ಕವಿ ಗೋಪಾಲಕೃಷ್ಣ ಅಡಿಗ (18.02.1918-04.11.1992) ಅವರು 1959ರಲ್ಲಿ ‘ಭೂಮಿಗೀತ’ ಕವನ ಸಂಕಲನ ಪ್ರಕಟಿಸಿದ ಬಳಿಕ ಹದಿಮೂರು ವರ್ಷಗಳ ಕಾಲ ಇನ್ನೊಂದು ಕವನ ಸಂಕಲನ ಪ್ರಕಟಿಸಲಿಲ್ಲ. 1972ರಲ್ಲಿ ಅವರ ‘ವರ್ಧಮಾನ’ ಕವನ ಸಂಕಲನ ಪ್ರಕಟವಾದಾಗ ಅದರಲ್ಲಿದ್ದುದು 10 ಕವನಗಳು. ಹದಿಮೂರು ವರ್ಷಗಳಲ್ಲಿ ಹತ್ತು ಕವನಗಳನ್ನು ಮಾತ್ರ ಬರೆದಿರುವ ಸಂಯಮ ಕವನದೊಳಗಿನ ಧ್ಯಾನದ ಸ್ಥಿತಿಯನ್ನು ಸೂಚಿಸುತ್ತದೆ. ಮುಂದೆ 1975ರಲ್ಲಿ ಅವರ ‘ಇದನ್ನು ಬಯಸಿರಲಿಲ್ಲ’ ಕವನ ಸಂಕಲನ ಪ್ರಕಟವಾಯಿತು. ಅಲ್ಲಿಯೂ ಇದ್ದುದು 10 ಕವನಗಳು. 1954ರಲ್ಲಿ ಪ್ರಕಟವಾದ ‘ಚಂಡೆ ಮದ್ದಳೆ’ ಎಂಬ ಏಳು ಕವನಗಳು ಇದ್ದ ಸಂಕಲನದ ಬಳಿಕ ಅಡಿಗರು ನವ್ಯಕವಿ ಎಂದೇ ಪರಿಗಣಿಸಲ್ಪಟ್ಟವರು.
ಗೋಪಾಲಕೃಷ್ಣ ಅಡಿಗರ ಕವನಗಳಲ್ಲಿ ‘ತನ್ನತನದ ಹುಡುಕಾಟ’ದ ಒಂದು ಎಳೆ ಇದ್ದೇ ಇರುತ್ತದೆ. ‘ಇದನ್ನು ಬಯಸಿರಲಿಲ್ಲ’ ಸಂಕಲನದ ಎಲ್ಲ ಕವನಗಳಲ್ಲೂ ಅದು ಒಂದಲ್ಲ ಒಂದು ರೀತಿಯಲ್ಲಿ ಸೂಚಿತವಾಗಿದೆ. ಆದರೆ ತನ್ನತನದ ಹುಡುಕಾಟ ವ್ಯಕ್ತಿವಾದದ ಸಂಕುಚಿತ ನೆಲೆಯಲ್ಲೇ ಅಡಿಗರ ಕವನಗಳಲ್ಲಿ ಉಳಿಯುವುದಿಲ್ಲ. ನಾನು ಯಾರು? ಎಂಬ ಹುಡುಕಾಟ ವಿಶ್ವಪ್ರಜ್ಞೆಯ ಒಂದು ಭಾಗವಾಗಿ ಮುಂದುವರಿಯುತ್ತದೆ.
