ಬೆಂಗಳೂರು:ಜನರಿಗೆ ಅಗ್ಗದ ದರದಲ್ಲಿ ಔಷಧ ಒದಗಿಸುವುದನ್ನು ಹೆಚ್ಚಿಸುವ ಸಲುವಾಗಿ ಬರುವ ಮಾರ್ಚ್ ವೇಳೆಗೆ ರಾಜ್ಯದಲ್ಲಿ 1 ಸಾವಿರ ಜನೌಷಧ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ಸಹಕಾರ ಸಂಘಗಳ ಮೂಲಕ ಜನೌಷಧವನ್ನು ಪೂರೈಸುವ ಸಲುವಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹುಬ್ಬಳ್ಳಿ ಕಚೇರಿಯಲ್ಲಿ ಶುಕ್ರವಾರ ಸಗಟು ವಿತರಣೆ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಜನರು ತಮ್ಮ ಆದಾಯದಲ್ಲಿ ಆರೋಗ್ಯಕ್ಕೆ ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಸರ್ವೆ ನಡೆಸಲಾಯಿತು. ಈ ವೇಳೆ ಶೇ.15ರಿಂದ 30 ಆದಾಯದ ಭಾಗವನ್ನು ಜನ ಆರೋಗ್ಯ ರಕ್ಷಣೆಗೆ ಖರ್ಚು ಮಾಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂತು. ಆಗಿನಿಂದ ಜನೌಷಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ಸಲುವಾಗಿ ಕೆಲಸ ಮಾಡಲಾಗುತ್ತಿದೆ. ಈವರೆಗೆ ದೇಶದಲ್ಲಿ 6,635 ಜೆನರಿಕ್ ಔಷಧ ಕೇಂದ್ರವಿದ್ದು, ಕರ್ನಾಟಕದಲ್ಲಿಯೇ 716 ಕೇಂದ್ರಗಳಿವೆ. ರಾಜ್ಯದಲ್ಲಿ ಇನ್ನೂ 300 ಕೇಂದ್ರಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ಮಾರ್ಚ್ ವೇಳೆಗೆ 1 ಸಾವಿರ ಕೇಂದ್ರ ತೆರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಜನೌಷಧದಲ್ಲಿ 1,290 ಔಷಧಗಳಿದ್ದು, 160 ಮೆಡಿಕಲ್ ಪರಿಕರಗಳಿವೆ. ಅವುಗಳ ಖರೀದಿ ವೇಳೆ ಶೇ. 10ರಿಂದ 90 ಕಡಿಮೆ ಮೊತ್ತಕ್ಕೆ ಖರೀದಿಸಲಾಗುತ್ತಿದೆ. ಹೀಗಾಗಿ ಜನರಿಗೆ ಕಡಿಮೆ ಮೊತ್ತಕ್ಕೆ ಔಷಧಗಳನ್ನು ಪೂರೈಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ 10 ಕೋಟಿಗೂ ಹೆಚ್ಚಿನ ಜನರಿಗೆ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ ಎಂದರು.
