ಬೆಂಗಳೂರು:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟ ತೀವ್ರಗೊಂಡಿದ್ದು, ಮಳೆ ಸಂಬಂಧಿತ ಅವಘಡಗಳಿಗೆ ಮೂವರು ಬಲಿಯಾಗಿದ್ದರೆ, ಮೂವರು ನಾಪತ್ತೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಆರ್ಡಿ ಶೇಡಿಮನೆ ಗ್ರಾಮದ ಅರಸಮ್ಮಕಾನು ಬಡಾಬೈಲು ದರ್ಖಾಸ್ತು ಗೋಪಾಲ ಶೆಟ್ಟಿ-ವಿಮಲಾ ದಂಪತಿಯ ಪುತ್ರಿ ರಚನಾ(13) ಭಾನುವಾರ ಮಧ್ಯಾಹ್ನ ಕಾಲು ಜಾರಿ ಗದ್ದೆಯ ಸಮೀಪದಲ್ಲಿ ಹರಿಯುತ್ತಿದ್ದ ಹೊಳೆಗೆ ಬಿದ್ದು ಮೃತಪಟ್ಟಿದ್ದಾಳೆ. ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮ ಗೋಕುಲದಾಸ ಪ್ರಭು(53)ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಜಡ್ಕಲ್ ಗ್ರಾಮ ಮೆಕ್ಕೆ ಸುರೇಶ ಎಂಬುವರು ಮನೆ ಸಮೀಪದ ಹೊಳೆಬದಿಗೆ ಹೋದವರು ಕಾಣೆಯಾಗಿದ್ದಾರೆ.
ಕೊಲ್ಲೂರು ಅರಿಸಿನಗುಂಡಿ ಜಲಪಾತ ವೀಕ್ಷಿಸುತ್ತಿದ್ದಾಗ ಕಾಲು ಜಾರಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶರತ್ ಕುಮಾರ್ (23) ನಾಪತ್ತೆಯಾಗಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿರಾಳ(ಬಿ) ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಕುಸಿದು ಬಿದ್ದು, ಬಸಮ್ಮ ಬಸವರಾಜ (35) ಮೃತಪಟ್ಟಿದ್ದಾಳೆ. ಬಸವಕಲ್ಯಾಣದ ಧನ್ನೂರ(ಆರ್) ಗ್ರಾಮದ ಹಳ್ಳದಲ್ಲಿ ಯುವಕ ಮಲ್ಲಪ್ಪ ಶರಣಪ್ಪ ಕರೆಪನೋರ್ (25) ಕೊಚ್ಚಿಕೊಂಡು ಹೋಗಿದ್ದಾನೆ. ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.
ರೆಟ್ ಅಲರ್ಟ್:ಕರಾವಳಿಯಲ್ಲಿ ಸೋಮವಾರ ಭಾರಿ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೊಷಿಸಿದೆ. ಮಂಗಳೂರುಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮದೆನಾಡು ಸಮೀಪ ಕತೋಜೆ ಎಂಬಲ್ಲಿ ಸೋಮವಾರ ಮರ ಸಹಿತ ಭೂ ಕುಸಿತ ಉಂಟಾಗಿ, ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.
ನದಿ ಪಾತ್ರದ ಪ್ರದೇಶ ಜಲಾವೃತ:ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 4.45 ಅಡಿ, ಭದ್ರಾ ಜಲಾಶಯಕ್ಕೆ 4.5 ಅಡಿ ನೀರು ಹರಿದುಬಂದಿದ್ದರೆ, ತುಂಗಾ ಜಲಾಶಯದಿಂದ 67 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ತುಂಗಾ ಡ್ಯಾಂನ ಹೊರಹರಿವು ಹೆಚ್ಚಾದರೆ ನದಿ ಪಾತ್ರದ ಕೆಲ ತಗ್ಗು ಪ್ರದೇಶಗಳು ಜಲಾವೃತವಾಗಬಹುದು. ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ ಭಾಗದಲ್ಲಿ ಉತ್ತಮ ಮಳೆಯಾಗಿದೆ. ತುಂಗಾ ಮತ್ತು ಭದ್ರಾ ನದಿಗಳು ತುಂಬಿ ಹರಿಯುತ್ತಿವೆ.
