|ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಕೃತಯುಗದ ಪ್ರಾರಂಭ ಕಾಲ. ವೈಕುಂಠದಲ್ಲಿ ಶ್ರೀಮನ್ನಾರಾಯಣನ ಪತ್ನಿ ಶ್ರೀದೇವಿಯೊಂದಿಗೆ ಅಂತರಂಗ ವಿಲಾಸದಲ್ಲಿರುವ ಸುಮಧುರ ಸಮಯ. ಆ ಸಮಯದಲ್ಲಿ ವೈಕುಂಠ ದ್ವಾರ ಮುಚ್ಚಲಾಗಿದೆ. ಹೊರಗಡೆ ಗದೆ ಹಿಡಿದು ಜಯ ಮತ್ತು ವಿಜಯ ಎಂಬ ಇಬ್ಬರು ದ್ವಾರಪಾಲಕರು ಕಾವಲು ಕಾಯುತ್ತಿದ್ದಾರೆ. ಒಮ್ಮೆ ಭಗವಾನ್ ವಿಷ್ಣುವಿನ ದರ್ಶನ ಮಾಡಲು ಬ್ರಹ್ಮನ ಮಾನಸಪುತ್ರರಾದ ನಾರದರು ಬರುತ್ತಾರೆ. ಅವರನ್ನು ದ್ವಾರಪಾಲಕರು ತಡೆದು, ದೇವರ ದರ್ಶನಕ್ಕೆ ಈ ಸಮಯದಲ್ಲಿ ಅವಕಾಶ ಇಲ್ಲ ಎನ್ನುತ್ತಾರೆ. ಅದಕ್ಕೆ ನಾರದರು ‘‘ಕಾಲಾತೀತನಾದ ಭಗವಂತನ ದರ್ಶನಕ್ಕೆ ಕಾಲನಿರ್ಬಂಧವಿಲ್ಲ. ಯಾವಾಗ ಬೇಕಾದರೂ ದರ್ಶನ ಮಾಡಬಹುದು’ ಎಂದು ಹೇಳುತ್ತಾರೆ. ‘ಶ್ರೀಹರಿಯ ಪರಮಾನುಗ್ರಹಕ್ಕೆ ಪಾತ್ರರಾಗಿದ್ದೇವೆ’ ಎಂಬ ಅಹಂಕಾರ ಇವರನ್ನು ಆವರಿಸಿದ್ದಕ್ಕೆ ಈ ರೀತಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದರಿತು ಮಹಾಶಾಪ ನೀಡುತ್ತಾರೆ. ‘‘ನೀವು ಜನ್ಮಾಂತರಗಳ ಕಾಲ ರಾಕ್ಷಸರಾಗಿ ಭೂಮಿಯ ಮೇಲೆ ಅವತರಿಸಿ’ ಎಂದು ಶಾಪ ನೀಡುತ್ತಾರೆ. ಭಯಗೊಂಡ ಜಯ-ವಿಜಯರು ಶಾಪವಿಮೋಚನೆಗಾಗಿ ವಿಷ್ಣುವಿನ ಬಳಿ ಹೋಗಿ ಬೇಡಿಕೊಳ್ಳುತ್ತಾರೆ. ಆದರೆ ವಿಷ್ಣು, ‘‘ಮೂರು ಜನ್ಮಗಳ ಕಾಲವಾದರೂ ಈ ಶಾಪ ಅನುಭವಿಸಲೇಬೇಕು’ ಎಂದು ಹೇಳುತ್ತಾರೆ.
ಜಯ ವಿಜಯರ ಮೊದಲ ಜನ್ಮ ಕೃತಯುಗದಲ್ಲಿ ಆಗುತ್ತದೆ. ಹಿರಣ್ಯಕಶ್ಯಪ ಮತ್ತು ಹಿರಣ್ಯಾಕ್ಷ ಎಂಬ ರಾಕ್ಷಸರಾಗಿ ಜನಿಸುತ್ತಾರೆ. ದೈವ ದ್ವೇಷ ಮತ್ತು ಅಧರ್ಮ ಆಚರಣೆಯಲ್ಲಿ ಬಾಳುತ್ತಾರೆ. ಹಿರಣ್ಯಕಶ್ಯಪ ಹರಿದ್ವೇಷಿಯಾಗಿ ಧರ್ವತ್ಮರನ್ನು, ದೈವ ಭಕ್ತರನ್ನು, ಹರಿಭಕ್ತರನ್ನು ಕಾಡುತ್ತಾನೆ. ಅವನ ಪುತ್ರನಾಗಿ ಪ್ರಹ್ಲಾದ ಜನಿಸುತ್ತಾನೆ. ಆಗ ಪುತ್ರನೇ ಶತ್ರುವಾಗುತ್ತಾನೆ. ಹರಿಭಕ್ತ ಎಂಬ ಕಾರಣಕ್ಕೆ ಪುತ್ರನಿಗೇ ನಾನಾ ರೀತಿಯಲ್ಲಿ ಹಿಂಸಿಸುತ್ತಾನೆ. ಆದರೆ ಭಗವಂತ ಅವನನ್ನು ಎಲ್ಲ ರೀತಿಯಲ್ಲೂ ಪಾರು ಮಾಡುತ್ತಾನೆ. ಆದರೆ ಬ್ರಹ್ಮನ ಸೃಷ್ಟಿಯ ಯಾವ ಜೀವಿಯಿಂದಲೂ ಸಾವು ಬರಬಾರದು ಎಂದು ಬ್ರಹ್ಮನಿಂದ ವರ ಪಡೆದಿದ್ದ ಹಿರಣ್ಯಕಶ್ಯಪನನ್ನು ಸಂಹಾರ ಮಾಡಲು ಶ್ರೀಹರಿಯು ನರಸಿಂಹನಾಗಿ ಅವತಾರ ತಾಳಿ ಕಂಬದಲ್ಲಿ ಉದ್ಭವಿಸುತ್ತಾನೆ. ‘ನರನ ದೇಹಾಕೃತಿ, ಸಿಂಹದ ಮುಖ – ಈತನೇ ನರಸಿಂಹ’. ಪ್ರಾಣಿ ಮುಖ, ಮನುಷ್ಯನ ತಲೆ ಇರುವ ಜೀವಿಯನ್ನು ಬ್ರಹ್ಮ ಆವರೆಗೂ ಸೃಷ್ಟಿ ಮಾಡಿರುವುದಿಲ್ಲ. ಉಗ್ರ ಮಹಾಕಾಲನಾಗಿ ‘ನರಸಿಂಹ’ ವಿಜೃಂಭಿಸಿ ದುಷ್ಟರನ್ನು ಸಂಹರಿಸುತ್ತಾನೆ.