ಸಹಕಾರ ಸಂಘಗಳಲ್ಲಿ ಜನೌಷಧ:ಗ್ರಾಮೀಣ ಭಾಗದಲ್ಲಿ ಜನರು ಔಷಧಕ್ಕಾಗಿ ಹೆಚ್ಚು ಹಣ ವ್ಯಯಿಸುವುದನ್ನು ತಪ್ಪಿಸಲು ಸಹಕಾರ ಸಂಘಗಳ ಮೂಲಕ ಜನೌಷಧ ಪೂರೈಕೆ ಮಾಡಲಾಗುವುದು. ಸಹಕಾರ ಮಾರಾಟ ಮಹಾಮಂಡಳ ಅದರ ಜವಾಬ್ದಾರಿ ವಹಿಸಿಕೊಂಡಿದ್ದು, ಸಹಕಾರ ಸಂಘಗಳ ಮೂಲಕ ಜನೌಷಧ ಪೂರೈಕೆ ಜತೆಗೆ ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಸದಾನಂದಗೌಡ ವಿವರಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಜನೌಷಧ:ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಬಳಕೆಗೆ ಮತ್ತು ರೋಗಿಗಳಿಗೆ ನೀಡುವುದಕ್ಕೆ ರಾಜ್ಯ ಆರೋಗ್ಯ ಇಲಾಖೆ ಜತೆ ಮಾತುಕತೆ ನಡೆಸಲಾಗುತ್ತಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ದುಬಾರಿ ಔಷಧಗಳನ್ನು ನೀಡದೆ, ಜನೌಷಧ ನೀಡುವುದಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತಂತೆ ಮೆಡಿಕಲ್ ಕೌನ್ಸಿಲ್​ಗೆ ಪತ್ರ ಬರೆಯಲಾಗುತ್ತಿದ್ದು, ಅವರ ಮೂಲಕ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ಕೊಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 3 ವಿಭಾಗ:ಜನೌಷಧ ಪೂರೈಕೆ, ಜನರಿಗೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ಮಾಡಲು ರಾಜ್ಯದಲ್ಲಿ 3 ವಿಭಾಗವನ್ನು ಮಾಡಲಾಗಿದೆ. ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ ವಿಭಾಗಗಳನ್ನು ರಚಿಸಿ, ಅದಕ್ಕೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರುಗಳು ತಮ್ಮ ವ್ಯಾಪ್ತಿಯಲ್ಲಿ ಜನೌಷಧ ಪೂರೈಕೆಯನ್ನು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್, ಶಾಸಕ ಕೆ. ಶ್ರೀನಿವಾಸ ಗೌಡ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ಮಹಾನಿಬಂಧಕ ಎಸ್. ಜಿಯಾವುಲ್ಲಾ ಇನ್ನಿತರರಿದ್ದರು.
ರಾಯಚೂರಿನಲ್ಲಿ ಫಾರ್ಮಾ ಪಾರ್ಕ್
ದೇಶದಲ್ಲಿ 3 ಫಾರ್ವ ಪಾರ್ಕ್ ಮತ್ತು 4 ಮೆಡಿಕಲ್ ಪಾರ್ಕ್ ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ 13,600 ಕೋಟಿ ರೂ. ಮೀಸಲಿರಿಸಲಾಗಿದ್ದು, 1 ಸಾವಿರ ಕೋಟಿ ರೂ.ಗಳನ್ನು ಭೂಮಿ ಅಭಿವೃದ್ಧಿಗೆ ವ್ಯಯಿಸಲಾಗುವುದು. ರಾಯಚೂರಿನಲ್ಲಿ ಫಾರ್ವ ಪಾರ್ಕ್ ನಿರ್ವಣಕ್ಕೆ ಪ್ರಸ್ತಾವನೆಯಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿ.ವಿ. ಸದಾನಂದಗೌಡ ತಿಳಿಸಿದರು.
ಹರಿಹರದಲ್ಲಿ ರಸಗೊಬ್ಬರ ಕಾರ್ಖಾನೆ
ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ನಿರ್ಮಾಣ ಕುರಿತು ಅನಂತಕುಮಾರ್ ಸಚಿವರಾಗಿದ್ದಾಗಲೇ ಪ್ರಸ್ತಾವನೆಯಿತ್ತು. ಅದರಂತೆ ದಾವಣಗೆರೆಯ ಹರಿಹರ, ಕಲಬುರಗಿ ಮತ್ತು ವಿಜಯಪುರದಲ್ಲಿ ಜಾಗ ಗುರುತಿಸಿ ಸರ್ವೆ ನಡೆಸಲಾಗಿತ್ತು. ರಸಗೊಬ್ಬರ ತಯಾರಿಕೆಗೆ ನೀರು, ಅನಿಲ ಮತ್ತು ರೈಲು ವ್ಯವಸ್ಥೆ ಸಮರ್ಪಕವಾಗಿರಬೇಕು. ಅದರಂತೆ ಹರಿಹರದಲ್ಲಿನ ಜಾಗ ಕಾರ್ಖಾನೆ ನಿರ್ವಣಕ್ಕೆ ಸೂಕ್ತ ಎಂದು ಗುರುತಿಸಲಾಗಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ನಿರ್ವಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್​ವೈ ಜತೆ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು ಡಿ.ವಿ. ಸದಾನಂದಗೌಡ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