ಕಾವೇರಿ ಕಣಿವೆಯಲ್ಲಿ ಸಂತಸ:ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯ ಡ್ಯಾಂಗಳು ಭರ್ತಿಯಾಗುವತ್ತ ಸಾಗಿದೆ. ಒಳಹರಿವು ಹೆಚ್ಚಳವಾಗಿರುವುದರಿಂದ ಹೊರಹರಿವನ್ನೂ ಹೆಚ್ಚಿಸಲಾಗಿದೆ. ಕೆ.ಆರ್.ಸಾಗರ ಜಲಾಶಯಕ್ಕೆ ಸೋಮವಾರ ಮಧ್ಯಾಹ್ನ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಡ್ಯಾಂನ ನೀರಿನ ಮಟ್ಟ 97 ಅಡಿಗೆ ತಲುಪಿದೆ. ಹಾರಂಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆಯಲ್ಲದೇ, ಲಕ್ಷ್ಮಣತೀರ್ಥ ನದಿಯಿಂದ ಕೂಡ 4 ರಿಂದ 5 ಸಾವಿರ ಕ್ಯೂಸೆಕ್ ಹರಿದು ಬರುತ್ತಿದೆ. ಹಾರಂಗಿ ಅಣೆಕಟ್ಟೆಗೆ 28 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಭಾನುವಾರ ರಾತ್ರಿ 35 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಕಬಿನಿ ಅಣೆಕಟ್ಟೆಯಲ್ಲಿ ಸೋಮವಾರ ನೀರಿನ ಮಟ್ಟ 2279.30 (ಗರಿಷ್ಠ 2284)ಅಡಿಗೆ ತಲುಪಿದ್ದು, ಜಲಾಶಯ ಭರ್ತಿಯಾಗಲು ಕೇವಲ 4 ಅಡಿ ಬಾಕಿ ಇದೆ.
ಕೊಡಗಿನಲ್ಲಿ ಪ್ರವಾಹ ಸ್ಥಿತಿ:ಕೊಡಗಿನಲ್ಲಿ ಪುಷ್ಯ ಮಳೆಯ ಅಬ್ಬರ ಮುಂದುವರಿದಿದೆ. ಭಾಗಮಂಡಲಕ್ಕೆ ನಾಪೋಕ್ಲು ಮತ್ತು ಮಡಿಕೇರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ತ್ರಿವೇಣಿ ಸಂಗಮ ಜಲಾವೃತವಾಗಿದೆ. ನದಿ ನೀರು ಶ್ರೀಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ಬಳಿ ತಲುಪಿದೆ. ಇಲ್ಲಿ ವಾಹನ ಓಡಾಟ ಸ್ಥಗಿತವಾಗಿದ್ದು, ಸಾರ್ವಜನಿಕರು ತಿರುಗಾಡಲು ಅಪೂರ್ಣಗೊಂಡಿರುವ ಮೇಲ್ಸೇತುವೆ ಬಳಸುತ್ತಿದ್ದಾರೆ.
ಹೇಮೆಗೆ ಹೆಚ್ಚಿದ ಜೀವಕಳೆ:ಹಾಸನ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದೆ. ಕಳೆದ ರಾತ್ರಿಯಿಂದಲೂ ಮಳೆ ನಿರಂತರವಾಗಿ ಮುಂದುವರಿದಿದೆ. ಜೋರು ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ನದಿಗೆ ಒಳಹರಿವು ಹೆಚ್ಚಾಗಿದೆ. ಹೇಮಾವತಿ ಜಲಾಶಯಕ್ಕೆ ಸೋಮವಾರ 23, 142 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2922 ಅಡಿ ಗರಿಷ್ಠ ಮಟ್ಟದ ನೀರು ಸಂಗ್ರಹ ಪ್ರಮಾಣ ಇಂದು 2903.05 ಅಡಿಗೇರಿದೆ. ಸಕಲೇಶಪುರ ತಾಲೂಕಿನ ಮಾಗೇರಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ.
