ಇಸ್ಲಾಂ ಧರ್ಮದಲ್ಲಿ ಆಚರಿಸಲ್ಪಡುವ ಎರಡು ಪ್ರಮುಖ ಹಬ್ಬಗಳೆಂದರೆ ಒಂದು ರಂಜಾನ್, ಮತ್ತೊಂದು ಈದ್-ಅಲ್-ಅಜ್​ಹಾ ಅಥವಾ ಬಕ್ರೀದ್ ಹಬ್ಬ. ರಂಜಾನ್ ಹಬ್ಬವು ಪ್ರವಾದಿ ಮುಹಮ್ಮದರ ಕಾಲದಲ್ಲಿ ಕುರಾನ್ ಅವತರಣಿಕೆಯ ಹಿನ್ನೆಲೆಯಲ್ಲಿ ಉಪವಾಸ ಆಚರಿಸಿ ಧಾನ-ಧರ್ಮ ಮಾಡಿ ಆಚರಿಸುವ ಪ್ರವಾದಿ ಮುಹಮ್ಮದರಿಂದ ಪ್ರಾರಂಭಿಸಿಲ್ಪಟ್ಟ ಹಬ್ಬವಾದರೆ ಬಕ್ರೀದ್ ಹಬ್ಬದ ಹಿನ್ನೆಲೆ ಸ್ವಲ್ಪ ಭಿನ್ನ. ಮತ್ತು ಇಸ್ಲಾಂ ಧರ್ಮ ಕೇವಲ 1400 ವರ್ಷಗಳಷ್ಟು ಹಳೆಯದು ಎಂದು ನಂಬಿರುವವರ ಆಜ್ಞಾನವನ್ನು ದೂರ ಮಾಡುವ ಮಾರ್ಗದರ್ಶಿ ಹಬ್ಬದ ಆಚರಣೆಯಾಗಿದೆ.
ಪ್ರಪಂಚದ ಮೂರು ಪ್ರಮುಖ ಧರ್ಮಗಳಾದ ಕ್ರಿಶ್ಚಿಯನ್, ಇಸ್ಲಾಂ ಮತ್ತು ಯಹೂದಿ ಧರ್ಮಗಳು ಒಬ್ಬ ಮೂಲ ಪ್ರವಾದಿ ಅಬ್ರಹಾಂ/ಇಬ್ರಾಹಿಂರವರ ಸಂತತಿಯವರಿಂದ ಸ್ಥಾಪಿಸಲ್ಪಟ್ಟಿವೆ ಎಂಬುದನ್ನು ಈ ಮೂರು ಧರ್ಮಗಳ ಅನುಯಾಯಿಗಳು ನಂಬುತ್ತಾರೆ. ಮೂರೂ ಧರ್ಮಗಳ ಧರ್ಮಗ್ರಂಥಗಳಲ್ಲಿ ಅಬ್ರಹಾಂ/ಇಬ್ರಾಹಿಂರವರ ಬಗ್ಗೆ ತಮ್ಮದೇ ರೀತಿಯ ವ್ಯಾಖ್ಯಾನಗಳನ್ನು ನಂಬಿಕೊಂಡು ಬರಲಾಗುತ್ತಿದೆ. ಪ್ರಪಂಚದ ಬಹುತೇಕ ಧರ್ಮಗಳು ನಂಬುವ ಒಂದು ಉನ್ನತ ವ್ಯಕ್ತಿತ್ವ ಅಬ್ರಹಾಂ/ಇಬ್ರಾಹಿಂ ಆಗಿದ್ದಾರೆ. ಇವರು ಮೋಸೆಸ್, ಜೀಸಸ್, ಪ್ರವಾದಿ ಮುಹಮ್ಮದರಿಗಿಂತ ತುಂಬ ಹಿಂದೆ ಭೂಮಿ ಮೇಲೆ ವಾಸವಿದ್ದ ಪರಮ ದೈವಭಕ್ತ ಪ್ರವಾದಿಗಳಾಗಿದ್ದರು.
