ಪ್ರತಿ ಮನುಷ್ಯನಿಗೂ ತನ್ನ ಆಂತರ್ಯದಲ್ಲೇ ಹುದುಗಿರುವ, ತನ್ನ ಸ್ವಭಾವವೇ ಆಗಿರುವ ದಿವ್ಯತೆಯ ಪರಿಚಯ ಮಾಡಿಕೊಟ್ಟು, ಅದನ್ನು ವ್ಯಕ್ತಗೊಳಿಸುವ ಪ್ರಕ್ರಿಯೆಯಲ್ಲಿ ಅವನ ಶ್ರದ್ಧೆ ಮತ್ತು ತೀವ್ರತೆಗಳನ್ನು ನೂರ್ಮಡಿಗೊಳಿಸಿ ಜೀವನದ ಪ್ರತಿ ಕ್ಷೇತ್ರದಲ್ಲಿಯೂ ಅವನು ವಿಜೃಂಭಿಸುವಂತೆ ಮಾಡುವುದು ಅಗತ್ಯ.
ಯಾವ ಸತ್ಯವನ್ನೂ ಮುಚ್ಚಿಡುವುದಕ್ಕಾಗುವುದಿಲ್ಲ ಅದೊಂದು ಬೆಂಕಿ ಇದ್ದಂತೆ. ಮುಚ್ಚಿಟ್ಟ ವಸ್ತುವನ್ನೇ ಸುಟ್ಟು ಬೂದಿ ಮಾಡಿ ಅದು ಹೊರಬಂದು ಪ್ರಜ್ವಲಿಸುತ್ತದೆ. ತನ್ನನ್ನು ತಾನು ಪ್ರಕಟಗೊಳಿಸುತ್ತದೆ. ಅದು ನಡೆಯಲೇ ಬೇಕು. ಈ ಸೃಷ್ಟಿಯಲ್ಲಿನ, ಪ್ರತಿ ಜೀವಿಯ ಜನ್ಮೋದ್ದೇಶವೇ ತನ್ನೊಳಗೆ ಹುದುಗಿರುವ ಸತ್ಯಗಳು ವ್ಯಕ್ತವಾಗುವುದಕ್ಕೆ
ಅನುಕೂಲಕರವಾಗುವ ಮನಸ್ಸುಗಳನ್ನು ಪುನರ್ನಿರ್ವಣ ಮಾಡಿಕೊಳ್ಳುವುದು. ಅದಕ್ಕೆ ಬೇಕಾದ್ದು ಒಂದು ರೀತಿಯ ಜೀವನ. ಒಂದು ರೀತಿಯ ಶಿಸ್ತು. ಆ ಶಿಸ್ತನ್ನೇ ಭಾರತ ‘ಧರ್ಮ’ ಎಂದು ಕರೆದದ್ದು. ಆದ್ದರಿಂದ ಸತ್ಯ, ಧರ್ಮಗಳು ಎಂದೆಂದೂ ಜೊತೆ ಜೊತೆಯಲ್ಲಿಯೇ ಸಾಗುವ ಅವಳಿಗಳು. ‘ಸತ್ಯಂ ವದ| ಧರ್ಮಂ ಚರ|’ ಎಂತಲೇ ತೈತ್ತರೀಯ ಉಪನಿಷತ್ತಿನಲ್ಲಿ ಬರುವ ಘಟಿಕೋತ್ಸವ ಭಾಷಣ ಶುರುವಾಗುವುದು.
ಏಕೆ ಹೇಳುತ್ತಿದ್ದೇನೆ ಎಂದರೆ ರವಿ ಚನ್ನಣ್ಣನವರ್​ನಂತೆಯೇ ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಹೊಂದಿ ನನ್ನ ಮಾರ್ಗದರ್ಶನದಲ್ಲಿ ಬೆಳೆದ ಬಸವನಬಾಗೇವಾಡಿಯ ವಿಶಾಲ್ ಕೆಲ ದಿನಗಳ ಹಿಂದೆ ಅಮೆರಿಕದಿಂದ ದೂರವಾಣಿಯಲ್ಲಿ, ‘ಸ್ವಾಮೀಜಿ ನಿಮಗೊಂದು ಕುತೂಹಲಕರ ವಿಷಯವನ್ನು ಹೇಳುವುದಿದೆ’ ಎಂದದ್ದೇ ಅಲ್ಲದೆ ಎಂ.ಒ.ಮ್ಯಥಾಯ್ರವರು ಬರೆದ ‘ಖಜಛಿ ್ಕಞಜ್ಞಿಜಿಠ್ಚಛ್ಞಿ್ಚಠ ಟ್ಛ ಘಛಿಜ್ಟ್ಠ ಚಜಛಿ’ ಪುಸ್ತಕದ ಜೆರಾಕ್ಸ್ ಕಾಪಿಯೊಂದನ್ನು ಕಳಿಸಿದ. ವಿಶಾಲ್ ಈಗ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ರೋಡ್ಸ್ ವೇತನದಡಿ ಇಂಗ್ಲಿಷ್ ಭಾಷೆಯಲ್ಲಿ ಪಿಎಚ್​ಡಿ ಮಾಡುತ್ತಿರುವ ಹುಡುಗ.
