ಬೆಂಗಳೂರು: ‘ತುಕ್ಡೇ ಗ್ಯಾಂಗ್’ ಪದ ಇತ್ತೀಚೆಗೆ ಬಹುಜನಜನಿತ. ಇದೇ ಪದ ಮಂಗಳವಾರ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತಿಕ್ಕಾಟಕ್ಕೆ ಸರಕಾಯಿತು. ಸಿಎಎ, ಎನ್​ಆರ್​ಸಿ ಬಗೆಗಿನ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಡುವೆ ಮಾತಿನ ಜಟಾಪಟಿ ನಡೆಯಿತು. ಎಮರ್ಜೆನ್ಸಿ ಬಗ್ಗೆಯೂ ಮಾತುಗಳು ಬಂದವು, ನಮ್ಮನ್ನು ಆ ಸಂದರ್ಭದಲ್ಲಿ ಭಾರತ್ ಮಾತಾಕೀ ಜೈ ಎಂದರೆ ಜೈಲಿಗೆ ಹಾಕಲಾಗಿತ್ತೆಂದು ಆರಗ ಜ್ಞಾನೇಂದ್ರ ಹೇಳಿದರು.
ಕಾಂಗ್ರೆಸ್​ನವರ ಪ್ರಕಾರ, ‘ಭಾರತ್ ಮಾತಾಕೀ ಜೈ’ ಎಂದರೆ ದೇಶ ದ್ರೋಹ ಎಂದು ಕೆ.ಎಸ್.ಈಶ್ವರಪ್ಪ ಹೇಳುತ್ತಿದ್ದಂತೆ ಸಿದ್ದರಾಮಯ್ಯ ಸಿಟ್ಟಾದರು. ಭಾರತ ಮಾತೆ ನಿಮ್ಮ ಆಸ್ತಿಯಲ್ಲ. ನಾವೆಲ್ಲ, 135 ಕೋಟಿ ಜನ ಭಾರತ ಮಾತೆಯ ಮಕ್ಕಳು ಎಂದು ತಿರುಗೇಟು ನೀಡಿದರು. ಇದಕ್ಕೆ ಸಚಿವ ಸಿ.ಟಿ.ರವಿ, ಅದರಲ್ಲಿ ಕೆಲವರು ತುಕ್ಡೆ ಗ್ಯಾಂಗ್ ಎಂದು ವ್ಯಂಗ್ಯವಾಡಿದಾಗ ವಾಗ್ವಾದ ಸೃಷ್ಟಿಯಾಯಿತು.
ತುಕ್ಡೆ ಗ್ಯಾಂಗ್ ಯಾರು ಎಂದು ಬಹಿರಂಗಪಡಿಸಿ ಎಂದು ಪ್ರಿಯಾಂಕ್ ಖರ್ಗೆ ಏರಿದ ದನಿಯಲ್ಲಿ ಪ್ರಶ್ನಿಸಿದಾಗ, ಬೊಮ್ಮಾಯಿ ನಮ್ಮ ಬಳಿ ಲಿಸ್ಟ್ ಇದೆ ಎಂದು ದಾಖಲೆ ಪ್ರದರ್ಶಿಸಿದರು. ಪ್ರಿಯಾಂಕ್ ಖರ್ಗೆ ಮುಂದುವರಿದು ಮಾತನಾಡಿ, ಬಿಜೆಪಿಯಲ್ಲಿ ಸಮನ್ವಯತೆ ಕಾಣುತ್ತಿಲ್ಲ. ಒಂದೆಡೆ ಕೇಂದ್ರ ಗೃಹ ಸಚಿವರು ದೇಶದಲ್ಲಿ ತುಕ್ಡೇ ಗ್ಯಾಂಗ್ ಎನ್ನುವುದೇ ಇಲ್ಲ ಎಂದು ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಐಟಿ ಸೆಲ್​ನವರ ಸೃಷ್ಟಿ ತುಕ್ಡೇ ಗ್ಯಾಂಗ್ ಎಂದು ಟೀಕಿಸಿದರು. ಒಂದೊಮ್ಮೆ ದೇಶದಲ್ಲಿ ತುಕ್ಡೇ ಗ್ಯಾಂಗ್ ಇದ್ದರೆ ಅವರನ್ನು ಏಕೆ ಬಂಧಿಸುವ ಪ್ರಯತ್ನ ಮಾಡಿಲ್ಲ, ಬಸವರಾಜ ಬೊಮ್ಮಾಯಿ ಕೂಡಲೇ ಪೊಲೀಸರಿಂದ ರಾಜ್ಯದಲ್ಲಿರುವ ತುಕ್ಡೇ ಗ್ಯಾಂಗ್ ಸದಸ್ಯರನ್ನು ತಾಕತ್ತಿದ್ದರೆ ಬಂಧಿಸಲಿ ಎಂದು ಸವಾಲು ಎಸೆದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಹಾಗೂ ಸಿ.ಟಿ.ರವಿ, ತುಕ್ಡೇ ಗ್ಯಾಂಗ್ ಎಲ್ಲಿದೆ ಎನ್ನುವವರೇ ಈ ಗ್ಯಾಂಗಿನ ಬೆನ್ನಿಗೆ ನಿಂತಿದ್ದಾರೆ. ಅವರೇ ಅದರ ಮಾಲಿಕರು ಎಂದು ಕುಟುಕಿದರು. ಅವರ ವಿರುದ್ಧ ಕ್ರಮಕ್ಕೆ ಮುಂದಾದರೆ, ಕೂಡಲೇ ಇನ್ನೊಂದು ಕಡೆಯಿಂದ ಅದನ್ನು ಕಾಂಗ್ರೆಸ್ ವಿರೋಧಿಸಲು ಶುರುಮಾಡುತ್ತಿದೆ. ತುಕ್ಡೇ ಗ್ಯಾಂಗಿಗೆ ಗುತ್ತಿಗೆ ಕೊಟ್ಟಿರುವುದೇ ಕಾಂಗ್ರೆಸ್​ನವರು ಎಂದು ಟೀಕಿಸಿದರು.
ತುಕ್ಡೇ ಗ್ಯಾಂಗಿನ ಬಗ್ಗೆ ಮಾತನಾಡುವ ಬಿಜೆಪಿ, ಹುಬ್ಬಳ್ಳಿ ಕೆಎಲ್​ಇ ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೊಷಣೆ ಕೂಗಿದ ವಿದ್ಯಾರ್ಥಿಗಳನ್ನೇಕೆ ಬಿಡುಗಡೆ ಮಾಡಿದರು? ಹುಬ್ಬಳ್ಳಿ ಕೆಎಲ್​ಇ ಕಾಲೇಜು, ಬೀದರ್ ಶಾಹೀನಾ ಶಾಲೆಯ ವಿಚಾರದಲ್ಲಿ ಏಕೆ ರಾಜ್ಯ ಸರಕಾರ ದ್ವಂದ್ವ ನಿಲುವು ಎಂದು ಪ್ರಶ್ನಿಸಿದರು. ವಿಷಯ ಇಷ್ಟಕ್ಕೆ ನಿಲ್ಲದೆ, ಕನ್ಹಯ್ಯ ಕುಮಾರ್ ಹೆಸರು ಪ್ರಸ್ತಾಪಿಸಿ ಅಫ್ಜಲ್​ನನ್ನು ಬೆಂಬಲಿಸಿದ ವ್ಯಕ್ತಿಗೆ ಕಾಂಗ್ರೆಸ್ ಬೆಂಬಲಿಸಿತ್ತು ಎಂದು ಬೊಮ್ಮಾಯಿ ಟೀಕಿಸಿದರೆ, ಅದಕ್ಕೆ ಪ್ರತಿಯಾಗಿ ದಿನೇಶ್ ಗುಂಡೂರಾವ್ ಬಿಜೆಪಿಯವರೇ ಕೆಲ ಉಗ್ರಗಾಮಿಗಳನ್ನು ಪಾಕಿಸ್ತಾನಕ್ಕೆ ಹೋಗಿ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ ಎಂದರು. ಪ್ರಿಯಾಂಕ್ ಖರ್ಗೆ, ಕರೆಯದೆ ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನುವುದಕ್ಕಾಗಿ ಹೋಗಿದ್ದು ಯಾರು? ಎಂದು ಲೇವಡಿ ಮಾಡಿದರು. ಬಳಿಕ ಸಿಎಂ ಯಡಿಯೂರಪ್ಪ ಚರ್ಚೆ ಹಳಿ ತಪ್ಪುತ್ತಿರುವುದನ್ನು ಗಮನಿಸಿ ಎರಡೂ ಕಡೆಯ ಸದಸ್ಯರನ್ನು ಸಮಾಧಾನಪಡಿಸಿ ಸಿದ್ದರಾಮಯ್ಯಗೆ ಮಾತು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಪೊಲೀಸರದ್ದು ರಾಕ್ಷಸೀ ಪ್ರವೃತ್ತಿ
ವಿಧಾನಸಭೆ: ಮಂಗಳೂರು ಗೋಲಿಬಾರ್ ಮತ್ತು ಶಾಹಿನ್ ಶಾಲೆ ಪ್ರಕರಣದಲ್ಲಿ ಪೊಲೀಸರ ಕ್ರಮವನ್ನು ಖಂಡತುಂಡವಾಗಿ ಟೀಕಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರದ್ದು ರಾಕ್ಷಸೀ ಪ್ರವೃತ್ತಿ ಎಂದು ಕಿಡಿಕಾರಿದ್ದಾರೆ. ಮಂಗಳವಾರ ನಿಲುವಳಿ ಸೂಚನೆ ಮಂಡಿಸಿದ ಅವರು, ಪೊಲೀಸರು ವಿವೇಚನೆ ಕಳೆದುಕೊಂಡಂತೆ ವರ್ತಿಸಿದ್ದಾರೆ, ಪೌರತ್ವ ಕಾಯ್ದೆ ವಿರೋಧಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಘೋರ ಅಪರಾಧ ಮಾಡಿದ್ದಾರೆ. ಐಪಿಸಿ ಸೆಕ್ಷನ್ 124 ಅನ್ನು ಓದಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು. ಅಲ್ಲದೆ, ಪೊಲೀಸ್ ರಾಜ್ಯವಾಗಿದೆ ಎಂದು ಟೀಕಿಸಿದರು.
ಮಂಗಳೂರಿನಲ್ಲೂ ಶಾಂತಿಯುತ ವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದರೆ ಯಾವುದೇ ಅಹಿತಕರ ಘಟನೆ ನಡೆಯುತ್ತಿರಲಿಲ್ಲ. ಪೊಲೀಸರು ಮೊದಲು ಲಾಠಿ ಚಾರ್ಜ್ ಮಾಡಿದರು, ಬಳಿಕ ಏಕಾಏಕಿ ಗೋಲಿಬಾರ್ ಮಾಡಿದರು. ಇಬ್ಬರು ಅಮಾಯಕರನ್ನು ಕೊಂದು ಹಾಕಿದರು. ಕಾರಣ ಕೇಳಿದರೆ, ಪ್ರತಿಭಟನಾಕಾರರು ಠಾಣೆಗೆ ನುಗ್ಗುತ್ತಿದ್ದರು, ರೈಫಲ್ ಅಂಗಡಿಗೆ ನುಗ್ಗುತ್ತಿದ್ದರು. ಹೀಗಾಗಿ ಅನಿವಾರ್ಯವಾಗಿ ಗೋಲಿಬಾರ್ ಮಾಡಿದೆವು ಎಂದು ಹೇಳುತ್ತಿದ್ದಾರೆ. ಬಳಿಕ ಅವರು ನನಗೆ ಮಂಗಳೂರಿಗೆ ಹೋಗಲು ಬಿಡದೇ ಹಕ್ಕನ್ನು ಕಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯದಲ್ಲಿ ಕಾನೂನು ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ವಣವಾಗುತ್ತಿದೆ. ಕಳೆದ ಕೆಲವು ತಿಂಗಳಿಂದಲೂ ಏನೇನೋ ನಡೆದಿದೆೆ ಎಂದರು. ಹೇಗೆ ಕಾನೂನು ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯೋ ಅಭಿಪ್ರಾಯ ನೀಡಲೂ ಹಕ್ಕು ನೀಡಲಾಗಿದೆ. ಆದರೆ ರಾಜ್ಯದಲ್ಲಿ ವಿರೋಧ ವ್ಯಕ್ತಪಡಿಸುವವರ ವಿರುದ್ಧ ರಾಜದ್ರೋಹ, ದೇಶ ದ್ರೋಹದ ಪ್ರಕರಣ ದಾಖಲಿಸುವುದು ಸಂವಿಧಾನದ ವಿರುದ್ಧ, ಪ್ರಜಾಪ್ರಭುತ್ವ ವಿರುದ್ಧವಾದ ಕ್ರಮ. ಹಕ್ಕು ಮೊಟಕು ಮಾಡಿದಂತೆ, ಕತ್ತು ಹಿಸುಕಿದಂತೆ ಎಂದು ಅಭಿಪ್ರಾಯಪಟ್ಟರು. ಪೌರತ್ವ ಕಾಯ್ದೆ, ಎನ್​ಆರ್​ಸಿ ವಿರೋಧ ಮಾಡಿದವರ ಮೇಲೆ ಸುಳ್ಳು ಮೊಕದ್ದಮೆ ಹಾಕಲಾಗಿದೆ. ಸರ್ಕಾರ ಪೊಲೀಸರನ್ನು ದುರುಪಯೋಗ ಮಾಡಿಕೊಂಡಿದೆ ಎಂದ ಅವರು, ಪೊಲೀಸರು ಕಾನೂನು ರೀತಿ ಕೆಲಸ ಮಾಡಲು ಬಿಡಬೇಕು, ಜತೆಗೆ ಅವರೂ ಯಾವುದೇ ಸರ್ಕಾರದ ಕೈಗೊಂಬೆಯಾಗಬಾರದು ಎಂದರು.
ಎಮರ್ಜೆನ್ಸಿ.. ಡಬಲ್ ಸ್ಟ್ಯಾಂಡರ್ಡ್
ಈಗ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುತ್ತಿಲ್ಲ ಎಂದು ಹೇಳುವ ಸಿದ್ದರಾಮಯ್ಯ, ತುರ್ತು ಪರಿಸ್ಥಿತಿ ಬಗ್ಗೆ ಏನು ಹೇಳುತ್ತಾರೆ ಎಂದು ಸಿ.ಟಿ.