ಪ್ರವಾದಿ ಅಬ್ರಹಾಂ/ಇಬ್ರಾಹಿಂ ಅನನ್ಯ ದೈವಭಕ್ತರಾಗಿದ್ದರು. ಇವರಿಗೆ ಸಾರಾ ಮತ್ತು ಹಾಜಿರಾ ಎಂಬ ಇಬ್ಬರು ಪತ್ನಿಯರಿದ್ದರು. ಪ್ರವಾದಿ ಅಬ್ರಹಾಂ/ಇಬ್ರಾಹಿಂರವರಿಗೆ 90 ವರ್ಷ ವಯಸ್ಸಿನವರೆಗೂ ಮಕ್ಕಳಾಗುವುದಿಲ್ಲ. ಇವರ ಅನನ್ಯ ಪ್ರಾರ್ಥನೆಗಳಿಂದಾಗಿ ಅಲ್ಲಾಹನ ಕಡೆಯಿಂದ ಶುಭಸೂಚಕ ಸುದ್ದಿಯಾಗಿ ಹೆಂಡತಿ ಹಾಜಿರಾರ ಮೂಲಕ ಒಂದು ಗಂಡುಮಗುವಾಗುತ್ತದೆ. ಅದರ ಹೆಸರು ‘ಇಸ್ಮಾಯಿಲ್’. ಈ ಇಸ್ಮಾಯಿಲ್​ರ ಸಂತತಿಯಿಂದಲೇ ಇಸ್ಲಾಮಿಕ್ ಪ್ರವಾದಿ ಮುಹಮ್ಮದರ ಜನನವಾಗಿದೆ.
ಈ ರೀತಿಯಲ್ಲಿ ಹಲವಾರು ವರ್ಷಗಳ ನಂತರ ಒಂದು ಮಗುವನ್ನು ದಯಪಾಲಿಸಿದ ಅಲ್ಲಾಹನು ಪ್ರವಾದಿ ಇಬ್ರಾಹಿಂರನ್ನು ಪರೀಕ್ಷೆಗೆ ಒಡ್ಡುತ್ತಾನೆ. ಅದೇನೆಂದರೆ, ತನ್ನ ಹೆಂಡತಿ ಹಾಜಿರಾ ಮತ್ತು ಹಸುಗೂಸನ್ನು ಮರಳುಗಾಡಿನಲ್ಲಿ (ಈಗಿನ ಮಕ್ಕಾ) ಬಿಟ್ಟು ಹಿಂತಿರುಗಿ ನೋಡದೆ ಬರಲು ಜಿಬ್ರಯೀಲ್(ದೇವದೂತ)ರ ಮೂಲಕ ಆದೇಶ ನೀಡುತ್ತಾನೆ. ಅಲ್ಲಾಹನ ಆಜ್ಞೆಯನ್ನು ಪಾಲಿಸಲು ಕಟಿಬದ್ಧರಾಗಿದ್ದ ಪ್ರವಾದಿ ಇಬ್ರಾಹಿಂ ಅದೇ ತಾನೇ ಹುಟ್ಟಿದ್ದ ತನ್ನ ಕರುಳಿನ ಕುಡಿಯನ್ನೂ, ತನ್ನ ಪ್ರೀತಿಯ ಮಡದಿಯನ್ನೂ ಮರಳುಗಾಡಿನ ನಡುವೆ ಬಿಟ್ಟು ಪ್ರಾಣಹಿಂಡುವ ದುಃಖ ತಡೆದುಕೊಂಡು ಹಿಂದಿರುಗುತ್ತಾರೆ.
