ವಿರೋಧ ಎದುರಿಸುವುದು ನರೇಂದ್ರ ಮೋದಿಯವರಿಗೆ ಹೊಸದೇನಲ್ಲ. ಕೇಶುಭಾಯಿ ಪಟೇಲ್ ಗುಜರಾತ್ ಬಿಜೆಪಿಯ ಪ್ರಮುಖ ಮುಖವಾಗಿದ್ದ ದಿನಗಳಲ್ಲಿ ಮೋದಿ ತವರು ರಾಜ್ಯದಿಂದಲೇ ಹೊರಗಿಡಲ್ಪಟ್ಟಿದ್ದರು. ಆಮೇಲೆ ಮುಖ್ಯಮಂತ್ರಿಯಾದ ಮೇಲೆ ಅವರು ಎದುರಿಸಿದ ವಿರೋಧ ಅಷ್ಟಿಷ್ಟಲ್ಲ. ಗೋಧ್ರೋತ್ತರ ದಂಗೆಗಳಿಗೆ ಅವರನ್ನು ಜವಾಬ್ದಾರರನ್ನಾಗಿಸಲು ಕಾಂಗ್ರೆಸ್ ಹೈಕಮಾಂಡ್​ನ ಆಶಯ ಹಾಗೂ ಆದೇಶದೊಂದಿಗೆ ಗುಜರಾತ್ ಕಾಂಗ್ರೆಸ್ ಹೂಡಿದ ಹೂಟಗಳು ತಕ್ಷಣಕ್ಕೆ ಯಶಸ್ವಿಯಾಗಿ ಮೋದಿ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ಹಾಗೂ ವಿರೋಧಗಳನ್ನು ಎದುರಿಸಬೇಕಾಯಿತು. ಇಂಗ್ಲಿಷ್ ಮಾಧ್ಯಮ ಸರಿಸುಮಾರು ಪೂರ್ಣವಾಗಿ ಅವರ ವಿರುದ್ಧವಾಗಿ ಅಪಪ್ರಚಾರದಲ್ಲಿ ತೊಡಗಿತು. ತೀಸ್ತಾ ಸೆತಲ್ವಾಡ್​ರಂಥ ಕೆಲವರು ತಥಾಕಥಿತ ಸಾಮಾಜಿಕ ಕಾರ್ಯಕರ್ತರು ಮೋದಿಯವರನ್ನು ಹಣಿಯುವ ಪ್ರಯತ್ನವನ್ನೇ ಪ್ರಮುಖ ಜೀವನೋಪಾಯವನ್ನಾಗಿ ಮಾಡಿಕೊಂಡರು. ಅವರ ಜತೆ ಕೈಜೋಡಿಸಿದ್ದು ಬೂಕರ್ ಪ್ರಶಸ್ತಿಯೊಂದಿಗೆ ‘ಭಾರತದ ಹೊಸ ದನಿ’ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಳಿಸಿಕೊಳ್ಳುತ್ತಿದ್ದ ಲೇಖಕಿ ಅರುಂಧತಿ ರಾಯ್. ಇವರೆಲ್ಲರ ವ್ಯವಸ್ಥಿತ ಅಪಪ್ರಚಾರದ ಮಾತುಗಳು ಮತ್ತು ಬರಹಗಳು ದೇಶದಾದ್ಯಂತ ಪ್ರಾದೇಶಿಕ ಭಾಷೆಗಳಲ್ಲೂ ಪ್ರತಿಧ್ವನಿಸಿ ಮೋದಿಯೆಂದರೆ ನರಹಂತಕ ಎಂಬ ಚಿತ್ರಣ ರಾಷ್ಟ್ರವ್ಯಾಪಿಯಾಯಿತು.
