ಬೆಂಗಳೂರು:‘ದೇಶಭಕ್ತಿ ಸಾರುವ ಗೀತೆಗಳು’, ‘ಅಕ್ಷರದವ್ವ ಸಾವಿತ್ರಿಬಾಯಿ ಪುಲೆ’, ಶಿಸ್ತುಬದ್ಧ ಪಥ ಸಂಚಲನ, ‘ಮೈ ರೋಮಾಂಚನಗೊಳಿಸುವ ‘ಕಲರಿಪಯಟ್ಟು’, ‘ಎಸಿಎಸ್ ಟೊರ್ನಾಡೋಸ್ ತಂಡದ ಮೋಟಾರು ಬೈಕ್ ಸಾಹಸ’, ‘ಅಡಗು ತಾಣಗಳಲ್ಲಿ ಹೊಕ್ಕು ದಾಳಿಮಾಡುವ ದೃಶ್ಯ’……..ಬಿಬಿಎಂಪಿ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ,ಶುಕ್ರವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡುಬಂದ ಚಿತ್ರಣಗಳಿವು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಧ್ವಜಾರೋಹಣ ನೆರವೇರಿಸಿದ ಬಳಿಕ ವಿವಿಧ ತಂಡಗಳಿಂದ ಪರೇಡ್ ಗೌರವ ವಂದನೆ ಸ್ವೀಕರಿಸಿ ರಾಜ್ಯಕ್ಕೆ ಗಣರಾಜ್ಯೋತ್ಸವದ ಸಂದೇಶ ಸಾರಿದರು. ನಂತರ ಸೇನೆ, ಕೆಎಸ್‌ಆರ್‌ಪಿ, ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ ಸೇರಿ ಕೇರಳದ ಪೊಲೀಸ್ ತಂಡ ಸೇರಿ ವಿವಿಧ ತಂಡಗಳು ಪಥಸಂಚಲದ ಮೂಲಕ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದವು. 8 ಶಾಲೆಯ ಮಕ್ಕಳ ತಂಡ ಸೇರಿ ಒಟ್ಟು 38 ತಂಡಗಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು. ಒಟ್ಟು 1,500ಕ್ಕೂ ಅಧಿಕ ಮಂದಿ ಪಥಸಂಚಲದಲ್ಲಿ ಭಾಗಿಯಾಗಿ ರಾಜ್ಯಪಾಲರಿಗೆ ಗೌರವರಕ್ಷೆ ನೀಡಿದರು. ಸೇನೆಯ ಬ್ಯಾಂಡ್‌ನ ಶಿಸ್ತು ಬದ್ಧ ಮ್ಯೂಸಿಕ್ ಎಲ್ಲರನ್ನು ಮಂತ್ರ ಮುಗ್ಧಗೊಳಿಸಿತು.
ಕಲರಿಪಯಟ್ಟು, ಟೋರ್ನಾಡಸ್ ರೋಮಾಂಚನಮದ್ರಾಸ್ ಇಂಜಿನಿಯರ್ ಗ್ರೂಪ್ (ಎಂಇಜಿ) ಹಾಗೂ ಬೆಂಗಳೂರು ಕೇಂದ್ರದ ಹವಲ್‌ದಾರ್ ಅನೀಶ್ ಥಾಮಸ್ ನೇತೃತ್ವದ ಯೋಧರು, ಕೇರಳದ ಚಂಡೆಯ ಹಿನ್ನೆಲೆ ಧ್ವನಿಯಲ್ಲಿ ಕತ್ತಿ, ಗುರಾಣಿ ಹಿಡಿದು ಪ್ರದರ್ಶಿಸಿದ ‘ಕಲರಿಪಯಟ್ಟು’ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಚಂಡೆಯ ತಾಳಕ್ಕೆ ತಕ್ಕಂತೆ ಕತ್ತಿ, ಚಾಕು ವರಸೆಗಳನ್ನು ಪ್ರದರ್ಶಿಸಿ ಸೆಣೆಸುತ್ತಾ ನೋಡಿಗರ ಗಮನ ಸೆಳೆದರು. ನಂತರ, ದಿ ಆರ್ಮಿ ಸರ್ವೀಸ್ ಕಾರ್ಪ್ಸ್‌ನ ಕ್ಯಾಪ್ಟನ್ ಜಿ.ಬಾಸ್ಕೊ ರಾಜಸಿಂಗಂ ಕಾಮರಾಜ್ ನೇತೃತ್ವದ ಎಎಸ್‌ಸಿ ಟೋರ್ನಾಡಸ್ ಮೋಟಾರು ಸೈಕಲ್ ತಂಡದ ಪ್ರದರ್ಶನವು ಮೈನವಿರೇಳಿಸುವಂತಿತ್ತು. 24 ಸದಸ್ಯರ ಮೋಟಾರ್ ಸೈಕಲಿಸ್ಟ್ ತಂಡ,ಬೆಂಕಿ ಹಂಚಿದ್ದ ರಿಂಗ್‌ನಲ್ಲಿ ಬೈಕ್ ಚಲಿಸುವ ದೃಶ್ಯ ನೋಡುಗರಲ್ಲಿ ಆಶ್ಚರ್ಯ ಮೂಡಿಸಿತು. ಬೈಕ್ ರೈಡ್ ವೇಳೆ ಇಡೀ ಮೈದಾನವೇ ‘ವಾವ್ಹ್’ ಉದ್ಘಾರ ಹೊಮ್ಮಿತು. ಸಿಳ್ಳೆ ಚಪ್ಪಾಲೆ ತಟ್ಟುವ ಜತೆಗೆ ಜೋರಾಗಿ ಕೂಗುತ್ತಾ ಬೈಕ್ ರೈಡ್‌ನ್ನು ಸಖತ್ತಾಗಿ ಎಂಜಾಯ್ ಮಾಡಿದರು. ಸರ್ಕಲ್, ಫಿಶ್, ಲೋಟಸ್, ಪಿರಮಿಡ್ ಹಾಗೂ ಕ್ರಿಸ್ ಕ್ರಾಸ್ ಸಾಹಸಗಳು ಮೈ ಜುಮ್ಮೆನಿಸಿದವು.