ಹೀಗೆ ಒಬ್ಬಂಟಿಯಾದ ಹಾಜಿರಾರವರು ಉರಿಬಿಸಿಲಿನ ಮರಳುಗಾಡಿನಲ್ಲಿ ಹಸುಗೂಸಿನ ದಾಹ ತಣಿಸಲು ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳಿಗೆ ಓಡಿ ಓಡಿ ನೀರನ್ನು ತರಲು ಪ್ರಯತ್ನಿಸುತ್ತಿರುವಾಗ ಅಳುತ್ತಿದ್ದ ಹಸುಗೂಸು (ಇಸ್ಮಾಯಿಲ್​ರವರು) ಕಾಲು ಬಡಿಯುತ್ತಿದ್ದ ಜಾಗದಲ್ಲಿ ಒಂದು ನೀರಿನ ಚಿಲುಮೆ ಉಕ್ಕುತ್ತದೆ. ಹಾಗೂ ಅದರಿಂದ ಆ ಮರಳುಗಾಡಿನಲ್ಲಿ ಅವರ ಜೀವನಕ್ಕೆ ದಾರಿಯನ್ನು ಭಗವಂತ ಸೃಷ್ಟಿಸಿದನೆಂದು ನಂಬಲಾಗಿದೆ. ಆ ನೀರಿನ ಚಿಲುಮೆಯೇ ಇಂದಿನ ಮಕ್ಕಾ ನಗರದಲ್ಲಿರುವ ‘ಆಟಿ ಝುಂಝುಂ’ ಎಂದು ನಂಬಲಾಗಿದ್ದು, ಹಜ್ ಯಾತ್ರೆಗೆ ಹೋದವರೆಲ್ಲ ಆ ಪವಿತ್ರ ನೀರನ್ನು ತಪ್ಪದೇ ತರುತ್ತಾರೆ. ಹಾಗೂ ಹಲವಾರು ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ ಆ ನೀರು ಅತ್ಯಂತ ಪರಿಶುದ್ಧ ಎಂದು ತಿಳಿದು ಬಂದಿದೆ. ಇನ್ನೂ ಹಜ್ ಪ್ರವಾಸ ಕೈಗೊಂಡ ಪ್ರತಿಯೊಬ್ಬರೂ ಹಾಜಿರಾರ ಸ್ಮರಣಾರ್ಥ ಸಫಾ ಮತ್ತು ಮರ್ವಾ ಬೆಟ್ಟಗಳಿಗೆ ಹೋಗಿ ಹತ್ತಿ ಇಳಿಯುವ ಪದ್ಧತಿ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಹೀಗೆ ಒಂದಷ್ಟು ವರ್ಷಗಳು ಕಳೆದ ನಂತರ ಪ್ರವಾದಿ ಇಬ್ರಾಹಿಂರಿಗೆ ಅಲ್ಲಾಹನ ಕಡೆಯಿಂದ ಮತ್ತೊಂದು ಸಂದೇಶ ಬಂದು ಹೆಂಡತಿ, ಮಗುವಿನೊಂದಿಗೆ ಕೂಡಿ ಬಾಳುವ ಆದೇಶ ಬರುತ್ತದೆ. ನಂತರ ಅಲ್ಲಾಹನ ಅಣತಿಯಂತೆ ಪ್ರವಾದಿ ಇಬ್ರಾಹಿಂರವರು ಹೆಂಡತಿ ಹಾಜಿರಾ ಮತ್ತು ಮಗ ಇಸ್ಮಾಯಿಲ್​ರನ್ನು ಕೂಡಿಕೊಳ್ಳುತ್ತಾರೆ.