ಕೇಂದ್ರದಲ್ಲಿ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರ ಬಂದಮೇಲಂತೂ ಮೋದಿ-ವಿರೋಧಿಗಳಿಗೆ ಅಸೀಮ ಬಲ ಬಂದಂತಾಗಿ ಆ ನಾಯಕ ಕೇಂದ್ರೀಯ ತನಿಖಾ ದಳ ಹಾಗೂ ಸವೋಚ್ಚ ನ್ಯಾಯಾಲಯ ನೇಮಿಸಿದ ವಿಶೇಷ ತನಿಖಾ ತಂಡದ ವಿಚಾರಣೆಯನ್ನೂ ಎದುರಿಸಬೇಕಾಯಿತು. ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಗಾಂಧಿ ಸಾರ್ವಜನಿಕವಾಗಿ ಬಣ್ಣಿಸತೊಡಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿಧ್ವನಿಸಿ ಅಮೆರಿಕ ಅವರನ್ನು ತನ್ನ ನೆಲದೊಳಗೆ ಪ್ರವೇಶಿಸದಂತೆ ನಿರ್ಬಂಧಿಸಿತು. ಹಾಗೆ ನೋಡಿದರೆ ಆ ದಿನಗಳಲ್ಲಿ ಮೋದಿಯವರಷ್ಟು ಕೆಟ್ಟ ಹೆಸರು ಪಡೆದುಕೊಂಡ ಭಾರತೀಯ ರಾಜಕಾರಣಿ ಮತ್ತೊಬ್ಬರಿಲ್ಲ. ಇಷ್ಟೆಲ್ಲ ಆದರೂ ಮೋದಿಯವರಿಗೆ ಗುಜರಾತ್ ವಿಧಾನಸಭೆಯಲ್ಲಿ ಹೇಳಿಕೊಳ್ಳುವ ವಿರೋಧ ಇರಲಿಲ್ಲ. ಅವರ ನೀತಿನಿಲುವುಗಳಿಗೆ ಸದನದ ಅಸ್ತು ಸುಲಭವಾಗಿ ದೊರೆಯುತ್ತಿತ್ತು ಮತ್ತು ಅವರ ಯೋಜನೆಗಳು ನಿರ್ವಿಘ್ನವಾಗಿ ಸಾಗಿಯೇ ಇದ್ದವು. ಆಮೇಲೆ ಒಂದಿಡೀ ದಶಕದ ಬಳಿಕ ಕಾಲಚಕ್ರ ಒಂದು ಸುತ್ತು ತಿರುಗಿತು, ಮೋದಿಯವರನ್ನು ಕಾಡುತ್ತಿದ್ದ ರಾಹುಕೇತುಗಳ ಕೈ ಸಡಿಲಾಗತೊಡಗಿತು, ಮೋದಿಯವರ ಮೇಲೆ ಹೊರಿಸಲಾದ ಅಪಾದನೆಗಳು ನಿರಾಧಾರ ಎಂದು ಸವೋಚ್ಚ ನ್ಯಾಯಾಲಯ ನೇಮಿಸಿದ್ದ ತನಿಖಾ ತಂಡ ಸ್ಪಷ್ಟವಾಗಿ ಸಾರಿತು. ಅದಾದದ್ದು ಯುಪಿಎ ಸರ್ಕಾರವಿನ್ನೂ ಇದ್ದ ದಿನಗಳಲ್ಲೇ. ಆಮೇಲೆ ನಡೆದದ್ದು ಇತಿಹಾಸ.
ಮೊದಲಿಗೆ ಜನಪರ ನಾಯಕನೆಂದು ದೇಶವಾಸಿಗಳ ಪ್ರೀತಿ ಗಳಿಸಿಕೊಂಡು ನಂತರ ಜನಕಂಟಕನೆಂದು ಸಾಬೀತಾಗಿ ಇತಿಹಾಸದ ಕಪ್ಪುಚುಕ್ಕೆಗಳಾಗಿಹೋದ ನೇತಾರರಿಗೆ ಈ ಜಗತ್ತಿನಲ್ಲಿ ಹಲವು ಉದಾಹರಣೆಗಳಿವೆ. ಆದರೆ ಮೊದಲಿಗೆ ಜನಕಂಟಕ, ನರಹಂತಕ ಎಂದೆಲ್ಲ ಅಪಪ್ರಚಾರಕ್ಕೊಳಗಾಗಿ ನಂತರ ಜನಸೇವಕ, ರಾಷ್ಟ್ರಹಿತಚಿಂತಕ ಎಂದು ಜಗತ್ತೇ ಗುರುತಿಸುವಂತೆ ಬೆಳೆದ ನೇತಾರರಿಗೆ ಬಹುಷಃ ನರೇಂದ್ರ ಮೋದಿಯವರೊಬ್ಬರೇ ಉದಾಹರಣೆ. ಗುಜರಾತ್ ಜನತೆ ಕಂಡುಕೊಂಡಿದ್ದನ್ನು ದೇಶದ ಜನತೆಯೂ ಗುರುತಿಸಿದ ಪರಿಣಾಮವಾಗಿ ಹತ್ತು ವರ್ಷಗಳ ಹಿಂದೆ ಮೋದಿ ಪ್ರಚಂಡ ಜನಬೆಂಬಲದೊಂದಿಗೆ ಪ್ರಧಾನವಮಂತ್ರಿಯಾದರು. ಐದು ವರ್ಷಗಳಲ್ಲಿ ಅವರ ಜನಪ್ರಿಯತೆ ಇನ್ನಷ್ಟು ಏರಿದ್ದು 2019ರ ಚುನಾವಣೆಗಳಲ್ಲಿ ವ್ಯಕ್ತವಾಯಿತು. ಜನಪ್ರಿಯತೆಯ ಸರ್ವೆಕ್ಷಣೆಯಲ್ಲಿ ಉನ್ನತ 71 ಅಂಕಗಳನ್ನು ಗಳಿಸಿ ಅತ್ಯಂತ ಜನಪ್ರಿಯ ನಾಯಕ ಎಂದು ಮೋದಿ ಹೆಸರು ಗಳಿಸಿದರೆ, ಎರಡನೆಯ ಸ್ಥಾನ ಪಡೆದ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಗಳಿಸಿದ್ದು ಕೇವಲ 9 ಅಂಕಗಳು! ‘ಮೋದಿ ನನಗೆ ಹೆದರುತ್ತಾರೆ’ ಎಂದು ಹೇಳುವ ಅರವಿಂದ್ ಕೇಜ್ರಿವಾಲ್ ಗಳಿಸಿದ್ದು ಕೇವಲ 7 ಅಂಕಗಳು!
ಇಷ್ಟು ಅಗಾಧ ಜನಬೆಂಬಲ ಮತ್ತು ಸಂಸತ್ತಿನಲ್ಲಿ ಪ್ರಚಂಡ ಬಹುಮತದೊಂದಿಗೆ ಮೋದಿ ಮಾಡಿದ್ದು ಒಂದೆರಡಲ್ಲ. ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮೊತ್ತಮೊದಲ ಬಾರಿಗೆ ದೇಶದ ಸಂವಿಧಾನದ ಅಡಿಗೆ ತಂದರು, ಜಿಎಸ್​ಟಿ ವ್ಯವಸ್ಥೆಯನ್ನು ಜಾರಿಗೆ ತಂದು ಅಭಿವೃದ್ಧಿಗೆ ಅಗತ್ಯವಾಗುವಂತೆ ಸರ್ಕಾರದ ಆದಾಯವನ್ನು ವೃದ್ಧಿಸಿದರು, ಒಂದೂವರೆ ಶತಮಾನಗಳಷ್ಟು ಹಳೆಯದಾದ, ವಸಾಹತುಶಾಹಿ ಆಡಳಿತ ಭಾರತೀಯರನ್ನು ದಮನಿಸಲು ಸೃಷ್ಟಿಸಿದ್ದ ದಂಡ ಸಂಹಿತೆಗಳ ಬದಲಿಗೆ ಈ ಕಾಲಕ್ಕೆ ಅಗತ್ಯವಾದ ಹೊಸ ವ್ಯಾಯಿಕ ಸಂಹಿತೆಗಳಿಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡರು (ಅವೀಗ ಜುಲೈ 1ರಿಂದ ಜಾರಿಗೆ ಬರಲಿವೆ), ದಶಕಗಳಿಂದ ಗ್ರಹಣ ಹಿಡಿಸಿಕೊಂಡು ಕೂತಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡರು, ಕೋವಿಡ್ ಕಾಲದಲ್ಲಿ ದೇಶದ 80 ಕೋಟಿಯಷ್ಟು ಜನತೆಗೆ ಮುಕ್ತ ಆಹಾರಧಾನ್ಯಗಳನ್ನು ಪೂರೈಸಲು ಆರಂಭಿಸಿ ಅದನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಪಟ್ಟಿ ಉದ್ದವಿದೆ.
