ಬೆಂಗಳೂರು:ಬೆಂಗಳೂರು ವಿಕೇಂದ್ರೀಕರಣವಾದರೆ ಕನ್ನಡಿಗರು ಕನ್ನಡ ನಾಡಿನಲ್ಲಿಯೇ ನಿರಾಶ್ರಿತರಾಗುವ ಪರಿಸ್ಥಿತಿ ಉಂಟಾಗಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಆತಂಕ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾದ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಶಿಬಿರದಲ್ಲಿ ಮಂಗಳವಾರ ಅವರು ಮಾತನಾಡಿದರು.
ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ವಿಕೇಂದ್ರೀಕರಣದ ಬಗ್ಗೆ ನಮಗೆ ಆತಂಕವಿಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ಅನ್ಯಭಾಷಿಕರು ನೆಲೆಸಿದ್ದಾರೆ. ಹಲವು ಬಡವಾಣೆಗಳಲ್ಲಿ ಸ್ಥಳೀಯರೇ ನಿರಾಶ್ರಿತರಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಬೆಂಗಳೂರು ವಿಕೇಂದ್ರೀಕರಣವಾದರೆ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆಯ ಸದಸ್ಯರಾಗಿ ಮತ್ತು ಅನ್ಯ ಭಾಷಿಕರೇ ಮಹಾ ಪೌರರಾದರೆ ಕನ್ನಡ ಭಾಷೆ, ಕನ್ನಡಿಗರು ಮತ್ತಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಬಹುದೆ ಎಂಬ ಆತಂಕ ಪ್ರಾಧಿಕಾರಕ್ಕಿದೆ.
ಕಾನೂನಿನ ಅಂಶ ಪರಿಗಣನೆ
ಬೆಂಗಳೂರು ವಿಕೇಂದ್ರೀಕರಣವಾದಾಗ ಪಾಲಿಕೆಗೆ ಆಯ್ಕೆಯಾಗುವ ಸದಸ್ಯರುಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾತಿನಿಧ್ಯ ಇರುವಂತೆ ಮತ್ತು ಮಹಾಪೌರರು ಹಾಗೂ ಉಪ ಮಹಾಪೌರರ ಹುದ್ದೆ ಕನ್ನಡಿಗರಿಗೆ ಮೀಸಲಿರುವಂತೆ ಕಾನೂನನ್ನು ರೂಪಿಸಲು ಸಾಧ್ಯವೇ ಎಂಬ ಅಂಶವನ್ನು ಪರಿಗಣಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ ಎಂದು ಹೇಳಿದರು.
ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಮನೆ ಮತ್ತು ಶಾಲೆಗಳಿಗೆ ಕನ್ನಡ ಭಾಷೆ ಬೇಕಾಗಿಲ್ಲ. ವಿದ್ವಾಂಸರಿಗೆ ಮಾತ್ರವೇ ಕನ್ನಡದ ಅವಶ್ಯಕತೆ ಇದೆ. ಆದರೆ ವಿದ್ವಾಂಸರ ಕೃತಿಗಳಿಗೆ ಮಾರುಕಟ್ಟೆ ಇಲ್ಲದೆ, ಮಾರುಕಟ್ಟೆಗೆ ಕನ್ನಡ ಬೇಡದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕನ್ನಡ ಭಾಷೆ ಪತನದ ದಿಕ್ಕಿಗೆ ಸಾಗುತ್ತಿರುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ ಎಂಬ ಕಳವಳ ವ್ಯಕ್ತಪಡಿಸಿದರು.
ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ಬಹುರಾಷ್ಟ್ರೀಯ ಕಂಪೆನಿಗಳು ಹೆಚ್ಚಾಗುತ್ತಿವೆ. ಅಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತಿವೆ. ಖಾಸಗಿ ವಲಯದಲ್ಲಿ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರನ್ನು ನೇಮಿಸುವಂತೆ ಮೀಸಲಾತಿ ಜಾರಿಗೆ ತಂದರೆ ಅದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸುವುದಿಲ್ಲ.