ಸರ್ವಾಂಗೀಣ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡೋಣ: ಥಾವರ್‌ಚಂದ್ ಗೆಹಲೋತ್ ಕರೆ
ಶಿಕ್ಷಣದ ಬಗ್ಗೆ ಮಹತ್ವ ಸಾರಿದ ಮಕ್ಕಳುಪಥಸಂಚಲನದ ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.ಮೊದಲಿಗೆ ಬೆಂಗಳೂರು ಉತ್ತರ ಜಿಲ್ಲೆಯ ಹೆಗ್ಗನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ ಸೇರಿ ವಿವಿಧ ಶಾಲೆಗಳ 700 ಮಕ್ಕಳು ‘ ಈ ದೇಶವು ನಮಗಾಗಿಯೇ ಎಂದೆಂದಿಗೂ’ ಗೀತೆಗೆ ನೃತ್ಯ ರೂಪಕ ಪ್ರದರ್ಶಿಸಿದರು. ಬಣ್ಣ ಬಣ್ಣದ ಉಡುಪು ಧರಿಸಿ ದೇಶಭಕ್ತಿ ಮಹತ್ವದ ಕುರಿತು ಗೀತೆಗೆ ನೃತ್ಯ ಮೂಲಕ ಸಭಿಕರಿಗೆ ತಿಳಿಸಿಕೊಟ್ಟರು. ನಂತರ, ಬೆಂಗಳೂರು ದಕ್ಷಿಣ ಜಿಲ್ಲೆಯ ಪಿಳ್ಳಣ್ಣ ಗಾರ್ಡನ್‌ನಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜು ಸೇರಿ ವಿವಿಧ ಶಾಲಾ- ಕಾಲೇಜುಗಳಿಂದ 700 ಮಕ್ಕಳು, ಶಿಕ್ಷಣದಲ್ಲಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ಹಾಗೂ ದೀನದಲಿತರ ಬಗ್ಗೆ ಧ್ವನಿ ಎತ್ತಿದ ‘ಅಕ್ಷರದವ್ವ ಸಾವಿತ್ರಿಬಾಯಿ ಪುಲೆ’ ಕುರಿತು ಗೀತೆಗೆ ನೃತ್ಯ ಪ್ರದರ್ಶಿಸಿದರು. ತರಹೇವಾರಿ ಉಡುಪು ಧರಿಸಿದ ಮಕ್ಕಳು ‘ಸಾವಿತ್ರಿಭಾಯಿ ಪುಲೆ ಭಾವಚಿತ್ರ’, ‘ಮಗಳೇ ನಿನ್ನ ರಕ್ಷಣೆ ನಿನ್ನ ವಿದ್ಯೆಯಿಂದ’, ‘ಶೋಷಣೆ ಸರಪಳಿ ವಿದ್ಯೆಯಿಂದ ಕಳಚಲಿ’, ‘ಹೆಣ್ಣೊಂದಕೆ ಶಿಕ್ಷಣ ಸಮಾಜ ರಕ್ಷಣೆ’, ‘ಕೊಡಿ ಕೊಡಿ ಅವಳಿಗೆ ಶಿಕ್ಷಣ ಕೊಡಿ’, ‘ಹೆಣ್ಣು ಮಗುವಿಗಿರಲಿ ಶಿಕ್ಷಣದ ಹಕ್ಕು’, ‘ಶಿಕ್ಷಣ ಪಡೆದ ಮಹಿಳೆ ಸಮಾಜದ ಶಿಕ್ಷಕಿ’ ಲಕಗಳು ಪ್ರದರ್ಶಿಸಿದರು. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು ಹಾಗೂ ಕಡ್ಡಾಯವಾಗಿ ಶಿಕ್ಷಣ ನೀಡುವಂತೆ ಸಾವಿತ್ರಿಭಾಯಿ ಪುಲೆ ಅವರು ಹೇಳಿರುವ ಸಂದೇಶವನ್ನು ಮಕ್ಕಳು ಸಾರಿದರು.
