|ರಾಘವ ಶರ್ಮ ನಿಡ್ಲೆನವದೆಹಲಿ
ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ಬಿಜೆಪಿಯ ಪ್ರಮುಖ ಶಾಸಕರು, ಮಾಜಿ ಸಚಿವರನೇಕರಿಂದ ತೆರೆಮರೆಯಲ್ಲಿ ತೀವ್ರ ಲಾಬಿ ಶುರುವಾಗಿದೆ. ಈ ಮಧ್ಯೆ, ಸಿಡಿ ಭಯ ಹಾಗೂ ಮತ್ತಿತರ ನೆಪಗಳನ್ನೊಡ್ಡಿ ಮಾಧ್ಯಮ ವರದಿಗೆ ಕೋರ್ಟ್​ಗಳಿಂದ ತಡೆಯಾಜ್ಞೆ ತಂದಿರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕೇ, ಬೇಡವೇ ಎಂಬ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಬೇರೆ ಪಕ್ಷದಿಂದ ಬಂದು ಬಿಜೆಪಿ ಸೇರಿ ಮಂತ್ರಿಗಳಾಗಿದ್ದ ಶಾಸಕರಲ್ಲಿ ಢವಢವ ಶುರುವಾಗಿದ್ದು, ಮಂತ್ರಿ ಸ್ಥಾನ ಕೈತಪ್ಪುವ ಭೀತಿ ಕಾಡತೊಡಗಿದೆ. ಶಂಕಿತ ಸೆಕ್ಸ್ ಸಿಡಿ ಹಗರಣದಲ್ಲಿ ಸಿಲುಕಿಕೊಂಡಿದ್ದ ರಮೇಶ್ ಜಾರಕಿಹೊಳಿ, ಅದೇ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣ ಇಡೀ ಬಿಜೆಪಿಯನ್ನು ತಲೆತಗ್ಗಿಸುವಂತೆ ಮಾಡಿತ್ತು. ಈ ಘಟನೆ ಬೆನ್ನಲ್ಲೇ ಯಡಿಯೂರಪ್ಪ ಸಂಪುಟದಲ್ಲಿದ್ದ 6 ಸಚಿವರು ಸಿಡಿ ಭಯದಿಂದಾಗಿ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರವಾಗಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದು ವ್ಯಾಪಕ ಸಾರ್ವಜನಿಕ ಚರ್ಚೆ, ಅನುಮಾನಗಳಿಗೂ ಗ್ರಾಸವಾಗಿತ್ತು. ಕೋರ್ಟ್ ತಡೆಯಾಜ್ಞೆ ತರುವ ಉದ್ದೇಶವಾದರೂ ಏನೆಂಬುದು ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿತ್ತು. ಈ ಕಾರಣಕ್ಕಾಗಿಯೇ, ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಮತ್ತು ಪಕ್ಷನಿಷ್ಠರಿಗೂ ಮನ್ನಣೆ ಕೊಡಬೇಕೆಂಬ ಸಲಹೆಯನ್ನು ಆರ್​ಎಸ್​ಎಸ್ ಮುಖಂಡರು ನೀಡಿದ್ದಾರೆ. ಹಾಗಿದ್ದರೂ, ಕೋರ್ಟ್ ಪ್ರತಿಬಂಧಕಾಜ್ಞೆ ತಂದಿರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಆಗುವ ಸಮಸ್ಯೆ- ನಷ್ಟಗಳ ಬಗ್ಗೆಯೂ ಪಕ್ಷದಲ್ಲಿ ಗಂಭೀರ ಸಮಾಲೋಚನೆ ನಡೆದಿದೆ. ಹೀಗಾಗಿ ವರಿಷ್ಠರು ರಾಜ್ಯ ಮುಖಂಡರ ಆಭಿಪ್ರಾಯಗಳನ್ನೂ ಪರಿಗಣಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.
