ಬೆಂಗಳೂರು:ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ 3ನೇ ಸುತ್ತಿನ ಸಿರೋಲಾಜಿಕಲ್ (ರಕ್ತ ಮಾದರಿ) ಸಮೀಕ್ಷೆ ಆರಂಭಿಸಿದೆ. ಈ ಬಾರಿ ಕೇವಲ 6-14 ವರ್ಷ ವಯಸ್ಸಿನ ಮಕ್ಕಳ ಸಮೀಕ್ಷೆ ನಡೆಸಲಾಗುತ್ತಿದ್ದು, ಬಿಬಿಎಂಪಿಯ 8 ವಲಯಗಳು ಸೇರಿ ಎಲ್ಲ 30 ಜಿಲ್ಲೆಗಳಿಂದ 5,072 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಸಮೀಕ್ಷೆಯಿಂದ ಕೋವಿಡ್ ಸಂಭಾವ್ಯ ನಾಲ್ಕನೇ ಅಲೆ ಸಾಧ್ಯತೆ ಹಾಗೂ ಅದರಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಅರಿಯಲು ಸಾಧ್ಯವಾಗಲಿದೆ.
ಈವರೆಗೂ ಕೋವಿಡ್ ಲಸಿಕೆ ಪಡೆಯದಿರುವ ಆಯ್ದ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಅವರಿಂದ 2 ಎಂಎಲ್ ರಕ್ತದೊಂದಿಗೆ ಮೂಗು ಮತ್ತು ಗಂಟಲ ದ್ರವ (ಸ್ವಾ್ಯಬ್) ಸಹ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಇದರಿಂದ ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಸಹಜವಾಗಿ ಇದೆಯೇ? ಅಥವಾ ಕೋವಿಡ್ ಸೋಂಕಿನಿಂದ ಪ್ರತಿಕಾಯ ಉಂಟಾಗಿ ದೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು. ಇದರಿಂದ ಕೋವಿಡ್ ನಾಲ್ಕನೇ ಅಲೆ ಕಾಣಿಸಿಕೊಂಡಲ್ಲಿ ಅದರಿಂದ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ ಎಂದು ತಿಳಿಯಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಲಸಿಕೆ ಪಡೆದ ಗುಂಪು ಸಮೀಕ್ಷೆಯಿಂದ ಹೊರಗೆ:ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಓಮಿಕ್ರಾನ್ ತಳಿ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಯಾವುದೇ ಹೆಚ್ಚುವರಿ ಪರಿಣಾಮಗಳು ಕಂಡುಬರಲಿಲ್ಲ. ರಾಜ್ಯದಲ್ಲಿ ಶೇ.97 ವಯಸ್ಕರು ಲಸಿಕೆ ಪಡೆದಿರುವುದರಿಂದ ಹಾಗೂ ಬಹುತೇಕ ಹಿರಿಯರು ಮುನ್ನೆಚ್ಚರಿಕೆ ಡೋಸ್ ಪಡೆದಿರುವುದರಿಂದ ಕೋವಿಡ್ ವಿರುದ್ಧ ಹೋರಾಡಲು ಅವರಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಇವರಲ್ಲದೆ, ಹದಿಹರೆಯದವರಲ್ಲಿ (15-17 ವರ್ಷದವರು)ಶೇ. 64 ಹಾಗೂ ಮಕ್ಕಳಲ್ಲಿ (12-14 ವರ್ಷದವರಲ್ಲಿ) ಶೇ.44 ಕೋವಿಡ್ ಲಸಿಕೆ ಹಾಕಲಾಗಿದೆ. ಆದ್ದರಿಂದ ಲಸಿಕೆ ಹಾಕಿಸಿಕೊಂಡವರನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ.
ಸಂಭಾವ್ಯ ಕೋವಿಡ್ ನಾಲ್ಕನೇ ಅಲೆ ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮ ತಿಳಿಯಲು ಈ ಬಾರಿ ಲಸಿಕೆ ಪಡೆಯದ 6-14 ವರ್ಷ ವಯಸ್ಸಿನ ಮಕ್ಕಳ ಸಮೀಕ್ಷೆ ಮಾತ್ರ ನಡೆಸಲಾಗುತ್ತಿದೆ. ಮೊದಲ ದಿನ 116 ಮಕ್ಕಳ ಮಾದರಿ ಸಂಗ್ರಹಿಸುವ ಮೂಲಕ ಶೇ. 2.29 ಗುರಿ ತಲುಪಲಾಗಿದೆ.
