
ಕರೊನಾದಿಂದ ಹಲವು ಸಮಸ್ಯೆಗಳು ಉದ್ಭವಿಸಿವೆ. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿನಿತ್ಯ ಹೋರಾಟ ನಡೆಯುತ್ತಲೇ ಇದೆ. ಕರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ, ಹಿರಿಯರನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ. ಆದರೆ, ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತಾಗಿ ಹೆಚ್ಚು ಗಮನಹರಿಸುತ್ತಿಲ್ಲ. ಮಕ್ಕಳಿಗೆ ಕರೊನಾ ಪಾಸಿಟಿವ್ ಆಗದಂತೆ ಏನೆಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ, ಆ ಕುರಿತು ಎಲ್ಲರ ಗಮನವಿದೆ. ಆದರೆ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರಿಗೆ ಮುಂದೆ ಆಗಬಹುದಾದ ಅಪಾಯಗಳ ಬಗ್ಗೆಯೂ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ.
ಮುಂಚೆ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಿದ್ದರು. ಸದಾ ಸಕ್ರಿಯವಾಗಿರುತ್ತಿದ್ದರು. ಆದರೆ, ಈಗ ಹಾಗಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳು ಶಾಲೆಗೆ ಹೋಗಿಲ್ಲ. ಶಾಲೆಗೆ ಹೋಗದಿದ್ದರೂ ಆನ್​ಲೈನ್ ಮೂಲಕ ಪಾಠ ಕಲಿತಿರಬಹುದು ಮತ್ತು ಒಂದು ತರಗತಿಯನ್ನು ಸಹ ಪಾಸ್ ಮಾಡಿರಬಹುದು. ಆದರೆ, ಶಾಲೆಯಲ್ಲಿ ಕಳೆಯಬೇಕಾಗಿದ್ದ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಶಾಲೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸತ್ಯ. ಶಾಲೆ ಎಂದರೆ ಶಿಕ್ಷಣ ಅಷ್ಟೇ ಅಲ್ಲ, ಶಾಲೆ ಎಂದರೆ ವ್ಯಕ್ತಿತ್ವವನ್ನು ನಿರ್ವಿುಸುವುದು. ಇಲ್ಲಿ ಬರೀ ಓದು ಮಾತ್ರ ಮುಖ್ಯವಲ್ಲ. ಬೇರೆ ಮಕ್ಕಳೊಂದಿಗೆ ಸ್ನೇಹ, ಸಂವಹನ ಎಲ್ಲವೂ ಇರುತ್ತದೆ. ಇದು ಕಳೆದ ಒಂದು ವರ್ಷದಿಂದ ಸಿಗುತ್ತಿಲ್ಲ.
ಇಷ್ಟೇ ಅಲ್ಲ, ಕಳೆದೊಂದು ವರ್ಷದಲ್ಲಿ ಹಲವು ಪರೀಕ್ಷೆಗಳು ರದ್ದಾಗಿವೆ. ಪರೀಕ್ಷೆಗಳು ನಡೆಯದಿದ್ದರೂ ಎಲ್ಲರನ್ನೂ ಪಾಸ್ ಮಾಡಲಾಗುತ್ತಿದೆ. ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂಬುದು ಸತ್ಯ. ಆದರೂ ಶಾಲೆಗೆ ಹೋಗದಿದ್ದರೂ ಪಾಸ್ ಮಾಡುವ ಟ್ರೆಂಡ್ ಸರಿಯಾದ ಕ್ರಮವಲ್ಲ. ಹಾಗಂತ ಎಲ್ಲದಕ್ಕೂ ಪರೀಕ್ಷೆಗಳೇ ಮುಖ್ಯ ಅಂತ ನಾನು ಹೇಳುತ್ತಿಲ್ಲ. ಆದರೆ, ಆತ್ಮಾವಲೋಕನ ಎನ್ನುವುದು ಬಹಳ ಮುಖ್ಯವಾಗುತ್ತದೆ. ಒಂದು ಪರೀಕ್ಷೆಯಿಂದ ಮಕ್ಕಳ ಭವಿಷ್ಯದ ಬಗ್ಗೆ ನಾವು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ನಿಜ. ಏಕೆಂದರೆ, ಕಡಿಮೆ ಓದಿದವರು ಸಹ ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯಬಹುದು. ಹೆಚ್ಚು ಡಿಗ್ರಿಗಳನ್ನು ತೆಗೆದುಕೊಂಡವರು ಕಾರಣಾಂತರಗಳಿಂದ ಇನ್ನೇನೋ ಆಗಬಹುದು. ಹಾಗಾಗಿ, ಇಲ್ಲಿ ಪರೀಕ್ಷೆಯೇ ಎಲ್ಲವೂ ಅಲ್ಲ. ಆದರೆ, ತಂದೆ-ತಾಯಿ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ಮಕ್ಕಳು ಪಾಸ್ ಆಗುವುದಕ್ಕೆ, ಮುಂದಿನ ತರಗತಿಗಳಿಗೆ ಹೋಗುವುದಕ್ಕೆ ಒಂದು ಗ್ಯಾಜೆಟ್​ನಿಂದ ಮಾತ್ರ ಸಾಧ್ಯವಾಗುವುದಿಲ್ಲ. ಅದಕ್ಕೆ ಇನ್ನೂ ಏನೋ ಬೇಕಿದೆ.
