ಬೆಂಗಳೂರು:ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬೆವರಿಳಿಸಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ. ಆ ಮೂಲಕ ಮತ್ತೆ ಅಧಿಕಾರ ಸುಲಭದ ತುತ್ತಲ್ಲವೆಂದು ಸೂಚ್ಯ ಸಂದೇಶ ನೀಡಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಸಂವಾದದ ಜತೆಗೆ ಸಮಾರೋಪ ಭಾಷಣ ಮಾಡಿದ ಅವರು, ಚುನಾವಣಾ ಯುದ್ಧದಲ್ಲಿ ಗೆಲ್ಲಲು ಕಠಿಣ ಪರಿಶ್ರಮಕ್ಕೆ ಸನ್ನದ್ಧರಾಗಿ ಎಂದು ಕಾರ್ಯಕರ್ತರಿಗೆ ಟಾಸ್ಕ್ ಗೊತ್ತುಪಡಿಸಿದರು.
ಕೇಂದ್ರ, ರಾಜ್ಯದ ಅಧಿಕಾರ ಪಕ್ಷದ ಕೈಯ್ಯಲ್ಲಿದೆ. ಅಭಿವೃದ್ಧಿಯ ವ್ಯಾಖ್ಯಾನವನ್ನೇ ಬದಲಾಯಿಸಿ, ಜನರ ಜೀವನಮಟ್ಟ ಸುಧಾರಣೆಗೆ ಒತ್ತು ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳು, ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಆದರೂ ಜನರೊಂದಿಗೆ ನಿರಂತರ ಒಡನಾಟ ಮರೆತಿದ್ದೇವೆ. ಪ್ರೀತಿ, ವಿಶ್ವಾಸದ ಸಂಪರ್ಕ, ಅವರ ಅಭಿಪ್ರಾಯಗಳಿಗೆ ಕಿವಿಗೊಡುವುದು ಹಾಗೂ ತ್ವರಿತ ಸ್ಪಂದನೆಯನ್ನು ಕಡಿಮೆ ಮಾಡಿದ್ದೇವೆ. ಇದರಿಂದಾಗಿ ಈ ಬಾರಿ ಚುನಾವಣೆಯಲ್ಲಿ ನಿಚ್ಚಳ ಬಹುಮತ ಸಾಧಿಸಲು ಎಲ್ಲರೂ ಕಷ್ಟಪಡಬೇಕಾಗಿದೆ ಎಂದು ಸಂತೋಷ್ ಸೂಕ್ಷ್ಮವಾಗಿ ಕಿವಿಹಿಂಡಿದರು ಎಂದು ಮೂಲಗಳು ತಿಳಿಸಿವೆ.
ಭಯಬೀಳಿಸಬೇಡಿ:ಬೂತ್​ವುಟ್ಟದಲ್ಲಿ ಸಮಿತಿಗಳು ಸಕ್ರಿಯವಾಗಿದ್ದು, ಸಂಘಟನೆಯಲ್ಲಿ ಹೊಸ ರಕ್ತಹರಿದುಬಂದು ಒಳ್ಳೆಯ ಜೋಶ್ ತುಂಬಿರುವುದು ಸಂತಸದ ಸಂಗತಿ. ಆದರೆ, ಜನರ ಮನೆ ಬಾಗಿಲಿಗೆ ಹೋದಾಗ ‘ಭಾರತ್ ಮಾತಾಕೀ ಜೈ’ ಎಂದು ಉತ್ಕಂಟದಲ್ಲಿ ಘೋಷಿಸಿ ಭಯಬೀಳಿಸಬೇಡಿ ಎಂಬ ಸಲಹೆ ನೀಡಿದ್ದಾರೆ. ಉತ್ಸಾಹ ಹೆಚ್ಚಿರಲಿ, ಜತೆಗೆ ಸಾವಧಾನವೂ ಇರಲಿ. ಸರ್ಕಾರದ ಸಾಧನೆಗಳನ್ನು ಹೊತ್ತುಕೊಂಡು ಮನೆ ಬಾಗಿಲಿಗೆ ಮೊದಲು ಜನರು ಮಾತುಗಳನ್ನು ಕೇಳಿಸಿಕೊಳ್ಳಿರಿ. ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳು, ಕೇಂದ್ರದ ಕೊಡುಗೆಗಳನ್ನು ವಿವರಿಸಿ, ಅನುನಯದಿಂದ ಪಕ್ಷದ ಮತಗಳಾಗಿ ಪರಿವರ್ತಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಯೋಜನೆಗಳ ಫಲಾನುಭವಿಗಳು ತಕ್ಷಣ ಸ್ಪಂದಿಸುವರು. ಪಕ್ಷದ ಪರ ಒಲವಿರುವವರ ಮನವೊಲಿಕೆ ಸುಲಭ. ಆದರೆ ಏನೆಲ್ಲ ಮನವರಿಕೆ ಮಾಡಿಕೊಟ್ಟರೂ ಒಪ್ಪದವರ ಜತೆ ದ್ವೇಷ ಸಾಧಿಸುವ ಅಗತ್ಯವಿಲ್ಲ. ಇದೊಂದೇ ಚುನಾವಣೆ ಕೊನೆಯದಲ್ಲ, ಒಪ್ಪದವರಿಗೆ ನಿರ್ಧಾರ ನಿಮ್ಮ ವಿವೇಚನೆಗೆ ಬಿಟ್ಟದ್ದು ಸ್ನೇಹ, ವಿಶ್ವಾಸವಿರಲಿ ಎಂದು ಪ್ರೀತಿಯಿಂದಲೇ ಹೇಳಿಬರಬೇಕು ಎಂದು ಬಿ.ಎಲ್.ಸಂತೋಷ್ ಮಾಗೋಪಾಯ ಹೇಳಿಕೊಟ್ಟಿದ್ದಾರೆ.
ಪ್ರಲೋಭನೆ ಒಪ್ಪಲ್ಲ:ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಆಶ್ವಾಸನೆ ಸೇರಿಸಬೇಕೆಂಬ ರೈತ ಮೋರ್ಚಾ ಮುಖಂಡರೊಬ್ಬರ ಬೇಡಿಕೆಯನ್ನು ತಳ್ಳಿಹಾಕಿದ ಅವರು, ಮತಗಳಿಕೆಗಾಗಿ ಕಾರ್ಯಸಾಧುವಲ್ಲದ, ದೇಶದ ಸಮಗ್ರ ಅಭಿವೃದ್ಧಿಗೆ ವಿರುದ್ಧದ ಪ್ರಲೋಭನೆ ಸೃಷ್ಟಿಸುವುದನ್ನು ಪಕ್ಷ ಒಪು್ಪವುದಿಲ್ಲ. ಅಂತಹ ಯಾವುದೇ ನಿರೀಕ್ಷೆಗಳು ಬೇಡವೆಂದು ಖಡಾಮುಡಿಯಾಗಿ ಹೇಳಿದರು. ಬೆಳೆ ವಿಮಾ ಯೋಜನೆಗೆ ಗ್ರಾಮವನ್ನು ಘಟಕವಾಗಿ ಪರಿಗಣಿಸಬಾರದೇಕೆ? ಮತ್ತೊಬ್ಬ ಮುಖಂಡನ ಪ್ರಶ್ನೆಗೆ ಇಂತಹ ಫೀಡ್​ಬ್ಯಾಕ್ ಬೇಕು ಎಂದು ಬಿ.ಎಲ್.ಮೆಚ್ಚುಗೆ ವ್ಯಕ್ತಪಡಿಸಿ, ಮಳೆ ಬಂದಾಗ ಎತ್ತಿನ ಒಂದು ಕೋಡು ತೋಯ್ದರೆ ಇನ್ನೊಂದು ತೋಯ್ದ ನಿದರ್ಶನಗಳಿರುವುದು ನಿಜ. ಯೋಜನೆಯಡಿ ಈ ಮೊದಲು ತಾಲೂಕು ಒಂದು ಘಟಕವಾಗಿತ್ತು. ನಂತರ ಗ್ರಾಮ ಪಂಚಾಯಿತಿ ಹಂತಕ್ಕೆ ವಿಸ್ತರಣೆಯಾಗಿದೆ. ಗ್ರಾಮವನ್ನು ಘಟಕವನ್ನಾಗಿ ಪರಿಗಣಿಸುವ ನಿರ್ಧಾರಗಳು ಹೊರ ಬರಬಹುದು, ಆಶಾವಾದಿಯಾಗಿರಬೇಕು ಎಂಬ ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.
