|ಡಾ. ಎಂ.ಎಸ್.ಚೈತ್ರರಾಷ್ಟ್ರೀಯ ಜೀವವೈವಿಧ್ಯ ಮಂಡಳಿ ಸದಸ್ಯ
ಅರಣ್ಯ ಸಂರಕ್ಷಣೆ ಎಂದರೆ ಕಾಡು, ಪ್ರಾಣಿ ಸಂಕುಲ ರಕ್ಷಣೆ ಎನ್ನಬಹುದು. ಜೀವವೈವಿಧ್ಯ ಎಂದ ಕೂಡಲೇ ಗಾಳಿಯಲ್ಲಿರುವ ಕ್ರಿಮಿಕೀಟಗಳನ್ನೂ ಒಳಗೊಂಡು ಇದರ ವ್ಯಾಪ್ತಿ ದೊಡ್ಡದಾಗುತ್ತದೆ. ಮಾನವನ ದುರಾಸೆಯಿಂದ ಜೀವವೈವಿಧ್ಯಕ್ಕೆ ಹಾನಿಯಾಗುತ್ತಿದೆ. ಇದನ್ನು ತಡೆಯಲು ಪ್ರಯತ್ನಗಳು ನಡೆದಿವೆ. ಸಂರಕ್ಷಣೆ ಎಂದರೆ ಏನು? ಮಾನವನ ಶೋಷಣೆಗೆ ಒಳಗಾಗುತ್ತಿರುವ ಪ್ರದೇಶಗಳನ್ನು ಮಾನವನ ಚಲನವಲನದಿಂದ ಸಂಪೂರ್ಣ ಮುಕ್ತಗೊಳಿಸುವುದು ಒಂದು ಪರಿಹಾರವಾಗಿ ನೋಡಲಾಗುತ್ತಿದೆ. ಇದರಿಂದ ಪ್ರಕೃತಿ ತನ್ನ ಪಾಡಿಗೆ ತಾನು ಸುಧಾರಣೆಯಾಗುತ್ತದೆ ಎಂಬ ಭಾವನೆಯಿದೆ. ಆದರೆ ಈ ನಿಟ್ಟಿನಲ್ಲಿ ಆಲೋಚನೆ ಬದಲಾವಣೆ ಆಗಿದೆ.
‘ಆಕ್ಸಿಸ್ ಟು ಬಯೋ ಡೈವರ್ಸಿಟಿ(ಎಬಿಎಸ್)’ ಎಂಬುದು ಇದೀಗ ಅಂತಾರಾಷ್ಟ್ರೀಯ ಮಂತ್ರ. ಹಾಗೆಂದರೆ ಏನು? ಉದಾಹರಣೆಗೆ, ಜೇನು ಪಡೆಯಲು ಮಾನವನು ಆ ಹುಳುಗಳನ್ನು, ಮರಗಳನ್ನು ಹನನ ಮಾಡುತ್ತಾನೆ ಎಂಬ ಕಾರಣಕ್ಕೆ ಮಾನವ ಸಂಚಾರವನ್ನು ನಿಷೇಧಿಸಿದರೆ, ಸ್ಥಳೀಯ ಜನರಿಗೆ ಅದನ್ನು ಬಳಸುವುದನ್ನು ತಪ್ಪಿಸಿದಂತಾಗುತ್ತದೆ. ಮಾನವನ ಆನಂದಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಆ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ ತಾನೆ? ಹಾಗಾದರೆ ಅದನ್ನು ಬಳಕೆಯನ್ನೇ ಮಾಡದಿದ್ದರೆ ಅದರ ಮೌಲ್ಯ ಏನು? ಈ ನಿಟ್ಟಿನಲ್ಲಿ, ಬೆಳೆಸುವುದು ಎಂದರೆ ಬಳಸುವುದು ಎಂಬ ದಿಕ್ಕಿನಲ್ಲಿ ಗಂಭೀರ ಹೆಜ್ಜೆ ಇಡಲಾಗುತ್ತಿದೆ. ಮೊದಲಿಗೆ ಜೀವವೈವಿಧ್ಯ ಕುರಿತ ವ್ಯವಸ್ಥೆಯನ್ನು ವಿಕೇಂದ್ರೀಕರಿಸಲು ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ. ಇದರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ರಾಜ್ಯ ಜೀವ ವೈವಿಧ್ಯ ಮಂಡಳಿ ಹಾಗೂ ತಜ್ಞರು ಸದಸ್ಯರಾಗಿರುತ್ತಾರೆ. ತಮ್ಮ ಸ್ಥಳೀಯ ಜೀವವೈವಿಧ್ಯಗಳನ್ನು ಕಾಪಾಡಿಕೊಳ್ಳಲು ಹಾಗೂ ಬಳಕೆಗೆ ಅನುಮತಿ ನೀಡುವಲ್ಲಿ ಈ ಸಮಿತಿಗಳೇ ಅಧಿಕಾರ ಹೊಂದಿರುತ್ತವೆ. ಈ ನಿಟ್ಟಿನಲ್ಲಿ ಜೀವವೈವಿಧ್ಯ ಮಂಡಳಿಯಿಂದ , ಸಮಿತಿ ರಚನೆ ಕಾರ್ಯವನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಾಗಿದೆ. ಎರಡನೆಯದಾಗಿ, ಯಾವ ಜೀವವೈವಿಧ್ಯಗಳು ಪ್ರದೇಶಾನುಸಾರ ಇದೆ ಎಂಬುದನ್ನು ಖಾತ್ರಿಪಡಿಸಲು ನಾಗರಿಕ ಜೀವವೈವಿಧ್ಯ ದಾಖಲೆಯನ್ನು (ಪಿಬಿಆರ್) ರೂಪಿಸಲಾಗುತ್ತಿದೆ. ಅದು ಮುದ್ರಣವಾಗದೆ, ಇ-ಪಿಬಿಆರ್ ರೂಪದಲ್ಲಿರಲಿದೆ, ಎಲ್ಲರಿಗೂ ಲಭ್ಯವಾಗಲಿದೆ. ಜೀವವೈವಿಧ್ಯ ಉತ್ಪನ್ನಗಳನ್ನು ಸಂಶೋಧನೆಗಾಗಲಿ, ಉದ್ಯಮಕ್ಕಾಗಲಿ ಬಳಕೆ ಮಾಡಿಕೊಳ್ಳುವವರಿಗೆ ಇಲ್ಲಿವರೆಗಿದ್ದ ಸುದೀರ್ಘ, ಅಪಾರದರ್ಶಕ, ಭ್ರಷ್ಟಾಚಾರದಿಂದ ಕೂಡಿದ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ. ಜೀವವೈವಿಧ್ಯವನ್ನು ಬಳಕೆ ಮಾಡಲು ತೊಂದರೆ ಮಾಡುವುದು, ನಿಯಂತ್ರಿಸುವುದು ಸರ್ಕಾರದ ಕೆಲಸವಾಗಬಾರದು. ಹಾಗೆಂದು ಅದನ್ನು ಯಥೇಚ್ಛವಾಗಿ ಬಳಸುವ ಹಾಗೂ ಸ್ವಾರ್ಥಕ್ಕೆ ಬಳಸಿ ಮೂಲವನ್ನೇ ನಾಶ ಮಾಡುವ ಹಾಗಾಗಬಾರದು. ಈ ನಿಟ್ಟಿನಲ್ಲಿ ಕಾಯ್ದೆಗೆ ಅನೇಕ ಬದಲಾವಣೆಗಳನ್ನು ಶಿಫಾರಸು ಮಾಡಲಾಗಿದೆ. ವಿವೇಚನೆಯಿಂದ ಬಳಕೆ ಮಾಡಿದಾಗಲೇ ಜೀವವೈವಿಧ್ಯದ ಸಂರಕ್ಷಣೆ ಸಾಧ್ಯವೇ ಹೊರತು ಅದನ್ನು ಮುಚ್ಚಿಡುವುದರಿಂದ ಅಲ್ಲ ಎಂಬ ರೀತಿಯಲ್ಲಿ ಒಟ್ಟಾರೆ ಆಲೋಚನಾ ಲಹರಿಯಲ್ಲಿ ಬದಲಾವಣೆ ಆಗುತ್ತಿದೆ. ಇದರಿಂದ ಜೀವವೈವಿಧ್ಯವೂ ಉಳಿಯಲಿದೆ, ಮಾನವನಿಗೆ ಆನಂದವೂ ಸಿಗಲಿದೆ.
