ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕಿನ ಮೊದಲೆರಡು ಅಲೆಗಳಿಗಿಂತ ದುರ್ಬಲ ವಾಗಿರುವ 3ನೇ ಅಲೆಯ ಸೋಂಕು ಇನ್ನೆರಡು ವಾರಗಳಲ್ಲಿ ಬಹುತೇಕ ಮುಕ್ತಾಗೊಳ್ಳಲಿದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದಲೇ ಹೊರಬಿದ್ದಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳು ಕನಿಷ್ಠ 3 ತಿಂಗಳು ಜನತೆಯನ್ನು ಬಿಟ್ಟೂ ಬಿಡದೆ ಕಾಡಿತ್ತು. ಸೋಂಕು ಹರಡುವಿಕೆ ನಿಯಂತ್ರಣ ಮತ್ತು ನಿರ್ವಹಣೆ ಕಾರ್ಯಗಳಲ್ಲಿ ಆರೋಗ್ಯ ಇಲಾಖೆಗೆ ಅನುಭವದ ಕೊರತೆ ಹಾಗೂ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇದ್ದ ಕಾರಣ ಸಾವು ನೋವಿನ ಪ್ರಮಾಣ ಅಧಿಕವಿತ್ತು. ಪ್ರಸ್ತುತ 2022ರ ಆರಂಭದಿಂದ ಕಂಡುಬಂದ 3ನೇ ಅಲೆಯ ತೀವ್ರತೆ ಕಡಿಮೆ ಇದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿಲ್ಲ.
ಕರೊನಾ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಆಗಬೇಕು. ಆಗ ಮಾತ್ರ ಸೋಂಕು ಹರಡುವಿಕೆ ಪ್ರಮಾಣ ತಗ್ಗಿ ಮುಕ್ತಾಯಗೊಂಡಿದೆ ಎಂದು ಹೇಳಬಹುದು. 2ನೇ ಅಲೆ ಕೂಡ ಮೇ, ಜೂನ್ ಮತ್ತು ಜುಲೈನಲ್ಲಿ ಕಾಣಿಸಿಕೊಂಡು ಇಳಿಕೆ ಆಗಿತ್ತು. ನಂತರ ಐದು ತಿಂಗಳು ಪಾಸಿಟಿವಿಟಿ ದರ ಶೇ.0.5ಕ್ಕಿಂತ ಕಡಿಮೆ ವರದಿ ಆಗುತ್ತಿತ್ತು. 3ನೇ ಅಲೆಯು ಜನವರಿಯಲ್ಲಿ ಉತ್ತುಂಗಕ್ಕೆ ಏರಿದ್ದು, ನಿತ್ಯ 25 ಸಾವಿರ ಸರಾಸರಿಯಲ್ಲಿ ಬರೋಬ್ಬರಿ 8 ಲಕ್ಷ ಪ್ರಕರಣಗಳು ವರದಿ ಆಗಿದ್ದವು. ಫೆ.1ರಿಂದ 6ರವರೆಗೆ 86 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಸೋಮವಾರ 6,150 ಕೇಸ್​ಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣ ಕೂಡ 1 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಎರಡು ವಾರ ನಿಗಾ:ಪ್ರಸ್ತುತ ರಾಜ್ಯದ 4-5 ಜಿಲ್ಲೆಗಳಲ್ಲಿ ಸೋಂಕು ಪ್ರಕರಣ 200ಕ್ಕೂ ಅಧಿಕವಿದೆ. ಆದ್ದರಿಂದ ಈಗಲೇ ಮೂರನೇ ಅಲೆ ಮುಕ್ತಾಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೆರಡು ವಾರ ನಿಗಾ ವಹಿಸಲಾಗುತ್ತಿದ್ದು, ಜನರು ಸಮರ್ಪಕವಾಗಿ ಕರೊನಾ ನಿಯಮಗಳನ್ನು ಪಾಲಿಸಿದಲ್ಲಿ ಪ್ರಕರಣ ಇಳಿಕೆಯಾಗಲಿದೆ. ಆಗ 3ನೇ ಅಲೆ ಮುಕ್ತಾಯ ಆಗಿರುವ ಸ್ಪಷ್ಟವಾಗಿ ಮಾಹಿತಿ ನೀಡಬಹುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಕೋವಿಡ್ ಮೂರನೇ ಅಲೆ ಇಳಿಮುಖ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟವರಿಗೆ ಆಸ್ಪತ್ರೆ ಐಸೋಲೇಷನ್ ವಿನಾಯ್ತಿ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ವರದಿಯಿಂದ ವಿನಾಯ್ತಿ ನೀಡಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಒಮಿಕ್ರಾನ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ನವೆಂಬರ್ ಕೊನೇ ವಾರದಿಂದ ವಿದೇಶದಿಂದ ಆಗಮಿಸಿದವರಲ್ಲಿ ಸೋಂಕು ದೃಢಪಟ್ಟವರು 7 ದಿನ ಆಸ್ಪತ್ರೆ ಐಸೋಲೇಷನ್ ಕಡ್ಡಾಯಗೊಳಿಸಲಾಗಿತ್ತು. ಸದ್ಯ ಸೋಂಕು ತೀವ್ರವಾಗಿಲ್ಲವಾದ್ದರಿಂದ ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟರೂ ರೋಗ ಲಕ್ಷಣ ಇಲ್ಲದಿದ್ದರೆ ಆಸ್ಪತ್ರೆ ವಾಸದ ಬದಲಿಗೆ ಮಾದರಿಯನ್ನು ಜಿನೋಮಿ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿ, ಮನೆ ಆರೈಕೆಗೆ ಸೂಚಿಸುವಂತೆ ಹಾಗೂ ವ್ಯವಸ್ಥೆ ಇಲ್ಲದವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಕಳುಹಿಸಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ.
ಮಹಾರಾಷ್ಟ್ರ ನಿರ್ಬಂಧ ಮುಕ್ತ:ಸದ್ಯ ಮಹಾರಾಷ್ಟ್ರ, ಕೇರಳ ಹಾಗೂ ಗೋವಾದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯವಿದೆ. ಮಹಾರಾಷ್ಟ್ರದಲ್ಲೂ ಸೋಂಕು ಇಳಿಮುಖ ವಾಗಿರುವುದರಿಂದ ಪ್ರಯಾಣಿಕರಿಗೆ ವರದಿಯಿಂದ ವಿನಾಯ್ತಿ ನೀಡಬಹುದು. ಕೇರಳ ಮತ್ತು ಗೋವಾದಲ್ಲಿ ಸೋಂಕಿನ ತೀವ್ರತೆ ಹೆಚ್ಚಿದ್ದು, ಈ ಎರಡೂ ರಾಜ್ಯಗಳಿಗೆ ವರದಿ ಕಡ್ಡಾಯ ನಿಯಮ ಮುಂದುವರಿಸಬೇಕೆಂದು ಸಲಹೆ ನೀಡಿರುವುದಾಗಿ ಎಂದು ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಕಳೆದೊಂದು ವಾರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಎರಡುಪಟ್ಟು ಇಳಿಕೆಯಾಗಿದೆ. ಸೋಮವಾರ 6,151 ಸೋಂಕು ಪ್ರಕರಣ ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ 6.19ಕ್ಕೆ ಇಳಿಕೆಯಾಗಿದೆ. ಫೆ.1ರಂದು ಈ ಪ್ರಮಾಣ ಶೇ. 13.45 ಇತ್ತು. ಸೋಂಕು ಪ್ರಕರಣಗಳ ಇಳಿಕೆಯೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 87,080ಕ್ಕೆ ತಗ್ಗಿದೆ. ಒಂದೇ ದಿನ 16,802 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 37.75 ಲಕ್ಷ ಮೀರಿದೆ. ಆದರೆ ಸೋಂಕಿತರ ಸಾವಿನ ಪ್ರಮಾಣ ಏರುತ್ತಿದ್ದು, ಕಳೆದ 24 ಗಂಟೆಗಳಲ್ಲಿ 49 ಮಂದಿ ಸಾವಿಗೀಡಾಗಿದ್ದಾರೆ. ಮೃತರ ಒಟ್ಟು ಸಂಖ್ಯೆ 39.396ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 8 =
Remember me
