ನಮ್ಮದು ವೈವಿಧ್ಯತೆಯ ದೇಶ ಮತ್ತು ನಾಡು. ರಾಜ್ಯಭಾಷೆಯನ್ನು ಗೌರವಿಸುತ್ತಲೇ ಅವರವರ ಮಾತೃಭಾಷೆಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ. ಬಹುಭಾಷೆ, ಸಂಸ್ಕೃತಿ ಯನ್ನು ಗುರುತಿಸಿ, ಪ್ರೋತ್ಸಾಹಿಸಲು 2000ನೇ ಇಸ್ವಿಯಿಂದ ‘ವಿಶ್ವ ಮಾತೃಭಾಷಾ ದಿನ’ ಆಚರಿಸಿಕೊಂಡು ಬರಲಾಗುತ್ತಿದೆ. 1952ರಲ್ಲಿ ಅಂದಿನ ಪಾಕ್​ನ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ವನ್ನು ಅಧಿಕೃತ ಭಾಷೆಯಾಗಿಸಬೇಕೆಂದು ಹೋರಾಡಿ ಹುತಾತ್ಮರಾದವರ ನೆನಪಿಗೆ ಈ ಆಚರಣೆ. ತನ್ನಿಮ್ಮಿತ್ತ ಕರ್ನಾಟಕದಲ್ಲಿರುವ ವಿವಿಧ ಆಡುಭಾಷೆಗಳನ್ನು ಕಟ್ಟಿಕೊಡುವ ಪ್ರಯತ್ನ.
ನವಾಯತಿ ವೈಶಿಷ್ಟ್ಯ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರದ ಮಂಕಿ ಮತ್ತು ಮುರ್ಡೆಶ್ವರ, ಕುಂದಾಪುರದ ಕಡ್ಲೂರು ಭಾಗದಲ್ಲಿ ಮಾತ್ರ ಮುಸ್ಲಿಮರು ಬಳಸುವ ವಿಶಿಷ್ಟ ಭಾಷೆ ನವಾಯತಿ. 8ರಿಂದ 9ನೇ ಶತಮಾನದ ಅವಧಿಯಲ್ಲಿ ಭಾಷೆ ಉದ್ಭವವಾಗಿರಬಹುದೆಂಬ ಅಂದಾಜಿದೆ. ಏಕೆಂದರೆ ಭಟ್ಕಳಕ್ಕೆ ಅರಬ್ ದೇಶದಿಂದ ವ್ಯಾಪಾರಕ್ಕಾಗಿ ವಲಸೆ ಬಂದವರು ಇಲ್ಲಿನ ಜೈನ ಹಾಗೂ ಹಿಂದೂ ಮಹಿಳೆಯರನ್ನು ಮದುವೆಯಾದರು. ಆಗ ಸಂವಹನಕ್ಕಾಗಿ ಇಲ್ಲಿ ಬಳಕೆಯಲ್ಲಿದ್ದ ಕನ್ನಡ ಮತ್ತು ಕೊಂಕಣಿ ಭಾಷೆಯ ಶಬ್ದಗಳನ್ನು ಬಳಸಿಕೊಂಡು ಹೊಸ ಭಾಷೆ ಸೃಷ್ಟಿಸಿರಬಹುದು ಎನ್ನುತ್ತಾರೆ ಜಾನಪದ ತಜ್ಞ ಡಾ.ಜಮಿರುಲ್ಲಾ ಷರೀಫ್. ನವಾಯತಿಯಲ್ಲಿ ಯಾವುದೇ ಶಾಸನ ಅಥವಾ ಬರಹಗಳಿಲ್ಲ. ಉರ್ದುವನ್ನೇ ನವಾಯಿತಿ ಲಿಪಿಯನ್ನಾಗಿ ಇಲ್ಲಿನ ಜನ ಬಳಸುತ್ತಾರೆ.