|ಡಿ. ರಂದೀಪ್ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ
ಸಮೀಕ್ಷೆಯ ಗುರಿ:ಸಕ್ರಿಯ ಕೋವಿಡ್ ಸೋಂಕು, ನೈಸರ್ಗಿಕ ಸೋಂಕಿನ ನಂತರ ಪ್ರತಿಕಾಯಗಳ ಕ್ಷೀಣಿಸುವಿಕೆ ಆಥವಾ ಏರಿಕೆ, ಮರುಸೋಂಕಿನ ಸಂಭವ, ಲಸಿಕೆ ಹಾಕದ ಮಕ್ಕಳ ವಯೋಮಾನದವರಲ್ಲಿ ಕೋವಿಡ್ ಒತ್ತಡ ಅರಿಯುವುದು ಸಮೀಕ್ಷೆಯ ಗುರಿಯಾಗಿದೆ. ಈ ವೇಳೆ ರೋಗಲಕ್ಷಣಗಳನ್ನು ಹೊಂದಿರುವ ಕೋವಿಡ್ ನೆಗೆಟಿವ್ ಇರುವ ಮಕ್ಕಳ ಮಾದರಿಯನ್ನು ಕೋವಿಡ್ ಪರೀಕ್ಷೆ ಜತೆಗೆ ಇತರೆ ಸೋಂಕು ರೋಗಗಳ ಪರೀಕ್ಷೆಗೂ ಒಳಪಡಿಸಲಾಗುವುದು. ಜತೆಗೆ ಮಕ್ಕಳಲ್ಲಿ ಮಧುಮೇಹದ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ:ಭಾರತದಲ್ಲಿ ಸೋಮವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 4,518 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 4,31,81,335ಕ್ಕೆ ಏರಿದೆ. ಒಂಬತ್ತು ಜನರ ಸಾವಿನೊಂದಿಗೆ ಮೃತರ ಒಟ್ಟು ಸಂಖ್ಯೆ 5,24,701ಕ್ಕೆ ತಲುಪಿದೆ. ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 25,782ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಕೇಸ್ ಪ್ರಮಾಣ ಒಟ್ಟು ಸೋಂಕಿತರ ಶೇಕಡ 0.06 ಆಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇ.98.73 ಆಗಿದೆ ಎಂದು ಸಚಿವಾಲಯ ಹೇಳಿದೆ. ದೈನಿಕ ಪಾಸಿಟಿವಿಟಿ ದರ ಶೇ.1.62 ಹಾಗೂ ವಾರದ ಪಾಸಿಟಿವಿಟಿ ದರ ಶೇ.0.91 ಆಗಿದೆ.
ರಾಜ್ಯದಲ್ಲಿ ಕರೊನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿದೆ. ಸಾರ್ವಜನಿಕರು ಗಾಬರಿಯಾಗುವ ಅಗತ್ಯವಿಲ್ಲ. ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ ಕರೊನಾ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಭೆ ನಡೆಸಿ ಎಲ್ಲ ಜಿಲ್ಲೆಗಳಲ್ಲಿನ ಪರಿಸ್ಥಿತಿ ಅವಲೋಕಿಸಲಿದ್ದಾರೆ. ನಂತರ ಈ ಕುರಿತು ವರದಿ ಸಲ್ಲಿಸಲು ತಿಳಿಸಲಾಗಿದೆ. ಈ ವರದಿ ಆಧಾರದ ಮೇಲೆ 2-3 ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ವಿಶೇಷ ತಂಡಗಳು:ಸಿರೋಲಾಜಿಕಲ್ ಸಮೀಕ್ಷೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿಶೇಷ ಆರೋಗ್ಯ ತಂಡಗಳನ್ನು ರಚಿಸಲಾಗಿದೆ. ಮಕ್ಕಳ ವೈದ್ಯರ ಮೇಲ್ವಿಚಾರಣೆಯಲ್ಲಿ ಆರೋಗ್ಯ ಸಿಬ್ಬಂದಿ ಮಕ್ಕಳಿಂದ ಮಾದರಿ ಸಂಗ್ರಹಿಸಲಿದ್ದಾರೆ. ತಂಡದಲ್ಲಿ ಐಸಿಟಿಸಿ (ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಆಂಡ್ ಟೆಸ್ಟಿಂಗ್ ಸೆಂಟರ್) ಸಲಹೆಗಾರರು ಮತ್ತು ಪ್ರಯೋಗಾಲಯದ ತಂತ್ರಜ್ಞರು ಇರುತ್ತಾರೆ. ಸಮೀಕ್ಷೆ ಸಮಯದಲ್ಲಿ ದತ್ತಾಂಶ ಸಂಗ್ರಹಿಸಲು ವೆಬ್ ಆಧಾರಿತ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ.
ಸೋಂಕು ದರ ಏರಿಕೆ:ರಾಜ್ಯದಲ್ಲಿ ಸೋಮವಾರ 11,962 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 230 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 1.92ಕ್ಕೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 2,441ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 203 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.11 ಲಕ್ಷ ಮೀರಿದೆ. ಇವರೆಗೂ 40,066 ಸೋಂಕಿತರು ಸಾವನ್ನಪ್ಪಿದ್ದು, 39.53 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.
ಬೆಂಗಳೂರು:ನಗರದಲ್ಲಿ ಕಳೆದ ಹತ್ತು ದಿನಗಳಿಂದ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಮಾರ್ಷಲ್​ಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ನಿತ್ಯ 100ಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ವರದಿ ಆಗುತ್ತಿದ್ದವು. ಆದರೆ, ಜೂನ್ ಆರಂಭವಾಗುತ್ತಿದ್ದಂತೆ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನಕ್ಕೆ 200 ವರದಿಯಾಗುತ್ತಿದ್ದು, ನಾಲ್ಕನೇ ಅಲೆಯ ಭೀತಿ ಶುರುವಾಗಿದೆ. ಮಾಸ್ಕ್ ಕಡ್ಡಾಯ ಆದೇಶ ಜಾರಿಯಲ್ಲಿದ್ದರೂ ಜನರು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮಾರ್ಷಲ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ಮಾಸ್ಕ್ ಧರಿಸದವರಿಗೆ ಈಗಲೇ ದಂಡ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + six =
Remember me