ಶವಸಂಸ್ಕಾರಕ್ಕೆ ಪರದಾಟ:ಕೊಡಗು ಜಿಲ್ಲೆ ಕುಶಾಲನಗರದ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹಕ್ಕೆ ಗ್ರಾಮದಲ್ಲಿ ನಿಧನರಾಗಿದ್ದ ವೃದ್ಧೆಯ ಶವಸಂಸ್ಥಾರಕ್ಕೆ ಮಳೆ ಅಡ್ಡಿಯಾಯಿತ್ತಲ್ಲದೇ, ಜತೆಗೆ ಸ್ಥಳ ಸಿಗದೆ ಪರದಾಡುವಂತಾಯಿತು. ಗ್ರಾಮದ ಮಂಚಮ್ಮ (85) ಭಾನುವಾರ ನಿಧನರಾಗಿದ್ದರು. ಸೋಮವಾರ ನಡೆಯಬೇಕಿದ್ದ ಅಂತ್ಯಸಂಸ್ಕಾರಕ್ಕೆ ಮಳೆ ಅಡ್ಡಿಯಾಯಿತು. ಸ್ಮಶಾನದಲ್ಲಿ ಜಾಗದ ಕೊರತೆ ಕಾರಣ ಕಾವೇರಿ ನದಿ ದಂಡೆಯಲ್ಲಿ ಶವಸಂಸ್ಕಾರ ಮಾಡಲಾಗುತ್ತದೆ. ಆದರೆ, ಕಾವೇರಿ ನದಿ ತುಂಬಿ ಹರಿಯುತ್ತಿರುವ ಕಾರಣ ದಡದಲ್ಲಿ ಜಾಗವಿಲ್ಲದೆ ಶವಸಂಸ್ಕಾರಕ್ಕೆ ಕುಟುಂಬದವರು ಪರದಾಡಿದರು. ಅಂತಿಮವಾಗಿ ಕೂಡಿಗೆ ಗ್ರಾಮದಲ್ಲಿ ಇರುವ ಸಸ್ಯಕ್ಷೇತ್ರ ಬಳಿ ಅಂತ್ಯಕ್ರಿಯೆ ಮಾಡಲಾಯಿತು.
65 ಗ್ರಾಮಗಳ ಸಂಪರ್ಕ ಕಡಿತ:ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ದಿನಗಳಿಂದ ವರುಣಾರ್ಭಟ ಜೋರಾಗಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ 21 ಸೇತುವೆಗಳು ಜಲಾವೃತಗೊಂಡಿದ್ದು, ನದಿ ತೀರದಲ್ಲಿ ನೆರೆ ಆತಂಕ ಎದುರಾಗಿದೆ. ಕೃಷ್ಣಾ, ಘಟಪ್ರಭಾ,ದೂಧಗಂಗಾ, ವೇದಗಂಗಾ ಹಾಗೂ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿವೆ. 65ಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗ ಬಳಸಿ ಸಂಚರಿಸುತ್ತಿದ್ದಾರೆ. ಹಿಡಕಲ್ ಜಲಾಶಯಕ್ಕೆ ಸೋಮವಾರ ಒಂದೇ ದಿನ 31,815 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 4 ರಿಂದ 5ಟಿಎಂಸಿ ನೀರು ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ 1.07 ಲಕ್ಷ ಕ್ಯೂಸೆಕ್ ಒಳಹರಿವು ಇದೆ. ಆಲಮಟ್ಟ ನೀರಿನ ಮಟ್ಟ ಕ್ರಮೇಣವಾಗಿ ಏರಿಕೆಯಾಗುತ್ತಿದೆ.
ಉಕ್ಕಡಗಾತ್ರಿ-ಫತ್ತೇಪುರ ರಸ್ತೆ ಸಂಪರ್ಕ ಕಡಿತ:ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿ ರುವ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹರಿಹರ ತಾಲೂಕು ಉಕ್ಕಡಗಾತ್ರಿ- ಫತ್ತೇಪುರ ರಸ್ತೆಯ ಸಂಪರ್ಕ ಸೋಮವಾರ ಕಡಿತಗೊಂಡಿದೆ. ಉಕ್ಕಡಗಾತ್ರಿ ದೇವಸ್ಥಾನದ ಬಳಿಯ ಸ್ನಾನಘಟ್ಟಗಳು ಮುಳುಗಿದ್ದು ಜನರು ಆ ಕಡೆ ಹೋಗದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಬೆಂಗಳೂರು:ರಾಜ್ಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲೆಲ್ಲಿ, ಯಾವ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ ಎಂಬ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. ಮುಂದಿನ ಒಂದು ವಾರ ಹೈ ಅಲರ್ಟ್ ನಲ್ಲಿ ಇರಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ರಾಜ್ಯದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿ, ಮುಂಗಾರು ಚುರುಕಾಗಲಿದ್ದು, ಕರಾವಳಿ ಭಾಗ, ಬೆಳಗಾವಿಯಲ್ಲಿ ಹೆಚ್ಚು ಮಳೆಯಾಗಲಿದೆ. ಬೀದರ್, ಯಾದಗಿರಿ, ವಿಜಯಪುರ, ಕಲಬುರಗಿಯಲ್ಲೂ ಅತಿ ಹೆಚ್ಚು ಮಳೆಯಾಗಲಿದೆ. ಈಗಾಗಲೆ ಈ ಭಾಗದಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ ಎಂದರು.
ಕಳೆದೊಂದು ವಾರದಿಂದ ಮಳೆ ಸುರಿಯುತ್ತಲೇ ಇದ್ದು, ಮಳೆಯಿಂದಾದ ಅನಾಹುತಕ್ಕೆ 27 ಮಂದಿ ಬಲಿಯಾಗಿದ್ದಾರೆ. ಎಂಟು ಜನ ಸಿಡಿಲಿಗೆ ಬಲಿಯಾದರೆ, ಕೆಲವರು ಕಾಲು ಜಾರಿ ಹಳ್ಳಗಳಲ್ಲಿ ಬಿದ್ದು ಅಸುನೀಗಿದ್ದಾರೆ. ಇದೆಲ್ಲವನ್ನು ನಾವು ಪ್ರಕೃತಿ ವಿಕೋಪದಿಂದ ಜೀವ ಹಾನಿ ಎಂದೇ ಪರಿಗಣಿಸಿದ್ದೇವೆ ಎಂದು ತಿಳಿಸಿದರು.
ಒಂದು ವಾರದ ಹಿಂದೆ ಜಲಾಶಯಗಳಲ್ಲಿ ನೀರು ಇರಲಿಲ್ಲ. ಇಂದು ಒಟ್ಟು ಜಲಾಶಯಗಳಲ್ಲಿ 40 ಪರ್ಸೆಂಟ್ ನೀರು ಇದೆ. ಕಾವೇರಿ, ಕೃಷ್ಣಾ ನದಿಗಳ ಜಲಾಶಯದ ಒಳ ಹರಿವು ಹೆಚ್ಚಾಗಿದೆ ಎಂದು ವಿವರಿಸಿದರು.
ಬರ ಘೋಷಣೆಗೆ ಕೈಕಟ್ಟಿದ ಕೇಂದ್ರ:ಬರ ಘೊಷಣೆಗೆ ಕೇಂದ್ರ ಸರ್ಕಾರ ಒಂದಿಷ್ಟು ಮಾನದಂಡ ಹಾಕಿದೆ. ಇದು ಬರ ಘೋಷಣೆ ಮಾಡಲು ನಮ್ಮ ಕೈಕಟ್ಟಿ ಹಾಕಿದೆ ಎಂದು ಕೃಷ್ಣಬೈರೇಗೌಡ ಹೇಳಿದರು. ಬರ ಘೋಷಿಸಬೇಕು ಎಂದರೆ ಶೇ. 60 ಮಳೆ ಕೊರತೆ ಇರಬೇಕು ಮತ್ತು ಮೂರು ವಾರ ಮಳೆ ಇರಬಾರದು ಎಂದು ಕೇಂದ್ರದ ಮಾನದಂಡ ಇದೆ. ಈಗ ಎಲ್ಲೂ ಶೇ.60 ಮಳೆ ಕೊರತೆ ಆಗಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಿಎಂರಿಂದ ಪತ್ರ ಬರೆಸಿ ಬರ ಘೋಷಣೆ ಮಾನದಂಡ ಮರು ಪರಿಶೀಲಿಸುವಂತೆ ಮನವಿ ಮಾಡಲಾಗುತ್ತದೆ ಎಂದರು.
