| ಚಂದ್ರಿಕಾದಾಸಕೂಟವನ್ನು ಕಟ್ಟಿ ನಿಲ್ಲಿಸಿದ ‘ವ್ಯಾಸತೀರ್ಥ’ರ ಶಿಷ್ಯರಲ್ಲಿ ಪ್ರಮುಖರಾದವರು ‘ಪುರಂದರದಾಸರು’. ಇವರಿಗೆ ಕನ್ನಡ ವಾಙ್ಮಯದಲ್ಲಿ ವಿಶಿಷ್ಟವಾದ ಸ್ಥಾನವಿದೆ. ದಕ್ಷಿಣಾದಿ ಸಂಗೀತವೂ, ಕನ್ನಡ ಭಾಷೆಯೂ ಪರಿಪಕ್ವ ದೆಸೆಯನ್ನು ಮುಟ್ಟಲು ಇವರು ಕಾರಣರಾದರು. ‘ಕರ್ನಾಟಕ ಸಂಗೀತ ಪಿತಾಮಹ’ರೆಂದೇ ಪ್ರಖ್ಯಾತರಾದರು. ಇವರು ರಚಿಸಿದ ತಾಳಾಲಂಕಾರ, ಗೀತೆಗಳು ಸಂಗೀತಾಭ್ಯಾಸಿಗಳ ಆರಂಭ ಪಾಠವೇ ಆಗಿದೆ. ಆದರೆ ಇವರ ಜನ್ಮಸ್ಥಳ, ಜನಿಸಿದ ವರ್ಷ, ದಿನ ಇತ್ಯಾದಿ ವಿವರಗಳನ್ನು ನಿರೂಪಿಸಲು ಇವತ್ತಿಗೂ ಸಾಕಷ್ಟು ಪ್ರಮಾಣಗಳಿಲ್ಲ. ಅಷ್ಟೇ ಅಲ್ಲ, ಪುರಂದರದಾಸರ ಮೂಲ ಹೆಸರಿನ ಬಗೆಗೂ ಗೊಂದಲವಿದೆ. ಒಬ್ಬರು ‘ಶ್ರೀನಿವಾಸ ನಾಯಕ’ ನೆಂದರೆ ಮತ್ತೊಬ್ಬರ ಪ್ರಕಾರ ಕೃಷ್ಣಪ್ಪನಾಯಕ.
ಶ್ರೀನಿವಾಸನಾಯಕ/ಕೃಷ್ಣಪ್ಪನಾಯಕ ಎಂಬುವವನು ಪುರಂದರದಾಸನಾಗುವ ಮೊದಲು ಏನಾಗಿದ್ದರು ಎಂಬ ವಿಚಾರ ಕೂಡ ಅನೇಕ ಊಹೆಗಳಿಗೆ ಆಸ್ಪದ ನೀಡಿದೆ. ಒಂದಂತೂ ನಿಜ, ಅವರು ದೊಡ್ಡ ಸಾಮ್ರಾಜ್ಯವನ್ನೂ, ಯುದ್ಧಕಲಹಗಳನ್ನೂ ಹತ್ತಿರದಿಂದ ಕಂಡಿದ್ದರು. ಎಲ್ಲರಿಗೂ ಗೊತ್ತಿರುವ ಒಂದು ಕತೆಯ ಪ್ರಕಾರ ಅವರ ಹೆಂಡತಿ ಸಾಕ್ಷಾತ್ ಪರಮಾತ್ಮನಾದ ನಾರಾಯಣನಿಗೆ ತನ್ನ ಮೂಗುತಿ ದಾನ ಮಾಡಿದ ಪ್ರಸಂಗದಿಂದಾಗಿ ಇವರಿಗೆ ಜ್ಞಾನೋದಯವಾಗಿ ತಮ್ಮೆಲ್ಲ ಶ್ರೀಮಂತಿಕೆಯನ್ನೂ ದಾನ ಮಾಡುತ್ತಾರೆ. ಹೆಂಡತಿ- ಮಕ್ಕಳೊಡನೆ ಕ್ಷೇತ್ರಾಟನೆಯತ್ತ ಮನಸ್ಸು ತಿರುಗಿಸಿ ‘ಹಂಪಿಗೆ’ ಬಂದು ವ್ಯಾಸತೀರ್ಥರ ದಾಸಕೂಟದ ಸದಸ್ಯನಾಗಿ ‘ಪುರಂದರ ವಿಠಲ’ ಎಂಬ ಅಂಕಿತದಿಂದ ಕೀರ್ತನೆಗಳನ್ನು ರಚಿಸಲು ಪ್ರಾರಂಭಿಸಿದರು. ಕ್ರಮೇಣ ಹಂಪಿಯಿಂದಲೂ ಇವರು ಹೆಂಡತಿ, ಮಕ್ಕಳೊಡನೆ ಹೊರಟು ಊರೂರು ತಿರುಗುತ್ತ ಹಾಡುಗಳನ್ನು ರಚಿಸಿ, ಹಾಡುತ್ತ ಊಂಛ ವೃತ್ತಿಯಿಂದ ಜೀವಿಸುತ್ತಿದ್ದರು ಎನ್ನುತ್ತದೆ ಅವರ ಜೀವನಚರಿತ್ರೆ.