ನಿಕಟತೆಯಿಂದ ಗುರಿ ಸಾಧನೆ:ರಾಗಿ ರಾಶಿ ಮಾಡುವ ಮೂಲಕ ಕಾರ್ಯಕಾರಿ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಉದ್ಘಾಟಿಸಿ ಮಾತನಾಡಿ, ಹಿಂದಿನ ಸರ್ಕಾರಗಳು ರೈತರನ್ನು ಮತಬ್ಯಾಂಕ್ ಮಾಡಿಕೊಂಡು ಘೋಷಣೆಗೆ ಸೀಮಿತವಾದವು ಎಂದು ಟೀಕಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳು ರೈತಪರ ನಿಲುವು ತಳೆದು ರೈತರ ಏಳಿಗೆಗೆ ಶ್ರಮಿಸಿವೆ. ಸಾಧನೆ, ಕೊಡುಗೆಗಳನ್ನು ರೈತರಿಗೆ ತಿಳಿಸಿ, ನಿಕಟತೆ ಸಂಪಾದಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಮಿಷನ್ 150 ಗುರಿ ಸಾಧನೆ ಸಾಧ್ಯವೆಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಜೆಡಿಎಸ್ ಮತ್ತು ಕಾಂಗ್ರೆಸ್ ಬಗ್ಗೆ ಚಪ್ಪಲಿ ಪದ ಬಳಸಿ ಮಾತನಾಡಿದ್ದಾರೆ. ನಾನು ಅವರಿಗೆ ಹೇಳುವುದಿಷ್ಟೇ, ದೇವೇಗೌಡರ ಕಾಲಿನ ಧೂಳಿಗೂ ನೀವು ಸಮನಲ್ಲ. ಇದೇನಾ ನಿಮ್ಮ ಸಂಸ್ಕೃತಿ?
|ಎಚ್.ಡಿ. ಕುಮಾರಸ್ವಾಮಿಮಾಜಿ ಸಿಎಂ
ರಾಜ್ಯಾಧ್ಯಕ್ಷರ ವಿವಾದಿತ ಹೇಳಿಕೆ:ರಾಷ್ಟ್ರೀಯ ಪಕ್ಷ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿರುತ್ತವೆ. ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ-ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದ ಮೇಲಿರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ಶಾಂತವಾಗಿ ಸಭೆ ನಡೆಯುತ್ತದೆ ಎಂದು ಕಾಂಗ್ರೆಸ್, ಜೆಡಿಎಸ್ ಹೆಸರೆತ್ತದೆ ಬಿಜೆಪಿ ರಾಜ್ಯಾಧ್ಯಕ್ಷ ತಿವಿದರು.
ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದ್ದು, ಚುನಾವಣಾ ಪೂರ್ವ ರಾಜಕೀಯ ಅಖಾಡಕ್ಕೆ ಪಕ್ಷದ ಸಂಘಟನೆ ಶನಿವಾರ ಪದಾರ್ಪಣೆ ಮಾಡಲಿದೆ. ಇಷ್ಟು ದಿನ ಸಂಘಟನಾ ಬಲವರ್ಧನೆ, ಕಾರ್ಯಕರ್ತರಲ್ಲಿ ಹುರುಪು, ಕಾರ್ಯಜಾಲ ಕಟ್ಟುವತ್ತ ಲಕ್ಷ್ಯವಹಿಸಿ, ಕೇಂದ್ರ-ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಆದ್ಯತೆ ನೀಡಿತ್ತು.