ಗೋಪಾಲಕೃಷ್ಣ ಅಡಿಗರು 1932-33ರಲ್ಲಿ ಒಂದು ವರ್ಷ ಹಸ್ತಲಿಖಿತ ಪತ್ರಿಕೆ ‘ಕನ್ನಡ ಬಾಲ’ ನಡೆಸಿದ್ದಾಗ ಬೈಂದೂರಿನಲ್ಲಿ ಮಾಧ್ಯಮಿಕ ಶಾಲೆಯ ಅಂತಿಮ ವರ್ಷದ (ಮೂರನೆ ಫಾಮ್ರ್) ವಿದ್ಯಾರ್ಥಿಯಾಗಿದ್ದರು. ‘ಕನ್ನಡ ಬಾಲ’ ಆ ಶಾಲೆ ನಡೆಸುತ್ತಿದ್ದ ಪತ್ರಿಕೆ ಅಲ್ಲ. ಗೋಪಾಲಕೃಷ್ಣ ತನ್ನ ಗೆಳೆಯರನ್ನು ಸೇರಿಸಿಕೊಂಡು ಮಾಡಿದ ಪತ್ರಿಕೆ. ಅದಕ್ಕೆ ‘ಬೈಂದೂರು ಮಕ್ಕಳ ಕೂಟ’ದವರಿಂದ ಹೊರಡಿಸಲ್ಪಡುವ ತಿಳಿಗನ್ನಡ ಮಾಸಪತ್ರಿಕೆ ಎಂಬ ಹಣೆಪಟ್ಟಿ.
‘ಕನ್ನಡ ಬಾಲ’ದ ಈ ಪುಟ್ಟ ಪೋರ ಸಂಪಾದಕ ‘ಧನಿಕನ ಅವಾಂತರ’ ಮತ್ತು ‘ಬಡತನದ ಭೂತಕಾಗಿ’ (ಎರಡು ಕುಸುಮ ಚೌಪದಿ ಕವಿತೆಗಳು) ಹಾಗೂ ‘ಬಡತನ’ (ಲೇಖನ)ದಲ್ಲಿ ಭಾರತದ ಧನಿಕ ವರ್ಗಕ್ಕೆ ಎಚ್ಚರಿಕೆ ನೀಡಿದ ವೈಖರಿ, ಮುಂದೆ ಪ್ರಸಿದ್ಧ ‘ಕಟ್ಟುವೆವು ನಾವು’ ಕವನದಲ್ಲಿ ‘ಕೊಟ್ಟೆವಿದೋ (ಸಮರದ) ವೀಳೆಯವನು’ ಎಂದ ಯಕ್ಷಗಾನದ ಗತ್ತಿನಲ್ಲೇ ಇದೆ. ಆ ಪತ್ರಿಕೆಯಲ್ಲಿ ‘ಅನಂತಾನುಜ’ (ಅನಂತ ಅಡಿಗರ ತಮ್ಮ) ಎನ್ನುವ ಹೆಸರಿನಲ್ಲಿ ‘ಬಡತನ’ ಕುರಿತು ಅವರು ಬರೆದ ಒಂದು ಲೇಖನವನ್ನು ಮುಂದಿನ ವರ್ಷ ಕುಂದಾಪುರ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ಪತ್ರಿಕೆಯಲ್ಲಿ ವಿಸ್ತರಿತವಾಗಿ ಈ ಮುಂದಿನಂತೆ ಪ್ರಕಟವಾಯಿತು.
***
ಮಾನವನಲ್ಲಿರುವ ‘ಬುದ್ಧಿಶಕ್ತಿ’ಯ ಆಧಿಕ್ಯದಿಂದ ಮಾತ್ರ ಅವನು ಇತರ ಪ್ರಾಣಿಗಳಿಗಿಂತ ಶ್ರೇಷ್ಠನೆನಿಸುವನು. ಆಹಾರ, ವಿಹಾರ, ಸುಖದುಃಖಾನುಭವಾದಿ ಅನೇಕ ವಿಷಯಗಳಲ್ಲಿ ಮನುಷ್ಯನಿಗೂ ಇತರ ಪ್ರಾಣಿಗಳಿಗೂ ತುಂಬ ಸಾಮ್ಯವಿರುವುದು. ಮನುಷ್ಯನ ಬಂಧನಕ್ಕೆ ಒಳಗಾದ ಪ್ರಾಣಿಗಳನ್ನುಳಿದು ಇನ್ನಾವ ಪ್ರಾಣಿಯಾದರೂ ಹೊಟ್ಟೆಗಿಲ್ಲದೆ ಸತ್ತ ವಾರ್ತೆ ಕೇಳಿರುವಿರಾ? ಇಲ್ಲ. ತದ್ವಿರುದ್ಧವಾಗಿ ‘ಮಾನವರು ಮಾತ್ರ’ ‘ಬಡತನ’ವೆಂಬ ಭೂತಪೀಡಿತರಾಗಿ ಹೊಟ್ಟೆಗಿಲ್ಲದೆ ಸಾಯುತ್ತಿರುವರಲ್ಲ! ಇದಕ್ಕೇನು ಕಾರಣ?