ದಾಸರು ‘ನಾಲ್ಕು ಲಕ್ಷ ಎಪ್ಪತೆôದು ಸಾವಿರ’ ಕೃತಿಗಳನ್ನು ರಚಿಸಿದರೆಂದೂ ಬಲವಾದ ಪ್ರತೀತಿ ಒಂದಿದೆ. (ಇನ್ನುಳಿದ 25 ಸಾವಿರ ಕೃತಿಗಳನ್ನು ಮುಂದೆ ವಿಜಯದಾಸರು ರಚಿಸಿದರೆಂದೂ ಇವರು ಹಿಂದಿನ ಜನ್ಮದಲ್ಲಿ ಪುರಂದರ ದಾಸರ ಮಗನಾದ ಮಧ್ವಪತಿದಾಸರಾಗಿದ್ದರೆಂದೂ ನಂಬಿಕೆ ಇದೆ) ಆದರೆ ನಮಗೆ ದೊರೆತಿರುವುದು 1000-1200 ಕೃತಿಗಳು ಮಾತ್ರ. ಇವುಗಳಲ್ಲಿ ಪದಗಳೂ, ಗೀತಗಳೂ, ಉಗಾಭೋಗಗಳೂ, ಸುಳಾದಿಗಳೂ ಇವೆ. ಇವರ ಕೃತಿಗಳಲ್ಲಿ ಅನಂತ ವೈವಿಧ್ಯವಿದೆ. ಸಂಗೀತದ ಸೊಬಗು, ಸಾಹಿತ್ಯದ ಸೊಗಸು, ಧರ್ಮದ ಬೆಡಗು ಇವುಗಳೆಲ್ಲ ಸಮ್ಮಿಲನಗೊಂಡಿವೆ. ಮಧ್ವಶಾಸ್ತ್ರ ಮತ್ತು ಗುರು ಪರಂಪರೆ ಮುಖ್ಯವಾಗಿದ್ದರೂ ಪುರಾಣಕತೆಗಳ ಆಧಾರ ಕೃತಿಗಳೂ, ದೇವರ ನಾಮಗಳೂ, ತೀರ್ಥಕ್ಷೇತ್ರಗಳ ವರ್ಣನೆಗಳೂ ಹಾಗೂ ಅಲ್ಲಿಯ ದೇವತಾರಾಧನೆಯ ಕೃತಿಗಳೂ, ಭಾವನಾತ್ಮಕ ಸಾಂಕೇತಿಕ ಅಭಿವ್ಯಕ್ತಿಗಳೂ ಕಂಡುಬರುತ್ತವೆ. ಅನುಭಾವಿಯೇ ಆಗಿದ್ದ ಅವರು ಮನುಷ್ಯನ ಗುಣ-ಅವಗುಣಗಳಿಗೂ, ನೀಚ-ಉಚ್ಚ ಭಾವನೆಗಳಿಗೂ ಕನ್ನಡಿ ಹಿಡಿದಂತಿರುವ ಕೃತಿಗಳನ್ನು ಅಪಾರವಾಗಿ ರಚಿಸಿದರು. ಸಾಮಾಜಿಕ ಪ್ರಜ್ಞೆ ಹಾಗೂ ಅವರ ಆತ್ಮನಿಷ್ಠ ಧೋರಣೆಯು ಅವರ ಕೀರ್ತನೆಗಳಲ್ಲಿ ಕಂಡುಬರುತ್ತದೆ.