ರವಿ ಕೆಣಕಿದರು. ಈಗ ಕಾಂಗ್ರೆಸ್​ಗೆ ಜ್ಞಾನೋದಯ ಆದಂತಿದೆ ಎಂದರು. ಇದಕ್ಕೆ ಬಸವರಾಜ ಬೊಮ್ಮಾಯಿ ದನಿಗೂಡಿಸಿದಾಗ ಸಿದ್ದರಾಮ್ಯಯ ಕೆಲ ಕ್ಷಣ ನಿರುತ್ತರರಾದರು. ಬಳಿಕ ಸಾವರಿಸಿಕೊಂಡು, ಮೊದಲು ಮಂಗಳೂರು ಕೊಲೆ ಬಗ್ಗೆ ಮಾತನಾಡಿ ನಂತರ ಎಮರ್ಜೆನ್ಸಿ ಬಗ್ಗೆ ಮಾತಾಡೋಣ ಎಂದು ವಿಷಯವನ್ನು ಮತ್ತೆ ಹಳಿಮೇಲೆ ತರುವ ಪ್ರಯತ್ನ ಮಾಡಿದರು. ಆದರೆ, ಅಂದು ಎಮರ್ಜೆನ್ಸಿಯನ್ನು ನೀವೇ ವಿರೋಧ ಮಾಡಿದ್ದಿರಲ್ಲ ಎಂದು ಸಿ.ಟಿ. ರವಿ ಮತ್ತೆ ಮತ್ತೆ ಸಿದ್ದರಾಮಯ್ಯರನ್ನು ಕೆಣಕಿದಾಗ, ಕೆ.ಎಸ್.ಈಶ್ವರಪ್ಪ ಮಾತನಾಡಿ ಸಿದ್ದರಾಮಯ್ಯರದ್ದು ಡಬಲ್ ಸ್ಟ್ಯಾಂಡರ್ಡ್ ಎಂದು ಕುಟುಕಿದರು. ಬಳಿಕ ಎಮರ್ಜೆನ್ಸಿ ಬರಬಾರದಿತ್ತು, ಆಗಿ ಹೋಗಿದೆ, ಏಕೆ ಆಯಿತು, ಯಾವ ಕಾರಣಕ್ಕೆ ತಂದ್ರು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ವಿಷಯಕ್ಕೆ ವಿರಾಮ ಹಾಕಿದರು.
ಸಿಎಂ- ಮಾಜಿ ಸಿಎಂ ಜಂಗೀ ಕುಸ್ತಿ
ಬಿಎಸ್​ವೈ: ನಿಮಗೆ ಗೌರವ ಕೊಟ್ಟು ಸ್ಪೀಕರ್ ಚರ್ಚೆಗೆ ಅವಕಾಶ ನೀಡಿದರೂ ಈ ರೀತಿ ಮಾಡೋದು ಸರಿಯಲ್ಲ ರೀ.
ಸಿದ್ದರಾಮಯ್ಯ: ಏನ್ ಏನ್ ಕೊಟ್ಟಿದ್ದೀರಿ. ಈಗಲೇ ಚರ್ಚೆಗೆ ಅವಕಾಶ ಕೊಡಬೇಕು, ನಾಳೆಗೆ ಕೊಟ್ಟರೆ ವಿಷಯ ಸತ್ತು ಹೋಗುತ್ತೆ.
ಬಿಎಸ್​ವೈ: ಸ್ಪೀಕರ್ ಮೇಲೆ, ಪೀಠಕ್ಕೆ ಡೋಂಟ್ ಡಿಕ್ಟೇಟ್, ಒತ್ತಡ ಹೇರಬೇಡಿ.
ಸಿದ್ದರಾಮಯ್ಯ: ನಾನು ನನ್ನ ಹಕ್ಕನ್ನು ಕೇಳುತ್ತಿದ್ದೇನೆ, ಒತ್ತಡ ಹೇರುತ್ತಿಲ್ಲ.
ಬಿಎಸ್​ವೈ: ಇದು ನಿಮ್ಮ ಸರ್ವಾಧಿಕಾರಿ ಧೋರಣೆ.
ಸಿದ್ದರಾಮಯ್ಯ: ನಾನು ಸರ್ವಾಧಿಕಾರಿ ಆಗುವುದಿಲ್ಲ. ನನ್ನ ಹಕ್ಕುನ್ನು ಕೇಳುತ್ತಿದ್ದೇನಷ್ಟೇ.
ಬಿಎಸ್​ವೈ: ಸ್ಪೀಕರ್ ನಾಳೆ ಚರ್ಚೆಗೆ ಸಮಯ ನಿಗದಿ ಮಾಡಿದ ಮೇಲೆ ಮತ್ತೇನು ಬೇಕು?