ಬುದ್ಧಿಶಕ್ತಿ ಮೂಲಕ ಸರ್ವಪ್ರಾಣಿಗಳಲ್ಲಿ ಶ್ರೇಷ್ಠನೆನಿಸುವ ಮನುಷ್ಯರಲ್ಲಿ ಅಧಿಕಾಂಶ ಜನರು ಬುದ್ಧಿಶಕ್ತಿಯ ದುರುಪಯೋಗವನ್ನೇ ಮಾಡುತ್ತಿರುವರು. ಎಂದಿನಿಂದ ಮಾನವನ ಬುದ್ಧಿಶಕ್ತಿ ದುರ್ವರ್ಗದಲ್ಲಿ ವ್ಯಯವಾಗತೊಡಗಿತೋ ಅಂದಿನಿಂದಲೇ ಈ ಜಗತ್ತಿನಲ್ಲಿ ಅಶಾಂತತೆ ತಲೆದೋರಿತು. ಬಡತನವೆಂಬ ಭೂತ ಕಾಲಿಟ್ಟಿತು. ಕಲಹ ಕದನಗಳೇ ಮೊದಲಾದ ಅನನ್ವಿತ ಕಾರ್ಯಗಳು ಅವ್ಯಾಹತವಾಗಿ ನಡೆಯತೊಡಗಿದವು.
ಬುದ್ಧಿಶಕ್ತಿಯ ಅಭಿವೃದ್ಧಿಯೊಡನೆ ಮನುಷ್ಯನು ತೃಪ್ತನಾಗದಾದನು. ಆತನಿಗೆ ಹೆಚ್ಚು ಹೆಚ್ಚು ವಸ್ತುಗಳನ್ನು ಕೂಡಿಡುವ ಬುದ್ಧಿ ಉತ್ಪನ್ನವಾಯಿತು. ಮನುಷ್ಯೇತರ ಯಾವ ಪ್ರಾಣಿಯಾದರೂ ಇಂದಿನ ಆಹಾರ ಸಂಗ್ರಹಾದಿ ವಿಷಯಗಳನ್ನು ಕುರಿತು ಆಲೋಚಿಸುವುದಲ್ಲದೆ, ನಾಳಿನ ವಿಷಯವಾಗಿ ಏನನ್ನೂ ಚಿಂತಿಸುವುದಿಲ್ಲ. ಮನುಷ್ಯನ ಹದನಾದ ಬುದ್ಧಿಶಕ್ತಿ ಆತನನ್ನು ಸ್ವೋಪ ಯೋಗಾವಶ್ಯಕವಾದುದಕ್ಕಿಂತಲೂ ಹೆಚ್ಚಿಗೆ ವಸ್ತುಗಳನ್ನು ಸಂಗ್ರಹಿಸಲು ಪ್ರೇರೇಪಿಸಿತು. ಇದನ್ನು ಪರಸ್ವಾಪರಣವೆಂದೇ ಪರ್ಯಾಯಾರ್ಥ ಮಾಡಬಹುದು. ಎಂದಿನಿಂದ ಮನುಷ್ಯನಿಗೆ ಬೇಕಾದುದಕ್ಕಿಂತ ಅಧಿಕ ವಸ್ತುಗಳನ್ನು ಸಂಗ್ರಹಿಸುವ ಬಯಕೆಯುಂಟಾಯಿತೋ ಅಂದಿನಿಂದಲೇ ಜಗತ್ತಿನಲ್ಲಿ ಧನವಂತರು ಮತ್ತು ಬಡವರು ಎಂಬೀ ಭೇದ ಉಂಟಾಯಿತು.
