|ಇಟಗಿ ಮಹಾಬಲೇಶ್ವರ ಭಟ್ಟಯಕ್ಷಗಾನ ಕಲಾವಿದ, ಸಿದ್ದಾಪುರ ಉತ್ತರಕನ್ನಡ.
ಪ್ರದರ್ಶನ ಕಲೆಯಾಗಿ ಅರಳಿನಿಂತ ಯಕ್ಷಗಾನದ ಬೇರುಗಳು ಇರುವುದು ಆರಾಧನಾ ಪದ್ಧತಿಗಳಿಂದ ಎನ್ನುವುದು ಮರೆಯಲಾಗದು. ಭಕ್ತರು ದೇವರಿಗೆ ಸಲ್ಲಿಸುವ ಹಲವು ರೀತಿಯ ಸೇವೆಗಳಲ್ಲಿ ಯಕ್ಷಗಾನವೂ ಒಂದು. ಇದನ್ನು ರಾತ್ರಿಯಿಡಿಯ ಬೆಳಕಿನ ಸೇವೆ ಎಂದು ಕರೆಯಲಾಗುತ್ತದೆ. ಲುಪ್ತನಾಟ್ಯ ಯಕ್ಷಗಾನ ಎಂದು ವಿದ್ವಾಂಸರು ಕರೆದ ತಾಳಮದ್ದಳೆ ಕೂಡ “ಜಾಗರ”ದ ಉದ್ದೇಶದ ಪ್ರದರ್ಶನವೇ. ಈ ಎಲ್ಲ ಆಯಾಮಗಳಿಂದ ರೂಪುಗೊಂಡ ಯಕ್ಷಗಾನವು ದಶಾವತಾರ ಆಟವೆನಿಸಿ ಜನರ ಮಧ್ಯೆ ಹಾಸುಹೊಕ್ಕಾಗಿದೆ.
ಪೂಜಾ ಪದ್ಧತಿ ಎಂದು ಆಚರಿಸುವ ಸಂದರ್ಭಗಳಲ್ಲಿ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನವು ಅನಿವಾರ್ಯವಾದೀತು. ಆದರೆ ಇಂದಿನ ಜನಜೀವನದ ಸ್ವರೂಪಗಳು ತುಂಬಾ ಬದಲಾಗಿ ಹೋಗಿವೆ. ಹಲವಾರು ಮಾರ್ಪಾಡುಗಳಿಂದ ಬದುಕಿನ ಇನ್ನಾವುದೋ ಮಗ್ಗುಲಿಗೆ ನಾವೆಲ್ಲರೂ ಹೊರಳಿಕೊಂಡಾಗಿದೆ. ಈ ಸಂದರ್ಭದಲ್ಲಿ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನಗಳು ಅನಿವಾರ್ಯವೇ ಅಂತ ಆಲೋಚಿಸುವ ಸಂದರ್ಭವೂ ಒದಗಿದೆ.
ಕಾಲಪ್ರವಾಹಕ್ಕೆ ತೆರೆದುಕೊಳ್ಳದ ವಸ್ತು, ವಿಷಯ, ವ್ಯಕ್ತಿಗಳು ಅಪ್ರಸ್ತುತರಾಗುವುದು ವಾಸ್ತವ. ಇದಕ್ಕೆ ಯಕ್ಷಗಾನವೂ ಹೊರತಲ್ಲ. ಆಯಾ ಕಾಲದಲ್ಲಿ ಸಾಮಾಜಿಕವಾಗಿ ಮೈ ಹೊರಳಿಸಿದ್ದರ ಪರಿಣಾಮವೇ ಇಂದಿಗೂ ಅದು ಜೀವಂತವಾಗಿದೆ. ಹಾಗೆಂದು ಮೂಲ ಆಕಾರವನ್ನೇ ಬಿಟ್ಟು ಇನ್ನೆಲ್ಲಿಯೋ ಪ್ರಸ್ತುತವಾಗಬೇಕೆಂಬ ಆಶಯ ನನ್ನದಲ್ಲ. ಸ್ವರೂಪವು ಕೆಡದೆ ನಾವೀನ್ಯದಿಂದ ಕಂಗೊಳಿಸಿದಾಗ ಮಾತ್ರ ಅದಕ್ಕೊಂದು ಮೌಲ್ಯ. ಈ ನೆಲೆಯಲ್ಲಿ ಯೋಚಿಸುವಾಗ ಕಾಲಮಿತಿ ಯಕ್ಷಗಾನ ಇಂದಿನ ಅನಿವಾರ್ಯ ಎನ್ನುವುದರಲ್ಲಿ ಸಂಶಯವಿಲ್ಲ. ವ್ಯಾವಹಾರಿಕ ಪ್ರಪಂಚದ ಬದುಕಿನಲ್ಲಿ ನಮ್ಮ ವೈಯಕ್ತಿಕ ವೃತ್ತಿ, ಆಸಕ್ತಿ, ಹವ್ಯಾಸಗಳು ತನ್ನತನವನ್ನು ಉಳಿಸಿಕೊಳ್ಳಬೇಕು ಅಂತಾದರೆ ಅದಕ್ಕೊಂದು ಮಿತಿ ಇರುತ್ತದೆ. ಇವುಗಳಿಗೆಲ್ಲ ಯಕ್ಷಗಾನದ ಸಂದರ್ಭವನ್ನು ಹೋಲಿಸಿದರೆ ಇಡಿ ರಾತ್ರಿಯ ಪ್ರದರ್ಶನ ಕಷ್ಟಸಾಧ್ಯ ಹಾಗೂ ಕಾರ್ಯಸಾಧುವಲ್ಲ.
ಜಂಜಾಟಗಳ ಮಧ್ಯೆ ಯಕ್ಷಗಾನಕ್ಕೆ ತೊಡಗಿಸಿಕೊಳ್ಳಲು ಎಷ್ಟೋ ವ್ಯಕ್ತಿಗಳಿಗೆ ಸಾಧ್ಯವೇ ಆಗುವುದಿಲ್ಲ. ಅಂಥವರಿಗೆ ಕಾಲಮಿತಿ ಪ್ರದರ್ಶನ ವರದಾನ. ಇದು ಒಂದು ಮುಖ ಮಾತ್ರ. ಯಕ್ಷಗಾನದ ಉಳಿದ ಮಗ್ಗುಲುಗಳನ್ನು ಪರೀಶಿಲಿಸಿದರೂ ಕಾಲಮಿತಿಯು ಅಗತ್ಯವೇ ಸರಿ. ಕಲಾವಿದರ, ಪರಿಚಾರಕರ ಆರೋಗ್ಯ, ಶಾರೀರಿಕ ಅನೂಕೂಲತೆಗಳು ಇವುಗಳನ್ನು ಗಮನಿಸಿದರೂ ಕಾಲಮಿತಿಯ ಪ್ರಾಮುಖ್ಯತೆಯು ಗೋಚರಿಸುತ್ತದೆ. ಸಂಘಟಕರಿಗೂ ಸಹ ಆರ್ಥಿಕವಾಗಿ ಹೊರೆಯ ಪ್ರಮಾಣ ಕಡಿಮೆಯಾಗುತ್ತದೆ. ಬೆಳಗಿನವರೆಗಿನ ಆಟದಲ್ಲಿ ಪ್ರೇಕ್ಷಕರ ಕೊರತೆಯೇ ಪ್ರಧಾನವಾಗಿ ಕಾಣುವಾಗ ಈ ಅನಗತ್ಯ ಹೊರೆಯನ್ನು ಇಳಿಸುವತ್ತ ಯೋಚಿಸಬೇಕಾಗುವುದು. ಇವೆಲ್ಲವುಗಳ ಮಧ್ಯೆ ಯಕ್ಷಗಾನ ಪ್ರದರ್ಶನದ ಎಲ್ಲ ಆಯಾಮಗಳನ್ನೂ ಗಮನಿಸೋಣ.
ಅದೇ ರಾಗ ತಾಳಗಳು, ನಾಟ್ಯ ಹಾಗೂ ಉಳಿದ ಚಟುವಟಿಕೆಗಳು ಪುನರಾವರ್ತನೆ ಆಗುತ್ತಿರುತ್ತವೆ. ಜಲಕ್ರೀಡೆ, ಯುದ್ಧನೃತ್ಯ, ಪ್ರಯಾಣ, ಚಾಲೂಕುಣಿತಗಳು ರಾತ್ರಿಯಿಂದ ಬೆಳಗಿನ ವರೆಗೆ ಮತ್ತೆ ಮತ್ತೆ ಬರುವ ಸಾಧ್ಯತೆಗಳೇ ಅಧಿಕ. ಇವುಗಳನ್ನು ಸರಿಯಾಗಿ ಸಂಯೋಜಿಸಿ ತೆರೆ ಒಡ್ಡೋಲಗದಂಥವುಗಳನ್ನು ಇಟ್ಟುಕೊಂಡು ಪ್ರದರ್ಶನಗಳನ್ನು ಸಿದ್ದಪಡಿಸಿದರೆ ಉತ್ತಮವಾಗುತ್ತದೆ. ಅಷ್ಟಕ್ಕೂ ಮೂರೋ ಮೂರೂವರೆ ಗಂಟೆಗಳ ಕಾಲಕ್ಕಾಗುವಷ್ಟು ಮಾತ್ರ ಯಕ್ಷಗಾನದ ಮೂಲದ್ರವ್ಯ ಎನ್ನುವುದು ವಿದ್ವಾಂಸರ ಅಭಿಮತ.
ಕೆಲವು ರಾಗಗಳಿಗೆ ಬೆಳಗಿನ ಜಾವದ ಪರಿಣಾಮ ಕೊಡಲಾಗದು, ಹೊಸ ಕಲಾವಿದರುಗಳಿಗೆ ರೂಪುಗೊಳ್ಳಲು ಪೂರಕವಲ್ಲ. ಕಾರ್ಯಕ್ರಮವು ಮುಗಿದ ಮೇಲೆ ಕಲಾವಿದರ, ಪ್ರೇಕ್ಷಕರ ವಸತಿ ಸಮಸ್ಯೆ ಇಂತವುಗಳೆಲ್ಲ ಕಾಲಮಿತಿ ಯಕ್ಷಗಾನದ ಮಿತಿಗಳು. ಕಲಾವಿದರ ವೈಯಕ್ತಿಕ ವರ್ಚಸ್ಸೊಂದನ್ನೇ ಕೇಂದ್ರೀಕರಿಸದೆ ಒಟ್ಟಂದದ ಪ್ರದರ್ಶನದ ಗುಣಮಟ್ಟಕ್ಕೆ ಒತ್ತನ್ನು ನೀಡಿ ಪದರ್ಶನವನ್ನು ಏರ್ಪಡಿಸಿದರೆ ಕಾಲಮಿತಿ ಯಕ್ಷಗಾನವು ಈ ರಂಗದ ಬೆಳವಣಿಗೆಗೆ ಪೂರಕವೇ ಸತ್ಯ. ಈ ಎಲ್ಲ ನೆಲೆಗಳಲ್ಲಿ ಕಾಲಮಿತಿ ಯಕ್ಷಗಾನವು ಕಾಲದ ಅಗತ್ಯ.

ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:16 − 2 =
Remember me
