ಒಮ್ಮೆ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಮೂರು ವರ್ಷದ ತಮ್ಮನನ್ನು ಬಗಲಲ್ಲಿ ಹೊತ್ತುಕೊಂಡು ಏದುಸಿರು ಬಿಡುತ್ತಾ ಒಂದು ಬೆಟ್ಟವನ್ನು ಏರುತ್ತಿದ್ದಳು. ಇದನ್ನು ಗಮನಿಸಿದ ಅದೇ ಬೆಟ್ಟವನ್ನು ಏರುತ್ತಿದ್ದ ಸಾಧು ಒಬ್ಬನು ಆ ಬಾಲಕಿಯನ್ನು ಕೇಳುತ್ತಾನೆ: ಈ ಸುಡುಬಿಸಿಲಿನಲ್ಲಿ ತಮ್ಮನನ್ನು ಹೊತ್ತುಕೊಂಡು ಬೆಟ್ಟವನ್ನು ಏರುತ್ತಾ ಎಲ್ಲಿಗೆ ಹೊರಟಿರುವೆ ತಾಯಿ?’. ಬಾಲಿಕೆ ಹೇಳುತ್ತಾಳೆ – ಬೆಟ್ಟದ ಮೇಲೆ ಮಂದಿರದಲ್ಲಿರುವ ತಾಯಿದೇವಿಯನ್ನು ಬೇಡಿಕೊಳ್ಳಲು ಹೊರಟಿದ್ದೇನೆ. ಸಂಭಾಷನೆ ಮುಂದುವರಿಯುತ್ತದೆ. ‘ಏನನ್ನು ಬೇಡಿಕೊಳ್ಳಲು ಮಗು?’ ‘ಪೂಜ್ಯರೆ, ನಾವಿಬ್ಬರು ಈಗ ಮೂರು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ನಮ್ಮಪ್ಪನನ್ನು ಕಳೆದುಕೊಂಡ ನಿರ್ಭಾಗ್ಯರು. ಅಪ್ಪ ತೀರಿಕೊಂಡ ಮೇಲೆ ನಮ್ಮವ್ವ ಮನೆ ಮನೆಗಳಲ್ಲಿ ಮನೆ ಕೆಲಸಗಳನ್ನು ಮಾಡುತ್ತಾ ನಮ್ಮಿಬ್ಬರನ್ನು ಸಾಕುತ್ತಿದ್ದಾಳೆ.. ಈಗ ಅವಳು ಕೂಡ ಏನೋ ಒಂದು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ. ಅವಳನ್ನು ರಕ್ಷಿಸಿ ಕೊಡುವಂತೆ ದೇವಿಯನ್ನು ಬೇಡಿಕೊಳ್ಳಲು ಹೊರಟಿದ್ದೇವೆ’. ಮತ್ತೆ ಆ ಸಾಧು ಬಾಲಕಿಯನ್ನು ಕೇಳುತ್ತಾನೆ – ಈ ಬೆಟ್ಟವನ್ನು ಒಬ್ಬೊಬ್ಬರಾಗಿ ಏರುವುದೇ ಕಷ್ಟದ ಕೆಲಸ. ನಿನಗೆ ಮತ್ತೆ ಈ ತಮ್ಮನನ್ನು ಹೊತ್ತುಕೊಂಡು ಹೋಗುವಾಗ ಆಯಾಸವೆನಿಸುವುದಿಲ್ಲವೇ ಮಗೂ? ಬಾಲಕಿ ಹೇಳುತ್ತಾಳೆ : ಇವನು ನನ್ನ ತಮ್ಮ. ‘ತಮ್ಮನಾದರೆ ಏನಂತೆ, ನಿನಗೆ ಪ್ರಯಾಸವಾಗುವುದಿಲ್ಲವೇ?’ ‘ ಇವನು ಇನ್ಯಾರೋ ಬೇರೆ ಅಲ್ಲ ನನ್ನ ತಮ್ಮ’. ‘ನಾನು ನಿಮ್ಮಿಬ್ಬರ ಸಂಬಂಧವನ್ನು ಕೇಳುತ್ತಿಲ್ಲ. ನಮ್ಮ ದೇಹದ ಭಾರದ ಜೊತೆ ಇನ್ನೊಬ್ಬರ ಭಾರವನ್ನು ಹೊತ್ತುಕೊಂಡು ಹೋಗುವುದು ಪ್ರಯಾಸಕರವಲ್ಲವೇ?’