ಸೆಕ್ಸ್ ಸಿಡಿ ಹಗರಣ, ಕೋವಿಡ್ ನಿರ್ವಹಣೆ ವೈಫಲ್ಯ ಹಾಗೂ ನಾಯಕತ್ವ ಬದಲಾವಣೆ ವಿಚಾರಗಳು ಕಾರ್ಯಕರ್ತ ಹಾಗೂ ಜನಸಾಮಾನ್ಯರ ಮಟ್ಟದಲ್ಲಿ ಒಳ್ಳೆಯ ಸಂದೇಶ ರವಾನೆ ಮಾಡಿಲ್ಲ. ಹೀಗಾಗಿ, ಬೊಮ್ಮಾಯಿ ಸಂಪುಟದಲ್ಲಿ ಕ್ಲೀನ್ ಇಮೇಜ್ ಹಾಗೂ ವರ್ಚಸ್ಸಿಗೂ ಮಹತ್ವ ನೀಡಬೇಕು ಎಂದು ಕೆಲ ಹಿರಿಯ ಮುಖಂಡರು ಭಾವಿಸಿದ್ದಾರೆ. ಈ ಕುರಿತು ಬೊಮ್ಮಾಯಿ ಜತೆಗೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ. ಸಿಡಿಗೆ ಸಂಬಂಧಿಸಿ ರಮೇಶ್ ಜಾರಕಿಹೊಳಿ, 6 ಸಚಿವರು ಮತ್ತು ಬಿಜೆಪಿ ಮೂಲದ ಓರ್ವ ಸಚಿವ ಸೇರಿ ಒಟ್ಟು 8 ಮಂದಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿ ಮೂಲದ ಸಚಿವರು ತಾನು ಸಿಡಿಗೆ ಸಂಬಂಧಿಸಿ ತಡೆಯಾಜ್ಞೆ ತಂದಿದ್ದಲ್ಲ ಎಂದು ಹೇಳಿಕೊಂಡಿದ್ದಾರೆ. ಕರೊನಾ ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿ ಬೆಂಗಳೂರು ಮೂಲದ ಬಿಜೆಪಿ ಶಾಸಕರೊಬ್ಬರು 2 ದಿನಗಳ ಹಿಂದೆ ಸ್ಥಳೀಯ ನ್ಯಾಯಾಲಯದಿಂದ ಪ್ರತಿಬಂಧಕಾದೇಶ ತಂದಿದ್ದಾರೆ.
ಕೇಂದ್ರ ಸಚಿವ ಸಂಪುಟ ಪುನಾರಚನೆಗೆ 2 ದಿನಕ್ಕೆ ಮುನ್ನ ಡಿ.ವಿ.ಸದಾನಂದ ಗೌಡ ಕೋರ್ಟ್ ಮೂಲಕ ತಡೆಯಾಜ್ಞೆ ಹೊರಡಿಸಿದ್ದರು. ಕಾಕತಾಳೀಯವೇನೋ ಎಂಬಂತೆ, ಸಂಪುಟ ಪುನಾರಚನೆ ವೇಳೆ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಸಿಡಿ ಭಯವಿರುವ ಸಚಿವ, ಶಾಸಕರಿಗೆ ಮಂತ್ರಿ ಸ್ಥಾನ ನೀಡದಿರಲು ತೀರ್ವನವೇನೂ ಆಗಿಲ್ಲ. ಆದರೆ ಇಂಥದ್ದೊಂದು ಚರ್ಚೆ ನಡೆದಿರುವುದು ನಿಜ. ಅವರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಸುಮ್ಮನೆ ಕೂರುತ್ತಾರಾ ಎಂಬ ಪ್ರಶ್ನೆಯೂ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಲಾಬಿಗಾಗಿ ದೆಹಲಿಗೆ:ಮಂತ್ರಿಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಲು ಬಿಜೆಪಿಯ ಹಲವು ಶಾಸಕರು ದೆಹಲಿಗೆ ಬಂದಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕರಾದ ಉಮೇಶ್ ಕತ್ತಿ, ಆರ್.ಅಶೋಕ್, ಮುನಿರತ್ನ, ಸಿ.ಪಿ.ಯೋಗೇಶ್ವರ್, ಅರವಿಂದ ಬೆಲ್ಲದ, ತೇಜಸ್ವಿನಿ ಗೌಡ, ಎಂ.ಪಿ.