ಬೆಂಗಳೂರು:ರಾಜ್ಯದಲ್ಲಿ ಎಸ್​ಡಿಪಿಐ, ಪಿಎಫ್​ಐ ಹಾಗೂ ಸಿಎಫ್​ಐ ಸಂಘಟನೆಗಳನ್ನು ನಿಷೇಧ ಮಾಡುವುದರ ಬದಲಾಗಿ ಮೂರು ರೀತಿಯ ಕ್ರಮಗಳ ಮೂಲಕ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕೆಲ ವರ್ಷಗಳಿಂದ ರಾಜ್ಯದಲ್ಲಿ ಎಸ್​ಡಿಪಿಐ ಮತ್ತು ಪಿಎಫ್​ಐ ಸಂಘಟನೆಗಳನ್ನು ನಿಷೇಧ ಮಾಡುವಂತೆ ಒತ್ತಡ ಕೇಳಿ ಬರುತ್ತಿದೆ. ಅನೇಕ ರಾಜಕಾರಣಿಗಳು ವೀರಾವೇಶದ ಮಾತನ್ನಾಡುತ್ತಿದ್ದು, ಅಷ್ಟಕ್ಕೆ ಮಾತ್ರ ಸೀಮಿತವಾಗುತ್ತಿದೆ. ಯಾವುದಾದರೂ ಘಟನೆ ಸಂಭವಿಸಿದ ಸಂದರ್ಭ ನಿಷೇಧ ಮಾಡಲು ಗಂಭೀರವಾಗಿ ಪರಿಶೀಲನೆ ಮಾಡಲಾಗುತ್ತದೆ. ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳುವ ಸರ್ಕಾರ, ನಂತರ ಆ ವಿಚಾರದಿಂದ ದೂರ ಸರಿಯುತ್ತಿದೆ.
ಇದೀಗ ನಿಷೇಧ ಮಾಡುವ ಪ್ರಯತ್ನ ಬಹುತೇಕ ಕೈಬಿಟ್ಟಿದ್ದು, ಈ ಸಂಘಟನೆಗಳ ಯಾವುದೇ ಚಟುವಟಿಕೆ ತೀವ್ರಗಾಮಿಯಾಗಿ ನಡೆಯದಂತೆ ಎಚ್ಚರವಹಿಸಲು ಚಿಂತನೆ ನಡೆಸಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಮೂರು ತಂತ್ರಗಳ ಮೂಲಕವೇ ನಿಯಂತ್ರಣ ಮಾಡುತ್ತ ರಾಜ್ಯದಲ್ಲಿ ಅಶಾಂತಿ ಉಂಟಾಗದಂತೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ನಿಯಂತ್ರಣ ಸಾಧ್ಯವಾಗದಿದ್ದಾಗ ನಿಷೇಧದ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.
|ಆರಗ ಜ್ಞಾನೇಂದ್ರಗೃಹ ಸಚಿವ
ಸರ್ಕಾರದ ಚಿಂತನೆಗೆ ಕಾರಣವೇನು?:ಒಂದು ವೇಳೆ ನಿಷೇಧ ಮಾಡಿದರೆ, ಮತ್ತೊಂದು ಹೆಸರಿನಲ್ಲಿ ಅದೇ ರೀತಿಯ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಗಳಿವೆ. ಆದ್ದರಿಂದಲೇ ನಿಷೇಧದ ಬದಲು ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ. 1993ರಲ್ಲಿ ಎನ್​ಡಿಎಫ್ ಹೆಸರಿನಲ್ಲಿದ್ದ ಸಂಘಟನೆ ಆ ನಂತರ ಪಿಎಫ್​ಐನಲ್ಲಿ ವಿಲೀನವಾಯಿತು. ಇದರ ರಾಜಕೀಯ ಬಣವೇ ಎಸ್​ಡಿಪಿಐ ಎಂದು ಗೃಹ ಇಲಾಖೆ ಮೂಲಗಳು ಹೇಳುತ್ತವೆ.