80ರ ದಶಕದಲ್ಲಿ ಮೆಥಾಯ್ರವರ ಈ ಪುಸ್ತಕದ ಬಗ್ಗೆ ಕೇಳಿದ್ದೆ. ಅದನ್ನೇನು ಓದಿರಲಿಲ್ಲ. ಮ್ಯಥಾಯ್ ಸುಮಾರು ಕಾಲು ಶತಮಾನದಷ್ಟು ಕಾಲ ನೆಹರುರವರ ಆಪ್ತ ಕಾರ್ಯದರ್ಶಿಯಾಗಿದ್ದವರು. ಪ್ರಧಾನಮಂತ್ರಿ ನೆಹರುಗೆ ರಾಜತಾಂತ್ರಿಕವೇಕೆ, ವೈಯಕ್ತಿಕ ನೆಲೆಯಲ್ಲೂ ಪ್ರಮುಖ ವಿಷಯಗಳ ಬಗ್ಗೆ ಸಲಹೆ, ಸೂಚನೆ ಕೊಡುವಷ್ಟು ಆತ್ಮೀಯರು. ವಿಜಯಲಕ್ಷ್ಮಿ ಪಂಡಿತ್​ರಿಂದ ಹಿಡಿದು ಮೌಂಟ್ ಬ್ಯಾಟನ್​ರ ಕುಟುಂಬದವರೆಗೆ ಎಲ್ಲರೊಡನೆಯೂ ಒಡನಾಟವಿದ್ದವರು. ಇಂಗ್ಲಿಷ್ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡಿದ್ದವರು. ಅಂಬೇಡ್ಕರ್ ಸ್ವಾಮಿ ವಿವೇಕಾನಂದರ ಬಗ್ಗೆ ಏನು ಹೇಳಿರುವರೆಂಬುದನ್ನು, ಹೊರಗೆಡುಹಿದ್ದೇ ಇವರು. ಇದರ ಬಗ್ಗೆ ಖ್ಯಾತನಾಮರಾದ ಯಾರೂ ಇಲ್ಲಿಯವರೆಗೆ ಒಂದು ವಾಕ್ಯವನ್ನೂ ಎಲ್ಲೂ ಉಸಿರಿಸಿದ್ದು ನಾನು ಕೇಳಿದ್ದಿರಲಿಲ್ಲ. ಓದಿದ್ದೂ ಇಲ್ಲ. ಅಂಬೇಡ್ಕರ್​ರ ಸಮಗ್ರ ಚಿಂತನೆಗಳು ಪ್ರತಿ ಭಾರತೀಯ ಭಾಷೆಯಲ್ಲೂ ಪ್ರಕಟವಾಗಿರಲಿಕ್ಕೂ ಸಾಕು. ನಮ್ಮ ಸಾಹಿತಿಗಳು, ನಾಯಕರು, ಚಿಂತಕರು, ಕೆಲ ಮಠಾಧಿಪತಿಗಳು ಜಿದ್ದಿಗೆ ಬಿದ್ದವರಂತೆ ಅಂಬೇಡ್ಕರ್ ಅವರ ಹೆಸರನ್ನು, ಅವರ ಚಿಂತನೆಗಳನ್ನು ಉದ್ದರಿಸುತ್ತಿರುತ್ತಾರೆ. ಆವೇಶಗೊಂಡವರಂತೆ ಮಾತನಾಡುತ್ತಿರುತ್ತಾರೆ. ಮಾತಿನ ಅಬ್ಬರವಂತೂ ಯಾರ ಮೇಲೋ ಸೇಡು ತೀರಿಸಿಕೊಳ್ಳುವವರಂತೆ ಇರುತ್ತದೆ. ಏನೂ ತಪ್ಪಿಲ್ಲ! ನಾವು ಮೆಚ್ಚಿದ ವ್ಯಕ್ತಿಯನ್ನು ಕುರಿತು ಮಾತನಾಡುವಾಗ, ಬರೆಯುವಾಗ ಧ್ವನಿಯಲ್ಲಿ ಏರುಪೇರು, ಗದ್ಗದಿತರಾಗುವುದು, ಕಣ್ಗಾಲಿಗಳಲ್ಲಿ ನೀರು ಜಿನುಗುವುದು, ಮಾತು ಹೊರಡದಿರುವುದು ಮನುಷ್ಯ ಸಹಜ. ವಿವೇಕಾನಂದರಂಥ ಬ್ರಹ್ಮಜ್ಞಾನಿಗಳೂ ರಾಮಕೃಷ್ಣರ ಹೆಸರನ್ನು ಪೂರ್ತಿ ಉಚ್ಚರಿಸಲಾಗದೆ ಗದ್ಗದಿತರಾಗುತ್ತಿದ್ದರು ಎಂದರೆ ಸಾಮಾನ್ಯರ ಪಾಡೇನು? ಆದರೆ ನಾನು ಪ್ರಸ್ತಾಪಿಸಿರುವಂತಹ ಅದ್ಭುತ ವಿಷಯವೊಂದು ಇವರ ಗಮನಕ್ಕೇಕೆ ಬಾರದೆ ಹೋಯಿತು.
ಅಂಬೇಡ್ಕರ್ ಏನು ಹೇಳುತ್ತಾರೆಂದರೆ”The greatest man India produced in recent centuries is not Mahatma Gandhi but Swami Vivekananda ‘ ಅರ್ಥಾತ್ ‘ಇತ್ತೀಚಿನ ಶತಮಾನಗಳಲ್ಲಿ ಭಾರತ ಜನ್ಮಕೊಟ್ಟ ಮಹೋನ್ನತ ವ್ಯಕ್ತಿ ಗಾಂಧೀಜಿಯವರಲ್ಲ ವಿವೇಕಾನಂದರು’ ಎಂದು. ಪುಸ್ತಕದ ಇಪ್ಪತ್ತೊಂದನೆಯ ಪುಟದಲ್ಲಿದೆ ಇದು. ಮ್ಯಥಾಯ್ ತಮ್ಮ ಸ್ನೇಹಿತ ಫಣಿಕ್ಕರ್ ಅವರೊಂದಿಗೆ, ಅಂಬೇಡ್ಕರ್​ರ ಜೊತೆ ಚಹಾ ಸೇವಿಸುತ್ತಿದ್ದಾಗ ನಡೆದ ಸಂಭಾಷಣೆಯ ಭಾಗವಿದು. ಭಗವಾನ್ ಬುದ್ಧನ ಪ್ರಶಂಸೆ, ಶಂಕರ ಭಗವತ್ಪಾದರ ಕುರಿತ ಅಂಬೇಡ್ಕರ್​ರ ಬೇಸರ ಇವೆಲ್ಲವನ್ನೂ ಒಳಗೊಂಡ ಸಂಭಾಷಣೆ ಇದು. ಅದು ಸಹಜವೇ ಮತ್ತು ಯಾರೂ ನಿರೀಕ್ಷಿಸುವಂಥದ್ದೇ. ಅವರವರ ಅಭಿಪ್ರಾಯ, ಸಿದ್ಧಾಂತ, ದೃಷ್ಟಿಕೋನಗಳನ್ನು ಯಾರೂ ವ್ಯಕ್ತಗೊಳಿಸಬಹುದು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಬೌದ್ಧಿಕವಾಗಿ ಮುಂದುವರಿದ ಸಮಾಜದ ಲಕ್ಷಣವೇ ಆಗಿದೆ. ಎಲ್ಲರೂ ಅನುಸರಿಸಬೇಕಾದ ಸಾಮಾನ್ಯ ಶಿಸ್ತು, ನಿಯಮ, ಸತ್ಯಕ್ಕೆ ಬದ್ಧರಾಗಿರಬೇಕು, ಸತ್ಯಕ್ಕೆ ನಿಷ್ಠರಾಗಿರಬೇಕು ಎಂಬುದೇ ಹೊರತು ಅಭಿಪ್ರಾಯ ಭೇದಗಳೇ ಇರಬಾರದು ಎಂದಲ್ಲ. ಈ ವಿಷಯವನ್ನು ನಾನು ಇಲ್ಲಿ ಪ್ರಸ್ತಾಪಿಸುವುಕ್ಕೆ ಕಾರಣ ಗಾಂಧೀಜಿಯವರ ಸ್ಥಾನ, ಮಾನಗಳನ್ನು