| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ/ನರಸಿಂಹ ನಾಯಕ್ ಬೈಂದೂರುಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಈ ‘ಹರೆಯ’ಕ್ಕೆ ಜಾತಿ ಮಾನ್ಯತೆ ಇಲ್ಲವಾಗಿದೆ. ಹೌದು.. ಶತ ಶತಮಾನಗಳಿಂದ ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಹರೆಯ ಎಂಬ ಸಮುದಾಯ ಜಾತಿ ಅಸ್ತಿತ್ವಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿದೆ. ಸರ್ಕಾರಿ ದಾಖಲೆಯಲ್ಲಿ ಜಾತಿ ನಮೂದಾಗದ ಕಾರಣ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಸೌಲಭ್ಯ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಇನ್ನೂ ವಂಚಿತವಾಗಿದೆ.
ಕುಂದಾಪುರ ತಾಲೂಕು ಕೆರಾಡಿ ಗ್ರಾಮದ ಬೆಳ್ಳಾಲ ಈ ವಿಶಿಷ್ಟ ಸಮುದಾಯದ ಆವಾಸ ಸ್ಥಾನ. ಇವರು ದೇವರ ಸೇವೆಗಾಗಿ ವಲಸೆ ಬಂದವರಾಗಿದ್ದು, ಎಲ್ಲಿಂದ ಬಂದಿರುವುದು, ಯಾವ ಸಮುದಾಯ ಪ್ರತಿನಿಧಿಸುತ್ತಿದ್ದರು ಎಂಬುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. ಬೇರೊಂದು ಭಾಷೆ ಅವರ ಮಾತೃಭಾಷೆಯಾಗಿತ್ತು. ತಲೆಮಾರುಗಳು ಬದಲಾದಂತೆ ಭಾಷೆ ಅಳಿದು ಹೋಗಿ ಈಗ ಕುಂದಾಪುರ ಕನ್ನಡವೇ ಸಮುದಾಯದ ಮಾತೃಭಾಷೆಯಾಗಿದೆ. ‘ಹರೆ’ ಎಂಬ ವಾದನದೊಟ್ಟಿಗೆ ವಲಸೆ ಬಂದ ಸಮುದಾಯ ಅದೇ ಹೆಸರಿಂದ ಕರೆಸಿಕೊಂಡರೂ ಸರ್ಕಾರಿ ಜಾತಿ-ವರ್ಗದ ದಾಖಲೆಯೇ ಇಲ್ಲದೆ ಅನಾಥವಾಗಿದೆ. ಅವರ ಗುರುತಾಗಿದ್ದ ಹರೆ ವಾದನ ಕೂಡ ಮರೆಯಾಗಿದೆ.
ಹಲವು ಶತಮಾನಗಳಿಂದ ವಾಸವಿದ್ದರೂ ಸಮುದಾಯ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಅಳಿವಿನಂಚಿನಲ್ಲಿರುವ ಈ ಸಮುದಾಯಕ್ಕೆ ಸರ್ಕಾರ ಇನ್ನಾದರೂ ಜಾತಿ ಪ್ರಮಾಣಪತ್ರ ನೀಡದಿದ್ದರೆ ದಾಖಲೆ ಇಲ್ಲದೆ ಈ ವಿಶಿಷ್ಟ ಜನಾಂಗ ಮರೆಯವಾಗುವ ಅಪಾಯವಿದೆ.
ಎಲ್ಲಿಂದ ಬಂದರು?:ಹರೆಯರು ಮೂಲತಃ ಆರ್ಯರಾಗಿದ್ದರು ಎನ್ನಲಾಗುತ್ತಿದೆ. ಬಡತನದ ಕಾರಣದಿಂದ ಜನಿವಾರ ತೆಗೆದು ಇತರರ ಮನೆಗೆ ಕೃಷಿ ಕೆಲಸ ಹಾಗೂ ಇನ್ನಿತರ ಕೆಲಸಕ್ಕಾಗಿ ಹೋಗುತ್ತಿದ್ದರು. ಆರ್ಯರು ಹರೆಯ ಎಂಬ ವಿಶಿಷ್ಟ ಸಮುದಾಯವಾಗಿ ಬದಲಾದರು. ಹಿಂದೆ ಹಿಲಿಯಾಣ ಭಾಗದಲ್ಲಿ ಆರಂಕಣದ ಮನೆಯಲ್ಲಿ ವಾಸವಿದ್ದು, ಜಾಗದ ಮಾಲೀಕರು ಮತ್ತು ಈ ಸಮುದಾಯದ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬೆಳ್ಳಾಳ ಗ್ರಾಮದ ಹರಿಮಕ್ಕಿಯಲ್ಲಿ ಬಂದು ನೆಲೆಸುತ್ತಾರೆ. ಕ್ರಮೇಣ ಅಲ್ಲಿಯೇ ಹರೆಯ ಸಮುದಾಯದ ಸುಮಾರು 15 ಕುಟುಂಬಗಳು ಉಳಿದಿವೆ.
ವಾದ್ಯ ಹೇಗಿರುತ್ತಿತ್ತು?:ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡುವಾಗ ಹರೆ ಬಡಿಯುವುದು ಇವರ ಮೂಲ ಕಸುಬು, ಹರೆ ಎಂದರೆ ಚಂಡೆ ಮಾದರಿಯ ಒಂದು ವಾದನ, ತಾಮ್ರದ ಗೂಡಿನ ಎರಡು ಬದಿಗೆ ಜಿಂಕೆ ಚರ್ಮ ಬಿಗಿದು ನಾರು ಬಳ್ಳಿಯಿಂದ ಬಿಗುಗೊಳಿಸುತ್ತಿದ್ದರು. ವಾದನವನ್ನು ಹೆಗಲಿಗೇರಿಸಿಕೊಂಡು ಎರಡು ಕೈಗಳಿಂದ ದೇವರ ಮುಂದೆ ನುಡಿಸುತ್ತಿದ್ದರು. ಈ ಸಮುದಾಯಕ್ಕೆ ದೇವಸ್ಥಾನ ಹಾಗೂ ಮನೆಗಳಲ್ಲಿ ಯಾವ ಕಟ್ಟುಪಾಡುಗಳಿರದೆ ಮುಕ್ತ ಪ್ರವೇಶ ನೀಡಲಾಗುತ್ತಿತ್ತು.
ಹರೆಯ ಸಮುದಾಯದ ಹೆಣ್ಣುಮಕ್ಕಳಿಗೆ ತಾಯಿ ಹಾಗೂ ಗಂಡನ ಮನೆಯಲ್ಲಿ ಅಧಿಕಾರ ಇದೆ. ಇತ್ತೀಚಿನ ದಿನಗಳಲ್ಲಿ ಸಮುದಾಯದವರಿಗೆ ಗಂಡು-ಹೆಣ್ಣು ಸಿಗದ ಕಾರಣ ಇತರ ಸಮುದಾಯದ ನೆಂಟಸ್ಥನ ಬೆಳೆಸಿದ್ದಾರೆ. ಸಮುದಾಯದ ಹಬ್ಬ ಹರಿದಿನ, ಆಚರಣೆಗಳೆಲ್ಲವೂ ಹಿಂದು ಸಮಾಜದಂತೆಯೇ ಇದೆ. ಬಸ್ರೂರಿನಲ್ಲಿ 60 ವರ್ಷಕ್ಕೊಮ್ಮೆ ನಡೆಯುವ ಮಾರಿ ಹಬ್ಬಕ್ಕೆ ಹರೆಯೊಂದಿಗೆ ಈ ಸಮುದಾಯ ಭಾಗವಹಿಸುವುದು ವಾಡಿಕೆಯಾಗಿತ್ತು. ಅಂದು ಹಬ್ಬಕ್ಕೆ ಹೋದವರು ಹಿಂದಿರುಗುವುದಿಲ್ಲ ಎಂಬ ನಂಬಿಕೆಯೂ ಈ ಸಮುದಾಯದಲ್ಲಿ ಗಾಢವಾಗಿ ಬೇರೂರಿತ್ತು.
ಸರ್ಕಾರಿ ಕಡತದಲ್ಲಿ ಹರೆಯ ಸಮುದಾಯದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ. ಬೆಳ್ಳಾಲ ಗ್ರಾಮದಲ್ಲಿರುವ ಹರೆಯ ಸಮುದಾಯದವರನ್ನು ಭೇಟಿ ಮಾಡಿ ಚರ್ಚಿಸಿ ಬಳಿಕ ಸೂಕ್ತ ಸಮುದಾಯಕ್ಕೆ ಸೇರಿಸಿ ಸಾಮಾಜಕ ನ್ಯಾಯ ಕೊಡುವ ಪ್ರಯತ್ನ ಮಾಡಲಾಗುತ್ತದೆ.| ಕೆ. ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಇದುವರೆಗೆ ಹರೆಯ ಸಮುದಾಯವನ್ನು ಯಾವ ಜಾತಿ ಪಂಗಡದಲ್ಲಿಯೂ ಗುರುತಿಸದಿರುವುದು ಶೋಚನೀಯ. ಸೌಲಭ್ಯ ಇಲ್ಲದೆ ಸಮುದಾಯ ಶೋಷಣೆಗೆ ಒಳಗಾಗಬಾರದು. ಸಮುದಾಯಕ್ಕೆ ನ್ಯಾಯ ನೀಡಲು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು.| ಗುರುರಾಜ್ ಗಂಟಿಹೊಳೆ, ಶಾಸಕ, ಬೈಂದೂರು.
ಹರೆಯ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ದೊರೆಯದ ಇರುವುದರಿಂದ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವುದಷ್ಟೇ ಅಲ್ಲದೆ ಅವರ ವಿದ್ಯಾಭ್ಯಾಸಕ್ಕೂ ಹಿನ್ನಡೆಯಾಗಿದೆ. ರಾಜಕೀಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹರೆಯರಿಗೆ ಪ್ರಮಾಣಪತ್ರ ನೀಡಬೇಕು ಎಂದು ಗ್ರಾಮ ಪಂಚಾಯತ್ ನಿರ್ಣಯ ಮಾಡಿದೆ.| ಸುದರ್ಶನ ಶೆಟ್ಟಿ, ಅಧ್ಯಕ್ಷ, ಗ್ರಾಮ ಪಂಚಾಯತ್ ಕೆರಾಡಿ
ನನ್ನ ಇಬ್ಬರು ಮಕ್ಕಳು ಪಿಯುಸಿ ಓದುತ್ತಿದ್ದು, ಜಾತಿ ಪ್ರಮಾಣಪತ್ರವಿಲ್ಲದೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕೂಲಿ ಮಾಡುತ್ತಿರುವುದರಿಂದ ಮಕ್ಕಳಿಗೆ ಶಿಕ್ಷಣ ನೀಡಲು ಕಷ್ಟವಾಗುತ್ತಿದೆ. ನಾವು ಕನ್ನಡಿಗರಾದರೂ ಜಾತಿ ಪ್ರಮಾಣಪತ್ರ ನೀಡಲು ಸರ್ಕಾರ ಸತಾಯಿಸುತ್ತಿರುವುದೇಕೆ?| ಶೈಲಾ, ಹರೆಯ ಸಮುದಾಯದ ಮಹಿಳೆ ಬೆಳ್ಳಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
