ರೋಗಿಗೆ ಪ್ರೀತಿ-ಮಮತೆ, ಆಸರೆ ಜತೆಗೆ ಸಾಂತ್ವನ ನೀಡಿ ಉಪಚರಿಸುವ ತಾಯಿಯೇ ನರ್ಸ್/ ದಾದಿ. ಇಂಥ ಉದಾತ್ತ ವೃತ್ತಿ ಒಂದು ಕಾಲದಲ್ಲಿ ಕಡೆಗಣಿಸಲ್ಪಟ್ಟಿತ್ತು. ಈ ವೃತ್ತಿ ತಿರಸ್ಕಾರಕ್ಕೆ ಒಳಗಾಗಿದ್ದಂಥ ಸಮಯದಲ್ಲಿ ನರ್ಸಿಂಗ್​ಗೆ ಗೌರವ-ಘನತೆ ತಂದು ಕೊಟ್ಟವರು ಫ್ಲಾರೆನ್ಸ್ ನೈಟಿಂಗೇಲ್. ಇಟಲಿಯ ಶ್ರೀಮಂತ ಕುಟುಂಬದಲ್ಲಿ 1820, ಮೇ 12ರಂದು ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟುಹಬ್ಬ ಸ್ಮರಣಾರ್ಥ ‘ವಿಶ್ವ ದಾದಿಯರ ದಿನ’ ಆಚರಿಸಲಾಗುತ್ತದೆ. ಇಂದು ಅವರ 200ನೇ ಹುಟ್ಟುಹಬ್ಬ ಕೂಡ. ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ‘ವಿಜಯವಾಣಿ’ ಕರೆನೀಡಿದ ಆಹ್ವಾನಕ್ಕೆ ಸ್ಪಂದಿಸಿದ ಸಾವಿರಾರು ಓದುಗರು, ತಮ್ಮ ಬದುಕಿನ ಯಾತನೆಯ ದಿನಗಳಲ್ಲಿ ಶುಶ್ರೂಷೆ ನೀಡಿ ಮರುಜನ್ಮ ಕಲ್ಪಿಸಿದ ‘ವಿಶೇಷ ದಾದಿ’ಯರ ಮಾಹಿತಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸಲಾಗಿದೆ.
ಸಿಜೇರಿಯನ್ ಬೇಡ, ನಾರ್ಮಲ್ ಆಗಲಿ…
ದಾದಿಯರೇ ಆಸ್ಪತ್ರೆಯ ಜೀವಾಳ. ರಾಧಾ ದಾದಿ ನನ್ನ ಬದುಕಿನ ಜೀವಾಳ. ನನ್ನ ಚೊಚ್ಚಲ ಹೆರಿಗೆ ಸಂದರ್ಭ, ಈಗಿನ ರೀತಿ ಆಧುನಿಕ ಸೌಲಭ್ಯಗಳಿಲ್ಲದ ಕಾಲವದು. ಹಳ್ಳಿಯಲ್ಲಿದ್ದ ನನಗೆ ಹೆರಿಗೆ ನೋವು ದಿನ ತುಂಬಿದರೂ ಬರಲೇ ಇಲ್ಲ. ನನಗೆ ಆತಂಕವಾಗಿ, ಬಿ.ಪಿ. ಹೆಚ್ಚಾಗತೊಡಗಿತು. ಆಗ ಧೈರ್ಯ ಹೇಳಿದ ರಾಧಾ ದಾದಿ, ವೈದ್ಯರು ಸೂಚಿಸಿದ ಚಿಕಿತ್ಸಾ ಕ್ರಮದ ಬಗ್ಗೆ ವಿವರಿಸಿ ಸಹಾಯ ಮಾಡಿದರು. ಹೆರಿಗೆಗೂ ಮುನ್ನ ನಾನು, ‘ರಾಧಾಕ್ಕ ಸಿಜೇರಿಯನ್ ಆದರೆ ಚೆನ್ನಾಗಿರುತ್ತದೆಯಂತೆ. ಯಾವ ನೋವೂ ಇರಲ್ಲ ಅಂತೆ’ ಎಂದು ಅರಿಯದೆ ಮಾತನಾಡಿ ಬಿಟ್ಟೆ. ಅದಕ್ಕವರು, ‘ತಂಗಿ ನಾರ್ಮಲ್ ಡಿಲಿವೆರಿ ನೋವು ಒಂದೇ ಸಲ. ಆದರೆ ಸಿಜೇರಿಯನ್ ನೋವು ಸದಾ ಕಾಲ ಬೆನ್ನು ಬಿಡದ ಬೇತಾಳನಂತೆ ಬೆನ್ನು, ಕತ್ತು, ಸೊಂಟಗಳಲ್ಲಿ ಇರುವುದು. ಅದು ಬೇಡ ಮಾರಾಯ್ತಿ’ ಎಂದರು. ಈಗ ಸಹಿಸಲಾಗದಷ್ಟು ನೋವು ಬಂದಾಗಲೆಲ್ಲ ಅವರ ಮಾತುಗಳು ನೆನಪಿಗೆ ಬರುತ್ತವೆ. ಹಳ್ಳಿಯಲ್ಲೇ ಸೇವೆಗೈದು ನಿವೃತ್ತರಾದ ಅವರಿಗೊಂದು ಸಲಾಂ.
ಇದನ್ನೂ ಓದಿ4 ರಾಕೆಟ್ ಲಾಂಚರ್ ಪತ್ತೆ, ಕನಕಪುರಕ್ಕೆ ಬಂದ ಮಿಲಿಟರಿ ಪಡೆ
| ಎಂ.ಎಚ್. ದಿವ್ಯಾ ಶಿಕ್ಷಕಿ, ಹಳಗಿ, ಹಳಿಯಾಳ
ರಜೆಯಲ್ಲಿದ್ದರೂ ಬಂದರು
ನಾನು ಒಬ್ಬ ಡಯಾಲಿಸಿಸ್ ಪೇಷಂಟ್. ಬೆಂಗಳೂರಿನ ಹನುಮಂತನಗರದ ಲಯನ್ಸ್ ಡಯಾಲಿಸಿಸ್ ಸೆಂಟರ್​ನಲ್ಲಿ ವಾರದಲ್ಲಿ 3 ದಿನ ಡಯಾಲಿಸಿಸ್ ಆಗಲೇಬೇಕು. ಲಾಕ್​ಡೌನ್ ಆದಾಗ ಹೇಗಪ್ಪಾ ಎಂಬ ಪ್ರಶ್ನೆ ಉಂಟಾಯಿತು. ಡಯಾಲಿಸಿಸ್ ಸೆಂಟರ್​ನ ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ದಾದಿ ಕುಮಾರಿ ಸುಮಾ ರಜೆ ಮೇಲೆ ಅವರ ಊರಿನಲ್ಲಿದ್ದರು. ಸೆಂಟರ್​ನವರು ಕರೆ ಕಳುಹಿಸಿದಾಗ ಅವರು ರಜೆ ಬಿಟ್ಟು ತಕ್ಷಣ ಬಂದರು ಮತ್ತು ನಮ್ಮ ಸೇವೆಗೆ ನಿಂತರು. ಇತರ ಟೆಕ್ನಿಷಿಯನ್ಸ್ ಊರಿನಲ್ಲೇ ಸಿಕ್ಕಿಕೊಂಡು ಬರಲು ಆಗದ್ದರಿಂದ ಸುಮಾ ಏಕಾಂಗಿಯಾಗಿ, ಬೇಜಾರಿಲ್ಲದೆ, ರಜೆಯನ್ನೂ ತೆಗೆದುಕೊಳ್ಳದೆ, ನಗುನಗುತ್ತಲೇ ಸೇವೆ ಸಲ್ಲಿಸುತ್ತಿದ್ದಾರೆ. ಒಂದೆರಡು ದಿನ ಮಳೆ ಬಂದಾಗಲೂ ತಪ್ಪಿಸದೆ ಸೇವೆ ನೀಡಿದ್ದಾರೆ. ಸಂಸ್ಥೆಯ ಬದ್ಧತೆ ಮತ್ತು ಕುಮಾರಿ ಸುಮಾ ಸೇವೆಗೆ ನಾನು ಕೃತಜ್ಞನಾಗಿದ್ದೇನೆ.
