| ಶಿವು ಹುಣಸೂರು ಮೈಸೂರು
ಬುಡಕಟ್ಟು ಜನರ ಪಾರಂಪರಿಕ ವೈದ್ಯ ಪದ್ಧತಿ ಪೋ›ತ್ಸಾಹಿಸುವ ದೃಷ್ಟಿಯಿಂದ ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮದಲ್ಲಿ ಔಷಧಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮುಂದಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಹಕ್ಕಿಪಿಕ್ಕಿ ಸಮುದಾಯ ಸ್ವಾಗತಿಸಿದೆ. ಪಕ್ಷಿರಾಜಪುರವಲ್ಲದೆ, ಶಿವಮೊಗ್ಗ ಜಿಲ್ಲೆಯ ಗೌತಮನಗರದಲ್ಲೂ ಮತ್ತೊಂದು ಘಟಕ ನಿರ್ವಣವಾಗುತ್ತಿವೆ.
10 ಸಾವಿರ ಚ.ಅಡಿ ವಿಸ್ತ್ರೀರ್ಣವುಳ್ಳ ಸರ್ಕಾರಿ ಅಥವಾ ಸಮುದಾಯದ ನಿವೇಶನದಲ್ಲಿ ತಲಾ 2 ಕೋಟಿ ರೂ. ವೆಚ್ಚದಲ್ಲಿ ಸಂಸ್ಕರಣಾ ಘಟಕ ನಿರ್ವಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಅನುದಾನವೂ ಬಿಡುಗಡೆಗೊಂಡಿದ್ದು, ಆಯುಷ್ ಇಲಾಖೆ ಹಾಗೂ ಉಪ ಔಷಧ ನಿಯಂತ್ರಕರ ಕಚೇರಿ ಸಹಯೋಗದಲ್ಲಿ ಔಷಧ ಗುಣವುಳ್ಳ ವಿವಿಧ ಬಗೆಯ ಎಣ್ಣೆಗಳ ತಯಾರಿಕೆ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ.
ಅಧಿಕಾರಿಗಳಿಂದ ಪರಿಶೀಲನೆ:6 ತಿಂಗಳ ಹಿಂದೆ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮುಖ್ಯಕಾರ್ಯದರ್ಶಿ ಕುಮಾರನಾಯಕ್ ನೇತೃತ್ವದ ತಂಡ ಇಲ್ಲಿಗೆ ಭೇಟಿ ನೀಡಿತ್ತು. ಒಂದು ತಿಂಗಳ ಹಿಂದೆ ಇಲಾಖೆಯ ನಿರ್ದೇಶಕ ಸಂಗಪ್ಪ, ಯೋಜನಾ ಪರಿಣತ ಸಲಹೆಗಾರರಾದ ನಿಶ್ಚಿತ್, ಕಿರಣ್ ಮತ್ತವರ ತಂಡ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿತ್ತು. ಇನ್ನೊಂದು ತಿಂಗಳಲ್ಲಿ ಘಟಕ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
ಇನ್ನಿತರ ಆಸಕ್ತಿ:ಹುಣಸೂರು ತಾಲೂಕಿನ ಚಂದನಗಿರಿಹಾಡಿ, ಶಂಕರಪುರ ಹಾಡಿಯಲ್ಲಿ ವಾಸಿಸುತ್ತಿರುವ ಇದೇ ಸಮದಾಯದವರು ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದು, ತಮಗೂ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಪಕ್ಷಿರಾಜಪುರ ನಿವಾಸಿಗಳ ವಿಶೇಷತೆಪಕ್ಷಿರಾಜಪುರ 1, 2 ಮತ್ತು 3ನೇ ಘಟಕದಲ್ಲಿ ಹಕ್ಕಿಪಿಕ್ಕಿ ಸಮುದಾಯದ 400ಕ್ಕೂ ಹೆಚ್ಚು ಕುಟುಂಬಗಳು (2 ಸಾವಿರ ಜನಸಂಖ್ಯೆ) ಇದ್ದು, ಬಹುತೇಕ ಕುಟುಂಬಗಳು ಔಷಧ ಗಿಡಮೂಲಿಕೆ ಬಳಸಿ ತಲೆಕೂದಲು ಬೆಳೆಯುವ ಎಣ್ಣೆ, ನೋವು ನಿವಾರಕ ಎಣ್ಣೆ ಮತ್ತು ಮಸಾಜ್ ಎಣ್ಣೆ ತಯಾರಿಸುವ ಸಾಂಪ್ರದಾಯಿಕ ಕಲೆಯನ್ನು ಕರಗತ ಮಾಡಿಕೊಂಡಿವೆ. ವಂಶಪಾರಂಪರ್ಯವಾಗಿ ಇವರಿಗೆ ಈ ಕಲೆ ಸಿದ್ಧಿಸಿದೆ. ದಾಸವಾಳ ಹೂವು, ತುಳಸಿ, ನೆಲನೆಲ್ಲಿ ಇನ್ನಿತರ 20ಕ್ಕೂ ಹೆಚ್ಚು ಔಷಧ ಗುಣವುಳ್ಳ ಬೇರು, ಎಲೆ, ಹೂವು, ಕಾಯಿ ಬಳಸಿ ಮನೆಗಳಲ್ಲಿಯೇ ಎಣ್ಣೆ ತಯಾರಿಸುತ್ತಾರೆ. ಕೆಲವೊಂದು ಪದಾರ್ಥಗಳನ್ನು ಕೇರಳ ಗಡಿಯ ಮಾನಂದವಾಡಿಯಿಂದ ಖರೀದಿಸಿ ತರುತ್ತಾರೆ. ಈ ಔಷಧಗಳಿಗೆ ತಾವೇ ಬೆಲೆ ನಿಗದಿಪಡಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿಕೊಂಡು, ಉತ್ತಮ ಪ್ರಚಾರದೊಂದಿಗೆ ವಿದೇಶಗಳಿಗೂ ಕಳುಹಿಸುತ್ತಿದ್ದಾರೆ. ಅತ್ಯಂತ ಕಷ್ಟ ಜೀವಿಗಳಾಗಿ ದುಡಿಯುವ ಈ ಸಮುದಾಯ, ಕರಕುಶಲ ಕಿರುಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಸರ್ಕಾರದ ಗುರಿಯೇನು?ಸ್ಟೌ, ಕಟ್ಟಿಗೆ, ಒಲೆಗಳನ್ನು ಬಳಸಿಕೊಂಡು ಔಷಧೀಯ ಗುಣದ ಎಣ್ಣೆಗಳನ್ನು ಮನೆಗಳಲ್ಲಿಯೇ ತಯಾರಿಸುತ್ತಿರುವ ಎಲ್ಲರನ್ನೂ ಒಗ್ಗೂಡಿಸಿ, ಸಮಗ್ರ ಘಟಕ ಸ್ಥಾಪಿಸಿ, ಆ ಮೂಲಕ ಅವರ ಸರಕುಗಳಿಗೆ ಬ್ರ್ಯಾಂಡ್ ಒದಗಿಸುವ ಉದ್ದೇಶ ಸರ್ಕಾರದ್ದಾಗಿದೆ. ಆರ್ಥಿಕ ಪ್ರಗತಿಯತ್ತ ಸಾಗಲು ಸಮುದಾಯಕ್ಕೆ ಉತ್ತಮ ಅವಕಾಶ ಮಾಡಿಕೊಡಲಿದೆ. ಸ್ಥಳೀಯರು ಸಹಕಾರ ಪದ್ಧತಿಯಡಿ ಸೇರ್ಪಡೆಗೊಂಡು ಘಟಕದಲ್ಲೇ ಎಣ್ಣೆ ಉತ್ಪಾದನೆ ಮಾಡಲಿದ್ದಾರೆ. ಸಂಪೂರ್ಣ ಲಾಭಾಂಶವನ್ನು ಅವರ ಸಂಘಕ್ಕೆ ನೀಡಲಾಗುವುದು.
ಶಿಕ್ಷಣ, ಅಧ್ಯಾತ್ಮದತ್ತ ಒಲವು:ಪರಿಶಿಷ್ಟ ವರ್ಗಕ್ಕೆ ಸೇರುವ ಹಕ್ಕಿಪಿಕ್ಕಿ ಸಮುದಾಯದಲ್ಲಿ ಇತ್ತೀಚೆಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾತ್ರವಲ್ಲದೆ, ಶಿಸ್ತಿನ ಜೀವನ ನಡೆಸಲು ಮುಂದಾಗಿದ್ದು, ಗ್ರಾಮದಲ್ಲಿ ನಂಜುಂಡಸ್ವಾಮಿ ಮತ್ತವರ ತಂಡದ ಸತತ ಪ್ರಯತ್ನದಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ದೇವರು, ಶಿಸ್ತು, ಭಯ-ಭಕ್ತಿಯೊಂದಿಗೆ ಬಾಳಬೇಕೆನ್ನುವುದು ಅವರ ನಿಲುವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eighteen =
Remember me