ಕಡಿಮೆ ಮಾಡುವುದೂ ಅಲ್ಲ, ವಿವೇಕಾನಂದರ ಮಹಿಮೆಯನ್ನು ಜಾಸ್ತಿ ಮಾಡಬೇಕೆಂತಲೂ ಅಲ್ಲ. ವಿವೇಕಾನಂದರಂತೂ ಜಗ ಬೆಳಗಿದ ಜ್ಞಾನಸೂರ್ಯ. ಯಾವುದೋ ದೀಪವೊಂದು ಈ ಸೂರ್ಯವನ್ನು ಬೆಂಬಲಿಸಿ ವೃದ್ಧಿಸುವಂತೆಯೋ ಅಥವಾ ಸೂರ್ಯನನ್ನು ನಿಂದಿಸಿ ಕುಂದಿಸುವಂತೆಯೋ ಮಾಡಲಾರದು. ಇನ್ನು ಗಾಂಧೀಜಿಯವರೋ ಸಮಕಾಲೀನ ಜಗತ್ತಿನಲ್ಲಿ ಬುದ್ಧ ಮತ್ತು ಕ್ರಿಸ್ತರ ನಂತರ ವಿಶ್ವಮಾನ್ಯರಾಗಿರುವವರು. ಅವರ ರಾಜಕೀಯ ಸಿದ್ಧಾಂತಗಳು, ಕೆಲ ಸಂದರ್ಭಗಳಲ್ಲಿ ಅವರು ತಳೆದ ಧೋರಣೆಗಳನ್ನು ಎಲ್ಲರೂ ಒಪ್ಪದಿರಬಹುದು. ಆದರೆ ಅವರ ಉದ್ದೇಶ, ಸತ್ಯನಿಷ್ಠೆ, ಸಿದ್ಧಾಂತಬದ್ಧತೆ, ನಂಬಿದ್ದನ್ನು ಆಚರಿಸುವುದರಲ್ಲಿ ಅವರ ಪ್ರಾಮಾಣಿಕತೆ ಸಾರ್ವಕಾಲಿಕ ಪ್ರಶಂಸನೀಯ. ನನ್ನ ಪ್ರಶ್ನೆ ಇರುವುದು ಅಂಬೇಡ್ಕರ್​ರಂಥ ಸಮಕಾಲೀನ ಭಾರತದ ಅಗ್ರಮಾನ್ಯ ವ್ಯಕ್ತಿ ಪರಮಾದ್ಭುತ ರೀತಿಯಲ್ಲಿ ಭಾರತದ ಪುನರ್ ನಿರ್ವಣಕ್ಕೆ ಬೇಕಾದ ಸರ್ವರೀತಿಯ ಸೂತ್ರಗಳು, ಚೌಕಟ್ಟುಗಳು, ಆದ್ಯತೆಗಳು, ವಿಧಾನಗಳನ್ನು ಕೊಟ್ಟ ವಿವೇಕಾನಂದರನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡಿದ್ದರಷ್ಟೇ ಅಲ್ಲ ಬುದ್ಧನ ನಂತರದ ಸ್ಥಾನವನ್ನೇ ವಿವೇಕಾನಂದರಿಗೆ ಕೊಟ್ಟಿದ್ದಾರೆ ಎನ್ನುವ ವಿಷಯ ಇಷ್ಟುದಿನ ಬೆಳಕಿಗೆ ಬಾರದಿದ್ದುದು ಹೇಗೆ ಎನ್ನುವುದು.