ಕುಮಾರಸ್ವಾಮಿ ಈಗಾಗಲೆ ರಾಷ್ಟ್ರ ರಾಜಧಾನಿಯಲ್ಲಿದ್ದಾರೆ. ಸಂಪುಟದಲ್ಲಿ ಆಮೂಲಾಗ್ರ ಬದಲಾವಣೆಗೆ ವರಿಷ್ಠರು, ಆರ್​ಎಸ್​ಎಸ್ ಮನಸ್ಸು ಮಾಡಿದ್ದು, ಅನ್ಯ ಪಕ್ಷಗಳಿಂದ ಬಂದು ಸಚಿವರಾದ ಕೆಲವರು ಹಾಗೂ ಬಿಜೆಪಿಯ ಕೆಲ ಹಿರಿಯ ಸಚಿವರಿಗೆ ಈ ಬಾರಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಸಂಪುಟ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರು 5 ಮಾನದಂಡ ರೂಪಿಸಿಕೊಂಡಿದ್ದಾರೆ. ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವುದು, ಬಿಎಸ್​ವೈ ಸಂಪುಟದಲ್ಲಿದ್ದ ಸಚಿವರಾಗಿದ್ದವರ ಪುನರಾಯ್ಕೆಗೂ ಈ ಮಾನದಂಡ ಅನ್ವಯ.
ಬೆಂಗಳೂರು:ವರಿಷ್ಠರು ಭೇಟಿಗೆ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ದೆಹಲಿಗೆ ತೆರಳುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, 8.55ಕ್ಕೆ ತಲುಪುವರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡುವರು. ಚಾಣಕ್ಯಪುರಿಯಲ್ಲಿರುವ ಹೋಟೆಲ್ ಅಶೋಕದಲ್ಲಿ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರ ಸಭೆ ನಡೆಸಲಿದ್ದು, ಕರ್ನಾಟಕ ಭವನದಲ್ಲಿ ತಂಗಲಿದ್ದಾರೆ. ಶನಿವಾರ ಮುಕ್ತವಾಗಿರಿಸಿಕೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಕೆಲವು ಹಿರಿಯ ನಾಯಕರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಕುರಿತು ರ್ಚಚಿಸುವ ಸಾಧ್ಯತೆಗಳಿವೆ.
ಡಿಸಿಎಂ ಸ್ಥಾನ ಘೋಷಿಸಿಲ್ಲವೆಂದು ಮುನಿಸಿಕೊಂಡು ಬಳ್ಳಾರಿಗೆ ಬಂದಿಲ್ಲ. ಪೂರ್ವನಿಯೋಜಿತವಾಗಿ ಮನೆಯಲ್ಲಿ ವಿಶೇಷ ಪೂಜೆ ಆಯೋಜಿಸಿದ್ದರಿಂದ ಕುಟುಂಬದವರ ಜತೆ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ಬಂದಿದ್ದೇನೆ. ನನಗೆ ಪಕ್ಷ ಮುಖ್ಯವೇ ವಿನಾ ಅಧಿಕಾರ, ಅಂತಸ್ತಲ್ಲ. ಈವರೆಗೆ ಪಕ್ಷವು ನನ್ನನ್ನು ಗೌರವದಿಂದ ಕಂಡಿದೆ. ಈಗಲೂ ನನಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ. ಹಾಗಾಗಿ ಡಿಸಿಎಂ ಸ್ಥಾನಕ್ಕಾಗಿ ಲಾಭಿ ಮಾಡಲು ಹೋಗಲ್ಲ.
|ಬಿ.ಶ್ರೀರಾಮುಲುಮಾಜಿ ಸಚಿವ
ಬಸವರಾಜ ಬೊಮ್ಮಾಯಿ ನನ್ನನ್ನು ಕೈಬಿಡೋದಿಲ್ಲ ಎಂದುಕೊಂಡಿದ್ದೇನೆ. ಮಂತ್ರಿಯಾಗುತ್ತೇನೆ ಎಂಬ ವಿಶ್ವಾಸವಿದೆ. ಸ್ಥಾನ ಸಿಗದಿದ್ದರೆ ಇನ್ನೂ 15 ವರ್ಷಗಳ ಕಾಲ ರಾಜಕಾರಣ ಮಾಡುತ್ತೇನೆ. ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ.
