
ನಿಮ್ಮನ್ನು ನೀವು ಅರಿತುಕೊಳ್ಳುವುದು ಬುದ್ಧಿವಂತಿಕೆಯ ಮೊದಲ ಹಂತ …
– ಹಾಗಂತ ಅರಿಸ್ಟಾಟಲ್ ಹೇಳಿದ್ದರು ಎಂದು ಎಲ್ಲೋ ಓದಿದ ನೆನಪು. ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಅವರ ಸರಿ-ತಪು್ಪಗಳನ್ನು ವ್ಯಾಖ್ಯಾನಿಸುತ್ತೇವೆ. ಆದರೆ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ನಮ್ಮ ಸರಿ-ತಪು್ಪಗಳು, ಬೇಕು-ಬೇಡಗಳ ಬಗ್ಗೆ ಯೋಚಿಸುವುದಕ್ಕೇ ಹೋಗುವುದಿಲ್ಲ. ಬರೀ ಬೇರೆಯವರ ಬಗ್ಗೆ ಸ್ಟಡಿ ಮಾಡುವುದರಲ್ಲಿ, ಅವರ ಸರಿ-ತಪು್ಪಗಳನ್ನು ಎತ್ತಿಹಿಡಿಯುವುದರಲ್ಲೇ ನಮ್ಮ ಬಹುತೇಕ ಆಯಸ್ಸನ್ನು ಕಳೆದುಬಿಡುತ್ತೇವೆ.
ನನ್ನ ಪ್ರಕಾರ, ಪ್ರತಿಯೊಬ್ಬರೂ ಮಲಗುವ ಮುನ್ನ ಸ್ವಲ್ಪ ಹೊತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾವು ಯಾವ ವಿಷಯದಲ್ಲಿ ಗಟ್ಟಿಯಾಗಿದ್ದೇವೆ, ಯಾವುದರಲ್ಲಿ ಇನ್ನಷ್ಟು ಸುಧಾರಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ವಿಷಯದಲ್ಲಿ ನಾವೆಲ್ಲಿದ್ದೀವಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ನಾನೇನು ಇಷ್ಟಪಡುತ್ತೇನೆ ಎಂದು ಅರ್ಥ ಮಾಡಿಕೊಂಡು ಅದರ ಬೆನ್ನುಹತ್ತಿ ಹೋದರೆ, ಖಂಡಿತಾ ಏನು ಬೇಕಾದರೂ ಸಾಧಿಸಬಹುದು. ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ, ಅದನ್ನು ಬೇಗ ಕಾರ್ಯರೂಪಕ್ಕೂ ತರುವುದು ಸಹ ಮುಖ್ಯವಾಗುತ್ತದೆ. ಏಕೆಂದರೆ, ನಮ್ಮಲ್ಲಿ ಏನಾಗಿದೆಯೆಂದರೆ, 24-25 ವರ್ಷ ವಯಸ್ಸಾದರೂ ಅದೇನು ದೊಡ್ಡದಲ್ಲ ಎನ್ನುವಂತಾಗಿದೆ. 30ನೇ ವರ್ಷದ ನಂತರವೇ ಜವಾಬ್ದಾರಿ ಬರುತ್ತದೆ ಎಂದಾಗಿಬಿಟ್ಟಿದೆ. ನಮ್ಮ ಜವಾಬ್ದಾರಿ, ಒಲವು, ಪ್ಯಾಶನ್ ಏನು ಎನ್ನುವುದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕು. ಅಥ್ಲೀಟ್ ಆಗಲೀ, ಸಿಂಗರ್ ಆಗಲೀ, ಡಾನ್ಸರ್, ಕ್ರಿಕೆಟರ್, ನಟ … ಯಾರೂ ಇಷ್ಟು ವರ್ಷ ಆಗಲಿ ಎಂದು ಕಾಯುತ್ತಾ ಕೂರುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ನಿರಂತರವಾಗಿ ಅಭ್ಯಾಸ ಮಾಡುತ್ತಿರುತ್ತಾರೆ ಮತ್ತು ತಮ್ಮ ಪ್ಯಾಶನ್​ನ್ನು ಬೆನ್ನಟ್ಟುತ್ತಿರುತ್ತಾರೆ.