ಕೊಂಕಣಿಯ ಶಕ್ತಿ
ಮಹಾರಾಷ್ಟ್ರದಿಂದ ಕರ್ನಾಟಕದವರೆಗೆ ಹಬ್ಬಿರುವ ಕೊಂಕಣ ಪ್ರದೇಶದ ಜನ ಬಳಸುವ ಭಾಷೆ ಕೊಂಕಣಿ. ಇದು ಇಂಡೋ ಆರ್ಯನ್ ವರ್ಗಕ್ಕೆ ಸೇರಿದ ಭಾಷೆಯಾಗಿದ್ದು, ಪ್ರಾಕೃತ, ಬಂಗಾಳಿ ಮತ್ತು ಆಸಾಮಿ ಭಾಷೆಗಳಿಂದ ವಿಕಸನಗೊಂಡಿದೆ. ಗೋವಾ ರಾಜ್ಯದ ಅಧಿಕೃತ ರಾಜ್ಯ ಭಾಷೆಯಾಗಿರುವ ಕೊಂಕಣಿ ಭಾರತ ಸಂವಿಧಾನದ 8 ಪರಿಚ್ಛೇದದಲ್ಲಿ ಸೇರಿಸಲ್ಪಟ್ಟ 22 ಭಾಷೆಗಳಲ್ಲಿ ಒಂದಾಗಿದೆ. ಭಾಷೆಗೆ ಅಧಿಕೃತ ಲಿಪಿಯಿಲ್ಲ. ಗೋವಾ, ಕಾರವಾರ ಭಾಗದವರು ದೇವನಾಗರಿ ಲಿಪಿಯನ್ನು ಮಂಗಳೂರು ಭಾಗವದವರು ಕನ್ನಡವನ್ನೂ ಲಿಪಿಯನ್ನಾಗಿ ಬಳಸುತ್ತಾರೆ. 25 ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಕೊಂಕಣಿ ಸಾಹಿತ್ಯ ಅಕಾಡೆಮಿ ರಚಿಸಿದೆ. ಕೊಂಕಣಿ ಭಾಷೆಯಲ್ಲಿ ಯಕ್ಷಗಾನ ಪ್ರಯೋಗವಾಗಿದೆ. ಸಾಕಷ್ಟು ನಾಟಕಗಳು ರಚನೆಯಾಗಿವೆ. ಕೊಂಕಣಿ ಭಾಷಿಗರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಪಂಜೆ ಮಂಗೇಶ ರಾವ್, ಎಂ.ಎನ್.ಕಾಮತ್, ಗೋವಿಂದ ಪೈ, ದಿನಕರ ದೇಸಾಯಿ, ಗಂಗಾಧರ ಚಿತ್ತಾಲ, ಯಶವಂತ ಚಿತ್ತಾಲ, ಗೌರೀಶ ಕಾಯ್ಕಿಣಿ, ನಾ.ಡಿಸೋಜಾ, ಜಯಂತ ಕಾಯ್ಕಿಣಿ ಕೊಂಕಣಿ ಮಾತೃಭಾಷೆಯನ್ನಾಡುವವರು ಎಂಬುದು ವಿಶೇಷ.
ವಿಶೇಷ ಸಿದ್ದಿ
ಗೋವಾ ಪ್ರಾಂತ್ಯವನ್ನಾಳಿದ ಪೋರ್ಚುಗೀಸರು ಗುಲಾಮರಾಗಿ ಕರೆತಂದ ನಿಗ್ರೋಗಳು ಉತ್ತರ ಕನ್ನಡದ ಸಿದ್ದಿ ಬುಡಕಟ್ಟು ಜನರಾಗಿದ್ದು, ತಮ್ಮದೇ ವಿಶಿಷ್ಟ ಶೈಲಿಯ ಕೊಂಕಣಿ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಜನಾಂಗದಲ್ಲಿ ಹಿಂದೂ, ಕ್ರಿಶ್ಚಿಯನ್ ಮುಸ್ಲಿಂ ಹೀಗೆ ಮೂರೂ ಧರ್ಮವನ್ನು ಅನುಸರಿಸುವವರಿದ್ದಾರೆ. ಸಿದ್ದಿಗಳು ಆಯಾ ಪ್ರದೇಶದ ಭಾಷೆಯನ್ನು ಕೊಂಚ ಪರಿವರ್ತನೆಯೊಂದಿಗೆ ತಮ್ಮದಾಗಿಸಿಕೊಂಡಿದ್ದಾರೆ.