ವಿವೇಕಾನಂದರನ್ನು ಆಳವಾಗಿ ಅಧ್ಯಯಿನಿಸಿದ ಯಾರಿಗಾದರೂ ಅನ್ನಿಸುವ ವಿಷಯವೆಂದರೆ ಅಂಬೇಡ್ಕರ್ ಅನುಯಾಯಿಗಳು ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಪ್ರಸ್ತಾಪಗಳಿಗೆ ತಮ್ಮ ಭಾಷಣ ಮತ್ತು ಬರಹಗಳಲ್ಲಿ ಅವಶ್ಯವಿದ್ದಷ್ಟು ಏಕೆ ಒತ್ತು ಕೊಡುತ್ತಿಲ್ಲ ಎಂದು. ಕಾರಣವಿಷ್ಟೇ! ಕೆಳಗೆ ಬಿದ್ದವರಿಗಾಗಿ ವಿವೇಕಾನಂದರು ತೋರಿದ ಕಾಳಜಿ, ಪ್ರೀತಿ, ಅವರ ದುಃಸ್ಥಿತಿಗಾಗಿ ಅವರು ಸುರಿಸಿದಷ್ಟು ಕಣ್ಣೀರು, ಅವರ ಹೀನಸ್ಥಿತಿಯನ್ನು ಕಂಡೂ ಉದಾಸೀನರಾಗಿದ್ದ ಸಮಾಜದ ಪ್ರಬಲ, ಶಿಕ್ಷಿತ ಮತ್ತು ಅಧಿಕಾರವರ್ಗದವರ ಮೇಲೆ ಅವರು ತೋರಿಸಿದ ಆಕ್ರೋಶ, ಸಿಟ್ಟು ಇವುಗಳ ಶೇಕಡ ಒಂದನ್ನೂ ಇದುವರೆಗೂ ಯಾವ ನಾಯಕನೂ ತೋರಿಸಿಲ್ಲ! ತೋರಿಸಲಾರ! ಆ ಹೃತ್ಪೂರ್ವಕತೆ, ಪ್ರಾಮಾಣಿಕತೆ, ಅನ್ಯೋನ್ಯತೆ, ಆ ಆತ್ಮೀಯತೆ ಮತ್ತಾವ ವ್ಯಕ್ತಿತ್ವ, ಮಾತು, ಕೃತಿಗಳಲ್ಲೂ ಬರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ವಿವೇಕಾನಂದರು ದಲಿತೋದ್ಧಾರಕ್ಕೆ ಕಂಡುಕೊಂಡ ಮಾರ್ಗ ಅಂಬೇಡ್ಕರ್ ಪ್ರಣೀತ ಮಾರ್ಗಕ್ಕಿಂತ ಸಂಪೂರ್ಣವಾಗಿ ಭಿನ್ನ. ಅಷ್ಟೇ ಅಲ್ಲ ಭಾರತೀಯ ಸಮಾಜವನ್ನು ಸುಧಾರಣೆಗೊಳಿಸಲು ಅಂದಿನ ಬ್ರಹ್ಮ ಸಮಾಜ ಇತ್ಯಾದಿಗಳು ಇಂದಿನ ಸರ್ಕಾರಗಳಂತೆ ಅನುಸರಿಸುತ್ತಿದ್ದ ಮೇಲು ಮೇಲಿನ ಯಾವ ವಿಧಾನಗಳೂ ಅವರಿಗೆ ಪರಿಪೂರ್ಣ ಎಂದೆನಿಸಲಿಲ್ಲ. ಅವರಿಗೆ ಬೇಕಾಗಿದ್ದುದು ಅವರ ಮಾತಿನಲ್ಲೇ ಹೇಳಬೇಕೆಂದರೆ ್ಟroot and branch reformation ಅರ್ಥಾತ್ ಆಮೂಲಾಗ್ರ ಬದಲಾವಣೆ. ಮೇಲುಮೇಲಿನ ತೇಪೆ ಕೆಲಸವಲ್ಲ. ಅಷ್ಟೇ ಅಲ್ಲ, ಇಂದಿನ ವಿಧಾನಗಳಂತೆ exclusive method ಅವರದ್ದಲ್ಲ.
ಹಿಂದೂಧರ್ಮವೇ ದಲಿತರ ಹೀನಸ್ಥಿತಿಗೆ ಕಾರಣ ಎನ್ನುವ ಅಭಿಪ್ರಾಯವನ್ನು ಎಳ್ಳಷ್ಟೂ ಒಪ್ಪಿಕೊಂಡವರಲ್ಲ ಅವರು. ಹಾಗೆ ಹೇಳಿದವರನ್ನು ತರಾಟೆಗೆ ತೆಗೆದುಕೊಳ್ಳಲೂ ಹೇಸಲಿಲ್ಲ. ಬುದ್ಧನನ್ನು ಸಾಟಿಯಿಲ್ಲದಂತೆ ಗೌರವಿಸುತ್ತಿದ್ದರೂ, ‘ನನ್ನ ಆದರ್ಶವೇ ಬುದ್ಧ’ ಎಂದು ಹೇಳುತ್ತಿದ್ದರೂ ಬುದ್ಧನ ಕಾರ್ಯವೈಖರಿ ವಿವೇಕಾನಂದರಿಗೆ ಒಪ್ಪಿಗೆಯಾಗಲಿಲ್ಲ. ಬುದ್ಧನ ಅಂತಃಕರಣ, ಹೃದಯವಂತಿಕೆ, ಮಾನವೀಯತೆಗಳಿಗೆ ಸಂಪೂರ್ಣ ಶರಣಾಗಿದ್ದವರೇ ಆಗಿದ್ದರೂ ಬುದ್ಧನಿಂದ ಹಿಡಿದು ರಾಮ್ೋಹನ್​ರಾಯ್ರವರೆಗೆ ಎಲ್ಲ ಸಮಾಜ ಸುಧಾರಕರೂ ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಧರ್ಮವೇ ಕಾರಣವೆಂದು ತಿಳಿದು ಅದನ್ನು ಮೂಲೋತ್ಪಾಟನೆ ಮಾಡಹೊರಟರು ಮತ್ತು ತಮ್ಮ ಪ್ರಯತ್ನಗಳಲ್ಲಿ ಸೋತರು.