ಹೀಗೆ ಒಂದಷ್ಟು ಸಮಯ ಕಳೆದ ನಂತರ ಅಲ್ಲಾಹನು ಪ್ರವಾದಿ ಇಬ್ರಾಹಿಂರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುತ್ತಾನೆ. ಈ ಸಾರಿ ಅಲ್ಲಾಹನ ಕಡೆಯಿಂದ ಇಬ್ರಾಹಿಂರವರಿಗೆ ತಮ್ಮ ಮಗ ಇಸ್ಮಾಯಿಲ್​ರನ್ನು ಬಲಿ ಕೊಡಬೇಕೆಂದು ಆದೇಶ ಬರುತ್ತದೆ. ಅಲ್ಲಾಹನ ಆಜ್ಞಾಪಾಲಕರಾದ ಪ್ರವಾದಿಯವರು ಬೆಟ್ಟದ ಮೇಲೆ ತೆರಳಿ ಚಿಕ್ಕ ಬಾಲಕನಾಗಿದ್ದ ಇಸ್ಮಾಯಿಲ್​ರಿಗೆ ಅಲ್ಲಾಹನ ಆದೇಶ ಹಾಗೂ ಆತನನ್ನು ಬಲಿಕೊಡಬೇಕಾಗಿರುವ ಬಗ್ಗೆ ತಿಳಿಸುತ್ತಾರೆ. ಭಗವಂತನ ಇಚ್ಛೆಯೇ ಪರಿಪೂರ್ಣ ಎಂದು ನಂಬಿದ್ದ ಮಗ ಖುಷಿಖುಷಿಯಾಗಿ ಬಲಿಯಾಗಲು ಸಿದ್ಧನಾಗುತ್ತಾನೆ. ಆದರೆ ಅಳುತ್ತಿದ್ದ ತಂದೆಗೆ ಒಂದು ಸಲಹೆ ನೀಡಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ತನ್ನ ಕತ್ತಿನ ಮೇಲೆ ಚೂರಿ ಇರಿಯುವಂತೆ ಆ ಚಿಕ್ಕಬಾಲಕ ಹೇಳಿದಾಗ ಪ್ರವಾದಿಯವರು ತಮ್ಮೆಲ್ಲ ಭಾವನೆ, ದುಃಖಗಳನ್ನು ಅಲ್ಲಾಹನಿಗಾಗಿ ತಡೆಹಿಡಿದು ಮಗನ ಬಲಿಕೊಡಲು ಮುಂದಾಗುತ್ತಾರೆ. ಆದರೆ ಅವರು ಬಲಿಕೊಟ್ಟಾದ ಮೇಲೆ ಕಣ್ಣಿನ ಬಟ್ಟೆ ತೆಗೆದು ನೋಡಿದರೆ ಅವರ ಮಗ ಪಕ್ಕದಲ್ಲಿ ನಗುತ್ತ ನಿಂತಿದ್ದರೆ, ಒಂದು ಕುರಿ ಬಲಿಯಾಗಿ ಒದ್ದಾಡುತ್ತಿದ್ದುದನ್ನು ಕಾಣುತ್ತಾರೆ. ಅಲ್ಲಾಹನು ಅವರ ದೈವಭಕ್ತಿಗೆ ಮೆಚ್ಚಿ ಮಗನನ್ನು ಉಳಿಸಿ ಕುರಿ ಬಲಿಯಾಗುವಂತೆ ಮಾಡುತ್ತಾನೆ. ಇದರ ಸ್ಮರಣಾರ್ಥವಾಗಿ ಪ್ರವಾದಿ ಮುಹಮ್ಮದರು ಮುಸಲ್ಮಾನರೆಲ್ಲರೂ ಬಕ್ರೀದ್ ಹಬ್ಬ ಆಚರಿಸಿ, ಪ್ರಾಣಿಬಲಿ ನೀಡುವಂತೆ ಆದೇಶಿಸಿದ್ದಾರೆ.
ಈ ಕತೆಯ ಹಿನ್ನೆಲೆಯಲ್ಲಿ ಮನುಷ್ಯಮಾತ್ರರಾದ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದ್ದೇನೆಂದರೆ, ಈ ಇಡೀ ಸೃಷ್ಟಿಯನ್ನು ಭೂಮಿ, ಗ್ರಹ, ನಕ್ಷತ್ರಾದಿಗಳನ್ನು ಸೃಷ್ಟಿಸಿರುವ ಒಂದು ದೊಡ್ಡ ಶಕ್ತಿಯೇ ಭಗವಂತ ಅಥವಾ ಅಲ್ಲಾಹ್. ಅವನ ಆಜ್ಞಾನುಸರಣೆ ಮಾಡಬೇಕೆಂಬುದನ್ನೇ ಪ್ರತಿಯೊಂದು ಧರ್ಮದ ಧರ್ಮಗ್ರಂಥವೂ ನಮಗೆ ತಿಳಿಸಿಕೊಡುವುದು. ಮನುಷ್ಯನಿಗೆ ಸ್ವನಿಯಂತ್ರಣ ಎಂಬುದಿಲ್ಲ. ಆತನಿಗೆ ಸ್ವೇಚ್ಛೆಯಿಂದ ವರ್ತಿಸಲು ಬಿಟ್ಟರೆ ಮೃಗಗಳಿಗಿಂತ ಕಡೆಯಾಗಿ ವರ್ತಿಸಬಲ್ಲ. ಹಾಗಾಗಿ ಪಾಪ-ಪುಣ್ಯ, ಒಳ್ಳೆಯದು, ಕೆಟ್ಟದ್ದು ಎಂಬ ವ್ಯತ್ಯಾಸ ತಿಳಿಯಬೇಕಾದರೆ ಮನುಷ್ಯ ಆ ಸೃಷ್ಟಿಕರ್ತನ ಆಜ್ಞಾಪಾಲಕನಾಗಿರಬೇಕು. ತನಗೆ ಬೇಕಾದಾಗ ಕೈಮುಗಿದು, ಉಳಿದ ಸಮಯದಲ್ಲಿ ಕಂಡವರ ಹಣ, ಕಂಡವರ ವಸ್ತುಗಳ ಮೇಲೆ ಕೆಟ್ಟದೃಷ್ಟಿ ಹಾಕುವುದು, ತನ್ನನ್ನು ತಾನು ನಿಯಂತ್ರಿಸಿಕೊಳ್ಳದೆ ತನ್ನ ಭಾವನೆಗಳ (ನಫ್ಸ್) ಜೊತೆಯಲ್ಲಿ ತೇಲಿ ಹೋಗಿ ಮಾಡಬಾರದ್ದನ್ನೆಲ್ಲ ಮಾಡುವ ಮನುಷ್ಯರು, ಪ್ರವಾದಿ ಇಬ್ರಾಹಿಂರವರ ಜೀವನದಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ.
ನಾವು ಕೆಟ್ಟದ್ದನ್ನು ತ್ಯಾಗ ಮಾಡಲು ಕಷ್ಟ ಪಡುವಾಗ, ಪ್ರವಾದಿ ಇಬ್ರಾಹಿಂ ಅಲ್ಲಾಹನಿಗಾಗಿ ಹೆಂಡತಿ-ಮಗುವನ್ನು ತ್ಯಾಗ ಮಾಡಿದರು. ನಾವು ಅಕ್ರಮ ಹಣ, ಆಸ್ತಿ, ಅಂತಸ್ತನ್ನು ತ್ಯಾಗ ಮಾಡಲು ಸಿದ್ಧರಿಲ್ಲ. ಆದರೆ ಅವರು ಅಲ್ಲಾಹನ ಸಂಪ್ರೀತಿಗಾಗಿ ಕರುಳಿನ ಕುಡಿಯನ್ನೇ ತ್ಯಾಗ ಮಾಡಿ ಬಲಿಕೊಡಲು ಸಿದ್ಧರಾದರು. ಹಾಗಾಗಿ ಕೇವಲ 60-70 ವರ್ಷ ಬದುಕುವ ಈ ಭೂಲೋಕದ ಬಾಳಿಗಾಗಿ ಅತಿ ಆಸೆ, ಅಹಂಕಾರ, ದುರ್ವರ್ಗದಲ್ಲಿ ನಡೆಯುವುದು, ಅಕ್ರಮ ಸಂಪತ್ತು, ಅಕ್ರಮ ಸಂಬಂಧಗಳಲ್ಲಿ ಭಾಗಿಯಾಗುವುದನ್ನು ತ್ಯಜಿಸಿ, ಅಲ್ಲಾಹನ ಸಂಪ್ರೀತಿಗಾಗಿ ಭೂಲೋಕದ ಅಕ್ರಮಗಳನ್ನು ತ್ಯಾಗ ಮಾಡುವಂತೆ, ತಮ್ಮೊಳಗಿನ ಅಹಂ ಅನ್ನು ಬಲಿಕೊಡುವಂತೆ ಬಕ್ರೀದ್ ಹಬ್ಬ ನಮಗೆ ಪ್ರತಿ ವರ್ಷ ಪಾಠ ಮಾಡಿ ಹೋಗುತ್ತದೆ.
ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 15 =
Remember me