ಹವ್ಯ-ಕವ್ಯದ ಸವಿ
ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೆಲಮಟ್ಟಿಗೆ ಚಿಕ್ಕಮಗಳೂರು ಹಾಗೂ ಕೇರಳದ ಕಾಸರಗೋಡಿನಲ್ಲಿ ನೆಲೆಸಿದ ಬ್ರಾಹ್ಮಣ ಸಮುದಾಯ ಮಾತನಾಡುವ ವಿಶಿಷ್ಟ ಭಾಷೆ ಹವಿಗನ್ನಡ. ಇದು ಕನ್ನಡವೇ ಆದರೂ ಹಲವು ರೂಪಾಂತರಗೊಂಡ ಶಬ್ದಗಳನ್ನು ಒಳಗೊಂಡಿದೆ. ಹವ್ಯ-ಕವ್ಯಗಳನ್ನು ಆಚರಣೆ ಮಾಡುವುದರಿಂದ ಹವ್ಯಕ ಎಂಬ ಶಬ್ದ ಮೂಡಿತು ಎನ್ನುವವರೂ ಇದ್ದಾರೆ. ಆದರೆ, ಭಾಷೆ ಮತ್ತು ಸಮುದಾಯದ ಮೂಲವನ್ನು ನಿಖರವಾಗಿ ಹೇಳಲು ಇನ್ನಷ್ಟು ಅಧ್ಯಯನ ನಡೆಯಬೇಕಿದೆ ಎಂದು ಧಾರವಾಡ ಕವಿವಿ ಜಾನಪದ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಶಾಲಿನಿ ರಘುನಾಥ ಪುಸ್ತಕವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. ಕನ್ನಡದ ಶಬ್ದಗಳನ್ನೇ ರೂಪಾಂತರ ಮಾಡಿರುವುದರಿಂದ ಈ ಭಾಷೆಗೆ ಪ್ರತ್ಯೇಕ ಲಿಪಿಯ ಪ್ರಶ್ನೆಯೇ ಬಂದಿಲ್ಲ. ಶಾಸನಗಳಿಲ್ಲ. ಉದಾಹರಣೆಗೆ ಹೋಗುತ್ತೇನೆ ಎನ್ನಲು ಹವ್ಯಕದಲ್ಲಿ ಹೋಗ್ತೆ, ಹೋಗ್ತಿ ಎನ್ನಲಾಗುತ್ತದೆ. ಬಂದಿದ್ದಾನೆ ಎನ್ನಲು ಬಂಜ, ಬೈಂದ ಎಂಬ ಪದಗಳು ಬಳಕೆಯಲ್ಲಿವೆ. ಇತ್ತೀಚೆಗೆ ಹವ್ಯಕ ಭಾಷೆಯಲ್ಲಿ ಸಾಹಿತ್ಯ ರಚನೆ ನಡೆಯುತ್ತಿದೆ.
ಫೇಸ್​ಬುಕ್ ಪೇಜ್​ಗಳು, ವ್ಯಾಟ್ಸ್​ಆಪ್ ಗ್ರೂಪ್​ಗಳ ಮೂಲಕ ಹಾಡುಗಳು, ಮಾತುಕತೆಗಳು ಪ್ರಸಿದ್ಧವಾಗುತ್ತಿವೆ. ಕೆಲವು ಕನ್ನಡ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಹವ್ಯಕ ಭಾಷೆಯನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿದೆ.