ಶನಿವಾರದಿಂದ ಹತ್ತು ದಿನ ನಡೆಯಲಿರುವ ‘ ಬೂತ್ ವಿಜಯ ಸಂಕಲ್ಪ ಅಭಿಯಾನದ ಮೂಲಕ ಡಬಲ್ ಇಂಜಿನ್ ಸರ್ಕಾರದ ಸಾಧನೆ-ಕೊಡುಗೆಗಳನ್ನು ಪ್ರಚಾರ ಮಾಡಲಿದೆ. ಇದೇ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಒಪ್ಪಿದವರನ್ನು ಸ್ಥಳದಲ್ಲೇ ಪಕ್ಷದ ಮೊಬೈಲ್ ಸಂಖ್ಯೆಗೆ ಮಿಸ್ಡ್ ಕೊಡಿಸುವ ಮೂಲಕ ಸದಸ್ಯತ್ವ ನೋಂದಣಿ ಮಾಡಲಿದೆ. ಸಾಧನೆಗಳ ಕರಪತ್ರ, ‘ಬಿಜೆಪಿಯೇ ಭರವಸೆ’ ಎಂದು ಮುದ್ರಿತ ಸ್ಟಿಕ್ಕರ್​ಗಳನ್ನು ಹಿಡಿದು ಮನೆ ಮನೆಗೆ ತಲುಪುವ ಅಭಿಯಾನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ವತಃ ಭಾಗವಹಿಸಲಿದ್ದಾರೆ. ಅವರೊಂದಿಗೆ ಸಿಎಂ, ಮಾಜಿ ಸಿಎಂ, ಪಕ್ಷದ ರಾಜ್ಯ ನಾಯಕರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಎಲ್ಲ ಹಂತದ ಕಾರ್ಯಕರ್ತರ ಹೊಸ ಜೋಶ್ ನೊಂದಿಗೆ ತಯಾರಾಗಿದ್ದಾರೆ.
ಯಾರು, ಎಲ್ಲೆಲ್ಲಿ?:ವಿಜಯಸಂಕಲ್ಪ ಅಭಿಯಾನ 224 ವಿಧಾನಸಭೆ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಪ್ರಾರಂಭವಾಗಲಿದ್ದು, ಯಾರು, ಎಲ್ಲಿ ಭಾಗವಹಿಸಬೇಕು ಎಂಬುದು ನಿಗದಿಯಾಗಿದೆ.
ವಿಜಯಪುರ, ನಾಗಠಾಣ, ಸಿಂದಗಿ:ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಯನಗರ, ಬಿಟಿಎಂ: ಪಕ್ಷದ ರಾಜ್ಯಾಧ್ಯಕ್ಷ, ದಾವಣಗೆರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಚಿಕ್ಕಬಳ್ಳಾಪುರ: ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಹಾಲಕ್ಷ್ಮೀ ಲೇಔಟ್ ಬೆಂಗಳೂರು: ಪಕ್ಷದ ಸಹ ಉಸ್ತುವಾರಿ ಡಿ.ಕೆ.ಅರುಣಾ ಹಾಗೂ ರಾಜ್ಯದ ಸಚಿವರು, ಸಂಸದ-ಶಾಸಕರು, ವಿಧಾನ ಪರಿಷತ್ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಭಾಗವಹಿಸಲಿದ್ದಾರೆ.
ಅಭಿಯಾನದ ಸ್ವರೂಪ:ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರ ಹಂಚಿಕೆ; ಎರಡು ಕೋಟಿಗೂ ಹೆಚ್ಚು ಮತದಾರರ ಸಂಪರ್ಕ; ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳ ಕುಟುಂಬಗಳ ಜತೆಗೆ ಮಾತುಕತೆ; ಐದು ಲಕ್ಷ ಮನೆಗಳ ಗೋಡೆ ಮೇಲೆ ‘ಬಿಜೆಪಿಯೇ ಭರವಸೆ’ ಡಿಜಿಟಲ್ ವಾಲ್​ಪೇಂಟಿಂಗ್; ಒಂದು ಕೋಟಿಗೂ ಅಧಿಕ ದ್ವಿಚಕ್ರ, ಇನ್ನಿತರ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು; ಒಂದು ಕೋಟಿ ಸದಸ್ಯತ್ವ ನೋಂದಣಿ; 51,872 ಬೂತ್​ಗಳಲ್ಲಿ 13,21,792 ಪೇಜ್​ಪ್ರಮುಖರು, 50,260 ವಾಟ್ಸಪ್​ಗ್ರೂಪ್​ಗಳ ಬಳಕೆ.
ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

‘ಓಂ’ ಇದ್ದ ಹಾಳೆಯಲ್ಲಿ ಶುಭಾಶಯ ಬರೆಯಲು ಒಪ್ಪದ ತನ್ವೀರ್ ಸೇಠ್!; ಕನ್ನಡ ಮತ್ತು ಸಂಸ್ಕೃತಿ ಸಚಿವರ ಎದುರೇ ತಕರಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