ಸಿದ್ದರಾಮಯ್ಯ: ನೀವು ಹೇಳಿದಂತೆ ಕೇಳಬೇಕು ಎಂದಿಲ್ಲ.
ಬಿಎಸ್​ವೈ: ಸದನ ನೀವು ಹೇಳಿದಂತೆ ನಡೆಸಲು ಸಾಧ್ಯವಿಲ್ಲ. ನಿಯಮಾವಳಿ ಪ್ರಕಾರ ಸ್ಪೀಕರ್ ತೀರ್ಮಾನ ಮಾಡುತ್ತಾರೆ.
ಸಿದ್ದರಾಮಯ್ಯ: ಈ ರೀತಿ ಮಾಡುವುದಾದರೆ ಪ್ರತಿಪಕ್ಷವೇಕೆ ಬೇಕು? ಸದನ ಏಕೆ ಬೇಕು? ನಾವೇಕೆ ಇಲ್ಲಿಗೆ ಬರಬೇಕು?
ಬಿಎಸ್​ವೈ: ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಏನು ಚರ್ಚೆ ಆಗಿತ್ತು, ಅದರಂತೆ ಅವಕಾಶ ಕೊಟ್ಟಿಲ್ಲವಾ?
ಸಿದ್ದರಾಮಯ್ಯ: ಈಗಲೇ ಚರ್ಚೆಗೆ ಅವಕಾಶ ಕೊಡಿ ಅಷ್ಟೇ.
ಪರಿಚಯಿಸುವಾಗ ಅರ್ಹರು ನಾಪತ್ತೆ!
ಹೊಸದಾಗಿ ಸಂಪುಟ ಸೇರಿದ ಸಚಿವರನ್ನು ಸಂಪ್ರದಾಯದಂತೆ ಸದನಕ್ಕೆ ಪರಿಚಯಿಸಬೇಕೆಂದು ಮುಖ್ಯಮಂತ್ರಿ ಉತ್ಸಾಹ ತೋರಿದರೆ, ಬಹುತೇಕ ಅರ್ಹ ಸಚಿವರು ಆ ವೇಳೆ ಅಲ್ಲಿರದೆ ಸರ್ಕಾರ ನಗೆಪಾಟಲಿಗೀಡಾದ ಪ್ರಸಂಗ ನಡೆಯಿತು. ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಕಾಗದ ಪತ್ರಗಳ ಮಂಡನೆ ನಡೆಸಿದರು. ನಂತರ ಹೊಸ ಸಚಿವರನ್ನು ಪರಿಚಯಿಸುತ್ತೇನೆ ಎಂದರು. ಮೊದಲಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪರಿಚಯಿಸಿದರು. ಈ ವೇಳೆ ಅವರು ಎದ್ದು ನಿಂತು ಸದನಕೆ್ಕೆ ಧನ್ಯವಾದ ಸಲ್ಲಿಸಿದರು. ನಂತರ ಆನಂದ್ ಸಿಂಗ್, ನಾರಾಯಣ ಗೌಡ, ಎಸ್.ಟಿ.ಸೋಮಶೇಖರ ಪರಿಚಯಿಸಲು ಮುಂದಾದರು. ಆದರೆ ಅವರ್ಯಾರು ವಿಧಾನಸಭೆಯಲ್ಲಿ ಇರಲಿಲ್ಲ. ಇದಕೆ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ಸದನದಲ್ಲಿ ಸಚಿವರೇ ಇಲ್ಲ. ಯಾರನ್ನು ಪರಿಚಯ ಮಾಡಿಸುತ್ತಿದ್ದೀರಿ ಎಂದು ನಗೆಯಾಡಿದರು. ಈ ವೇಳೆ ಮಾತನಾಡಿದ ಸ್ಪೀಕರ್, ನೂತನ ಸಚಿವರನ್ನು ಕಾಂಗೆ್ರೆಸ್​ನವರಿಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ನಕ್ಕರು. ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿಜೆಪಿಗೇ ಪರಿಚಯದ ಅಗತ್ಯವಿದೆ. ಅವರನ್ನೆಲ್ಲ ನಾವೇ ಕಳಿಸಿಕೊಟ್ಟಿದ್ದೇವೆ, ಅವರ ಪರಿಚಯ ನಮಗೆ ಬೇಡ ಎಂದರು. ಪರಿಚಯ ಶಾಸ್ತ್ರದ ಬಳಿಕ ರಾಮಲಿಂಗಾರೆಡ್ಡಿ ಮಾತನಾಡಿ, ಹೊಸ ಸಚಿವರನ್ನು ಪರಿಚಯಿಸಿದರೂ ಆಡಳಿತ ಶಾಸಕರ ಮುಖದಲ್ಲಿ ಸಂತಸ ಕಾಣಿಸುತ್ತಿಲ್ಲ, ಲವಲವಿಕೆಯೇ ಇಲ್ಲ ಎಂದು ಛೇಡಿಸಿದರು. ಇದೆಲ್ಲ ನಡೆಯುವಾಗ 10 ಹೊಸ ಸಚಿವರ ಪೈಕಿ ಮೂವರು ಮಾತ್ರ ಇದ್ದರು.