ಹವ್ಯಕ ಭಾಷೆಯ ಕುರಿತಾಗಿ ಎರಡು ಸಂಶೋಧನಾ ಮಹಾ ಪ್ರಬಂಧಗಳು ರಚನೆಗೊಂಡಿವೆ. 1966ರಲ್ಲಿ ಜಿ.ಕೆ.ಶಾಸ್ತ್ರಿ ‘ದ ಹವ್ಯಕಾ ಡೈಲೆಕ್ಟ್ ಆಫ್ ನಾರ್ತ್ ಕರ್ನಾಟಕ’ ಎಂಬ ಗ್ರಂಥವನ್ನು ಕವಿವಿಗೆ ಸಾದರ ಪಡಿಸಿದರು. 1984ರಲ್ಲಿ ಶಾಲಿನಿ ರಘುನಾಥ ‘ದ ಸೋಶಿಯೋ ಲಿಂಗ್ವಿಸ್ಟಿಕ್ ಎನಾಲಿಸಿಸ್ ಆಫ್ ಹವ್ಯಕಾ ಡೈಲೆಕ್ಟ್ ಆಫ್ ನಾರ್ತ್ ಕರ್ನಾಟಕ’ ಎಂಬ ಗ್ರಂಥ ಸಾದರಪಡಿಸಿದ್ದಾರೆ. ಹಡಿನಬಾಳದ ಡಾ.ಗಜಾನನ ಹೆಗಡೆ 2017ರಲ್ಲಿ ಹೊರ ತಂದ ‘ಹವ್ಯಕ ಜನಪದ ಸಂಸ್ಕೃತಿ’ ಎಂಬ ಗ್ರಂಥದಲ್ಲೂ ಭಾಷೆ ಕುರಿತು ವಿವರಣೆ ಇದೆ.
ವೀರಭಾಷೆ ಕೊಡವ
ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ 18 ಕೊಡವ ಮೂಲನಿವಾಸಿಗಳು ಲಿಪಿರಹಿತವಾದ ಕೊಡವ ಭಾಷೆ ಬಳಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಂತರ್ಜಾಲದಲ್ಲಿ ಇಂಗ್ಲಿಷ್ ಬಳಸಿಕೊಂಡು ಕೊಡವ ಭಾಷೆಯಲ್ಲಿ ಸಂವಹನ ನಡೆಸಲಾಗುತ್ತಿದೆ. 2 ಲಕ್ಷ ಜನರು ಕೊಡವ ಭಾಷೆ ಬಳಸುತ್ತಿದ್ದು, ಭಾಷೆ ಉಳಿವಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಯುಕೋ ಸೇರಿದಂತೆ ವಿವಿಧ ಸಂಘಟನೆಗಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ಗಮನ ಸೆಳೆಯುತ್ತ ಬಂದಿವೆ.
ಹಾಲಕ್ಕಿಗಳ ಕನ್ನಡ
ಕನ್ನಡ ಭಾಷೆಯ ಮತ್ತೊಂದು ಸ್ವರೂಪಗಳಲ್ಲಿ ಹಾಲಕ್ಕಿಗಳ ಭಾಷೆಯೂ ಒಂದು. ಉತ್ತರ ಕನ್ನಡದ ಕರಾವಳಿಯಲ್ಲಿ ಹಾಲಕ್ಕಿ ಒಕ್ಕಲಿಗರು ವಾಸವಾಗಿದ್ದಾರೆ. ಮುಗ್ಧ ಬುಡಕಟ್ಟು ಸಮುದಾಯದವರು ತಮ್ಮದೇ ಶೈಲಿಯಲ್ಲಿ ಕನ್ನಡವನ್ನು ಬಳಸುತ್ತ ಬಂದಿದ್ದಾರೆ. ಇದೇ ಹಾಲಕ್ಕಿ ಜಾನಪದ ಹಾಡುಗಳನ್ನು ಹಾಡುವ ಅಂಕೋಲಾದ ಸುಕ್ರಿ ಬೊಮ್ಮ ಗೌಡ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿರುವುದನ್ನು ಇಲ್ಲಿ ನೆನಪಿಸಬಹುದು.