ನನ್ನ ಅಲ್ಪ ಬುದ್ಧಿಯಿಂದ ನಾನು ತಿಳಿದಿರುವುದೇನೆಂದರೆ ನಮ್ಮ ಧರ್ಮವನ್ನು ಅದರ ಪೂರ್ಣಪ್ರಮಾಣದಲ್ಲಿ ನಾವು ಅನುಷ್ಠಾನ ಮಾಡದಿದ್ದುದೇ ನಮ್ಮ ಸಮಾಜದ ಅಧೋಗತಿಗೆ ಕಾರಣ. ಸನಾತನ ಧರ್ಮವನ್ನು ತನ್ನ ನಿಜರೂಪದಲ್ಲಿ, ಪೂರ್ಣಪ್ರಮಾಣದಲ್ಲಿ ಅನುಷ್ಠಾನಿಸಿದ್ದರೆ ಶೃತಿ, ಸ್ಮ ೃಗಳ ಸ್ಥಾನಮಾನಗಳನ್ನು ಸರಿಯಾಗಿ ಅರಿತು ಶೃತಿಯನ್ನೇ ಆಧಾರವಾಗಿಟ್ಟುಕೊಂಡು ಸ್ಮ ೃಯನ್ನು ತನ್ನ ಮಿತಿಗೊಳಪಡಿಸಿ ಕಾಲಕಾಲಕ್ಕೆ ಬದಲಾಯಿಸಿಕೊಂಡಿದ್ದರೆ ಸ್ತ್ರೀ ಮತ್ತು ಜನಸಾಮಾನ್ಯರ ಸ್ಥಿತಿ ಎಂದಿಗೂ ಶೋಚನೀಯವಾಗುತ್ತಿರಲಿಲ್ಲವೆಂಬುದೇ ವಿವೇಕಾನಂದರ ಅಭಿಮತ. ಹಾಗಾದರೆ ದಲಿತೋದ್ಧಾರಕ್ಕೆ ವಿವೇಕಾನಂದರ ಮಾರ್ಗವೇನು? ಇದಕ್ಕೆ ಉತ್ತರವಿಷ್ಟೇ. ಪ್ರತಿ ಮನುಷ್ಯನಿಗೂ ತನ್ನ ಆಂತರ್ಯದಲ್ಲೇ ಹುದುಗಿರುವ, ತನ್ನ ಸ್ವಭಾವವೇ ಆಗಿರುವ ದಿವ್ಯತೆಯ ಪರಿಚಯ ಮಾಡಿಕೊಟ್ಟು ಅದನ್ನು ವ್ಯಕ್ತಗೊಳಿಸುವ ಪ್ರಕ್ರಿಯೆಯಲ್ಲಿ ಅವನ ಶ್ರದ್ಧೆ ಮತ್ತು ತೀವ್ರತೆಗಳನ್ನು ನೂರ್ಮಡಿಗೊಳಿಸಿ ಜೀವನದ ಪ್ರತಿ ಕ್ಷೇತ್ರದಲ್ಲಿಯೂ ಅವನು ವಿಜೃಂಭಿಸುವಂತೆ ಮಾಡುವುದು. ಮನುಷ್ಯನ ಸ್ಥಾನಮಾನವನ್ನು ಹಿಂದೂ ಧರ್ಮದಲ್ಲಿ ಹಾಡಿ ಹೊಗಳಿರುವುದು ಮತ್ತಾವ ಧರ್ಮದಲ್ಲೂ ಇಲ್ಲ. ಒಂದು ಧರ್ಮ, ‘ನೀವು ಹುಟ್ಟಾ ಪಾಪಿಗಳು’ ಎಂದು ಹೇಳಿದರೆ ಮತ್ತೊಂದು ಧರ್ಮ ‘ಎಲ್ಲರಲ್ಲೂ ಆತ್ಮ ಇದೆ’ ಎಂಬುದನ್ನೇ ಒಪ್ಪಿಕೊಳ್ಳುವುದಿಲ್ಲ. ಆದರೆ ಹಿಂದೂವೊಬ್ಬ ಧರ್ಮದ ಹೆಸರಿನಲ್ಲಿ ದೇಶಾಚಾರ, ಕಂದಾಚಾರಗಳನ್ನೇ ಪ್ರಧಾನವಾಗಿ ಅನುಸರಿಸಿ ಧರ್ಮದ ಸಾರವನ್ನು, ತಿರುಳನ್ನು ಮರೆತೇ ಬಿಟ್ಟಿದ್ದಾನೆ. ಇಡೀ ಹಿಂದೂ ಸಮಾಜದ ಅದರಲ್ಲೂ ದಲಿತರ ದುಃಸ್ಥಿತಿಗೆ ಕಾರಣವಾಗಿದ್ದು ಇದೇ. ಮನುಷ್ಯನ ಭವ್ಯತೆಯನ್ನು ಪರಮಾದ್ಭುತವಾಗಿ ಸಾರಿದ್ದು ಶೃತಿ ಪ್ರಧಾನ ಹಿಂದೂ ಧರ್ಮ. ಅಷ್ಟೇ ಕ್ರೂರಿಯಾಗಿ ಮನುಷ್ಯನನ್ನು ತುಳಿದಿದ್ದು ‘ಅಂದಿನ ಜನರಾಚರಣೆಯಲ್ಲಿದ್ದ’ ಸ್ಮೃತಿ ಪ್ರಧಾನ ಹಿಂದೂಧರ್ಮ. ಹಿಂದೂ ಧರ್ಮ ಸ್ಮೃತಿಪ್ರಧಾನವಲ್ಲ. ಶೃತಿ ಬಿದ್ದವರಿಗೂ ನಾವು ಮೇಲೇಳಲು ಸಹಾಯ ಮಾಡಬೇಕಾದ್ದು ಎನ್ನುತ್ತದೆ. ಹೇಗೆ? ‘ನಿನ್ನಲ್ಲೂ ಆತ್ಮವಿದೆ, ನೀನಾರಿಗೂ ಕಡಿಮೆ ಇಲ್ಲ’ ಎಂದು ಹೇಳಿ ಹೇಳಿ ದಲಿತನನ್ನು ‘ನೀನು ಧೀರ, ನೀನು ಆತ್ಮ, ಆತ್ಮವನ್ನು ಎಬ್ಬಿಸು. ಪ್ರಪಂಚವೇ ನಿನ್ನ ಪಾದದಡಿಯಲ್ಲಿ ಬೀಳುತ್ತದೆ’ ಎಂದು ಅವನು ಒಪ್ಪಿಕೊಳ್ಳುವವರೆಗೂ ಅವನಿಗೆ ಹೇಳುವುದು ನಮ್ಮ ಆದ್ಯ ಕರ್ತವ್ಯವೇ ಆಗಿದೆ ಎನ್ನುತ್ತದೆ ಅದು.
