಟ್​ಗಳನ್ನು ಕಾನೂನುಬದ್ಧವಾಗಿಯೇ ಕಬಳಿಸಲಾಗಿದೆ. ಹಲವು ವರ್ಷಗಳಿಂದ ಖಾಲಿ ಉಳಿದಿರುವ ಸೈಟ್​ಗಳು, ವಿದೇಶದಲ್ಲಿ ವಾಸವಾಗಿರುವವರು, ವಯಸ್ಸಾದವರ ಹೆಸರಿನಲ್ಲಿರುವ ಆಸ್ತಿಗಳನ್ನು ಗುರುತಿಸಿ ಗುಳುಂ ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳು ಹಾಗೂ ಸಿಐಡಿ ತನಿಖೆ ಮುಂದುವರಿದಿದೆ.
ಕಬಳಿಕೆ ಹೇಗೆ?:ಮೊದಲಿಗೆ ಆಸ್ತಿಗೆ ಸಂಬಂಧಿಸಿದ ನಕಲಿ ದಾಖಲೆ ಸೃಷ್ಟಿಸುತ್ತಾರೆ. ಮಾಲೀಕತ್ವ ವಿವಾದದ ರೂಪದಲ್ಲಿ ವಕೀಲರ ಮೂಲಕ ಸಂಬಂಧಪಟ್ಟ ಕೋರ್ಟ್​ನಲ್ಲಿ ದಾವೆ ಹೂಡುತ್ತಾರೆ. ಎರಡೂ ಕಡೆ ಕಕ್ಷಿದಾರರು ಎಂಬಂತೆ ಬಿಂಬಿಸಿಕೊಂಡು ಕೆಲ ತಿಂಗಳು ಕೋರ್ಟ್ ವಿಚಾರಣೆಗೆ ಹಾಜರಾಗುತ್ತಾರೆ. ಕೊನೆಗೆ ಇಬ್ಬರ ಪೈಕಿ ಒಬ್ಬಾತ ರಾಜೀ ಮಾಡಿಕೊಳ್ಳುವುದಾಗಿ ಅರ್ಜಿ ಸಲ್ಲಿಸಿ, ‘ಆಸ್ತಿ ಪ್ರತಿವಾದಿಗೇ ಸೇರಬೇಕು. ಆದರೆ, ಅದರ ಮೇಲೆ ನಾನು ಸ್ವಲ್ಪ ಹಣ ಹೂಡಿಕೆ ಮಾಡಿರುವ ಕಾರಣ ಆತನಿಂದ ಆ ಹಣ ಪಡೆದು ಸಂಪೂರ್ಣ ಸ್ಥಿರಾಸ್ತಿಯನ್ನು ಬಿಟ್ಟುಕೊಡಲು ಒಪ್ಪಿರುತ್ತೇನೆ’ ಎಂದು ಕೋರ್ಟ್​ಗೆ ಒಪ್ಪಿಗೆ ಪತ್ರ ಸಲ್ಲಿಸುತ್ತಾರೆ. ಕೋರ್ಟ್ ಅರ್ಜಿದಾರ (ವಾದಿ)- ಪ್ರತಿವಾದಿ ರಾಜೀ ಸಂಧಾನಕ್ಕೆ ಒಪ್ಪಿರುವುದನ್ನು ಸಮ್ಮತಿಸಿ ಅದರಂತೆ ರಾಜೀ ಡಿಕ್ರಿ ಮಾಡಿ ತೀರ್ಪು ನೀಡುತ್ತಿತ್ತು. ಜತೆಗೆ ಎಲ್ಲ ದಾಖಲೆಗಳನ್ನು ಸಂಬಂಧಪಟ್ಟ ವ್ಯಕ್ತಿಗೆ ವರ್ಗಾವಣೆ ಮಾಡಿಕೊಡುವಂತೆ ಮತ್ತು ಜಾಗವನ್ನು ಆತನ ಸ್ವಾಧೀನಕ್ಕೆ ಒಪ್ಪಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸುತ್ತಿತ್ತು. ಕೋರ್ಟ್ ಆದೇಶವನ್ನೇ ಬಂಡವಾಳ ಮಾಡಿಕೊಂಡು, ಸಂಬಂಧಪಟ್ಟ ಸ್ಥಿರಾಸ್ತಿ ಸ್ವಾಧೀನಕ್ಕೆ ಪಡೆಯುತ್ತಿದ್ದರು. ಕೋರ್ಟ್ ಆದೇಶ ತೋರಿಸಿ ತಮ್ಮ ಹೆಸರಿಗೆ ದಾಖಲೆ ಬದಲಾಯಿಸಿಕೊಂಡು ಕೆಲವೇ ತಿಂಗಳಲ್ಲಿ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದರು.