ದನಗರ ಗೌಳಿಗರ ಮರಾಠಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ, ಯಲ್ಲಾಪುರ, ಧಾರವಾಡ ಹಾಗೂ ಬೆಳಗಾವಿಯ ಜಿಲ್ಲೆಗಳ ಕೆಲ ತಾಲೂಕುಗಳಲ್ಲಿ ಕಂಡು ಬರುವ ಗೌಳಿ ಜನಾಂಗ ಮರಾಠಿ ಮಿಶ್ರಿತ ವಿಶಿಷ್ಟ ಆಡುಭಾಷೆಯನ್ನು ಹೊಂದಿದೆ. ಗೌಳಿಗರ ಮರಾಠಿ ಭಾಷೆಯ ಲಾವಣಿಗಳು, ಒಗಟುಗಳು, ಕಥೆಗಳು ಎಲ್ಲವೂ ಮೌಖಿಕವಾಗಿ ಹರಿದು ಬಂದಿದ್ದಾಗಿವೆ. ಭಾಷೆಗೆ ಕನ್ನಡವನ್ನೇ ಲಿಪಿಯನ್ನಾಗಿ ಬಳಸಲಾಗುತ್ತಿದೆ.
ತುಳು ಸೊಗಡು
ಕರಾವಳಿ ಜಿಲ್ಲೆಗಳಾದ ಕಾಸರ ಗೋಡಿನಿಂದ ತೊಡಗಿ ಉಡುಪಿ ಜಿಲ್ಲೆಯ ಕುಂದಾಪುರದವರೆಗೆ ಪ್ರಮುಖವಾಗಿ ಜನರು ಆಡುವ ಭಾಷೆ ತುಳು. ದೇಶದೆಲ್ಲೆಡೆ ಹರಡಿಕೊಂಡು ‘ನಾವು ತುಳುವರು’ ಎಂಬ ಹೆಮ್ಮೆಯಿಂದ ಮಾತನಾಡುವ ಭಾಷೆಯೂ ಹೌದು. ಭಾರತ ಜನನಿಯ ತನುಜಾತೆ ಹೇಗೆ ಕನ್ನಡಾಂಬೆಯೋ ಹಾಗೆಯೇ ಕನ್ನಡಾಂಬೆಯಂತೆಯೇ ಸ್ಮರಣೀಯಳು ತುಳುವಪ್ಪೆ (ತುಳು ಜನನಿ). ತುಳು ಎನ್ನುವುದು ಭಾಷೆಯಾಗಿಯಷ್ಟೇ ಉಳಿಯದೆ ಪ್ರತ್ಯೇಕವಾಗಿ ರಾಜ್ಯವಿಲ್ಲದಿದ್ದರೂ ನಮ್ಮದು ತುಳುನಾಡು ಎಂಬಷ್ಟರ ಮಟ್ಟಿಗೆ ಸಂಸ್ಕೃತಿ, ಆಚಾರ ವಿಚಾರ, ಜನಪದ, ಸಂಪ್ರದಾಯ, ಕ್ರೀಡೆಗಳನ್ನು ಬೆಸೆದುಕೊಂಡು ಸಮೃದ್ಧವಾಗಿರುವುದು ತುಳುವ ಜೀವನ ಪದ್ಧತಿ. ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಸಂವಿಧಾನದ 8ನೇ ಷೆಡ್ಯೂಲಿಗೆ ಸೇರಿವೆ. ಆದರೆ ತುಳು ಶಾಸ್ತ್ರಜ್ಞರ ಪ್ರಕಾರ ಮಲಯಾಳಂ ಉಗಮವಾಗಿದ್ದೇ ತುಳು ಭಾಷೆಯಿಂದ. ಹಾಗಿದ್ದರೂ ತುಳು ಮಾತ್ರ ಷೆಡ್ಯೂಲಿಗೆ ಸೇರಿಲ್ಲ. ಪ್ರಸ್ತುತ ತುಳುಭಾಷೆಯನ್ನು ಆಡುವ ಜನರ ಸಂಖ್ಯೆ 20 ಲಕ್ಷಕ್ಕೂ ಅಧಿಕ ಎನ್ನುತ್ತವೆ ಜನಗಣತಿ ದಾಖಲೆಗಳು.
