ಬೆಂಗಳೂರು:ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರದ ಅವಧಿಯುದ್ದಕ್ಕೂ ಮುಜುಗರ ಉಂಟುಮಾಡಿ, ಪದಚ್ಯುತಿ ಕಸರತ್ತು ನಡೆಸಿದವರಿಗೆ ‘ಋಣ ಸಂದಾಯ’ ಮಾಡಲು ಈಗ ವರಿಷ್ಠರು ಸಿದ್ಧತೆ ನಡೆಸಿದ್ದಾರೆ. ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಸಚಿವ ಸಂಪುಟದಲ್ಲಿ ಗಮನಾರ್ಹ ಬದಲಾವಣೆಗೆ ವೇದಿಕೆ ಸಜ್ಜಾಗುತ್ತಿದೆ. ಬಿಜೆಪಿಯ ಕೇಂದ್ರ ನಾಯಕರು ಪಟ್ಟಿಯನ್ನೂ ತಯಾರಿಸಿಕೊಂಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್​ಗೆ ಉಪ ಮುಖ್ಯಮಂತ್ರಿ ಪಟ್ಟ ಕಟ್ಟಿ, ಸಿ.ಪಿ.ಯೋಗೇಶ್ವರ್​ಗೆ ಮತ್ತೆ ಮಂತ್ರಿ ಭಾಗ್ಯ ಕರುಣಿಸಲು ಪ್ರಭಾವಿ ನಾಯಕರು ಕಸರತ್ತು ತೀವ್ರಗೊಳಿಸಿದ್ದಾರೆ. ಸಿಎಂ ಪದವಿಗೆ ಬಿಎಸ್​ವೈ ರಾಜೀನಾಮೆ ಕೊಟ್ಟು ಹೋಗುವಂತಹ ಪರಿಸ್ಥಿತಿ ಸೃಷ್ಟಿಸಿದವರಿಗೆ ಭಕ್ಷೀಸು ನೀಡುತ್ತಿರುವುದನ್ನು ಮರೆಮಾಚಲು ಬೇರೊಂದು ತಂತ್ರಗಾರಿಕೆ ರೂಪಿಸಲಾಗಿದೆ. ಕಟ್ಟರ್ ಹಿಂದುತ್ವವಾದಿ, ಪ್ರಖರ ಮಾತುಗಾರನೆಂದು ಯತ್ನಾಳ್​ಗೆ ಮಣೆ, ದಕ್ಷಿಣ ಮೈಸೂರಿನಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗಾಗಿ ಸಿಪಿವೈಗೆ ಆದ್ಯತೆ ಎಂದು ಹೇಳಿಕೊಳ್ಳುವ ಯೋಜನೆ ತಯಾರಿಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ ರಾಜ್ಯದತ್ತ ವರಿಷ್ಠರ ಚಿತ್ತಹರಿದಿದ್ದು, ಆಂತರಿಕವಾಗಿ ಕ್ಷಿಪ್ರ ಬೆಳವಣಿಗೆಗಳಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಮಗು ಚಿವುಟಿ, ತೊಟ್ಟಿಲು ತೂಗಿದರು:ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆರೆದ ಬಿಎಸ್​ವೈ ವಿಷಯದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ‘ಮಗುವನ್ನೂ ಚಿವುಟಿ ತೊಟ್ಟಿಲು ತೂಗುವ’ ಆಟ ಆಡಿಕೊಂಡು ಬಂದಿದ್ದಾರೆ. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಲೂ ಅದೇ ವರಸೆ ಮುಂದುವರಿಸಿ, ಸ್ವರೂಪ ಬದಲಿಸಿದರು. ಸ್ಥಳೀಯ ನಾಯಕರು ಬಲಿಷ್ಠರಾಗುವುದು ದೆಹಲಿ ನಾಯಕರಿಗೆ ಬೇಕಾಗಿಲ್ಲ. ಈಗ ಪ್ರಬಲ ವೀರಶೈವ- ಲಿಂಗಾಯತ ಸಮುದಾಯದ ಕೆಂಗಣ್ಣಿನಿಂದ ಪಾರಾಗುವ ತಂತ್ರಗಾರಿಕೆ ಹೆಣೆದಿದ್ದು, ಚುನಾವಣೆ ಇನ್ನೂ ಒಂದು ವರ್ಷವಿರುವಾಗ ‘ಹೊಸತನ’ದ ದಾಳ ಉರುಳಿಸಿದ್ದಾರೆ. ಬಿಎಸ್​ವೈಗೆ ಯಾವ ಶ್ರೇಯಸ್ಸು ದಕ್ಕದಂತೆ ನೋಡಿಕೊಳ್ಳುವ ಬೆಳವಣಿಗೆಗಳಾಗುತ್ತಿವೆ ಎಂದು ಮೂಲಗಳು ಹೇಳಿವೆ.