ಕಾಲಹರಣ ಕೋಲಾಹಲ
ಸ್ಪೀಕರ್ ಬಳಸಿದ ‘ಕಾಲಹರಣ’ ಪದ ಪ್ರತಿಪಕ್ಷದ ತಾಳ್ಮೆ ಕಳೆದ ಪ್ರಸಂಗ ಮಂಗಳವಾರ ನಡೆಯಿತು. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿತ್ತು. ಪ್ರಾಥಮಿಕ ವಿಷಯ ಮಂಡನೆ ಬಳಿಕ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಕಾಗೇರಿ ತೀರ್ಮಾನ ನೀಡಿದರು. ಇಷ್ಟರ ನಡುವೆ ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್ ಆದಿಯಾಗಿ ಕೆಲವರು ಈಗಲೇ ಚರ್ಚೆ ಮುಂದುವರಿಸಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು. ಹೀಗಾಗಿ ಒಂದಷ್ಟು ಗೊಂದಲ ಮುಂದುವರಿದಿತ್ತು. ಸ್ಪೀಕರ್ ಮಧ್ಯಪ್ರವೇಶಿಸಿ ಎಲ್ಲರನ್ನು ಅವರವರ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಸೂಚಿಸುತ್ತ, ನಿಯಮ 60-69 ಬದಲಾವಣೆ ಒಂದು ‘ಕಾಲಹರಣ’ ಎಂದುಬಿಟ್ಟರು. ಅವರು ಪ್ರಾಥಮಿಕ ಹಂತದ ವಿಷಯ ಮಂಡನೆಯನ್ನೇ ಕಾಲಹರಣ ಎಂದಿದ್ದು ಎಂದು ಭಾವಿಸಿದ ಸಿದ್ದರಾಮಯ್ಯ, ಸ್ಪೀಕರ್ ವಿರುದ್ಧವೇ ಹರಿಹಾಯ್ದರು. ನಿಮ್ಮ ವಿಷಯ ಮಂಡನೆ ಬಗ್ಗೆ ಹೇಳಿದ್ದಲ್ಲ ಎಂದು ಸ್ಪೀಕರ್ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ, ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ನಾಯಕರಿರಲಿಲ್ಲ. ಸಿದ್ದರಾಮಯ್ಯ ಬೆನ್ನಿಗೆ ನಿಂತ ಅವರ ಪಕ್ಷದ ಮತ್ತೊಂದಿಷ್ಟು ಶಾಸಕರು ಗದ್ದಲ ಶುರು ಮಾಡಿದರು. ಅಂತಿಮವಾಗಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗದ ನಿರ್ಧಾರ ಮಾಡಿದರು ಎಂಬಲ್ಲಿಗೆ ವಿಷಯ ಕೊನೆಯಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