ಬ್ಯಾರಿ
ಬ್ಯಾರಿಗಳು ಅವಿಭಜಿತ ದ.ಕ ಮಾತ್ರವಲ್ಲದೆ, ಭಾರತದಲ್ಲೇ ಅತ್ಯಂತ ಪುರಾತನ ಮುಸ್ಲಿಂ ಸಮುದಾಯದವರಾಗಿದ್ದು, 1,200 ವರ್ಷದ ನಿಖರ ಐತಿಹಾಸಿಕ ಹಿನ್ನೆಲೆಯಿದೆ. ಸಂಶೋಧಕರ ಪ್ರಕಾರ ‘ಬ್ಯಾರಿ’ ಎನ್ನುವ ಪದ ತುಳುವಿನ ‘ಬ್ಯಾರ’ ಎಂಬ ಶಬ್ದದಿಂದ ಉದ್ಭವಗೊಂಡಿದ್ದು, ‘ವ್ಯಾಪಾರ’ ಎಂಬುದು ಇದರ ಅರ್ಥ. ಈ ಸಮುದಾಯವರು ಮಾತನಾಡುವ ಭಾಷೆಯೇ ‘ಬ್ಯಾರಿ’. ರಾಜ್ಯ ಸರ್ಕಾರ 2007ರಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಿದೆ.
ಕೊರವ ಕಲೆ
ಮದುವೆ, ಮುಂಜಿ, ಜಾತ್ರೆ ಯಾವುದೇ ಶುಭ ಸಮಾರಂಭವಿರಲಿ ಭಾಜಾ-ಭಜಂತ್ರಿ ಇರದಿದ್ದರೆ ಪರಿಪೂರ್ಣ ಆಗುವುದೇ ಇಲ್ಲ. ಮಂಗಳಕರವಾದ ಶಹನಾಯಿ ವಾದನಕ್ಕೆ ಇವರದ್ದು ಎತ್ತಿದ ಕೈ. ಅವರೇ ಭಜಂತ್ರಿಗಳು ಅಥವಾ ಕೊರವರು. ದ್ರಾವಿಡ ತಮಿಳು ಜನಾಂಗಕ್ಕೆ ಸೇರಿದ ಇವರಲ್ಲಿ ಪುರುಷರು ವಾದ್ಯ ನುಡಿಸುವಲ್ಲಿ ನಿಪುಣತೆ ಹೊಂದಿದ್ದರೆ, ಮಹಿಳೆಯರು ಬುಟ್ಟಿ, ಪೊರಕೆ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಸಂಪರ್ಕ ಭಾಷೆಯಾಗಿ ಸಮಾಜದವರು ಕೊರವ ಭಾಷೆಯನ್ನು ಮಾತನಾಡುತ್ತಾರೆ. ಈ ಭಾಷೆಯಲ್ಲಿ ಶೇಕಡ 60ರಷ್ಟು ತಮಿಳು ಶಬ್ದಗಳಿವೆ. ಕೊರವ ಭಾಷೆಗೆ ಶಾಸನಗಳು ಲಭ್ಯವಿಲ್ಲ. ಲಿಪಿಯೂ ಇಲ್ಲ.