| ಸುಧಾಕರ ಶರ್ಮಾ ಹನುಮಂತನಗರ, ಬೆಂಗಳೂರು
ಮಗಳ ಕಂಡಾಗೆಲ್ಲ ಅವರದ್ದೇ ನೆನಪು
ಇಪ್ಪತ್ತು ವರ್ಷದ ಹಿಂದಿನ ಮಾತು. ತಾಯಿ ಇಲ್ಲದ ನನಗೆ ಪತಿಯ ಗೃಹದಲ್ಲಿಯೇ ಚೊಚ್ಚಲ ಹೆರಿಗೆ, ಬಾಣಂತನ ಎರಡೂ ಆಗಬೇಕಿತ್ತು. ಹೆರಿಗಾಗಿ ಕಾರ್ವಿುಕ ವಿಮಾ ಆಸ್ಪತ್ರೆಗೆ ದಾಖಲಾದೆ. 15 ದಿನಗಳಾದರೂ ಡೆಲಿವರಿ ಆಗುವ ಲಕ್ಷಣಗಳು ಗೋಚರಿಸಲಿಲ್ಲ. ಕೇಳಿದಾಗೆಲ್ಲ, ‘ಇನ್ನೂ ತಡ, ಇನ್ನೂ ತಡ..’ ಎಂದು ವೈದ್ಯರು ಹೇಳುತ್ತಲೇ ಇದ್ದರು. ಆಗ ನನ್ನ ಸಹಾಯಕ್ಕೆ ಬಂದ ಮೇಘಾ ಹೆಸರಿನ ದಾದಿ, ಭರವಸೆಯ ಮಾತುಗಳನ್ನಾಡಿ ಸಹಜ ಹೆರಿಗೆಯತ್ತ ಒಲವು ಮೂಡಿಸಿದರು. ನನಗೀಗ 20 ವರ್ಷದ ಮಗಳಿದ್ದಾಳೆ. ಇವಳನ್ನು ನೋಡಿದಾಗೆಲ್ಲ ಆ ಮೇಘಾ ಸಿಸ್ಟರ್ ನೆನಪಿಗೆ ಬರುತ್ತದೆ. ಅವರು ಎಲ್ಲೇ ಇದ್ದರೂ ನೂರು ವರ್ಷ ಚೆನ್ನಾಗಿರಲೆಂದು ಭಗವಂತನನ್ನು ಬೇಡಿಕೊಳ್ಳುತ್ತೇನೆ.
| ರಂಜಿತಾ ನಾರಾಯಣ ಕುಲಕರ್ಣಿ ಹುಬ್ಬಳ್ಳಿ
ಇದನ್ನೂ ಓದಿಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?
ತಂಗಿಗೆ ಪುನರ್ಜನ್ಮ ನೀಡಿದವರ ಹೇಗೆ ಮರೆಯಲಿ?