ಇದಕ್ಕೆಲ್ಲ ಮೋದಿ ಸಂಸತ್ತಿನ ಅನುಮೋದನೆ ಪಡೆದುಕೊಂಡದ್ದು ಸೀಮಿತ ಶ್ರಮದೊಂದಿಗೆ. ವಿರೋಧವನ್ಜು ಯಶಸ್ವಿಯಾಗಿ ಎದುರಿಸುವಷ್ಟು ಅಥವಾ ಕಡೆಗಣಿಸಿ ಮುಂದೆ ಸಾಗುವಷ್ಟು ಸದಸ್ಯ ಬೆಂಬಲ ಅವರಿಗೆ ಸಂಸತ್ತಿನಲ್ಲಿ ಸದಾ ಲಭ್ಯವಿತ್ತು. ಈ ಹತ್ತು ವರ್ಷಗಳಲ್ಲಿ ಹೀಗೆ ತಮಗೆ ದಕ್ಕಿದ ಜನಬೆಂಬಲ ಮತ್ತು ಸಾಂಸದಿಕ ಶಕ್ತಿ, ಅದರಿಂದಾಗಿ ರಾಷ್ಟ್ರದ ಉನ್ನತಿಗಾಗಿ ತಮಗೆ ದೊರಕಿದ ಅವಕಾಶಗಳಿಂದ ಉತ್ಸಾಹಿತರಾದ ಮೋದಿ ವಸ್ತುಸ್ಥಿತಿ ಹೀಗೆಯೇ ಮುಂದುವರಿಯುವುದೆಂದು ಭಾವಿಸಿ ತಮ್ಮ ಪ್ರಧಾನಮಂತ್ರಿತ್ವದ ಮೂರನೆಯ ಆವಧಿಗೆ ಸಹಜವಾಗಿಯೇ ಭಾರಿಭಾರಿ ಯೋಜನೆಗಳನ್ನು ಹಾಕಿಕೊಂಡರು. ಅವುಗಳ ಸೂಚನೆಯನ್ನು ಅವರು ಆಗಾಗ ನೀಡಿದ್ದು, ‘ಇದುವರೆಗೆ ನೀವು ನೋಡಿರುವುದು ಟ್ರೇಲರ್ ಅಷ್ಟೇ, ಊಹಿಸಿಕೊಳ್ಳಲು ನಿಮಗೆ ಸಾಧ್ಯವೇ ಇಲ್ಲದ್ದಷ್ಟನ್ನು ನಾನು ನನ್ನ ಮೂರನೆಯ ಅವಧಿಯ ಮೊದಲ ನೂರಾ ಇಪ್ಪತೆôದು ದಿನಗಳಲ್ಲೇ ಮಾಡಲಿದ್ದೇನೆ’ ಎಂಬ ಮಾತುಗಳ ಮೂಲಕ.
ತಮಗೆ ಸಿಕ್ಕಿದ ಜನಬೆಂಬಲ, ಸಾಂಸದಿಕ ಬಲ ಹಾಗೂ ಅಧಿಕಾರಗಳನ್ನು ನರೇಂದ್ರ ಮೋದಿ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡಿಲ್ಲ ಎನ್ನವುದನ್ನು ಎಲ್ಲರೂ ನೋಡಿಯೇ ಇದ್ದಾರೆ. ‘ನ ಖಾವೂಂಗಾ, ನ ಖಾನೇ ದೂಂಗಾ’ ಎಂದು ಹತ್ತು ವರ್ಷಗಳ ಹಿಂದೆಯೇ ಹೇಳಿದ ಅವರು ಆ ಮಾತಿನಂತೇ ತಾವೂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ತೊಡಗಲು ತಮ್ಮ ಮಂತ್ರಿವರ್ಗವನ್ನೂ ಬಿಟ್ಟಿಲ್ಲ. ಭ್ರಷ್ಟಾಚಾರ ತಡೆಯಲು ಮೋದಿಯವರು ಅನುಸರಿಸಿದ ಒಂದು ವಿಧಾನ ಮೊದಲು ಫಲಾನುಭವಿಗಳು ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದ್ದು, ನಂತರ ಸಹಾಯಧನ ಅಲ್ಲಿಗೇ ನೇರವಾಗಿ ಜಮಾ ಆಗುವಂತೆ ಮಾಡಿದ್ದು. ತಮಗೆಂದು ಘೊಷಣೆಯಾದ ಹಣ ಇಡಿಯಾಗಿ ತಮಗೇ ಸಿಗುತ್ತದೆಂಬ ನಂಬಿಕೆ ಜನರಲ್ಲಿ ಬಂದದ್ದು ಆಗ. ಇದೆಷ್ಟು ಪರಿಣಾಮಕಾರಿಯಾಯಿತೆಂದರೆ ವಿರೋಧಪಕ್ಷಗಳೂ ಸಹ ತಮ್ಮ ಆಡಳಿತದ ರಾಜ್ಯಗಳಲ್ಲಿ ಈ ವಿಧಾನವನ್ನೇ ಅನುಸರಿಸತೊಡಗಿದವು. ಇಷ್ಟಾಗಿಯೂ ಸರ್ಕಾರಿ ಹಂತದಲ್ಲಿ ಭ್ರಷ್ಟಾಚಾರ ನಿಂತಿದೆ ಎಂದಲ್ಲ. ಯಾಕೆಂದರೆ ಮೋದಿಯವರ ಕೈಗಳು ತಲುಪಲಾಗದಂತಹ ಅದೆಷ್ಟೋ ಭ್ರಷಾಚಾರಗತ್ತಲ ಸುರಂಗಗಳನ್ನು ಕಳೆದ ಮುಕ್ಕಾಲು ಶತಮಾನದಲ್ಲಿ ಆಡಳಿತಶಾಹಿ ಹೆಗ್ಗಣಗಳು ದೇಶದಾದ್ಯಂತ ತೋಡಿಕೊಂಡಾಗಿದೆ. ವಸ್ತುಸ್ಥಿತಿ ಹೀಗಿರುವಾಗ ಕೇಂದ್ರ ಮಂತ್ರಿಮಂಡಲ ಭ್ರಷ್ಟಾಚಾರಮುಕ್ತವಾಗಿದೆ ಎನ್ನುವುದೊಂದು ಹೊಳೆಯುವ ಬೆಳ್ಳಿಕಿರಣ. ಇದರ ಮಹತ್ವ ನಮಗೆ ಅರಿವಾಗವುದು 2004-14ರ ಯುಪಿಎ ಆಡಳಿತಾವಧಿಯಲ್ಲಿ ನಡೆದ 2ಜಿ, ಏರ್​ಸೆಲ್-ಮ್ಯಾಕ್ಸಿಸ್, ಕಲ್ಲಿದ್ದಲು ಗಣಿ ಹರಾಜು, ಆಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಖರೀದಿ, ನ್ಯಾಷನಲ್ ಹೆರಾಲ್ಡ್ ವ್ಯವಹಾರ, ರಫೇಲ್ ವಿಮಾನ ಖರೀದಿಯ ಮೊದಲ ಪ್ರಯತ್ನ, ಕಾಮನ್​ವೆಲ್ತ್ ಗೇಮ್್ಸ, ಮುಂತಾದ ಸಾಲುಸಲು ಭಾರಿ ಭ್ರಷ್ಟಾಚಾರ ಪ್ರಕರಣಗಳನ್ನು ನೆನಪಿಸಿಕೊಂಡಾಗ.
ಈ ಹಿನ್ನೆಲೆಯಲ್ಲಿ ತಾವು ತಮ್ಮ ಮೂರನೆಯ ಅವಧಿಗಾಗಿ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿರುವ ಸೂಚನೆಗಳನ್ನು ಮೋದಿ ನೀಡತೊಡಗಿದಾಗ ರಾಷ್ಟ್ರದ ಜನತೆಯೊಳಗಿನ ವಿವೇಕಿ ಸಮುದಾಯ ಸಹಜವಾಗಿಯೇ ನಿರೀಕ್ಷೆಗಳನ್ನು ಬೆಳೆಸಿಕೊಂಡಿತು. ಇನ್ನಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನುಆಕರ್ಷಿಸಿ ದೇಶದಲ್ಲಿ ಉತ್ಪಾದನೆಯನ್ನು ವೃದ್ಧಿಸಿ, ಆ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ತತ್ಪರಿಣಾಮವಾಗಿ ದೇಶದ ಜಿಡಿಪಿಯನ್ನು ಏರಿಸಿ, ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಅರ್ಥವ್ಯವಸ್ಥೆಯನ್ನು ಜಾಗತಿಕವಾಗಿ ಹನ್ನೊಂದನೇ ಸ್ಥಾನದಿಂದ ಐದನೆಯ ಸ್ಥಾನಕ್ಕೆ ತಂದಂತೆ ಪ್ರದಾನಿ ಮೋದಿ ಮುಂದಿನ ಐದು ವರ್ಷಗಳಲ್ಲಿ ಮೂರನೆಯ ಸ್ಥಾನಕ್ಕೇರಿಸುತ್ತಾರೆ ಎನ್ನುವುದು ಯುವಜನಾಂಗವನ್ನು ಉತ್ಸಾಹಗೊಳಿಸಿತು. ಹಾಗೆಯೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಧ್ವಜದಡಿ ತಂದು, ಆ ಮೂಲಕ ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಭೂಸಂಪರ್ಕವನ್ನು ಕತ್ತರಿಸಿ, ಅರಬ್ಬಿ ಸಮುದ್ರತೀರದಿಂದ ಚೀನಾವನ್ನು ಎತ್ತಂಗಡಿ ಮಾಡುವುದು ಮತ್ತು ಅಷ್ಟರ ಮಟ್ಟಿಗೆ ನಮ್ಮ ಪಶ್ಚಿಮ ತೀರವನ್ನು ಸುರಕ್ಷಿತಗೊಳಿಸುವುದು ಮೋದಿಯವರ ಯೋಜನೆಯಾಗಿದೆ ಎಂದು ಕೋಟ್ಯಂತರ ರಾಷ್ಟ್ರಪ್ರೇಮಿಗಳು ಕನಸು ಕಂಡರು. ಸಂವಿಧಾನದಲ್ಲಿ ಸೂಚಿತವಾಗಿದ್ದರೂ ಇದುವರೆಗೂ ಅನುಷ್ಠಾನಗೊಳ್ಳದ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು, ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಹಿಂದೂ-ವಿರೋಧಿ ಪೂಜಾಸ್ಥಳಗಳ ಕಾಯಿದೆ, ಮುಸ್ಲಿಮ್ ತುಷ್ಟೀಕರಣದ ಅಲ್ಪಸಂಖ್ಯಾತ ಕಾಯಿದೆ, ವಕ್ಪ್ ಕಾಯಿದೆಗಳನ್ನು ರದ್ದುಗೊಳಿಸುವುದೂ ಮೋದಿಯವರ ಅಜೆಂಡಾದಲ್ಲಿದೆ ಎಂದೂ ಹಲವು ಆಶಯಗಳು ಜನಮನದಲ್ಲಿ ಕಾಣಿಸಿಕೊಂಡವು. ಇದೆಲ್ಲಕ್ಕೂ ಬೇಕಾಗಿರುವುದು ಎನ್​ಡಿಎಗಷ್ಟೇ ಅಲ್ಲ, ಬಿಜೆಪಿಗೇ ಹೆಚ್ಚಿನ ಬಹುಮತ ಮತ್ತು ಅದು ಆಗೇ ಆಗುತ್ತದೆ ಎಂದು ಮೋದಿ ಅಭಿಮಾನಿಗಳು ನಂಬಿದ್ದರು.
ಆದರೆ ಹಾಗಾಗಿಲ್ಲ. ಎನ್​ಡಿಎಗೆ ನಿಚ್ಚಳ ಬಹುಮತ ದೊರೆತರೂ ಬಿಜೆಪಿ ಹಿಂದಿನ ಲೋಕಸಭೆಯಲ್ಲಿದ್ದ 303 ಸ್ಥಾನಗಳಲ್ಲಿ 63ನ್ನು ಕಳೆದುಕೊಂಡು ಕೇವಲ 240ಕ್ಕೆ ಕುಸಿದಿದೆ. ಸ್ವಂತ ಬಹುಮತಕ್ಕೆ ಇನ್ನೂ 32 ಸ್ಥಾನಗಳ ಕೊರತೆ! ಇದರರ್ಥ ಮೋದಿಯವರು ಲೆಕ್ಕಾಚಾರ ಹಾಕಿದ್ದಂತೆ, ನಾವು ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದಿಲ್ಲ ಎಂಬ ವಾಸ್ತವ ರಾಷ್ಟ್ರವಾದಿಗಳ ಎದೆಗೆ ಗಾಢಾರಿಯಂತೆ ಘಟ್ಟಿಸಿದೆ. ಅಷ್ಟೇ ಅಲ್ಲ, ಒಟ್ಟಾಗಿ 232 ಸ್ಥಾನ ಗಳಿಸಿರುವ ವಿರೋಧ ಪಕ್ಷಗಳ ‘ಐನ್​ಡಿಐಎ ಒಕ್ಕೂಟ’ವನ್ನು ಹಿಂದೆ ಪಕ್ಕಕ್ಕೆ ಸರಿಸಿದಂತೆ ಈಗ ಸಂಸತ್ತಿನಲ್ಲಿ ಕಡೆಗಣಿಸಲಾಗುವುದಿಲ್ಲ ಎಂಬ ವಾಸ್ತವವೂ ಗೋಡೆಯ ಮೇಲಿನ ಬರಹದಂತೆ ಕಣ್ಣಿಗೆ ರಾಚುತ್ತಿದೆ. ಮೋದಿ ಸರ್ಕಾರ ಸಂಸತ್ತಿನಲ್ಲಿ ಹೆಜ್ಜೆಹೆಜ್ಜೆಗೂ ತೀವ್ರ ತಡೆಗಳನ್ನು ಎದುರಿಸಲಿದೆ ಎನ್ನುವುದು ಸಂಸತ್ ಅಧಿವೇಶನದ ಮೊದಲ ದಿನವೇ ಕಾಣಿಸಿಕೊಂಡಿದೆ. ವಿಷಯವಲ್ಲದ ವಿಷಯಗಳನ್ನು ಅತಿರೇಕಕ್ಕೊಯ್ಯುವುದು ತನ್ನ ವೃತ್ತಿಯಾಗಲಿದೆ ಎನ್ನವುದನ್ನು ವಿರೋಧಪಕ್ಷಗಳು ತೋರಿಸಿವೆ.