ಬಳ್ಳಾರಿಯಲ್ಲಿ ಭಾಷೆಗಳ ಸಂಗಮ
ಬಳ್ಳಾರಿ ಜಿಲ್ಲೆಯಲ್ಲಿ ಅನ್ಯ ಭಾಷಿಕರ ಪೈಕಿ ತೆಲುಗು, ತಮಿಳು, ಮಲೆಯಾಳಂ, ಉರ್ದು, ರಾಜಸ್ಥಾನಿ, ಗುಜರಾತಿ, ಮರಾಠಿ ಮಾತನಾಡುವ ಜನರಿದ್ದಾರೆ. ಜಿಲ್ಲೆಯಲ್ಲಿ ಲಂಬಾಣಿ ಮಾತನಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊರಮ, ಕೊರಚ ಸಮುದಾಯದವರು ಕುಳುವ ಭಾಷೆ ಮಾತನಾಡುತ್ತಾರೆ. ಶಿಳ್ಳೆಕ್ಯಾತ, ಹಂಡಿ ಜೋಗಿ, ಗೋಂಧಳಿ, ಬುಡ್ಗ ಜಂಗಮ, ಚೆನ್ನದಾಸರ, ಸಿಂಧೊಳ್ಳು, ಹೆಳವ ಸೇರಿ ವಿವಿಧ ಸಮುದಾಯದವರು ಕನ್ನಡ, ತೆಲುಗು, ಮರಾಠಿ ಮಾತನಾಡುತ್ತಾರೆ. ರಾಯಚೂರು ಜಿಲ್ಲೆಯಲ್ಲಿ ವಾಸವಿರುವ ಲಂಬಾಣಿ, ಕೊರವ, ಕೊರಚ ಸಮುದಾಯವು ಕನ್ನಡದ ಜತೆ ಲಿಪಿ ಇಲ್ಲದ ಲಂಬಾಣಿ ಭಾಷೆಯನ್ನು ಮನೆ ಮಾತಾಗಿ ಬಳಸುತ್ತಾರೆ. ಲಿಪಿ ರಚಿಸುವಂತೆ ಸಮುದಾಯದ ಜನರು ಹಲವಾರು ಸಲ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬಂಜಾರ ಅಭಿವೃದ್ಧಿ ನಿಗಮ ಇದೆ.
ಸಂಕೇತದಿಂದಲೇ…
900 ವರ್ಷಗಳ ಹಿಂದೆ ಹಳೇ ಮೈಸೂರು, ಮಲೆನಾಡು ಭಾಗದ ಸೀಮಿತ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡ ಸಂಕೇತಿಗಳು ಆಡುವ ಭಾಷೆಯೇ ವಿಭಿನ್ನ. ಗೂಢಾರ್ಥವಾಗಿ, ಸಂಕೇತದಿಂದ ಭಾಷೆ ಬಳಕೆಯಾಗುತ್ತದೆ ಎಂಬ ಪರಿಕಲ್ಪನೆಯಲ್ಲಿ ಇದಕ್ಕೆ ಸಂಕೇತಿ ಎಂಬ ಹೆಸರೂ ಬಂತು ಎನ್ನುತ್ತಾರೆ ಭಾಷಾಶಾಸ್ತ್ರಜ್ಞರು. ಒಂದೇ ಮಾತಿನಲ್ಲಿ ಹೇಳುವುದಾದರೆ ಸಂಕೇತಿ ಭಾಷೆ ‘ಪಂಚಭಾಷೆಗಳ ಸಂಗಮ’. ತಮಿಳು, ತೆಲುಗು, ಮಲಯಾಳಂ, ತುಳು, ಕೊಡವ ಭಾಷೆ ಪದಗಳೊಂದಿಗೆ ಕನ್ನಡದ ಕೆಲ ಪದಗಳು, ಹಲವು ಸ್ವತಂತ್ರ ಪದಗಳು ಇದರಲ್ಲಿ ಸೇರಿಕೊಂಡಿವೆ. ಕೃಷಿ ಹಾಗೂ ವೇದಾಧ್ಯಯನಕ್ಕೆ ಹೆಚ್ಚು ಒತ್ತು ನೀಡುವ ಸಂಕೇತಿಗಳು, ಸಂಸ್ಕೃತ, ಸಂಸ್ಕೃತಿಯ ಪರಿಚಾರಕರೆಂದೇ ಪ್ರತೀತಿ. ವೀಣೆ, ಸಂಗೀತ, ಗಮಕ ಕ್ಷೇತ್ರದಲ್ಲಿ ಸಂಕೇತಿಗಳ ಸಾಧನೆ ಶ್ರೇಷ್ಠತೆಯ ಪ್ರತೀಕ. ಕನ್ನಡವನ್ನೇ ಲಿಪಿಯಾಗಿ ಬಳಸುತ್ತಾರೆ. ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ‘ಸಾರ್ಥ’ ಕೃತಿಯನ್ನು ಡಾ.ಬಿ.ಎಸ್.ಪ್ರಣತಾರ್ತಿಹರನ್ ‘ಸಾರ್ಥು’ ಹೆಸರಿನಲ್ಲಿ ಸಂಕೇತಿ ಭಾಷೆಗೆ ಅನುವಾದಿಸಿದ್ದಾರೆ.
