|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದರೂ ಮುಂದಿನ ವರ್ಷಗಳಲ್ಲಿ ಸಾಲ ಮಾಡಿಯೇ ತುಪ್ಪ ತಿನ್ನಬೇಕಾದ ಸ್ಥಿತಿ ಎದುರಾಗುವುದು ಬಹುತೇಕ ಪಕ್ಕಾ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಅನ್ನು ಮಾರ್ಚ್​ನಲ್ಲಿ ಮಂಡಿಸಲು ಸಿದ್ಧತೆ ಆರಂಭಿಸುತ್ತಿದ್ದಾರೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ, ಹೆಚ್ಚುತ್ತಿರುವ ವೆಚ್ಚ ಗಮನಿಸಿದಾಗ ಕೇವಲ ಸ್ವಂತ ಆದಾಯದಿಂದಷ್ಟೇ ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೆಚ್ಚಿನ ಸಾಲಕ್ಕೆ ಮೊರೆ ಹೋಗುವ ಅನಿವಾರ್ಯ ಸ್ಥಿತಿ ನಿರ್ವಣವಾಗಿದೆ. ಬೊಮ್ಮಾಯಿ ಮಂಡಿಸಲಿರುವ ಮೊದಲ ಬಜೆಟ್ ಚುನಾವಣಾ ಆಯವ್ಯಯ ಆಗಿರುತ್ತದೆ. ಆದ್ದರಿಂದ ವಿವಿಧ ವಲಯಗಳಲ್ಲಿ ಜನಪರಕ್ಕಿಂತ ಜನಪ್ರಿಯ ಯೋಜನೆಗಳ ಘೋಷಣೆಯತ್ತ ಗಮನ ಹರಿಸುವುದು ಅಗತ್ಯವಾಗಿದೆ. ಆದರೆ ಘೋಷಣೆಗಳಿಗೆ ಸಂಪನ್ಮೂಲ ಕ್ರೋಡೀಕರಿಸುವುದು ಬೊಮ್ಮಾಯಿ ಪಾಲಿಗೆ ಹಗ್ಗದ ಮೇಲಿನ ನಡಿಗೆಯೇ ಆಗಿರುತ್ತದೆ. ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸುವ ಕಡೆ ಅವರು ವಿಶೇಷ ನಿಗಾವಹಿಸುವರೇ ಎಂಬುದು ಕುತೂಹಲದ ಕೇಂದ್ರಬಿಂದುವಾಗಿದೆ. ಹಿಂದಿನ ವರ್ಷ ಕೋವಿಡ್​ನಿಂದ ತೆರಿಗೆ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿತ್ತು. ಆದರೆ ಈ ವರ್ಷ ತೆರಿಗೆ ಸಂಗ್ರಹಣೆ ಉತ್ತಮ ಸ್ಥಿತಿಯಲ್ಲಿಯೇ ಇದೆ. ಆದರೆ ಬದ್ಧವೆಚ್ಚಗಳ ಹೊರೆ ಜಾಸ್ತಿಯಾಗಿದೆ.
ಸಾಲದ ಪ್ರಮಾಣ ಏರಿಕೆ:ಹಿಂದಿನ ಸಾಲಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಆದಾಯ ಶೇ.11 ಕಡಿಮೆಯಾಗಿದೆ. ಆದರೆ ಸಾಲದ ಪ್ರಮಾಣ ಶೇ.33 ಹೆಚ್ಚಳವಾಗಿದೆ. 2022-23ನೇ ಸಾಲಿಗೆ ಬಜೆಟ್ ಗಾತ್ರ 2.50 ಲಕ್ಷ ಕೋಟಿ ರೂ. ದಾಟಿದರೆ 75 ಸಾವಿರ ಕೋಟಿ ರೂ.ಗಳನ್ನು ಆ ವರ್ಷದಲ್ಲಿ ಹೊಸದಾಗಿ ಸಾಲ ಮಾಡಲು ಅವಕಾಶವಾಗುತ್ತದೆ. ಆಗ ರಾಜ್ಯದ ವೆಚ್ಚ ಭರಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಜಿಎಸ್​ಟಿ ಪರಿಹಾರದ ಕತೆ ಏನು?:2017ರಲ್ಲಿ ಜಿಎಸ್​ಟಿ ಜಾರಿಯಾದ ಬಳಿಕ ನಂತರ ಐದು ವರ್ಷಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವುದಾಗಿ ಹೇಳಿತ್ತು. ಅದರ ಪ್ರಕಾರ 2022ಕ್ಕೆ ಪರಿಹಾರ ನಿಲ್ಲುತ್ತದೆ. ಈ ಸಾಲಿಗೆ 22,840 ಕೋಟಿ ರೂ. ಸಿಗಬಹುದೆಂದು ಅಂದಾಜು ಮಾಡಲಾಗಿತ್ತು. ಇನ್ನೂ ಹಳೆಯ ಬಾಕಿ 9 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬರಬೇಕಾಗಿದೆ. ಪರಿಹಾರ ನಿಂತರೆ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆಗ ಸರ್ಕಾರ ವೆಚ್ಚಗಳಿಗೆ ಸಾಲ ಹೊರತು ಬೇರೆ ದಾರಿಯೇ ಇರುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರದಿಂದ ತೆರಿಗೆಯ ಪಾಲು ಹಾಗೂ ಸಹಾಯಧನ ಕಡಿಮೆಯಾಗುತ್ತಲೇ ಇವೆ. ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲಗಳಿಂದ ವೆಚ್ಚ ಭರಿಸುವುದಕ್ಕೆ ಕಷ್ಟ ಪಡಬೇಕಾಗುತ್ತದೆ.