ಅಂಬೇಡ್ಕರ್ ಸ್ವಾಮಿ ವಿವೇಕಾನಂದರ ಬಗ್ಗೆ ಇಟ್ಟುಕೊಂಡಿರುವ ಗೌರವ ಭಾವ, ಪೂಜ್ಯತೆ ಸಾರ್ವಜನಿಕವಾಗಿ ಗ್ರಾಹ್ಯವಾಗಿದ್ದಿದ್ದರೆ ಈ ವಿಷಯಗಳೆಲ್ಲ ದಲಿತೋದ್ಧಾರದ ಕಾರ್ಯಕ್ರಮದಲ್ಲಿ ನಿಸ್ಸಂಶಯವಾಗಿಯೂ ಸೇರ್ಪಡೆಯಾಗುತ್ತಿತ್ತೇನೋ. ಹಾಗಾಗಿದ್ದಲ್ಲಿ ದಲಿತೋದ್ಧಾರ all inclusive ಕಾರ್ಯಕ್ರಮವಾಗುತ್ತಿತ್ತು. ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಉಳಿಯುತ್ತಿರಲಿಲ್ಲ. ಮೇಲ್ವರ್ಗಗಳು ಪ್ರಾಯಶ್ಚಿತ ರೂಪದಲ್ಲೋ ಸಹೋದರ ಪ್ರೇಮ, ಮಾನವೀಯತೆಗಳ ಚೌಕಟ್ಟಿನಲ್ಲೋ ದಲಿತೋದ್ಧಾರವನ್ನು ಒಂದು ಬದ್ಧತೆಯನ್ನಾಗಿ ಸ್ವೀಕರಿಸುತ್ತಿದ್ದರೋ ಏನೋ. ಶ್ರೀರಾಮಕೃಷ್ಣರೇ ಜಾಡಮಾಲಿಯ ಪಾಯಖಾನೆಯನ್ನು ಶುಚಿಗೊಳಿಸಿ ತಮ್ಮ ತಲೆಗೂದಲಿನಿಂದ ಅದನ್ನು ಒರೆಸಿದ್ದನ್ನು ನೋಡಿದರೆ, ಮಹಾತ್ಮ ಗಾಂಧಿ ಅವರನ್ನು ಹರಿಗೆ ಸೇರಿದ ಜನ ಅರ್ಥಾತ್ ಹರಿಜನ ಎಂದು ಕರೆದಿದ್ದನ್ನು ನೋಡಿದರೆ ಹಾಗೆಯೇ ಕರ್ನಾಟಕದ ಸಂತಸದೃಶ ಬ್ರಾಹ್ಮಣ ಶ್ರೀಯುತ ರಂಗರಾವ್, ‘ಹರಿಜನನೊಬ್ಬ ಕಾರಿನಲ್ಲಿ ಕುಳಿತು ಪಯಣಿಸುವಾಗ ಆ ರಸ್ತೆಯ ಧೂಳು ನನ್ನ ತಲೆಯ ಮೇಲೆ ಬಿದ್ದಾಗ ನನ್ನ ಜನ್ಮ ಸಾರ್ಥಕವಾಗುತ್ತದೆ’ ಎಂದು ಹೇಳಿದ್ದನ್ನು ನೋಡಿದರೆ ಇಲ್ಲೆಲ್ಲ ಕೆಲಸ ಮಾಡಿರುವುದು ಸಹೋದರ ಪ್ರೇಮ ಮತ್ತು ಆ ಪ್ರೇಮವೂ ಒಂದು ಡಛ್ಞಿಜಛ್ಞಿ್ಚ (ಜಿದ್ದಿಗೆ ಬಿದ್ದ) ರೂಪ ಧರಿಸಿರುವುದನ್ನು ನೋಡುತ್ತೇವೆ. ವಿವೇಕಾನಂದರ, ‘ದೀನರು, ದರಿದ್ರರು, ಪಾಪಿಗಳು, ರೋಗಿಗಳು ನಿಮ್ಮ ದೇವರಾಗಲಿ’ ಎಂಬ ಮಾತು ಮತ್ತು ಬಾಲ ಗಂಗಾಧರ ತಿಲಕ್​ರಿಗೆ, ಪಂಜಾಬಿನ ಸುಪ್ರಸಿದ್ಧ ಪತ್ರಿಕಾ ಸಂಪಾದಕರು, ‘ಜನಸಾಮಾನ್ಯರನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ನೀವು ಹಾಕಿಕೊಳ್ಳದಿದ್ದಲ್ಲಿ ನಿಮ್ಮ ಯಾವ ರಾಜಕೀಯ ಹೋರಾಟಕ್ಕೂ ಏನು ಅರ್ಥವಿರುವುದಿಲ್ಲ’ ಎಂದು ಹೇಳಿದ ಮಾತೂ ದಲಿತರ ಮೇಲಿನ ಸೋದರಪ್ರೇಮ ಹಳೆಬಾಕಿಯೊಂದಿಗೆ ವ್ಯಕ್ತವಾಗುತ್ತಿರುವ ಸ್ಪಷ್ಟ ಉದಾಹರಣೆಗಳೇ. ಇದೊಂದು ಗಹನವಾದ ವಿಷಯ. ಆದ್ದರಿಂದ ಪುನರ್ವಿಮರ್ಶೆಗೆ ಒಳಗಾಗಬೇಕಾದ್ದೇ. ತಡವಾದರೇನಾಯಿತು. Better late than never ಎಂಬ ಗಾದೆಯೇ ಇದೆಯಲ್ಲ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಶ್ರೀಲಂಕಾ ಮಡಿಲಿಗೆ ಟ್ರೋಫಿ: 27 ವರ್ಷಗಳಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಸೋಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − seven =
Remember me