ಹಾಗಾಗಿ, ಅಭ್ಯಾಸ ಬಹಳ ಮುಖ್ಯ. ನಮಗೆ ಶಕ್ತಿ, ಏಕಾಗ್ರತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಬರುವುದೇ ನಿರಂತರವಾದ ಅಭ್ಯಾಸದ ಮೂಲಕ. ಒಂದೇ ಕೆಲಸ ನೂರು ಬಾರಿ ಮಾಡಿದರೆ ನಾವು ಪರ್ಫೆಕ್ಷನಿಸ್ಟ್ ಆಗಬಹುದು. ಯಾವುದೇ ಕೆಲಸವನ್ನು ಒಂದು ಬಾರಿ ಮಾಡಿ ಸುಮ್ಮನಾಗಿಬಿಟ್ಟರೆ ಆಗುವುದಿಲ್ಲ. ನನಗಿನ್ನೂ ಸಮಯವಿದೆ, ವಯಸ್ಸಿದೆ, ದುಡ್ಡಿದೆ ಯಾವಾಗ ಬೇಕಾದರೂ ಮಾಡಬಹುದು ಎಂದು ಸುಮ್ಮನಿದ್ದರೆ ಏನನ್ನೂ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ನಮ್ಮ ಮನೋಭಾವ ಬದಲಾಗಬೇಕು.
ನಾನು ಒಂದು ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಬಡವರು ತನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎಂದು ಸುಮ್ಮನಾಗಿಬಿಡುತ್ತಾರೆ. ದುಡ್ಡಿರುವವರು ತಮಗೇಕೆ ಬೇಕು ಎಂದು ಏನೂ ಮಾಡದೆಯೇ ಉಳಿದುಬಿಡುತ್ತಾರೆ. ಬರೀ ದುಡ್ಡಿಟ್ಟುಕೊಂಡು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಮುಂದೊಂದು ದಿನ ತಾನು ಏನು ಮಾಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಂಡರೆ ಮತ್ತು ಇದುವರೆಗೂ ತಾನೇನನ್ನೂ ಸಾಧಿಸಿಲ್ಲ ಅಂತನಿಸಿಬಿಟ್ಟರೆ, ಆಗ ಎಷ್ಟು ದುಡ್ಡಿದ್ದರೆ ಏನು ಪ್ರಯೋಜನ? ಇದು ದುಡ್ಡಿರುವವರ ಸಮಸ್ಯೆಯಾದರೆ, ದುಡ್ಡಿಲ್ಲದವರದ್ದು ಇನ್ನೊಂದು ಸಮಸ್ಯೆ. ಅವರು ತಮ್ಮ ಹತ್ತಿರ ದುಡ್ಡಿಲ್ಲ, ಬಡತನ ಏನೂ ಮಾಡುವುದಕ್ಕೆ ಬಿಡುತ್ತಿಲ್ಲ ಎಂದು ಕುಡಿಯುತ್ತಾ ಬೇಸರ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲೇ ಸಾಕಷ್ಟು ಹಣ ಖರ್ಚು ಮಾಡಿರುತ್ತಾರೆ. ಅಂದರೆ, ಸುಮ್ಮನೆ ಇಲ್ಲದ ಕಾರಣಗಳನ್ನು ಕೊಟ್ಟು ಸಮಯ ಹಾಳು ಮಾಡುತ್ತಿರುತ್ತಾರೆ. ಇವತ್ತು ಯಾರ್ಯಾರು ಯಾವ್ಯಾವ ಸ್ಥಿತಿಯಲ್ಲಿರುತ್ತಾರೋ, ಅದಕ್ಕೆ ಅವರವರೇ ಹೊಣೆ. ಬಡತನದಲ್ಲಿದ್ದೀವಿ ಎಂದರೆ ಅದರಿಂದ ಆಚೆ ಬರುವುದಕ್ಕೆ ಪ್ರಯತ್ನ ಮಾಡಬೇಕು, ಪರಿಶ್ರಮ ಹಾಕಬೇಕು. ಬಡತನದಿಂದ ಹೊರಬರುವುದಕ್ಕೆ ಕೆಲಸ ಮತ್ತು ಪರಿಶ್ರಮ ಬಿಟ್ಟು ಬೇರೆ ಯಾವುದೇ ಮಂತ್ರದಂಡ ಇಲ್ಲ.