ಅಧಿಕ ಸಂಗ್ರಹಾಪೇಕ್ಷೆಯುಂಟಾದವರು, ಬಲವಿರುವವರು ನೆರೆಯವರು ಸರ್ವಸ್ಸಾಪಹಾರ ಮಾಡಿ, ಅರ್ಥಾತ್ ಅವರ ಕುತ್ತಿಗೆ ಮುರಿದು ಧನಿಕರೆಂದಿನಿಸಿಕೊಂಡು ಮೆರೆದಾಡತೊಡಗಿದರು. ಜಗತ್ತಿನಲ್ಲಿ ಅನ್ಯಾಯವೇ ತುಂಬಿ ಹೋಗಿದೆ. ಸಂಪೂರ್ಣ ಜಗತ್ತೇ ಸಿರಿವಂತರ ದಬ್ಬಾಳಿಕೆ ಮೂಲಕ ಬೆಂದು ಬೆಂದು ಹೋಗಿದೆ. ಒಂದು ಕಡೆಯಲ್ಲಿ ಮಿತಿ ಮೀರಿ ತಿಂದು ತೇಗುತ್ತಿರುವ ಸದ್ದು ಕೇಳಿ ಬರುತ್ತಿದೆ. ಮತ್ತೊಂದು ಕಡೆಯಲ್ಲಿ ಕೂಳಿಲ್ಲದೆ ಗೋಳಿಡುತ್ತಿರುವ ಬಡಜನರ ಆರ್ತಧ್ವನಿಯು ಎದೆಯನ್ನು ಕರಗಿಸುತ್ತಿದೆ. ಎಂದಿನವರೆಗೆ ಈ ಜಗತ್ತಿನಿಂದ ‘ಬಡತನವೆಂಬ ಭೂತ’ವು ಹೊಡೆದೋಡಿಸಲ್ಪಡುವುದಿಲ್ಲವೋ ಅಂದಿನವರೆಗೆ ಈ ಜಗತ್ತಿಗೆ ಸುಖ-ಶಾಂತಿಗಳಿಲ್ಲ.
ಯಾವುದೇ ರಾಜ್ಯದಲ್ಲಿ ಬಡವರ ಆರ್ತಧ್ವನಿ ಕೇಳಿ ಬರುತ್ತಿರುವುದೋ ಆ ರಾಜ್ಯ ‘ಸುರಾಜ್ಯ’ವೆಂದೆನಿಸದು. ಅದು ‘ಘನಘೊರ ನರಕ’ವೆಂದೆನಿಸುವುದು. ಬಡತನ ವ್ಯಾಪಿಸಿದ ದೇಶದಲ್ಲಿ ಆವ ಸುಧಾರಣೆಯೂ ಆಗಲಾರದು. ನಮ್ಮೀ ಭಾರತಾವನಿಯು ದಾರಿದ್ರ್ಯ ಭೂತಪೀಡಿತವಾಗಿರುವುದರಿಂದಲೇ ಇದು ಹಿಂದುಳಿದ ನಾಡೆಂದು ನಿಂದಿತವಾಗುತ್ತಿದೆ. ಆದುದರಿಂದ ದೇಶಾಭಿವೃದ್ಧಿಯಾಗಲಿಕ್ಕೆ ಬಡಜನರ ದಾರಿದ್ರ್ಯ ನಿವಾರಣೆಯೇ ಪ್ರಥಮ ಸೋಪಾನವಾಗಿದೆ.