ಸಾಹಿತ್ಯದ ದೃಷ್ಟಿಯಿಂದ ನೋಡಿದರೆ ಇವರದು ಆಶುಸಾಹಿತ್ಯ ಧೋರಣೆ, ಆದರೆ ಇದು ಸಂಗೀತವನ್ನು ಒಳಗೊಂಡಿರುವ ವಿಶಿಷ್ಟವಾದ ಪ್ರಕಾರ. ಮನುಷ್ಯನ ಉದ್ಧಾರಕ್ಕೆ ಅಗತ್ಯವಾದ ತತ್ತ್ವಗಳನ್ನು ಒಳಗೊಂಡಿದ್ದರೂ ಸರಳ ಸುಂದರವಾಗಿರುವ ಅವರ ‘ಕೀರ್ತನೆಗಳು’ ತಮ್ಮ ಸೊಬಗಿನಿಂದ ಸಾಮಾನ್ಯ ಜನರನ್ನೂ ತಲುಪಿದವು. ಜನರು ಸಂತೋಷಪಟ್ಟದ್ದು ಮಾತ್ರವಲ್ಲ ಅಧ್ಯಾತ್ಮದಲ್ಲಿ ರುಚಿಯನ್ನೂ ಕಂಡರು. ವ್ಯಕ್ತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ಕಾಣುವ ಕಣ್ಣು ದಾಸರಿಗಿತ್ತು. ಬದುಕು ನೀರಮೇಲಣ ಗುಳ್ಳೆಯಂತೇ ಕ್ಷಣಿಕವಾದರೂ ಮನುಷ್ಯ ಕುಗ್ಗದೆ, ‘ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯಿರಲಿ’ ಎಂದು ವಿನಮ್ರನಾಗಿ ಸಂಯಮ ಸಾಧಿಸಬೇಕು. ಆ ಬದುಕಿನಿಂದಲೇ ಮುಕ್ತಿಯನ್ನು ಸಾಧಿಸಿಕೊಳ್ಳಬೇಕು ಎಂದು ಅವರು ತಿಳಿಸುತ್ತ್ತ ಹೋದರು.
ಉದಾ: ‘ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿರೋ…’, ‘ಈಸಬೇಕು ಇದ್ದು ಜೈಸಬೇಕು…’, ‘ಸಕಲವೆಲ್ಲವೂ ಹರಿಸೇವೆ ಎನ್ನಿ…’, ‘ಸಂಸಾರವೆಂಬ ಭಾಗ್ಯವಿರಲಿ…’ ಮುಂತಾದವು.
ಗಹನವಾದ ತತ್ತ್ವಗಳನ್ನೂ, ಜಟಿಲವಾದ ಶಾಸ್ತ್ರ ಪ್ರಮೇಯಗಳನ್ನೂ ಸರಳವಾಗಿಸಿ ತಿಳಿಗನ್ನಡದಲ್ಲಿ ಹೇಳಿರುವ ಇವರಿಂದ ‘ಕೀರ್ತನ ಪದ್ಧತಿ’, ‘ಭಜನಾ ಪದ್ಧತಿ’ಗಳೂ ಪರಿಷ್ಕೃತಗೊಂಡವು. ಸಂಗೀತ ಪ್ರಪಂಚದಲ್ಲಂತೂ ಪುರಂದರದಾಸರದು ದೊಡ್ಡ ಹೆಸರು. ಪದ, ಸುಳಾದಿ, ಉಗಾಭೋಗಗಳೆಂದು ಸಂಗೀತದ ವೈವಿಧ್ಯವನ್ನೇ ಶ್ರುತಪಡಿಸಿದ ಅವರು ದಕ್ಷಿಣ ಭಾರತೀಯ ಸಂಪ್ರದಾಯದಲ್ಲಿ ದೊಡ್ಡ ಹೆಸರನ್ನೇ ಗಳಿಸಿದರು. ಈ ಸಂಗೀತ ಪದ್ಧತಿಯನ್ನೇ ಮುಂದೆ ತ್ಯಾಗರಾಜರೂ ಮುಂದುವರಿಸಿಕೊಂಡು ಹೋದರು. ಪುರಂದರದಾಸರ ‘ನಿರ್ಯಾಣದ ತಿಥಿ’ಯ ವಿಷಯದಲ್ಲಿ ಮಾತ್ರ ಎಲ್ಲರದೂ ಒಮ್ಮತ ಅಭಿಪ್ರಾಯವಿದೆ. (ವಿದ್ವಾಂಸರಲ್ಲಿ)- ‘ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳದ ಅಮಾವಾಸ್ಯೆ’ ಎಂದು ಎಂದರೆ 1565ರ ಜನವರಿ 2ರಂದು ಪುರಂದರ ದಾಸರು ಮುಕ್ತರಾದರೆಂದು ತಿಳಿದುಬರುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 + 19 =
Remember me