ಬಹುಮಾನ ವಿತರಣೆ:ಪಥಸಂಚನದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಬಹುಮಾನ ವಿತರಿಸಿದರು. 6 ಗುಂಪುಗಳಲ್ಲಿ ವಿವಿಧ ಬಹುಮಾನ ನೀಡಲಾಯಿತು. ಸೇನಾ ಪಡೆ, ಬಿಎಸ್‌ಎಫ್, ಸಿಆರ್‌ಸಿಎಫ್ ಮಹಿಳಾ ತಂಡಗಳು ಮೊದಲ ಗುಂಪಿನಲ್ಲಿ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಪಡೆದವು. ಅನಂತರ ಗುಂಪಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ಮಿಕ್ಸ್, ಕಾರಗೃಹ ವಿಭಾಗದ ಪೊಲೀಸರ ತಂಡ, ರಾಷ್ಟ್ರೀಯ ಮಿಲಿಟರಿ ಸ್ಕೂಲ್, ಕಾಮರಾಜು ರಸ್ತೆ ಆರ್ಮಿ ಪಬ್ಲಿಕ್ ಸ್ಕೂಲ್, ನಂದಿನಿ ಲೇಔಟ್ ಪ್ರೆಸಿಡೆನ್ಸಿ, ಬ್ಯಾಂಡ್ ಸಿನಿಯರ್‌ನಲ್ಲಿ ಆರ್ಮಿ, ಜೂನಿಯರ್‌ನಲ್ಲಿ ನಾರಾಯಣಪುರ ಕ್ರಿಸ್ತೂ ಜಯಂತಿ ಸ್ಕೂಲ್ ಶಾಲೆಗಳು ವಿವಿಧ ಬಹುಮಾನಗಳು ಪಡೆದುಕೊಂಡವು.
ಆಹ್ವಾನಿತರನ್ನು ಒಳಗೆ ಬಿಡದ ಪೊಲೀಸರುಮಾಣೆಕ್ ಷಾ ಪರೇಡ್ ಮೈದಾನದ ಗೇಟ್-2 ಮತ್ತು ಗೇಟ್-4ರ ಮುಂಭಾಗದಲ್ಲಿ ಆಗಮಿಸಿದ್ದ ಆಹ್ವಾನಿತರನ್ನು ಕೆಲ ಕಾಲ ಪೊಲೀಸರು ಒಳಗೆ ಬಿಡದೆ ಸತಾಯಿಸಿದ್ದರು. ಆಹ್ವಾನ ಪತ್ರಿಕೆ ಇಟ್ಟುಕೊಂಡು ಬಂದಿದ್ದವರು ಮೈದಾನದ ಒಳಗೆ ಪ್ರವೇಶಿಸಲು ಆಯಾ ಗೇಟಿನ ಮುಂಭಾಗಕ್ಕೆ ಆಗಮಿಸಿದ್ದರು. ಈ ವೇಳೆ ಆಹ್ವಾನಿತರನ್ನು ಪೊಲೀಸರು ಬಿಡದೆ ಅರ್ಧ ಗಂಟೆ ಕಾಲ ಕಾಯಿಸಿ ಬೇರೆ ಗೇಟ್‌ನಲ್ಲಿ ಹೋಗುವಂತೆ ತಾಕೀತು ಮಾಡಿದ್ದರು. ಬೇರೆ ಗೇಟ್‌ನಲ್ಲಿ ತೆರಳಿದ್ದರೂ ಇಲ್ಲೇ ಬಿಡುವುದಕ್ಕೆ ಅವಕಾಶವಿಲ್ಲ ಎಂದು ಪೋಲಿಸರು ಸೂಚಿಸಿದ್ದರು. ಈ ಬಗ್ಗೆ ಕೆಲವರು ಪೊಲೀಸರ ಜತೆ ಮಾತಿನ ಚಕಮುಖಿ ನಡೆಸಿದರು. ಅಂತಿಮವಾಗಿ ಉನ್ನತ ಅಧಿಕಾರಿಗಳ ಗಮನಕ್ಕೆ ತಂದ ಬಳಿಕವೇ ಎಲ್ಲರನ್ನೂ ಮೈದಾನದ ಒಳಗೆ ಬಿಡಲಾಯಿತು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 3 =
Remember me