ಸಾಂಸ್ಕೃತಿಕ ರಾಯಭಾರಿ
ಬಂಜಾರ, ಲಮಾಣಿ, ಗೋರ್​ವಾಟಿ ಎಂಬ ಹೆಸರಿನಿಂದ ಕರೆಯಲ್ಪಡುವ ಲಂಬಾಣಿ ಸಮುದಾಯ ಸಂಸ್ಕೃತಿಯ ಆಗರವಾಗಿದೆ. ಲಂಬಾಣಿ ಸಮುದಾಯದ ಭಾಷೆ, ಸಾಹಿತ್ಯ, ಸಂಪ್ರದಾಯ, ಆಚರಣೆ ಸೇರಿ ಸಮುದಾಯದ ಜೀವನದ ಸಮಗ್ರ ವಿವರ ದಾಖಲೀಕರಿಸುವ ಕಾರ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ನಡೆಯುತ್ತಿದೆ. ಲಂಬಾಣಿ ಗಾದೆಗಳು (ಕನ್ನಡ ಅರ್ಥಸಹಿತ), ಲಂಬಾಣಿಗರ ಒಗಟುಗಳು, ಭೀಮಾಸತಿ ಖಂಡ ಕಾವ್ಯ, ಹೂನಾಸತಿ ಖಂಡಕಾವ್ಯ, ಸಿತಾಸತಿ ಖಂಡಕಾವ್ಯ, ಸೇವಾಲಾಲರ ಮಹಾಕಾವ್ಯ, ಸೇವಾಲಾಲ್ ಬಯಲಾಟ, ಸಾಮಕಮಾತಾ ಬಯಲಾಟ, ಸೇವಾಲಾಲರ ಕುರಿತ ಹಾಡುಗಳು, ಲಂಬಾಣಿ ಮಹಿಳೆಯರ ನೃತ್ಯದ ಹಾಡುಗಳು, ಲಂಬಾಣಿಗರ ವಿಶಿಷ್ಟ ಹೋಳಿ ಹಾಡುಗಳು, ಪ್ರಕೃತಿ ಕುರಿತ ಹಾಡುಗಳು, ಮೋಜಿನ ಹಾಗೂ ಇತರ ಹಾಡುಗಳು, ಲಂಬಾಣಿ ಕಥೆಗಳು ದಾಖಲೀಕರಿಸುವ ಪ್ರಯತ್ನ ನಡೆಯುತ್ತಿದೆ.
ಕೊಪ್ಪಳದಲ್ಲಿ ಮಿಶ್ರ ಭಾಷೆ
ಕೊಪ್ಪಳ ಜಿಲ್ಲೆಯಲ್ಲಿ ಕನ್ನಡಿಗರನ್ನು ಹೊರತುಪಡಿಸಿ ಲಂಬಾಣಿ ಹಾಗೂ ತೆಲುಗು ಭಾಷಿಕರು ವಾಸಿಸುತ್ತಿದ್ದಾರೆ. ಇವರು ಮಾತೃಭಾಷೆಯಾಗಿ ಲಂಬಾಣಿ ಭಾಷೆ ಬಳಸುತ್ತಿದ್ದಾರೆ. ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿಯಲ್ಲಿ ಸಂತ ಸೇವಾಲಾಲ್ ದೇಶ ಸಂಚಾರ ಮಾಡುತ್ತ ಬಂದಾಗ ನಿರ್ವಿುಸಿದ ಪವಿತ್ರ ಕಟ್ಟೆ ಇದೆ. ಹೀಗಾಗಿ ದೇಶದ ಲಂಬಾಣಿಗರಿಗೆ ಇದೊಂದು ಪವಿತ್ರ ಧಾರ್ವಿುಕ ಸ್ಥಳವಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + 19 =
Remember me