ಆ ರೀತಿಯಾಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಹಿನ್ನಡೆ ಉಂಟಾಗುತ್ತಿದೆ. ಇದರಿಂದಾಗಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ರಾಜ್ಯಗಳ ಅಸ್ಮಿತೆಯೇ ಭಾರತದ ಒಕ್ಕೂಟ ವ್ಯವಸ್ಥೆಯ ತಳಪಾಯ. ಆದರೆ ರಾಜ್ಯಗಳ ಅಸ್ಮಿತೆ ಪತನಮುಖಿಯಾಗುತ್ತಿದರೆ ಒಕ್ಕೂಟ ವ್ಯವಸ್ಥೆ ಭದ್ರವಾಗಿರಲು ಸಾಧ್ಯವೇ?  ಎಂದು ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದರು.
ಕನ್ನಡೇತರರಿಗೆ ಕನ್ನಡ ಕಲಿಸಲು ಹೊಸ ಬಗೆಯ ಪ್ರಯೋಗಗಳಾಗಬೇಕು. ಮತ್ತಷ್ಟು ವಿನೂತನವಾಗಿ ಕನ್ನಡ ಕಲಿಸುವ ಕಾರ್ಯವಾಗಬೇಕು. ಕನ್ನಡ ಕಲಿಕಾ ಕೇಂದ್ರಗಳು ಶಿಕ್ಷಕ ಕೇಂದ್ರೀತವಾಗುವುದಕ್ಕಿಂತ ವಿದ್ಯಾರ್ಥಿ ಕೇಂದ್ರೀತವಾಗಬೇಕು. ಆ ನಿಟ್ಟಿನಲ್ಲಿ ಹೊಸ ತಲೆಮಾರಿನ ಕನ್ನಡ ಶಿಕ್ಷಕರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸರಾದ ಡಾ.ಹಂಪ ನಾಗರಾಜಯ್ಯ ಅವರು, ಇವತ್ತಿನ ದಿನಗಳಲ್ಲಿ ಕನ್ನಡೇತರರಿಗಿಂತ ಮುಖ್ಯವಾಗಿ ಕನ್ನಡಿಗರಿಗೆ ಕನ್ನಡ ಕಲಿಸುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಅನ್ಯ ಭಾಷೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಭಾಷಾ ಸೌಹಾರ್ದತೆಯನ್ನು ಕಾಪಾಡುವ ಗುಣ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಇದೆ. ಬೆರೆತು ಬಾಳುವುದರಲ್ಲಿ ಸುಖವಿದೆ. ಕನ್ನಡೇತರರು ಮತ್ತು ಕನ್ನಡಿಗರು ಇಬ್ಬರು ಕನ್ನಡ ಭಾಷೆಯನ್ನು ಕಲಿಯಬೇಕು. ಭಾಷೆ ಕಲಿಯಲು ಮಾತನಾಡುವುದು ಮುಖ್ಯ. ಮಾತನಾಡುವ ಕನ್ನಡ ಕಲಿತರೆ ಕನ್ನಡೇತರರು ನಮ್ಮ ಸಂಸ್ಕೃತಿಯೊಳಗೆ ಪ್ರವೇಶಿಸಿದಂತೆ. ಸಂಸ್ಕೃತಿಗೂ ಮತ್ತು ಭಾಷೆಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಕನ್ನಡದ ಶಬ್ದಗಳು ಸತ್ವಗಳು. ಸತ್ವಗಳಲ್ಲಿ ರಸ, ಭಾವ ಎಲ್ಲವೂ ಅಡಗಿದೆ. ಶಬ್ದಗಳನ್ನು ಕಲಿಯುವ ಮೂಲಕ ಭಾಷೆಗೆ ಪ್ರವೇಶ ಪಡೆಯಬೇಕು. ಭಾಷೆಯ ಮೂಲಕ ಜನರಿಗೆ ತಲುಪಿದರೆ ಹೊಸ ಲೋಕ ತೆರೆದುಕೊಳ್ಳಲಿದೆ. ಇಂತಹ ಹೊಸ ಲೋಕವನ್ನು ಕನ್ನಡೇತರರಿಗೆ ತೆರೆಯುವ ನಿಟ್ಟಿನಲ್ಲಿ ಇವತ್ತು ತರಬೇತಿ ಪಡೆಯುತ್ತಿರುವ ಶಿಕ್ಷಕರು ರೂಪುಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿ ಪ್ರೊ.ಅಬ್ದುಲ್ ರೆಹಮಾನ್ ಪಾಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್ ಮತ್ತು ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