ನಾನಾ ಕಡೆ ಆಚರಣೆ:ಅಂತಹ ನರಸಿಂಹನ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸ ಶುಕ್ಲ ಪಕ್ಷದ ಚತುರ್ದಶಿ ದಿನ ಆಚರಿಸಲಾಗುತ್ತದೆ. ಅಂದು ನರಸಿಂಹನ ಪೂಜೆ ನಂತರ ಬಂಧು-ಬಾಂಧವರಿಗೆ, ದೇವಸ್ಥಾನದಲ್ಲಿ ಭಕ್ತರಿಗೆ ವಸಂತ ಸೇವೆ, ಬೇಲದ ಹಣ್ಣಿನ, ಕರಬೂಜ ಹಣ್ಣಿನ ಬೆಲ್ಲದ ಪಾನಕ, ಹಣ್ಣುಗಳಿಂದ ಮಾಡಿದ ರಸಾಯನ, ಕೋಸಂಬರಿ ಹಾಗೂ ಗೊಜ್ಜವಲಕ್ಕಿಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ. ಆ ಸಮಯದಲ್ಲಿ ಕೆಲವರು ನರಸಿಂಹ ದೇವರ ರೂಪದ ಬೆಳ್ಳಿಯ ಪ್ರತಿಮೆಯನ್ನು ದಾನ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರ, ತಮಿಳುನಾಡು ಪ್ರದೇಶದಲ್ಲಿ ಆಚರಿಸುತ್ತಾರೆ. ನರಸಿಂಹನಲ್ಲಿ ಅನೇಕ ವಿಧ- ಉಗ್ರ ನರಸಿಂಹ, ಸೌಮ್ಯ ನರಸಿಂಹ, ಲಕ್ಷ್ಮೀ ನರಸಿಂಹ ಹೀಗೆ. ಈತನನ್ನು ಪೂಜಿಸುವುದರಿಂದ ಧೈರ್ಯ, ವಿಶ್ವಾಸ, ನಂಬಿಕೆ, ಆರೋಗ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ. ಹಾಸನ ಜಿಲ್ಲೆಯಲ್ಲಿರುವ ಹಾರನಹಳ್ಳಿ, ಜಾವಗಲ್, ಅರಕೆರೆ, ನರಸೀಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಈ ನರಸಿಂಹ ಕ್ಷೇತ್ರಗಳನ್ನು ಒಂದೇ ದಿನ ದರ್ಶನ ಮಾಡಬಹುದು.
ಶಂಕರರ ಸ್ತೋತ್ರಗಳು:ಶ್ರೀ ಶಂಕರಾಚಾರ್ಯರು ಪರಕಾಯ ಪ್ರವೇಶದ ಸಮಯದಲ್ಲಿ ತಮ್ಮ ದೇಹವನ್ನು ಬಿಟ್ಟು ಬೇರೆ ದೇಹದಲ್ಲಿ ಹೋದಾಗ ಆ ದೇಹವನ್ನು ರಾಕ್ಷಸರು ತೆಗೆದುಕೊಂಡು ಹೋಗಲು ಬರುತ್ತಾರೆ. ಆಗ ಶಂಕರಾಚಾರ್ಯರ ಶಿಷ್ಯರು ನರಸಿಂಹನನ್ನು ಕುರಿತು ಪ್ರಾರ್ಥಿಸಿ ಶ್ಲೋಕಗಳನ್ನು ಹೇಳುತ್ತಾರೆ. ನರಸಿಂಹನ ಮೂಲಕ ಆ ರಾಕ್ಷಸರನ್ನು ಸಂಹರಿಸುತ್ತಾರೆ. ಶಂಕರಾಚಾರ್ಯರ ದೇಹವನ್ನು ರಕ್ಷಿಸುತ್ತಾರೆ. ಶಂಕರ ಭಗವತ್ಪಾದರು ನರಸಿಂಹಸ್ವಾಮಿ ಬಗ್ಗೆ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಈಗಲೂ ಅವು ಪ್ರಚಲಿತದಲ್ಲಿವೆ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)
ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