|ಡಾ. ಕೆ.ಎಸ್.ಚೇತನ್ ನಾಗ್ಸಹಾಯಕ ಪ್ರಾಧ್ಯಾಪಕರು
ಜಗತ್ತಿನಾದ್ಯಂತ ಕೇವಲ 200 ವರ್ಷಗಳಲ್ಲಿ ಶೇಕಡ 7ರಿಂದ ಶೇಕಡ 50 ಜನರು ಹಳ್ಳಿಗಳಿಂದ ನಗರದ ಕಡೆ ಮುಖಮಾಡಿದ್ದಾರೆ ಹಾಗೂ ಭಾರತದಲ್ಲಿ ಶೇ.27.5 ಜನರು ಆಗಲೇ ಪಟ್ಟಣವಾಸಿಗಳಾಗಿದ್ದಾರೆ. ನಗರಗಳ ಈ ವಿಸ್ತರಣೆಯಿಂದ ಜೀವಿಗಳ ಆವಾಸಸ್ಥಾನ ವಿಪರೀತ ಮಾರ್ಪಾಡಾಗುತ್ತಿವೆ. ಇಂತಹ ಮಾರ್ಪಾಡಾದ ಆವಾಸ ಸ್ಥಾನಗಳಲ್ಲಿ ಜೀವಸಂಕುಲ ನಗರ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ಸ್ವರೂಪಗಳ ಅಧ್ಯಯನಕ್ಕೆ, ಶೀಘ್ರ ಗತಿಯಲ್ಲಾಗುತ್ತಿರುವ ಜೀವವಿಕಸನ ರೂಪಿಕೆಗಳು, ಹೊಸ ಜೀವ ಪ್ರಬೇಧಗಳ ದಾಖಲಾತಿ (ಬೆಂಗಳೂರಿನ ಹೊರವಲಯದಲ್ಲಿ 2020ರಲ್ಲಿ ಕಂಡು ಹಿಡಿದ ಬಿಲಗಪ್ಪೆಯನ್ನು ಸ್ಮರಿಸಬಹುದು) ಮುಂತಾದ ಕಾರಣಗಳಿಗೆ ನಗರ ಜೀವವೈವಿಧ್ಯಗಳ ಕೊಡುಗೆ ಅಪಾರ. ನಗರ ಜೀವವೈವಿಧ್ಯ ಒಂದು ನವೀನ ಇಕೋ ಸಿಸ್ಟಮ್ ಆಗಿದೆ ಮತ್ತು ನಗರ ಜೀವವೈವಿಧ್ಯ ಅಧ್ಯಯನದಿಂದ ನಗರಗಳ ರೂಪಿಸುವಿಕೆ, ಪರಿಸರಸ್ನೇಹಿ ಆಡಳಿತ ಯೋಜನೆಗಳಿಗೆ ಬಹಳ ಅನುಕೂಲಕಾರಿ.
ಜೀವವೈವಿಧ್ಯ ಬರೀ ಜೀವವಿಜ್ಞಾನಿಗಳ ಸಂಶೋಧನೆ ಎನ್ನುವ ವಿಚಾರವನ್ನು ನಾನು ಒಪು್ಪವುದಿಲ್ಲ. ಜೀವವಿಜ್ಞಾನ ಅಥವಾ ವಿಜ್ಞಾನ ಅಧ್ಯಯನವನ್ನು, ಆಸಕ್ತಿಯುಳ್ಳ ಯಾರೂ ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಜೀವವೈವಿಧ್ಯ ಗಣತಿಗಳಲ್ಲಿ ಸಾಮಾನ್ಯಾತಿ ಸಾಮಾನ್ಯರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಮತ್ತು ವೈಜ್ಞಾನಿಕ ಸತ್ಯವನ್ನು ಅರಿಯುವಲ್ಲಿ ಬಹಳ ಸಹಕಾರಿಗಳಾಗಿದ್ದಾರೆ. ಇಷ್ಟೆಲ್ಲದರ ನಡುವೆಯೂ ಮನುಷ್ಯ ಸಮಸ್ಯೆಯ ಭಾಗವಲ್ಲದೆ, ಪರಿಹಾರದ ಭಾಗವಾಗಲು ಸಾಧ್ಯವಿದೆ. ಸಿಂಗಾಪುರ ರೂಪಿಸಿರುವ ‘ಸಿಟಿ ಬಯೊಡೈವರ್ಸಿಟೀ ಇಂಡೆಕ್ಸ್ ’ (ನಗರ ಜೀವವೈವಿಧ್ಯದೊಡನೆ ಸಹಬಾಳ್ವೆಯ ಹಾದಿಯಲ್ಲಿ) ಒಳಗೊಂಡಂತೆ ಇವತ್ತು ಯುರೋಪ್ ಸೇರಿ ಹಲವು ರಾಷ್ಟ್ರಗಳು ತಮ್ಮಲ್ಲಿರುವ ಜೀವವೈವಿಧ್ಯ ಕಾಪಾಡಿಕೊಳ್ಳುವಲ್ಲಿ ಹಾಗೂ ಕಡಿಮೆ ಸಂಘರ್ಷಾತ್ಮಕ , ಸಹಬಾಳ್ವೆಯ, ಪರಿಸರಸ್ನೇಹಿ ಜೀವನಶೈಲಿಯ ಕಡೆಗೆ ಸಾಕಷ್ಟು ಗುಣಾತ್ಮಕ ಹೆಜ್ಜೆಯನ್ನು ಇರಿಸುತ್ತಿವೆ.
|ಅನಂತ ಹೆಗಡೆ ಅಶೀಸರಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರು
ಜೀವವೈವಿಧ್ಯ ಕಾನೂನಿನ್ವಯ, ಅಪರೂಪದ ಹಾಗೂ ಅಮೂಲ್ಯವಾದ ಜೀವಸಂಕುಲಗಳಿರುವ ಪ್ರದೇಶಗಳನ್ನು ‘ಪಾರಂಪರಿಕ ಜೀವವೈವಿಧ್ಯ ತಾಣ’ಗಳೆಂದು ಗುರುತಿಸಿ, ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ ರಕ್ಷಿಸುವ ವಿಧಾನವನ್ನು ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಅನುಸರಿಸುತ್ತಿದೆ. ಮಂಡಳಿ ಈವರೆಗೆ ರಾಜ್ಯದ ನಾಲ್ಕು ಅಂಥ ವಿಶೇಷ ಪ್ರದೇಶಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣಗಳೆಂದು ಗುರುತಿಸಿ ಸಂರಕ್ಷಿಸಲು ಪ್ರಯತ್ನಿಸಿದೆ. ಅವೆಂದರೆ: 1. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಲ್ಲೂರಿನಲ್ಲಿರುವ ಪುರಾತನ ಹುಣಸೆಮರದ ತೋಪು 2. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೖಷಿ ವಿಶ್ವವಿದ್ಯಾಲಯ ಆವರಣದ ನೈಸರ್ಗಿಕ ಕಾಡು 3. ಚಿಕ್ಕಮಗಳೂರಿನ ಹೊಗರೆಕಾನುಗಿರಿ ಬೆಟ್ಟ 4. ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಪ್ರದೇಶದ ಅಂಬಾರಗುಡ್ಡ.
ಇವಲ್ಲದೆ, ಈಗ ಹೊಸದಾಗಿ ಈ ಕೆಳಗಿನ ಪರಿಸರಸೂಕ್ಷ್ಮ ಪ್ರದೇಶಗಳನ್ನು ಜೀವವೈವಿವೈಧ್ಯತಾಣಗಳನ್ನಾಗಿ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ: ಕಗ್ಗಭತ್ತ ಬೆಳೆಯುವ ಪ್ರದೇಶ (ಅಘನಾಶಿನಿ ಅಳಿವೆ, ಕುಮಟಾ, ಉತ್ತರ ಕನ್ನಡ); ಅಂತರಗಂಗೆ ಬೆಟ್ಟ (ಕೋಲಾರ); ಶ್ರೀಲಕ್ಷ್ಮೀ ಆದಿನಾರಾಯಣ ಬೆಟ್ಟ (ಗುಡಿಬಂಡೆ ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆ); ಮಹಿಮಾರಂಗ ಬೆಟ್ಟ (ಕುಲುವನಹಳ್ಳಿ, ನೆಲಮಂಗಲ ತಾ., ಬೆಂಗಳೂರು ಗ್ರಾಮೀಣ ಜಿಲ್ಲೆ); ಉರುಂಬಿ ಕುಮಾರಧಾರಾ ನದಿತೀರ (ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ); ಚಿಕ್ಕಮಗಳೂರು ಜಿಲ್ಲೆಯ ಹೊಗರೆಕಾನುಗಿರಿ ಜೀ.ಪಾ.ತಾ.ಕ್ಕೆ ಸಖರಾಯಪಟ್ಟಣ ಬಳಿಯ ಶಕುನಗಿರಿ ಬೆಟ್ಟವನ್ನು ಸೇರಿಸುವುದು; ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಕತ್ತಲೆಕಾನು ಅರಣ್ಯ ಸೇರಿದಂತೆ, ಮಲೆನಾಡು ಹಾಗೂ ಕರಾವಳಿಯ ಪ್ರಮುಖ ರಾಮಪತ್ರೆಜಡ್ಡಿ ಜೌಗುತಾಣಗಳನ್ನು ಆದ್ಯತೆಯಲ್ಲಿ ಸಂರಕ್ಷಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + three =
Remember me