ನನ್ನ ತಂಗಿ ಶಿವಲೀಲಾ 8 ತಿಂಗಳ ಗರ್ಭಿಣಿ ಆಗಿದ್ದಾಗ ನ್ಯುಮೋನಿಯಾಗೆ ತುತ್ತಾಗಿ ತೀವ್ರ ಪರಿಸ್ಥಿತಿಯಲ್ಲಿ ಬೆಳಗಾವಿ ಕೆಎಲ್​ಇ ಆಸ್ಪತ್ರೆಗೆ ದಾಖಲಾಗಿದ್ದಳು. ಅವಳಿಗೆ ಉಸಿರಾಟದ ತೊಂದರೆಯಾಗಿ ಸುಮಾರು 1 ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್​ನಲ್ಲಿ ಇರಿಸಿದ್ದರು. ಅಲ್ಲಿ ನಮಗೆ ಪ್ರವೇಶ ಇಲ್ಲದ್ದರಿಂದ ಪ್ರಜ್ಞೆ ಇಲ್ಲದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವಳನ್ನು ಅಲ್ಲಿನ ದಾದಿಯರು ಶುಶ್ರೂಷೆ ಮಾಡಿದರು. ಪ್ರಜ್ಞೆ ಬಂದ ನಂತರ ಅವಳನ್ನು ಆಕ್ಸಿಜನ್ ಸಪೋರ್ಟ್​ನಲ್ಲಿ ಮತ್ತೆ ಒಂದು ತಿಂಗಳು ಐಸಿಯುನಲ್ಲಿ ಇರಿಸಲಾಯಿತು. ಆಗ ಅವಳಿಗೆ ಧೈರ್ಯ ತುಂಬುತ್ತ ಮಾನಸಿಕವಾಗಿ, ದೈಹಿಕವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದವರು ದಾದಿಯರು. ಅವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ನನ್ನ ತಂಗಿ ಪುನರ್ಜನ್ಮ ಪಡೆದು 2 ಪುಟ್ಟ ಮಕ್ಕಳೊಂದಿಗೆ ಆರಾಮಾಗಿದ್ದಾಳೆ. ಈ ಸಂದರ್ಭದಲ್ಲಿ ದಾದಿಯರು ಹಾಗೂ ಡಾಕ್ಟರ್​ಗಳನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ? ಅವರು ನನ್ನ ತಂಗಿಯ ಪಾಲಿಗೆ ಸಾಕ್ಷಾತ್ ದೇವರೇ ಸರಿ.
| ಉಜ್ವಲಾ ಪಿ. ಚಿಕ್ಕಮಠ ಪರಮಾನಂದವಾಡಿ, ಬೆಳಗಾವಿ
ದೇವರ ರೂಪದಲ್ಲಿರುವವರು
ದಿನಾಂಕ ಮರೆತು ಹೋಗಿದೆ, ಸಂಜೆ 7-8 ಗಂಟೆ ಸಮಯ ಎಂಬುದು ಚೆನ್ನಾಗಿ ನೆನಪಿದೆ. ಆಗತಾನೇ ಕೂಲಿ ಕೆಲಸ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ಮನೆಗೆ ಸಾಗುತ್ತಿದ್ದ 60-70ರ ವಯಸ್ಸಿನ ವೃದ್ಧೆಯೊಬ್ಬರಿಗೆ ಬೈಕ್​ನಲ್ಲಿ ವೇಗವಾಗಿ ಬಂದಿದ್ದ ಯುವಕನೊಬ್ಬ ಡಿಕ್ಕಿ ಹೊಡೆದಿದ್ದ. ಆ ರಭಸಕ್ಕೆ ನೆಲಕ್ಕಪ್ಪಳಿಸಿದ್ದ ವೃದ್ಧೆಯ ಪ್ರಜ್ಞೆ ತಪ್ಪಿತ್ತು. ತಕ್ಷಣ ಅವರನ್ನು ಇತರರ ನೆರವಿನಿಂದ ಅಲ್ಲೇ ಹತ್ತಿರ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆಗ ಪಾಳಿಯಲ್ಲಿದ್ದ ದಾದಿಯರಾದ ಸುಗುಣ, ಲತಾ ಹಾಗೂ ಜಮುನಾ ಅವರು ಮುರಿದುಹೋಗಿದ್ದ ಬಲಗಾಲಿಗೆ ಪ್ರಥಮ ಚಿಕಿತ್ಸೆ ನೀಡಿದರು. ಆ ಕಾಲಿಗೆ ಶಸ್ತŠಚಿಕಿತ್ಸೆ ಅಗತ್ಯವಿದ್ದರಿಂದ ಪಕ್ಕದ ಜಿಲ್ಲೆ ಮೈಸೂರಿಗೆ ಕಳುಹಿಸಲು ಯೋಚಿಸಿದಾಗ, ಗಾಯಾಳುವಿನ ಸಂಬಂಧಿಕರು ಯಾರೂ ಆ ಸಂದರ್ಭದಲ್ಲಿ ಇಲ್ಲದ್ದರಿಂದ ಹಾಗೂ ತಕ್ಷಣಕ್ಕೆ ಸರ್ಕಾರಿ ಆಂಬುಲೆನ್ಸ್ ಸಿಗದ್ದರಿಂದ ಸ್ವಂತ ಹಣದಲ್ಲೇ ಖಾಸಗಿ ಅಂಬುಲೆನ್ಸ್​ನಲ್ಲಿ ಕಳಿಸಿಕೊಟ್ಟಿದ್ದರು. ಅವರ ಈ ನಿಷ್ಕಲ್ಮಶ ಸೇವೆ, ಕಾಳಜಿಯನ್ನೆಲ್ಲ ನೋಡುತ್ತಿದ್ದ ನನ್ನ ಕಣ್ಣಾಲಿಗಳು ಒದ್ದೆಯಾದವು. ಅವರು ಬರೀ ದಾದಿಯರಲ್ಲ, ನಮ್ಮ ಪಾಲಿನ ದೇವರು ಎಂದು ಅಂತರಂಗ ಸಾರಿ ಹೇಳುತ್ತಿತ್ತು.
| ಮಹಮದ್ ಅಜರುದ್ದೀನ್, ಅಕ್ಕಿಹೆಬ್ಬಾಳು, ಮಂಡ
ಇದನ್ನೂ ಓದಿ80 ವರ್ಷ ಮೇಲ್ಪಟ್ಟವರು ವಿಮಾನದಲ್ಲಿ ಸಂಚರಿಸುವಂತಿಲ್ಲ!
ಸೆಲಿನಾ ಸ್ಮರಣೀಯ
ಎರಡು ವರ್ಷಗಳ ಹಿಂದೆ ಶುಗರ್ ಪ್ರಾಬ್ಲ್ಲ ಆಗಿ ಕುಂದಾಪುರದ ಅಮೃತೇಶ್ವರಿ ಹಾಸ್ಪಿಟಲ್​ಗೆ ಅಡ್ಮಿಟ್ ಆಗಿದ್ದೆ. ಅಲ್ಲಿದ್ದ ದಾದಿಯರಲ್ಲಿ ಸೆಲಿನಾ ಎಂಬವರೂ ಒಬ್ಬರು. ಆ ಸಂದರ್ಭದಲ್ಲಿ ಅವರದ್ದು ನೈಟ್ ಡ್ಯೂಟಿ ಇದ್ದಿದ್ದರಿಂದ ಸಂಜೆ 6ಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರ್ ಆಗುತ್ತಿದ್ದರು. ಆಸ್ಪತ್ರೆಗೆ ಬಂದವರೇ ಸೀದಾ ನನ್ನ ರೂಮಿಗೆ ಬಂದು ‘ಹೇಗಿದ್ದೀರಿ?’ ಎಂದು ವಿಚಾರಿಸಿ ಹೋಗುತ್ತಿದ್ದರು. ನಂತರ ಆಯಾಯ ಸಮಯಕ್ಕೆ ಸರಿಯಾಗಿ ಬಂದು ಜ್ವರ, ಬಿಪಿ-ಶುಗರ್ ಚೆಕ್ ಮಾಡುವುದು, ಔಷಧ ಕೊಡುವುದು, ಕಾಲಿನ ಬ್ಯಾಂಡೇಜ್ ಬದಲಿಸುವುದು ಇತ್ಯಾದಿ ಮಾಡುತ್ತಿದ್ದರು. ಕೇರಳದವರಾದರೂ ಅವರು ಕನ್ನಡ ಮಾತನಾಡುವಾಗ ಖುಷಿಯಾಗುತ್ತಿತ್ತು. ನಾನು ದಾದಿ ಸೆಲಿನಾ ಅವರ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ.