ಬಂಡವಾಳ ವೆಚ್ಚಕ್ಕೆ ಇಲ್ಲ ಹಣ:ರಾಜ್ಯದಲ್ಲಿ ಆಸ್ತಿ ಸೃಷ್ಟಿಸುವಂತಹ ಬಂಡವಾಳ ವೆಚ್ಚಕ್ಕೆ ಮಾಡುತ್ತಿರುವ ಖರ್ಚು ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿಲ್ಲ. ಈ ಸಾಲಿನಲ್ಲಿ 44,237 ಕೋಟಿ ರೂ. ವೆಚ್ಚ ಮಾಡುವ ಅಂದಾಜು ಮಾಡಲಾಗಿತ್ತು. ಆದರೆ ಡಿಸೆಂಬರ್ ಅಂತ್ಯದ ತನಕ ಆಗಿರುವ ವೆಚ್ಚ 22,793 ಕೋಟಿ ರೂ. ಮಾತ್ರ. ಅಂದರೆ ಶೇ.51.5. ಇದರಿಂದ ರಾಜ್ಯದಲ್ಲಿ ಆಸ್ತಿ ಸೃಜನೆ, ಅಭಿವೃದ್ಧಿ ಕಾರ್ಯಗಳು ಯಾವ ರೀತಿಯಲ್ಲಿ ಆಗಿರಬಹುದೆಂದು ತಿಳಿಯುತ್ತದೆ.
ನಿರೀಕ್ಷಿತ ತೆರಿಗೆ ಸಂಗ್ರಹಣೆ:ಪ್ರಸಕ್ತ ಸಾಲಿನಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಕೊರತೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಬೆಲೆ ಹೆಚ್ಚಳದಿಂದ ತೆರಿಗೆ ಸಂಗ್ರಹ ನಿರೀಕ್ಷೆಯ ದಡ ಮುಟ್ಟುತ್ತದೆ. ಸ್ವಂತ ತೆರಿಗೆಗಳು 1,11,494 ಕೋಟಿ ರೂ. ಸಂಗ್ರಹಿಸುವ ಗುರಿ ಇದ್ದು ಡಿಸೆಂಬರ್ ಅಂತ್ಯದ ತನಕ 85,501 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಶೇ.76.69 ಸಾಧನೆಯಾಗಿದೆ. ಅದರಲ್ಲೂ ತೆರಿಗೆಯೇತರ ಆದಾಯದಲ್ಲಿ ಶೇ.94.78 ಗುರಿ ಮುಟ್ಟಲಾಗಿದೆ.
ಹಿಗ್ಗಲಿದೆ ಬಜೆಟ್ ಗಾತ್ರ:ಈಗಿರುವ ರಾಜ್ಯದ ಬಜೆಟ್ ಗಾತ್ರವನ್ನು 2,46,207 ಕೋಟಿ ರೂ.ಗಳಿಂದ 2.50 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮಾಡುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿವೆ. ಬಜೆಟ್ ಗಾತ್ರ ಹಿಗ್ಗಿದಲ್ಲಿ ಸಾಲ ಪಡೆಯುವ ಪ್ರಮಾಣ ಹೆಚ್ಚಿಸಲು ಅವಕಾಶವಿದೆ ಎಂದು ಮೂಲಗಳು ಹೇಳುತ್ತವೆ.

5 ಲಕ್ಷ ಕೋಟಿ ಮೀರಲಿದೆ:ಈ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 4,57,899 ಕೋಟಿ ರೂ.ಗಳಾಗುತ್ತದೆ. ಬಜೆಟ್ ಗಾತ್ರ ಹೆಚ್ಚಳದಿಂದ ಸಾಲದ ಪ್ರಮಾಣ ಹಿಗ್ಗಿದರೆ ಮುಂದಿನ ವರ್ಷ ಸಾಲ 5 ಲಕ್ಷ ಕೋಟಿ ರೂ.ಗಳನ್ನು ಮೀರುತ್ತದೆ ಎಂದು ಅಂದಾಜು ಮಾಡಲಾಗಿದೆ.
ಅಸಲು, ಬಡ್ಡಿ ಪಾವತಿ ಎಷ್ಟು?:ಪ್ರಸಕ್ತ ಸಾಲಿನಲ್ಲಿ ಅಸಲು ಹಾಗೂ ಬಡ್ಡಿ ಪಾವತಿಗಾಗಿ ಸರ್ಕಾರ 41,726 ಕೋಟಿ ರೂ. ವೆಚ್ಚ ಮಾಡಿದೆ. ಮುಂದಿನ ವರ್ಷಗಳಲ್ಲಿ ಈ ಮೊತ್ತ ಇನ್ನಷ್ಟು ಹೆಚ್ಚಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