ಇದೀಗ ಕ್ರಾಂತಿಯ ಯುಗ. ಸಂಪೂರ್ಣ ಜಗತ್ತೇ ನವಪಥವನ್ನು ಹಿಡಿಯಲು ಹಾತೊರೆಯುತ್ತಿರುವ ಕಾಲವಿದು! ಇಂದಿನವರೆಗೆ ಬಡವರು ಮೌಢ್ಯಪಂಕದಲ್ಲಿ ಬಿದ್ದು ತೊಳಲಾಡುತ್ತಿದ್ದರು. ಇದೀಗ ಬಡವರ ನಿದ್ರಾವಸ್ಥೆ ತೊಲಗಿ ಹೋಗಿ ಜಾಗೃತರಾಗಿರುತ್ತಾರೆ. ದರಿದ್ರೋದ್ಧಾರಕ ‘ದಿನಮಣಿ’ ಇದೀಗ ತಾನೇ ಮೊಗದೋರಿರುತ್ತಾನೆ. ತಾನೇ ಮೊಗದೋರಿರುತ್ತಾನೆ. ಸಿರಿವಂತರೆಂದರೆ ರಾಕ್ಷಸರಂತೆಯೂ ವೈರಿಗಳಂತೆಯೂ ಬಡವರಿಗೆ ತೋರಿಬರುತ್ತಿರುವರು. ರಷ್ಯಾದ ದರಿದ್ರರು ಎಚ್ಚೆತ್ತು ಮಾಡಿದ ವಿಚಿತ್ರ ಚರಿತ್ರೆ ಸರ್ವರಿಗೂ ವೇದ್ಯವಿರುತ್ತದೆ. ಅವರ ಸಮತಾವಾದ ಮೂಲಕ ರಷ್ಯಕ್ಕೆ ಉಂಟಾದ ಮೇಲ್ಮೆಯನ್ನು ಅನೇಕರರಿತಿರಬಹುದು. ಇಡೀ ಜಗತ್ತಿನ ಬಡವರೆಲ್ಲರೊಂದಾಗಿ ಒಮ್ಮೆ ಧನಿಕರನ್ನು ಪ್ರತಿಸ್ಪರ್ಧಿಸಿ ‘ಧನಿಕ’ ಎಂಬ ಹೆಸರನ್ನೇ ನಾಶಮಾಡಲಿರುವರು. ಆದ ಕಾರಣ ಅಂತಹ ‘ಅನನ್ವಿತ ಕಾರ್ಯ’ವುಂಟಾಗದಂತೆ ‘ಬಡವರ ಬಂಧು’ಗಳೆನಿಸಿ ಅವರಿಗೆ ಸಹಾಯ ಮಾಡಿ ತನ್ಮೂಲಕ ಮುಂದೆ ಬರಲಿರುವ ಗಂಡಾಂತರವನ್ನು ತಪ್ಪಿಸಿಕೊಳ್ಳುವುದೂ ದೀನಪಾಲಕನೂ ದಯಾಮಯನೂ ಆದ ಪರಮಾತ್ಮನ ಕೃಪಾಪಾತ್ರರಾಗುವುದೂ ಪ್ರತಿಯೊಬ್ಬ ಧನಿಕನ ‘ಆದ್ಯ ಕರ್ತವ್ಯವು’.
|ಮೊಗೇರಿ ಗೋಪಾಲಕೃಷ್ಣ ಅಡಿಗ(ನಾಲ್ಕನೆ ಫಾಮ್ರ್, ಬೋರ್ಡ್ ಹೈಸ್ಕೂಲ್ ಕುಂದಾಪುರ)
ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಪೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸಕಾಲದ ಹೊಸಬದುಕಿಗೆ ಅತ್ಯಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿನ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ.
(ಅಡಿಗರು 1976ರಲ್ಲಿ ತಮ್ಮ ‘ಸಮಗ್ರಕಾವ್ಯ’ಕ್ಕೆ ಬರೆದ ಮೊದಲಮಾತುಗಳಲ್ಲಿ ಹೇಳಿದ್ದು)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + three =
Remember me