ಮಕ್ಕಳ ಓದು ಎಷ್ಟು ಮುಖ್ಯವೋ, ಅವರ ಆರೋಗ್ಯ ಮತ್ತು ಯೋಗಕ್ಷೇಮ ಸಹ ಅಷ್ಟೇ ಮುಖ್ಯ. ಇವತ್ತು ಬಹಳಷ್ಟು ಮಕ್ಕಳು ಚಿಕ್ಕವಯಸ್ಸಿನಲ್ಲೇ ಬೊಜ್ಜು ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುವುದನ್ನು ನಾವು ನೋಡಬಹುದು. ಹೆಚ್ಚಿನ ವ್ಯಾಯಾಮ ಇಲ್ಲದಿರುವುದು ಮತ್ತು ಅತಿಯಾದ ಒತ್ತಡದಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಅದರಲ್ಲೂ ಕರೊನಾ ಸಮಯದಲ್ಲಿ ಮಕ್ಕಳು ಹೊರಗೆ ಬಂದು ಆಟವಾಡುವಂತಹ ಪರಿಸ್ಥಿತಿ ಇಲ್ಲದಂತಾಗಿದೆ. ಏನೇ ಮಾಡಿದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಮತ್ತು ಮನೆಯ ಸುತ್ತಮುತ್ತ ಮಾಡುವಂತಹ ಸ್ಥಿತಿ ಇದೆ. ಈ ವಯಸ್ಸಿನಲ್ಲಿ ಸಕ್ರಿಯವಾಗಿರಬೇಕಾದ ಮತ್ತು ಆಟವಾಡಿಕೊಂಡಿರಬೇಕಾದ ಮಕ್ಕಳು, ಅದೆಲ್ಲದರಿಂದ ವಂಚಿತರಾಗಿ ದೂರ ಉಳಿಯಬೇಕಾಗಿದೆ. ಇದರಿಂದ ಅವರ ಮೇಲೆ ಹಲವು ಪರಿಣಾಮಗಳಾಗುತ್ತಿದ್ದು, ಅವರನ್ನು ಮತ್ತೊಮ್ಮೆ ಸಹಜ ಸ್ಥಿತಿಗೆ ತರಬೇಕೆಂದರೆ ಅದಕ್ಕೆ ಒಳ್ಳೆಯ ಸಾಧನವೆಂದರೆ ಅದು ಕ್ರೀಡೆ, ಯೋಗ ಮತ್ತು ಧ್ಯಾನ.
ಓದು ಎಂದರೆ ಅದು ಬರೀ ಅಕಾಡೆಮಿಕ್ ಓದಷ್ಟೇ ಅಲ್ಲ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ. ಏಕೆಂದರೆ, ಈ ಮಕ್ಕಳಿಗೆ ಸಾಕಷ್ಟು ಸಮಯವಿದೆ. ಇನ್ನೂ ಎರಡು ತಿಂಗಳುಗಳ ಕಾಲ ಶಾಲೆ ಓಪನ್ ಆಗುವ ಸಾಧ್ಯತೆ ಇಲ್ಲ. ಹಾಗಾಗಿ, ಬರೀ ಪಠ್ಯಕ್ಕಷ್ಟೇ ಸೀಮಿತವಾಗದೆ, ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತಹ ಓದಿನ ಅವಶ್ಯಕತೆ ಇಂದು ಎಲ್ಲಕ್ಕಿಂತ ಹೆಚ್ಚಿದೆ. ಹಾಗಾಗಿ, ಕ್ರೀಡೆ, ಯೋಗ, ಧ್ಯಾನದ ಜತೆಗೆ ಬೇರೆ ಓದು ಸಹ ಮುಖ್ಯ.
ಮಕ್ಕಳು ಮತ್ತು ಸಕ್ರಿಯವಾಗಿ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರು ತಮ್ಮ ಬಾಲ್ಯ ಮತ್ತು ಯೌವ್ವನವನ್ನು ಕಳೆದುಕೊಳ್ಳುವುದಕ್ಕೆ ಬಿಡಬಾರದು. ನಾವು ಬಾಯ್ಮಾತಿನಲ್ಲಿ ಬಿ ಪಾಸಿಟಿವ್, ಎಲ್ಲವೂ ಸರಿಹೋಗುತ್ತದೆ ಎಂದು ಹೇಳುವುದು ಸುಲಭ. ಆದರೆ, ಈ ಎಲ್ಲ ನೆಗೆಟಿವ್​ನಿಂದ ಕಲಿಯುವುದು ಬಹಳಷ್ಟಿದೆ. ಬಹುಶಃ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೆಗೆಟಿವ್ ಅಂಶಗಳು ಇಲ್ಲದಿದ್ದರೆ, ನಾವು ನಮ್ಮ ಆರೋಗ್ಯದ ಬಗ್ಗೆ ಗಮನಹರಿಸುತ್ತಿರಲಿಲ್ಲವೇನೋ. ಹಾಗಾಗಿ ಇಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳೆರಡೂ ಬಹಳ ಮುಖ್ಯವಾಗುತ್ತದೆ. ನೆಗೆಟಿವ್​ನಿಂದ ಏನು ಕಲಿಯುತ್ತೀವಿ ಎನ್ನುವುದು ಎಷ್ಟು ಮುಖ್ಯವೋ, ಅದನ್ನು ಬದುಕಿನಲ್ಲಿ ಪಾಸಿಟಿವ್ ಆಗಿ ಹೇಗೆ ಅಳವಡಿಸಿಕೊಳ್ಳುತ್ತೀವಿ ಎನ್ನುವುದು ಸಹ ಅಷ್ಟೇ ಮುಖ್ಯವಾಗುತ್ತದೆ.
ಕಳೆದ ಒಂದೂವರೆ ವರ್ಷಗಳಲ್ಲಿ ಮಕ್ಕಳು ಸಾಕಷ್ಟು ಕಳೆದುಕೊಂಡಿದ್ದಾರೆ. ಹಾಗಾಗಿ, ಅವರಿಗೆ ಕಳೆದುಕೊಂಡಿದ್ದನ್ನು ವಾಪಸ್ಸು ಪಡೆಯುವ ವಿಷಯದಲ್ಲಿ ನಾವು ಗಮನಹರಿಸಬೇಕಿದೆ. ಈಗ ಎಲ್ಲರ ಪಾಲಿಗೂ ಕಷ್ಟದ ಸಮಯ. ಆದರೆ, ಮುಂದೊಂದು ದಿನ ಖಂಡಿತಾ ಒಳ್ಳೆಯ ಸಮಯ ಬರುತ್ತದೆ. ಎಲ್ಲರೂ ಮತ್ತೆ ಮಾಮೂಲಿನಂತೆ ಓಡಾಡುವಂತೆ ಆಗುತ್ತದೆ. ಸಹಜ ಸ್ಥಿತಿಗೆ ಮರಳಿದ ಮೇಲೆ, ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಿದ್ದು, ಪ್ರಮುಖವಾಗಿ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ಕ್ರೀಡೆ ಎಂದರೆ ಬರೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಆಡುವುದಕ್ಕಲ್ಲ. ಅದು ಮಕ್ಕಳ ಯೋಗಕ್ಷೇಮಕ್ಕಾಗಿ ಬಹಳ ಅವಶ್ಯಕ. ಮೊದಲು ತಂದೆ-ತಾಯಿ ಈ ಬಗ್ಗೆ ಹೆಚ್ಚು ಗಮನಹರಿಸಬೇಕು.
ಮಕ್ಕಳು ಚೆನ್ನಾಗಿ ಓದಬೇಕು, ಸುಶಿಕ್ಷಿತರಾಗಬೇಕು ಎಂದು ಪಾಲಕರು ತಮ್ಮ ಶಕ್ತಿಮೀರಿ ಮಕ್ಕಳಿಗೆ ಏನೇನು ಸೌಲಭ್ಯಗಳನ್ನು ಕೊಡಿಸುವುದಕ್ಕೆ ಸಾಧ್ಯವಾಗುತ್ತದೋ, ಅವೆಲ್ಲವನ್ನೂ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ, ಬರೀ ಮಕ್ಕಳ ಮೇಲಷ್ಟೇ ಅಲ್ಲ, ತಂದೆ-ತಾಯಿ ಮೇಲೂ ಒತ್ತಡವಿದೆ. ಈ ನಿಟ್ಟಿನಲ್ಲಿ ಮಕ್ಕಳು ಮತ್ತು ಪಾಲಕರು ಜತೆಯಾಗಿ ಹೆಜ್ಜೆ ಇಡಬೇಕಿದೆ.
(ಲೇಖಕರು ಅಂತಾರಾಷ್ಟ್ರೀಯ ಮಾಜಿ ಕ್ರೀಡಾಪಟು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 5 =
Remember me