|ಉಮೇಶ್ ಕತ್ತಿಮಾಜಿ ಸಚಿವ
ಬಸವರಾಜ ಬೊಮ್ಮಾಯಿ ಸಂಪುಟ ರಚನೆ ಕಸರತ್ತು ತೀವ್ರಗೊಂಡಿದೆ. ಸಚಿವಾಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಮುಖ್ಯಮಂತ್ರಿ ಹಾಗೂ ನಿರ್ಗಮಿತ ಸಿಎಂ ಮೇಲೆ ಒತ್ತಡ ಹೆಚ್ಚಿಸಲು ತೊಡಗಿದ್ದಾರೆ. ಬೆಳಗ್ಗೆಯಿಂದ ತಡರಾತ್ರಿವರೆಗೆ ಆಕಾಂಕ್ಷಿಗಳ ದಂಡು ಯಡಿಯೂರಪ್ಪ ಮನೆಗೆ ಪ್ರದಕ್ಷಿಣೆ ಹಾಕುತ್ತಲೂ ಇದೆ. ವರಿಷ್ಠರನ್ನು ಕಾಣಲು ಕೆಲವರು ದೆಹಲಿಗೂ ಹೋಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಬಿಎಸ್​ವೈ ಸಂಪುಟದಲ್ಲಿ ಸಚಿವರಾಗಿದ್ದವರನ್ನು ಹೊರತುಪಡಿಸಿದಂತೆ ಪಕ್ಷದ ಮುಂದೆ 30ಕ್ಕಿಂತ ಹೆಚ್ಚು ಹೊಸ ಹೆಸರು ಪ್ರಸ್ತಾಪವಾಗಿದೆ. ಅದರಲ್ಲಿ ಕೆಲವರು ಸಚಿವ ಸ್ಥಾನದ ಆಕಾಂಕ್ಷೆಯನ್ನು ಹೊರಗೆಡಹದೆ ಇದ್ದರೂ, ಅವರ ಪಕ್ಷನಿಷ್ಠೆ ಮತ್ತು ಜನತಾ ಸೇವೆಗಾಗಿ ಸಚಿವಗಿರಿ ಹುಡುಕಿಕೊಂಡು ಬರುವ ಸಾಧ್ಯತೆ ದಟ್ಟವಾಗಿದೆ.
ಡಾರ್ಕ್ ಹಾರ್ಸ್?:ಶಾಸಕರಾದ ಸುನೀಲ್​ಕುಮಾರ್, ಪಿ.ರಾಜೀವ್, ವೀರಣ್ಣ ಚರಂತಿಮಠ, ಹಾಲಪ್ಪ ಆಚಾರ್, ರೂಪಾಲಿ ಸಂತೋಷ್ ನಾಯಕ್, ಕರುಣಾಕರ ರೆಡ್ಡಿ, ಬಿ.ಸಿ.ನಾಗೇಶ್, ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಸೋಮಶೇಖರ ರೆಡ್ಡಿ, ಕುಮಾರ್ ಬಂಗಾರಪ್ಪ, ಅರವಿಂದ ಬೆಲ್ಲದ್, ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಹೆಸರು ಡಾರ್ಕ್​ಹಾರ್ಸ್​ಎಂದು ಗುರುತಿಸಲಾದ ಪಟ್ಟಿಯಲ್ಲಿ ಸೇರಬಹುದಾದವು ಎಂಬ ಮಾತು ಬಿಜೆಪಿ ಪಾಳಯದಲ್ಲಿದೆ. ಇನ್ನು ಆಕಾಂಕ್ಷಿಗಳ ಪೈಕಿ ಪ್ರಭಾವಿಗಳೂ ಇದ್ದಾರೆ. ವಿವಿಧ ಮಾನದಂಡದಲ್ಲಿ ಸಚಿವರಾಗಲು ಅರ್ಹತೆ ಹೊಂದಿದ್ದು, ಪ್ರಯತ್ನ ತೀವ್ರಗೊಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