ಸರ್ಕಾರದ ಚಿಂತನೆ ಏನು?:ನಿಷೇಧ ಸಾಧ್ಯವಿಲ್ಲ ಎಂದೇ ಬಹುತೇಕ ನಿರ್ಧಾರಕ್ಕೆ ಬಂದಿರುವ ಸರ್ಕಾರ ನಿಯಂತ್ರಣಕ್ಕಾಗಿ ಮೂರು ಚಿಂತನೆ ನಡೆಸಿದೆ. ಮೊದಲನೆಯದು ಎಸ್​ಡಿಪಿಐ, ಪಿಎಫ್​ಐ, ಸಿಎಫ್​ಐ ಸಂಘಟನೆಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲಿದೆ. ಎರಡನೆಯದು ಅಹಿತಕರ ಘಟನೆಯಲ್ಲಿ ಈ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದರೆ ಕಠಿಣ ಕಾನೂನುಗಳ ಮೂಲಕ ಶಿಕ್ಷೆಯಾಗುವಂತೆ ನೋಡಿಕೊಂಡು ರ್ತಾಕ ಅಂತ್ಯ ಕಾಣಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಮೂರನೇ ಕ್ರಮ ಮತೀಯ ಅಲ್ಪಸಂಖ್ಯಾತ ಸಮುದಾಯದ ಯುವ ಸಮೂಹ ಈ ಸಂಘಟನೆಗಳ ಚಟುವಟಿಕೆಗಳ ಕಡೆ ಹೆಚ್ಚಾಗಿ ಭಾಗಿಯಾಗದಂತೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನಿಷೇಧ ಸುಲಭವಿಲ್ಲ:ಎಸ್​ಡಿಪಿಐ ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿದೆ. ಕೆಲವೆಡೆ ಜನ ಪ್ರತಿನಿಧಿಗಳನ್ನು ಸಹ ಹೊಂದಿದೆ. ಪಿಎಫ್​ಐ ಹಾಗೂ ಎಸ್​ಡಿಪಿಐ ನಿಷೇಧ ಮಾಡಬೇಕೆಂದರೆ ಅದಕ್ಕೆ ಸೂಕ್ತ ದಾಖಲೆ ಹೊಂದಿಸಬೇಕಾಗುತ್ತದೆ. ಮತೀಯ ಗಲಭೆಗಳಿಗೆ ಇದೇ ಸಂಘಟನೆಗಳೇ ಕಾರಣವೆಂದು ಸಾಕ್ಷ್ಯಧಾರ ಅಗತ್ಯವಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ದಾಖಲೆಗಳಿಲ್ಲದಿದ್ದರೆ ನಿಷೇಧ ಮಾಡಿದರೂ ನ್ಯಾಯಾಲಯದ ಮುಂದೆ ಬಿದ್ದು ಹೋಗುತ್ತದೆ. ಆದ್ದರಿಂದಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳುತ್ತವೆ. ಜಾರ್ಖಂಡ್ ಸರ್ಕಾರ ನಿಷೇಧ ಮಾಡುವ ಕ್ರಮ ಕೈಗೊಂಡಿತ್ತು. ಆದರೆ, ಅಲ್ಲಿನ ಹೈಕೋರ್ಟ್ ಸರಿಯಾದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಸರ್ಕಾರದ ನಿರ್ಧಾರ ರದ್ದು ಮಾಡಿರುವ ಉದಾಹರಣೆ ಇದೆ. ಉತ್ತರ ಪ್ರದೇಶದ ಶಿಫಾರಸು ಇನ್ನೂ ಕೇಂದ್ರ ಗೃಹ ಸಚಿವಾಲಯದ ಮುಂದೆ ಪರಿಶೀಲನೆಯಲ್ಲಿದೆ.
ಹುಬ್ಬಳ್ಳಿಯಲ್ಲಿ ಅಪ್ಪು ಬೆಳಕು; ಪುನೀತ್ ಜನ್ಮದಿನಂದು ಬೃಹತ್ ನೇತ್ರದಾನ ವಾಗ್ದಾನ ಶಿಬಿರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