ಎಂದಿನಂತೆ ಹದಿನೆಂಟನೆಯ ಲೋಕಸಭೆಯ ಹಂಗಾಮಿ ಅಧ್ಯಕ್ಷರ ಆವಧಿ ಕೆಲವೇ ದಿನಗಳಷ್ಟೇ. ಖಾಯಂ ಅಧ್ಯಕ್ಷರ ಆಯ್ಕೆಯಾದ ಮರುಗಳಿಗೆಯಿಂದ ಇವರನ್ನೂ ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಹಿರಿಯ ಬಿಜೆಪಿ ಸಂಸದ ಭತೃಹರಿ ಮಹ್ತಾಬ್ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಕಾಂಗ್ರೆಸ್​ಗೆ ಸಮ್ಮತವಾಗಿಲ್ಲ. ಮಹ್ತಾಬ್ ಏಳು ಆವಧಿಗೆ ಸಂಸದರಾಗಿದ್ದರೆ ತನ್ನ ಸಂಸದ ಕೆ. ಸುರೇಶ್ ಎಂಟು ಅವಧಿಗೆ ಸಂಸದರಾಗಿದ್ದಾರೆ, ಅವರೇ ಹಿರಿಯ ಸಂಸದರು ಎಂದು ಕಾಂಗ್ರೆಸ್ ಸ್ವರವೆತ್ತಿದೆ. ಆದರೆ ಮಹ್ತಾಬ್ ನಿರಂತರವಾಗಿ ಏಳು ಅವಧಿಗೆ ಸಂಸದರಾಗಿದ್ದಾರೆ, ಕೆ. ಸುರೇಶ್ ನಡುವೆ ಎರಡು ಅವಧಿಗಳಲ್ಲಿ ಸಂಸತ್​ನಿಂದ ಹೊರಗಿದ್ದರು ಎನ್ನವುದನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ.
ನಂತರ ಲೋಕಸಭೆಯ ಸದಸ್ಯರಾಗಿ ಪ್ರಮಾಣವಚ ನ ಸ್ವೀಕರಿಸಿದ ಮೋದಿಯವರು ಸಮರ್ಥ ವಿರೋಧಪಕ್ಷದ ಅಗತ್ಯವನ್ನು ಹೇಳಿ, ಹದಿನೆಂಟನೆಯ ಲೋಕಸಭೆಯಲ್ಲಿ ವಿರೊಧ ಪಕ್ಷಗಳು ಜವಾಬ್ದಾರಿಯುತವಾಗಿ ವರ್ತಿಸುತ್ತವೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು. ಆದರೆ ವಿರೋಧಪಕ್ಷಗಳು ಮಾಡಿದ್ದೇನು? ಮೋದಿಯವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾಗಲೇ ರಾಹುಲ್ ಗಾಂಧಿ ಅಸಹಜ ಕೆಂಪು ಹೊದಿಕೆಯ ‘ಸಂವಿಧಾನದ ಪ್ರತಿ’ಯನ್ನು ಅವರತ್ತ ಹಿಡಿದರು! ಇದೊಂದು ಅಸಾಂವಿಧಾನಿಕ ವರ್ತನೆ. ನಂತರ ಮಾನವ ಸಂಪನ್ಮೂಲ ಮಂತ್ರಿ ಧಮೇಂದ್ರ ಪ್ರಧಾನ್ ಪ್ರಮಾಣವಚನ ಸ್ವೀಕರಿಸುತ್ತಿದ್ದಾಗ ವಿರೋಧಪಕ್ಷಗಳ ಹಲವು ಸದಸ್ಯರು ‘ನೀಟ್ ನೀಟ್’ ಎಂದು ಕೂಗಿದರು. ನೀಟ್ ಮುಂತಾದ ಪರೀಕ್ಷೆಗಳಲ್ಲಾದ ಪ್ರಶ್ನಪತ್ರಿಕೆ ಬಯಲನ್ನು ಖಂಡಿಸಲು ಅವರು ಈ ಮಾರ್ಗ ಹಿಡಿಯಬೇಕಾಗಿರಲಿಲ್ಲ. ಹಾಗೆ ನೋಡಿದರೆ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಜತೆ ಮೋದಿಯವರು ಸ್ಥಾಪಿಸಿಕೊಂಡಿರುವ ಉತ್ತಮ ಸಂಬಂಧವನ್ನು ಮುರಿದು ಸರ್ಕಾರದ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅವಿಶ್ವಾಸವನ್ನು ಮೂಡಿಸಲೆಂದೇ ‘ಯಾರೋ’ ಆಡಿದ ಆಟವಾಗಿ ಈ ನೀಟ್ ಹಗರಣ ಕಾಣುತ್ತಿದೆ. ಈ ಬಗ್ಗೆ ಸಿಬಿಐ ತನಿಖೆ ಸಮರ್ಪಕವಾಗಿ ನಡೆದರೆ ಸಂಚಿನ ಆರೋಪ ಯಾರ ಕಾಲಬಳಿ ಹೋಗಿ ನಿಲ್ಲುತ್ತದೋ. ಆದರೆ ಅಲ್ಲಿಯವರೆಗೆ ಕಾಯಲು ವಿರೋಧಪಕ್ಷಗಳು ಸಿದ್ಧವಿಲ್ಲ. ಅವುಗಳಿಗೆ ಸರ್ಕಾರದ ವಿರುದ್ಧ ಈ ಕ್ಷಣದ ಅಪಪ್ರಚಾರವಷ್ಟೇ ಮುಖ್ಯ.
ಇದು ಆರಂಭ. ಗುಜರಾತ್ ಮುಖ್ಯಮಂತ್ರಿಯಾಗಿ ಹೊರಗೆಲ್ಲ ಕೋಟಲೆಗಳು ಸುತ್ತಿಕೊಂಡರೂ ಸದನದಲ್ಲಿ ನಿರಾತಂಕವಾಗಿದ್ದಂತೆ, ಪ್ರಧಾನಮಂತ್ರಿತ್ವದ ಎರಡು ಆವಧಿಗಳಲ್ಲಿ ‘ಏನ್ನಯ ಸರಿಸಮಾನರಾರೈ?’ ಎಂದು ಖುಷಿಖುಷಿಯಾಗಿದ್ದಂತೆ ಮೋದಿಯವರು ಈಗ ಇರಲಾಗುವುದಿಲ್ಲ. ಮೂರನೆಯ ಆವಧಿಯಲ್ಲಿ ಅವರಿಗೆ ಮುನ್ನೂರು ಅನಿಷ್ಟಗಳು ಕಾಡಲಿವೆ, ಹದಿನೆಂಟನೆಯ ಲೋಕಸಭೆ ಕುರುಕ್ಷೇತ್ರವಾಗಲಿದೆ. ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧ ಮುಕ್ತಾಯವಾಗಿ ಕೆಡುಕಿನ ಮೇಲೆ ಒಳಿತಿನ ವಿಜಯವಾದಂತೆ ಇಂದೂ ಇಲ್ಲಿಯೂ ರಾಷ್ಟ್ರಘಾತಕ ಶಕ್ತಿಗಳು ನಾಶವಾಗಿ ರಾಷ್ಟ್ರಹಿತಕಾರಕ ಶಕ್ತಿಗಳ ವಿಜಯವಾಗಲಿ ಎನ್ನುವುದು ಎಲ್ಲ ರಾಷ್ಟ್ರಪೇಮಿಗಳ ಸಹಜ ಆಶಯ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ರಾಣೆಬೆನ್ನೂರು: ಪತ್ನಿ ಕೊಲೆಗೈದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