| ಪಿ. ಜಯವಂತ ಪೈ ಕುಂದಾಪುರ
ಗ್ರೀಷ್ಮಾ ನರ್ಸ್ ನಮ್ಮ ಹೆಮ್ಮೆ
ನಮ್ಮ ಗೆಳೆಯರ ಸಮೂಹದಲ್ಲಿ ಯಾರಿಗೇ ಆರೋಗ್ಯ ಸಮಸ್ಯೆ ಇದ್ದರೂ ಮೊದಲು ಧಾವಿಸುವವರು ದಾದಿ ಗ್ರೀಷ್ಮಾ. ಅವರದ್ದು ನಿಸ್ವಾರ್ಥ ಸೇವೆ. ನಮ್ಮ ಊರಿನಲ್ಲಿ ಅವರೇ ಜನಪ್ರಿಯ ಮತ್ತು ನಮ್ಮ ಊರಿಗೂ ಹೆಮ್ಮೆ. ನನ್ನ ಸಹೋದರಿ ಗರ್ಭಿಣಿಯಾದಾಗ ಯಾವ ಆಸ್ಪತ್ರೆಗೆ ಹೋಗಬೇಕೆಂಬ ಸಲಹೆ ಅವರೇ ನೀಡಿದರು. ಆಕೆಯ ಆರೈಕೆಯನ್ನೂ ನೋಡಿಕೊಂಡರು.
| ಸಾಧು ಸತ್ಯ ಕಾಸರಗೋಡು
ಅಮ್ಮ ಚಿಂತೆ ಮಾಡಬೇಡಿ…
ಮಧುಮೇಹಿಗಳಿಗೆ 3 ತಿಂಗಳಿಗೊಮ್ಮೆ ರಕ್ತದಲ್ಲಿನ ಶುಗರ್ ಪರೀಕ್ಷೆ ಅನಿವಾರ್ಯ. ಒಂದು ದಿನ ಬೆಳಗ್ಗೆ ಬೇಗ ಲ್ಯಾಬ್​ಗೆ ಹೋದೆ. ರಕ್ತದ ಸ್ಯಾಂಪಲ್ ತೆಗೆದುಕೊಂಡು ತಿಂಡಿ ತಿಂದು ಬರಲು ಹೇಳಿದರು. ಹತ್ತಿರದಲ್ಲೇ ಇದ್ದ ದರ್ಶಿನಿಗೆ ಹೋಗಿ ಬರ್ತೀನಿ ಎಂದೆ. ಆಗ ಅಲ್ಲಿನ ಸಿಬ್ಬಂದಿ ‘ಇವತ್ತು ಆ ದರ್ಶಿನಿಗೆ ರಜೆ, ದೂರ ಹೋಗ್ಬೇಕಾಗುತ್ತೆ, ಹೇಗೆ ಮಾಡ್ತೀರಿ?’ ಎಂದಾಗ ನನಗೆ ದಿಗಿಲಾಗಿತ್ತು. ಇದನ್ನೆಲ್ಲ್ಲ ಗಮನಿಸುತ್ತಿದ್ದ ಸಿಸ್ಟರ್ ನನ್ನ ಬಳಿ ಬಂದು, ‘ಅಮ್ಮ ಚಿಂತೆ ಮಾಡಬೇಡಿ. ಇಡ್ಲಿ ತಂದಿದ್ದೇನೆ. ನೀವು ಅದನ್ನು ತಿನ್ನಿ, ನಾನು ಬೇರೆ ವ್ಯವಸ್ಥೆ ಮಾಡೊ್ಕೕತೀನಿ’ ಎಂದಾಗ ಆಕೆ ನನ್ನ ಮಗಳಂತೆ ಅನಿಸಿದ್ದು ಸತ್ಯ.
| ಸುಶೀಲಾ ಬಿ.ಆರ್. ರಾಮಣ್ಣ ಬೆಂಗಳೂರು
ಜಪ್ತಿ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ 5 ಕೋಟಿ ರೂ. ದಂಡ ವಸೂಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + seven =
Remember me