ಮೊಹಮ್ಮದ್ ಅಲಿ ಎಂಬ ಬಾಕ್ಸರ್ ಬಗ್ಗೆ ನೀವು ಕೇಳಿರಬಹುದು. ಅವರ ಪ್ರಕಾರ ಪರಿಶ್ರಮ ಯಾವ ಲೆವೆಲ್​ಗೆ ಇರಬೇಕು ಎಂದರೆ, ನೋವು ಶುರುವಾದ ಮೇಲೆ ಕೌಂಟ್ ಶುರು ಮಾಡಬೇಕು ಎನ್ನುತ್ತಿದ್ದರಂತೆ. ಸಾಮಾನ್ಯವಾಗಿ ನಾವು ಪುಷ್​ಅಪ್ ಪ್ರಾರಂಭಿಸುತ್ತಿದ್ದಂತೆಯೇ ಒಂದು, ಎರಡು, ಮೂರು ಅಂತ ಎಣಿಸುವುದಕ್ಕೆ ಶುರು ಮಾಡುತ್ತೇವೆ. ಆದರೆ, ಅವರು ವೊದಲೆಲ್ಲ ಸುಮ್ಮನಿದ್ದು, ಕೈ-ಕಾಲು ನೋವು ಶುರುವಾದ ಮೇಲೆ ಕೌಂಟ್ ಆರಂಭಿಸುತ್ತಿದ್ದರಂತೆ. ಆ ಲೆವೆಲ್​ಗೆ ಅಭ್ಯಾಸ ಮಾಡಿ, ಪರಿಶ್ರಮ ಹಾಕಿದ್ದರಿಂದಲೇ ಅವರು ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತಾರೆ.
ಅವರೊಬ್ಬರೇ ಅಲ್ಲ, ಸಾಧಕರೆಲ್ಲ ಇದೇ ರೀತಿ ಶ್ರಮ ಹಾಕಿದವರೇ. ಅವರೆಲ್ಲ ನಿರಂತರ ಅಭ್ಯಾಸ ಮಾಡಿಕೊಂಡು ಬಂದವರೇ. 24 ಗಂಟೆ ಅದರ ಬಗ್ಗೆಯೇ ಯೋಚನೆ ಮಾಡುತ್ತಿದ್ದರು. ಅದರಲ್ಲೇ ಮುಳುಗಿ ಹೋಗಿದ್ದರು. ನಾವು ಸಿನಿಮಾಮಂದಿಯೂ ಅಷ್ಟೇ. ದಿನಪೂರ್ತಿ ಸಿನಿಮಾ ಬಗ್ಗೆಯೇ ಯೋಚನೆ ಮಾಡುತ್ತಿರುತ್ತೇವೆ. ಬರೀ ಅಭಿನಯವಷ್ಟೇ ಅಲ್ಲ ನಿರ್ದೇಶನ, ಕಥೆ ಬರೆಯೋದು, ಸಿನಿಮಾ ನೋಡೋದು, ಹೀಗೆ ಬೇರೆಬೇರೆ ಆಯಾಮಗಳ ಕುರಿತು ಗಮನ ಹರಿಸುತ್ತಿರುತ್ತೇವೆ. ಯಾರ ಜತೆ ಮಾತಾಡಿದರೂ ಸಿನಿಮಾ ಬಗ್ಗೆಯೇ ಚರ್ಚೆ. ಧ್ಯಾನಿಸಿದರೆ ಮಾತ್ರ ನಾವು ಅಂದುಕೊಂಡಿದ್ದು ಸಿಗುವುದಕ್ಕೆ ಸಾಧ್ಯ. ಹತಾಶೆಯಿಂದ ಹೊರಬರುವುದಕ್ಕೆ ಜನ ಧ್ಯಾನದ ಮೊರೆ ಹೋಗುತ್ತಾರೆ. ಧ್ಯಾನ ಎಲ್ಲಿರುತ್ತದೆ? ಅದು ನಮ್ಮ ಕೆಲಸದಲ್ಲಿರುತ್ತದೆ. ನಮ್ಮ ಕೆಲಸದಿಂದಲೇ ಖುಷಿ ಸಿಗುವುದು.