ಅಧಿಕಾರಿಗಳೂ ಶಾಮೀಲು?:ವಂಚನೆ ಜಾಲದಲ್ಲಿ ಸರ್ಕಾರಿ ಅಧಿಕಾರಿ ಗಳ ಕೈವಾಡದ ಬಗ್ಗೆಯೂ ಸಿಐಡಿ ತನಿಖೆಯಲ್ಲಿ ಅನುಮಾನ ಮೂಡಿದೆ. ಆಸ್ತಿ ಕಬಳಿಸುವ ಸಲುವಾಗಿ ಅಸಲಿ ಮಾಲೀಕನಿಗೆ ತಿಳಿಯದೆ ಭೂಗಳ್ಳರು ಜಿಪಿಎ ಸೃಷ್ಟಿಸುತ್ತಾರೆ. ಒಬ್ಬಾತ ಮಾಲೀಕತ್ವ ಮತ್ತು ಸ್ವಾಧೀನ ಕೋರಿ ವಕೀಲರ ಮೂಲಕ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತಾನೆ. ಈ ಕುರಿತು ಪ್ರತಿವಾದಿಗೆ ನೋಟಿಸ್ ಹೋದಾಗ ಆತ ಕೋರ್ಟ್​ಗೆ ಹಾಜರಾಗುತ್ತಾನೆ. ಕೆಲ ತಿಂಗಳು ವಾದ- ಪ್ರತಿವಾದ ನಡೆದ ಮೇಲೆ ರಾಜೀ ಡಿಕ್ರಿ ಮಾಡಿಸಿಕೊಳ್ಳುತ್ತಾರೆ. ಕೋರ್ಟ್ ಆದೇಶದ ಮೇಲೆ ಅಮೀನಾ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಹೋಗಿ ಅಲ್ಲಿದ್ದವರನ್ನು ತೆರವು ಮಾಡಿ ಸ್ವಾಧೀನ ಬಿಡಿಸಿಕೊಳ್ಳುತ್ತಾರೆ. ಈ ಎಲ್ಲ ಪ್ರಕ್ರಿಯೆ ನಡೆಯುವಾಗ ಸರ್ಕಾರಿ ಅಧಿಕಾರಿಗಳ ನೆರವು ಬೇಕು. ಇವರ ಕೈವಾಡದ ಬಗ್ಗೆ ತನಿಖೆ ಮುಂದುವರಿದಿದೆ.
100/56 ಜಾಗ ಕಬಳಿಕೆ:ಬೆಂಗಳೂರು ಉತ್ತರ ತಾಲ್ಲೂಕು ಹಳೇ ಯಶವಂತಪುರ ಗ್ರಾಮ ಗೋಕುಲ್ 1ನೇ ಹಂತದ ಆಂಜನೇಯ ಟೆಂಪಲ್ ರಸ್ತೆಯಲ್ಲಿ 10056 ಅಡಿ ಅಳತೆಯ ಜಾಗವನ್ನು ಬಿ. ಮಣಿ ಎಂಬಾತ ಸೆಂದಿಲ್ ಕುಮಾರ್​ಗೆ ಜಿಪಿಎ ಬರೆದುಕೊಟ್ಟಿದ್ದ. ಇದರ ಆಧಾರದ ಮೇಲೆ ಸೆಂದಿಲ್, 2018ರಲ್ಲಿ ಅರುಣ್ ಎಂಬಾತನ ಕಡೆಯಿಂದ ಆಸ್ತಿ ಸ್ವಾಧೀನಕ್ಕೆ ಕೊಡಿಸುವಂತೆ ಹೆಚ್ಚುವರಿ ಎಸಿಎಂಎಂ ಕೋರ್ಟ್​ನಲ್ಲಿ ದಾವೆ ಹೂಡಿದ್ದ. ಕೆಲವೇ ದಿನಕ್ಕೆ ರಾಜೀ ಡಿಕ್ರಿಯಾಗಿ ಸೆಂದಿಲ್ ಪರ ತೀರ್ಪು ಆಗಿತ್ತು. ಈ ಆದೇಶದ ಮೇಲೆ ಸೆಂದಿಲ್, ಆಸ್ತಿ ಸ್ವಾಧೀನ ಪಡೆಯಲು ಹೋದಾಗ ಅಸಲಿ ಮಾಲೀಕ ರವೀಂದ್ರ ಸಿ. ಷಾಗೆ ತಿಳಿದು, ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ಗೆ ಹೋದಾಗ ಭೂಗಳ್ಳರ ಅಸಲಿ ಮುಖವಾಡ ಬೆಳಕಿಗೆ ಬಂದಿದೆ.