ಮಳೆಯ ಆರ್ಭಟಕ್ಕೆ ಉತ್ತರ ಕನ್ನಡ ತತ್ತರಿಸಿದೆ. ಜಿಲ್ಲೆಯ 15 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸಿದ್ದಾಪುರದ ಕೋಡ್ಕಣಿ ಗ್ರಾಪಂ ವ್ಯಾಪ್ತಿಯಲ್ಲಿ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂದರೆ, 321.5 ಮಿಮೀ ಮಳೆಯಾಗಿದೆ. ಅಂಕೋಲಾ ಗಂಗಾವಳಿ ನದಿ ಉಕ್ಕುತ್ತಿದ್ದು, ನೆರೆ ಪರಿಸ್ಥಿತಿ ಆವರಿಸಿದೆ. ಕಾಳಿ ಜಲವಿದ್ಯುತ್ ಯೋಜನೆಯ ಕೊಡಸಳ್ಳಿ, ಕದ್ರಾ ಅಣೆಕಟ್ಟೆಗಳಿಂದ ನೀರು ಬಿಡುವುದನ್ನು ಮುಂದುವರಿಸಲಾಗಿದೆ. ಅಘನಾಶಿನಿ ನದಿ ಕೆನ್ನೀರಿನಿಂದ ತುಂಬಿದ್ದು, ಕುಮಟಾ ತಾಲೂಕಿನಲ್ಲಿಯ ನದಿ ತಟದ ಗ್ರಾಮಗಳು ಮುಳುಗಿವೆ. ನೂರಾರು ಮನೆಗಳು ಜಲಾವೃತವಾಗಿದ್ದು, 4 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹೊನ್ನಾವರ ತಾಲೂಕಿನ ಗುಂಡಬಾಳ ಹೊಳೆ ಉಕ್ಕಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, 5 ಕಾಳಜಿ ಕೇಂದ್ರ ತೆರೆಯಲಾಗಿದೆ. ಒಟ್ಟು 164 ಜನರನ್ನು ಸ್ಥಳಾಂತರಿಸಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ:ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಮಳೆ ಅಧಿಕವಾಗಿರುವ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತಿರುವನಂತಪುರಂ:ಕೇರಳದ ವಿವಿಧ ಭಾಗಗಳಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ಮಳೆ ದುರಂತಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು ಮೂರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೋಳಿಕ್ಕೋಡ್, ವಯನಾಡು ಮತ್ತು ಕಣ್ಣೂರಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೊಷಿಸಲಾಗಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕಾಸರಗೋಡು, ಕೋಳಿಕ್ಕೋಡ್, ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ. ವಯನಾಡ್ ಜಿಲ್ಲೆಯ ಇಬ್ಬರು ಬಾಲಕರು ಟ್ಯೂಷನ್ ತರಗತಿಗೆ ತೆರಳುತ್ತಿದ್ದಾಗ ನೀರಿನ ಸೆಳೆತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ತ್ರಿಶೂರ್ ಜಿಲ್ಲೆಯಲ್ಲಿ ಭಾನುವಾರ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇಡುಕ್ಕಿ, ವಯನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆಶ್ರಯ ಶಿಬಿರಗಳನ್ನು ತೆರೆಯಲಾಗಿದೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