ನಾನು ಗಮನಿಸಿರುವ ಇನ್ನೊಂದು ಅಂಶವೆಂದರೆ, ಅನೇಕರು ಬಹುತೇಕ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಿದ್ದಾರೆ. ಒಳ್ಳೆಯ ವಿಷಯಗಳನ್ನೂ ಖಂಡಿಸುತ್ತಾರೆ, ಕೆಟ್ಟ ವಿಷಯಗಳಿಗೂ ಬಯ್ಯುತ್ತಿರುತ್ತಾರೆ. ಈ ಹತಾಶೆಗೆ ನಮ್ಮ ವ್ಯವಸ್ಥೆ ಒಂದು ಕಾರಣವಿರಬಹುದು. ಆದರೆ, ವ್ಯವಸ್ಥೆ ಕಾರಣ ಎಂದು ದೂಷಿಸುತ್ತಾ ಕೂರುವುದು ಅಭ್ಯಾಸವಾಗಿ ಹೋಗಿದೆ. ವ್ಯವಸ್ಥೆ ಸರಿ ಇಲ್ಲ ಎಂದರೆ ಸರಿಮಾಡಿಕೊಳ್ಳಬೇಕಲ್ಲವೇ? ಅದು ಬಿಟ್ಟು ದೂಷಿಸುತ್ತಾ ಕೂತರೆ ಏನು ಬಂದ ಹಾಗಾಯಿತು? ಸಮಸ್ಯೆ ಇರುವುದೇ ಅಲ್ಲಿ. ಒಂದು ಹಳ್ಳಿಯಲ್ಲಿ 25 ಯುವಕರು ಇದ್ದಾರೆ ಎಂದರೆ, ಅವರೆಲ್ಲ ಸೇರಿ ಏನಾದರೂ ಮಾಡಬಹುದು. ಆದರೆ, ಅವರಲ್ಲಿ ಹೊಂದಾಣಿಕೆ, ಒಗ್ಗಟ್ಟು, ಸಾಮರಸ್ಯ ಇರುವುದಿಲ್ಲ. ಯಾರಾದರೂ ಏನಾದರೂ ಮಾಡುವುದಕ್ಕೆ ಹೋದರೂ ಬಿಡುವುದಿಲ್ಲ. ಸುಮ್ಮನಿದ್ದರೆ ನೀವು ಬೆಳೆಯಬೇಕು, ದೊಡ್ಡ ವ್ಯಕ್ತಿಯಾಗಬೇಕು ಎನ್ನುತ್ತಾರೆ. ಬೆಳೆದ ಮೇಲೆ ಬೆಳೆದುಬಿಟ್ಟ ಎಂದು ಹೀಯಾಳಿಸುತ್ತಿರುತ್ತಾರೆ. ಯಾಕೆ ಈ ಮನಸ್ಥಿತಿ ಎಂದರೆ, ಇಂಥ ಬಹಳಷ್ಟು ಜನರಿಗೆ ಕೆಲಸವಿರುವುದಿಲ್ಲ.
ಹಾಗಾಗಿಯೇ ಆತ್ಮಾವಲೋಕನ ಎಲ್ಲರ ಜೀವನದಲ್ಲೂ ಬಹಳ ಮುಖ್ಯವಾಗುತ್ತದೆ. ನಾವೆಲ್ಲಿದ್ದೇವೆ, ಎಲ್ಲಿಗೆ ಹೋಗಬೇಕು ಎಂದು ವಿಮರ್ಶೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಅದೇ ಕಾರಣಕ್ಕೆ ನಾನು ಹೇಳಿದ್ದು, ಪ್ರತಿ ರಾತ್ರಿ ನಿಮಗೆ ಅಂತ ನೀವು ಸ್ವಲ್ಪ ಸಮಯವನ್ನು ಮೀಸಲಿಡಿ. ಏನು ಮಾಡಬೇಕು, ಮಾಡಬಾರದು ಎಂದು ಆತ್ಮವಲೋಕನ ಮಾಡಿಕೊಳ್ಳಿ. ಅದರಿಂದ ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ಸಾಧ್ಯ.
(ಲೇಖಕರು ನಟ-ನಿರ್ಮಾಪಕ)
ಆಚೆಗೆ ಬರೋಕಾಗಲ್ಲ ಅಂದ್ಕೋಬೇಡಿ, ಬಂದೇ ಬರ್ತೀವಿ.. ಮನಸಿದ್ದರೆ ಮಾರ್ಗ: ನೀನಾಸಂ ಸತೀಶ್

ರೈತರೇ ಲಾಕ್​ಡೌನ್​ ಚಿಂತೆ ಬಿಡಿ, ನಿಮ್ಮ ಬೆಳೆಗೆ ಸೂಕ್ತ ಬೆಲೆಕೊಟ್ಟು ಖರೀದಿಸುವೆ, ಈ ನಂಬರ್​ಗೆ ಕರೆ ಮಾಡಿ: ನಟ ಉಪೇಂದ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × two =
Remember me