ಸಾಧುವಿನ ಪ್ರಶ್ನೆಯಿಂದ ಕುಪಿತಗೊಂಡ ಬಾಲಕಿ ಹೇಳುತ್ತಾಳೆ: ಈ ಹುಡುಗ ಅನ್ಯನಲ್ಲ ಖಾಸಾ ನನ್ನ ಒಡಹುಟ್ಟಿದ ತಮ್ಮ. ಅಂದಮೇಲೆ ಆಯಾಸದ ಪ್ರಶ್ನೆ ಎಲ್ಲಿಂದ ಬರುತ್ತದೆ? ನಮ್ಮವರು ಎಂದ ಮೇಲೆ ಅವರು ನಮಗೆ ಎಂದಾದರೂ ಹೊರೆ ಭಾರವಾಗುವುದುಂಟೆ? ನಿಮಗೆ ಇಷ್ಟು ತಿಳಿಯದೆ? ಬಾಲಕಿಯ ಮಾತಿಗೆ ಸಾಧುವಿನ ಬಳಿ ಉತ್ತರವಿಲ್ಲವಾಯಿತು.
ಹೌದು! ಬಾಲಕಿಯ ಮಾತಿನಲ್ಲಿ ದೊಡ್ಡ ಸಂದೇಶವಿತ್ತು. ಯಾರಾದರೂ ನಮ್ಮವರು ಎಂದಾದಾಗ ಅವರೆಂದೂ ನಮಗೆ ಹೊರೆ, ಭಾರವಾಗುವುದೇ ಇಲ್ಲ. ಈ ಸತ್ಯವನ್ನೇ ಕವಿ ಹೇಳುತ್ತಾನೆ: ಬಳ್ಳಿಗೆ ಕಾಯಿ ಭಾರವೇ? ಆದುದರಿಂದಲೇ ಎಂತಹ ಬಡಕಲು ಬಳ್ಳಿಗೂ ಭಾರವಾದ ಕಾಯಿಯೂ ಭಾರವೆಂದೆನಿಸುವುದೇ ಇಲ್ಲ. ಅಂತೆಯೇ ಹೆತ್ತ ತಾಯಿಗೆ ಮಕ್ಕಳು ಭಾರವೆಂದೆನಿಸುವುದೇ ಇಲ್ಲ. ಆಕೆಗೆ ಅವರ ಮಲ ಮೂತ್ರ ಹೇಸಿಗೆ ಎಂದೆನಿಸುವುದಿಲ್ಲ! ತನಗೆ ಸುಖನಿದ್ದೆಯನ್ನು ಮಾಡಲು ಬಿಡದೆ, ಅಳುತ್ತಾ ಎಚ್ಚರಿಸಿದರೂ ಬೇಸರವಾಗುವುದಿಲ್ಲ. ತನ್ನ ತಟ್ಟೆಯಲ್ಲಿದ್ದ ಅನ್ನವನ್ನು ತಿಂದರೂ ಕೋಪ ಬರುವುದಿಲ್ಲ. ಇಷ್ಟಕ್ಕೂ ಕಾರಣ ‘ನನ್ನದು ನಮ್ಮವರು’ ಎಂಬ ಯಾರೂ ಕಡಿದು ಹಾಕದ ಕರುಳ ಸಂಬಂಧ. ಅಮ್ಮ ಮಗನಿಗೆ ಹೇಳುತ್ತಾಳೆ – ಮಗು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಉತ್ತರವಾಗಿ ಮಗು ಆ ಅಮ್ಮನನ್ನು ಕೇಳುತ್ತೆ – ಅಮ್ಮ ನೀನು ನನ್ನನ್ನು ಪ್ರೀತಿಸಿದಂತೆ ಪಕ್ಕದ ಮನೆಯ ಮಗುವನ್ನು ಪ್ರೀತಿಸಬಲ್ಲೆಯಾ?.