ಸದ್ಯದಲ್ಲೇ ರಾಜಕೀಯ ರಹಸ್ಯ ಬಹಿರಂಗ:ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸಚಿವ ಸಂಪುಟಕ್ಕೆ ಬದಲಾವಣೆ ಸ್ಪರ್ಶ ನೀಡಲು ವರಿಷ್ಠರು ಮುಂದಾಗಿದ್ದಾರೆ. ಸದ್ಯದ ಲೆಕ್ಕಾಚಾರದಂತೆ ಎಲ್ಲವೂ ನಡೆದರೆ ಬಿಎಸ್​ವೈ ವಿರುದ್ಧ ಸಂಚು ನಡೆಸಿದವರನ್ನು ರಕ್ಷಣೆ ಮಾಡಿದವರು ಯಾರು ಎಂಬ ಗುಟ್ಟು ರಟ್ಟಾಗಲಿದೆ. ಅಂದಿನ ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆ, ಆರೋಪಗಳ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಇರುಸುಮುರಿಸು ಉಂಟು ಮಾಡಿದರೂ ಪಕ್ಷದ ನಾಯಕರು ಅಸಹಾಯಕರಂತೆ ಕೈಕಟ್ಟಿ ಕುಳಿತಿದ್ದೇಕೆ? ಎನ್ನುವುದು ಶೀಘ್ರವೇ ಬಹಿರಂಗವಾಗಲಿದೆ. ಯತ್ನಾಳ್​ಗೆ ನೋಟಿಸ್ ನೀಡಿ ಸಮಜಾಯಿಷಿ ಪಡೆದರೆ, ಸಿಪಿವೈಗೆ ಮೌಖಿಕ ಎಚ್ಚರಿಕೆ ಮಾತ್ರ ನೀಡಲಾಯಿತು. ಜಾಲತಾಣದಲ್ಲಿ ಆಕ್ಷೇಪಾರ್ಹ ಸಂದೇಶ ಹರಿಬಿಟ್ಟಿದ್ದ ವಿ. ಸುನಿಲ್​ಕುಮಾರ್​ಗೆ ‘ಕಿವಿಮಾತು’ ಹೇಳಿದ ಬಳಿಕ ಸಚಿವ ಪದವಿ ಕಲ್ಪಿಸಲಾಯಿತು. ಈ ಬೆಳವಣಿಗೆ ಜಾಡು ಹಿಡಿದು ಹೊರಟರೆ ವರಿಷ್ಠರ ಮನದಲ್ಲೇನಿದೆ? ರಾಜ್ಯ ನಾಯಕರ ಕೈಯಲ್ಲಿ ಆಡಳಿತದ ಚುಕ್ಕಾಣಿಯಿದ್ದರೂ ತೆರೆಮರೆಯ ಸೂತ್ರದಾರರು ಯಾರೆಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬದಲಾದ ನಿಲುವು:ಬಿಎಸ್​ವೈ ಅಧಿಕಾರದಿಂದ ಕೆಳಗಿಳಿದ ಆರಂಭಿಕ ದಿನಗಳು ಹಾಗೂ ಪಂಚರಾಜ್ಯ ಚುನಾವಣೆಗೆ ಮುನ್ನ ಬಿಎಸ್​ವೈ ಮನಸ್ಸಿಗೆ ನೋವುಂಟು ಮಾಡುವ ಯಾವುದೇ ನಿರ್ಣಯ ತೆಗೆದುಕೊಳ್ಳಬಾರದು ಎಂದು ವರಿಷ್ಠರು ಫರ್ವನು ಹೊರಡಿಸಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ಬಿಎಸ್​ವೈ ನಾಯಕತ್ವದ ಖದರ್ ಬದಲಾವಣೆ ಅಸಾಧ್ಯ. ಜನಸಮೂಹವನ್ನು ಸೆಳೆಯಬಲ್ಲ ನಾಯಕನೆಂಬ ಕಾರಣಕ್ಕೆ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಚಿಂತನೆ ನಡೆಸಿದ್ದರು. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸುತ್ತಿದ್ದಂತೆ ಕರ್ನಾಟಕಕ್ಕೆ ಸಂಬಂಧಿಸಿ ಮೂಲ ‘ಕಾರ್ಯಸೂಚಿ’ಯನ್ನು ಜಾರಿಗೆ ತರುವ ಉತ್ಸಾಹದಲ್ಲಿದ್ದಾರೆ. ಪ್ರದೇಶ, ಜಿಲ್ಲೆ, ಜಾತಿ-ವರ್ಗ, ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯದ ನೆಪದಲ್ಲಿ ಬಿಎಸ್​ವೈ ಅವರ ಪ್ರಾಮುಖ್ಯತೆ ತಗ್ಗಿಸಿ, ‘ಚುನಾವಣಾ ಸಂಪುಟ’ ರಚಿಸಲು ಸನ್ನದ್ಧ ರಾಗಿದ್ದಾರೆ. ಒಟ್ಟಾರೆ ಪಕ್ಷದ, ಅಧಿಕಾರದ ಜುಟ್ಟು ತಮ್ಮ ಕೈಯಲ್ಲೇ ಇರಬೇಕು. ಸ್ವಂತಿಕೆ, ನಾಯಕತ್ವದ ಛಾಪು ಏನಿದ್ದರೂ ರಾಷ್ಟ್ರಮಟ್ಟದ ನಾಯಕರಿಗೆ ಸೀಮಿತವೆಂಬ ಸಂದೇಶ ಸಾರುವುದು ಈ ಬೆಳವಣಿಗೆಯ ಮೂಲ ಉದ್ದೇಶವೆಂದು ಹೇಳಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nineteen =
Remember me