ಭೂ ಕಬಳಿಕೆ ಕುರಿತು 2020ರಲ್ಲಿ ಉದ್ಯಮಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಸತ್ಯಾಂಶ ತಿಳಿದ ಹೈಕೋರ್ಟ್, ಕೆಳನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೊಟ್ಟು ಪೊಲೀಸ್ ತನಿಖೆಗೆ ಸೂಚನೆ ನೀಡಿತ್ತು. ಇದರ ಆಧಾರದ ಮೇಲೆ ಹಲಸೂರು ಗೇಟ್ ಠಾಣೆಯಲ್ಲಿ ಆರೋಪಿಗಳಾದ ಬಿ. ಮಣಿ, ಅರುಣ್, ಸೆಂದಿಲ್ ಕುಮಾರ್ ಎಂಬುವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ 116 ದಾವೆ ಹೂಡಿರುವ ಬಗ್ಗೆ ಕೋರ್ಟ್ ಗಮನಕ್ಕೆ ಬಂದಿದೆ. ಹೈಕೋರ್ಟ್ ಆದೇಶದ ಮೇಲೆ ರಾಜ್ಯ ಸರ್ಕಾರ, ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ಒಪ್ಪಿಸಿದೆ. ಸಿಐಡಿಯ ವಿಶೇಷ ವಿಚಾರಣೆ ವಿಭಾಗ, ಕೋರ್ಟ್ ಸೂಚನೆ ಮೇರೆಗೆ ಅನುಮಾನಾಸ್ಪದ ದಾವೆಗಳ ಸಂಬಂಧಪಟ್ಟವರನ್ನು ಕರೆದು ವಿಚಾರಣೆ ನಡೆಸಿ ಆರೋಪಿ ತರ ವಿರುದ್ಧ ಎಫ್​ಐಆರ್ ದಾಖಲಿಸುತ್ತಿದೆ. ದಿನೇದಿನೆ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈವರೆಗೆ ನೂರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಆಸ್ತಿಯ ಮೂಲಮಾಲೀಕರಿಗೆ ತಮ್ಮ ಆಸ್ತಿ ಮಾಲೀಕತ್ವದ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ ಎಂಬುದು ಗಮ ನಕ್ಕೇ ಬರುತ್ತಿರಲಿಲ್ಲ. ಕೊನೆಗೊಂದು ದಿನ ಕೋರ್ಟ್ ಆದೇಶ ಹಿಡಿದು ಅಮೀನಾ ಮತ್ತು ಪೊಲೀಸರು ಬಂದಾಗಲೇ ಅಸಲಿ ವಿಚಾರ ಗೊತ್ತಾಗುತ್ತಿತ್ತು. ಅಸಲಿ ದಾಖಲೆ ತೋರಿಸಿದರೂ ಅಮೀನಾ ಮತ್ತು ಪೊಲೀಸರು ಕೋರ್ಟ್ ಆದೇಶ ತೋರಿಸಿ, ಇದನ್ನು ಪಾಲಿಸುವಂತೆ ಆಜ್ಞೆ ಮಾಡುತ್ತಿದ್ದರು. ಈ ಬಗ್ಗೆ ವಿವಾದ ಇದ್ದರೆ ಕೋರ್ಟ್​ಗೆ ಮೇಲ್ಮನವಿ ಹೋಗುವಂತೆ ಸಲಹೆ ಕೊಡುತ್ತಿದ್ದರು. ಅನಿವಾರ್ಯವಾಗಿ ಅಸಲಿ ಮಾಲೀಕರು ಒಪ್ಪಿಕೊಂಡು ಕೆಳಹಂತದ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುತ್ತಿದ್ದರು. ಅಷ್ಟೊತ್ತಿಗೆ ಭೂಗಳ್ಳರು ಆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು.
ಬಿಡಿಎ ಅಭಿವೃದ್ಧಿಪಡಿಸಿರುವ ಲೇ ಔಟ್​ಗಳಲ್ಲಿನ ಸೈಟುಗಳಿಗೂ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವುದು ಬೆಳಕಿಗೆ ಬಂದಿವೆ. ಬಿಡಿಎ ಅಧಿಕಾರಿಗಳ ನಕಲಿ ಸಹಿ, ಸೀಲು ಮಾಡಿಕೊಂಡು ದಾಖಲೆ ಸೃಷ್ಟಿಸಿ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಕೊಂಡು ಆನ್​ಲೈನ್​ನಲ್ಲಿ ಖಾತಾ ಪಡೆದು ವಂಚನೆ ಮಾಡಿದ್ದಾರೆ. ಜನವರಿಯಲ್ಲೇ 20 ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಪಿಸ್ತೂಲ್ ತೋರಿಸಿ ಬೆದರಿಸಿದ ಬಿಜೆಪಿ ಮುಖಂಡ; ಎಗ್​ರೈಸ್​ ಅಂಗಡಿ ವಿಚಾರಕ್ಕೆ ಜಗಳ

ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಸಂಚಲನ; ಟೋಯಿಂಗ್​ಗೆ ಸದ್ಯದಲ್ಲೇ​ ಹೊಸ ನಿಯಮ: ಏನೇನಿರುತ್ತೆ ಷರತ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