ಅಮ್ಮ ಹೇಳುತ್ತಾಳೆ:ಖಂಡಿತವಾಗಿಯೂ ಮಗೂ. ಆದರೆ ಪಕ್ಕದ ಮನೆಯ ಮಗುವೆಂದಲ್ಲ; ನಿನ್ನ ಗೆಳೆಯನೆಂಬ ಕಾರಣಕ್ಕೆ! ಇಲ್ಲಿಯೂ ನನ್ನವರೆಂಬ ಅನುಬಂಧ ಕೆಲಸ ಮಾಡಿದೆ. ಈ ಸಂದೇಶವನ್ನೇ ಬಸವಣ್ಣನವರು ಸುಂದರವಾಗಿ ಹೀಗೆ ನೀಡಿದರು. ‘ಇವನಾರವ ಇವನಾರವನೆಂದೆಣಿಸದಿರು, ಇವ ನಮ್ಮವ ಇವ ನಮ್ಮವ ಇವನಮ್ಮ ಮನೆಯ ಮಗನೆಂದೆಣಿಸಯ್ಯ’.
ತಾತ್ಪರ್ಯ ಇಷ್ಟೆ:ಯಾರನ್ನಾದರೂ ನಮ್ಮವರನ್ನಾಗಿ ಮಾಡಿಕೊಂಡರೆ, ನಮ್ಮ ಮತ್ತು ಅವರ ನಡುವೆ ಏನೋ ಒಂದು ಅವಿನಾಭಾವ ಸಂಬಂಧ ಬೆಳೆದು ನಾವು ಅವರಿಗೆ ಹತ್ತಿರವಾಗುತ್ತೇವೆ. ಅವರು ನಮ್ಮದೇ ಭಾಗವಾದರೆ ನಮ್ಮ ಕಷ್ಟ ಬೇರೆ ಅವರ ಕಷ್ಟ ಬೇರೆ; ನಮ್ಮ ಭಾರ ಬೇರೆ ಅವರ ಭಾರ ಬೇರೆ ಎಂದೆನಿಸುವುದೇ ಇಲ್ಲ. ಬದಲಾಗಿ ಎಲ್ಲವೂ ಒಂದೇ ಎಂದೆನಿಸುತ್ತದೆ.
ಈ ಸತ್ಯವನ್ನೇ ತಿಳಿಸಿಕೊಡಲು ಐದು ಮಕ್ಕಳನ್ನು ಹೆತ್ತ ತಾಯಿಯನ್ನು ನೋಡಿಕೊಳ್ಳುವ ವಿಚಾರದಲ್ಲಿ ಈ ಐದು ಮಕ್ಕಳು ಹಿಂದೇಟು ಹಾಕುವಾಗ ಜ್ಞಾನಿಗಳೊಬ್ಬರು ಅವರಿಗೆ ತಿಳಿ ಹೇಳಿದರು : ನೀವೆಲ್ಲರೂ ಇನ್ನೊಬ್ಬ ಸಹೋದರನ ತಾಯಿಯ ಸೇವೆಯನ್ನು ಮಾಡುತ್ತಿದ್ದೇವೆ ಎಂಬ ಭಾವನೆಗಿಂತ ಬದಲಾಗಿ ನಿಮ್ಮ ನಿಮ್ಮ ತಾಯಿಯ ಸೇವೆಯನ್ನು ಮಾಡುತ್ತಿದ್ದೇವೆ ಎಂಬ ಭಾವನೆಯಿಂದ ಅಮ್ಮನ ಸೇವೆ ಮಾಡಿ. ಆಗ ನಿಮಗೆ ನಿಮ್ಮ ಅಮ್ಮ ಭಾರವೆನಿಸುವುದೇ ಇಲ್ಲ – ಎಂತಹ ಉತ್ತಮ ಸಲಹೆ!

ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾಗಿದ್ದವನ ಹಡೆಮುರಿ ಕಟ್ಟಿದ ಪೊಲೀಸರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
