ಕಾನೂನು-ಸುವ್ಯವಸ್ಥೆ ಕಾಪಾಡಲು ಹಬ್ಬ-ಹರಿದಿನ ಎನ್ನದೆ ಹಗಲಿರುಳು ಶ್ರಮಿಸುವ ಪೊಲೀಸರ ನೆಮ್ಮದಿ ಕದಡಿದೆ. ಅಂತರ ಜಿಲ್ಲಾ ವರ್ಗಾವಣೆ ಸಿಗದೆ ಅರ್ಧ ಆಯಸ್ಸು ಮುಗಿದರೂ ಸ್ವಂತ ಜಿಲ್ಲೆಗೆ ಹೋಗಿ ಪಾಲಕರ ಜತೆಗಿರುವ ಭಾಗ್ಯ ಸಿಗದೆ ಮಾನಸಿಕ ವೇದನೆಗೆ ತುತ್ತಾಗಿದ್ದಾರೆ. ಸರ್ಕಾರ ಹಾಕಿರುವ ಎಲ್ಲ ಷರತ್ತಿಗೊಳಪಟ್ಟು ಟ್ರಾನ್ಸ್​ಫರ್ ಬಯಸಿದರೂ ಬೇಡಿಕೆ ಈಡೇರುತ್ತಿಲ್ಲ. ಒತ್ತಡದ ಕರ್ತವ್ಯ ನಿರ್ವಹಣೆ ಜತೆಗೆ ಕುಟುಂಬದ ಜತೆಗಿರಲಾರದ ನೋವಿನ ಬಗ್ಗೆ ವಿಜಯವಾಣಿ ಸಹಾಯವಾಣಿಗೆ ಪ್ರತಿನಿತ್ಯ ಹತ್ತಾರು ಪೊಲೀಸರು ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆಯಲು ಈ ವಿಶೇಷ ವರದಿ ಸಿದ್ಧಪಡಿಸಲಾಗಿದೆ.
| ಕೀರ್ತಿನಾರಾಯಣ ಸಿ. ಬೆಂಗಳೂರು
ಪೊಲೀಸರ ವರ್ಗಾವಣೆ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರದ ಲಿಖಿತ ಆದೇಶದ ನಂತರ ಪತಿ-ಪತ್ನಿ ಪ್ರಕರಣದಲ್ಲಿ ಕಾನ್​ಸ್ಟೆಬಲ್​ಗಳನ್ನಷ್ಟೇ ವರ್ಗಾವಣೆ ಮಾಡಿ, ಹೆಡ್ ಕಾನ್​ಸ್ಟೆಬಲ್​ಗಳನ್ನು ‘ಕೈ’ ಬಿಟ್ಟಿರುವ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದೆಡೆ ಅಂತರ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷದಿಂದ ಕಾಯುತ್ತಿರುವ 7 ವರ್ಷ ಸೇವಾವಧಿ ಪೂರೈಸಿರುವ ಪೊಲೀಸರು, ವಯಸ್ಸಾದ ತಂದೆ, ತಾಯಿ, ಕುಟುಂಬದಿಂದ ದೂರ ಉಳಿದು ಮಾನಸಿಕ ಕ್ಷೋಭೆಗೊಳಗಾಗುತ್ತಿದ್ದಾರೆ.
‘ವಿಜಯವಾಣಿ’ಯ ಸರಣಿ ವರದಿಗಳಿಂದ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ, 2024ರ ಮಾ.5ರಂದು ಪತಿ-ಪತ್ನಿ ಪ್ರಕರಣದಲ್ಲಿ ಸೇವಾ ಜೇಷ್ಠತೆ ಬಿಟ್ಟುಕೊಡುವ ಷರತ್ತಿಗೊಳಪಟ್ಟು 86 ಕಾನ್​ಸ್ಟೆಬಲ್​ಗಳನ್ನು ವರ್ಗಾವಣೆಗೊಳಿಸಿತ್ತು. ಆದರೆ, ವರ್ಗಾವಣೆ ಬೇಕೆಂದು ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದ ಹೆಡ್ ಕಾನ್​ಸ್ಟೆಬಲ್​ಗಳ ಬೇಡಿಕೆಗೆ ಸ್ಪಂದಿಸದಿರುವುದು ಈಗ ವಿವಾದಕ್ಕೆ ಗುರಿಯಾಗಿದೆ. ವರ್ಗಾವಣೆಗೊಳಿಸುವಂತೆ ಸರ್ಕಾರವೇ ಹೇಳಿದರೂ ಪೊಲೀಸ್ ಇಲಾಖೆ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಿದೆ ಎಂದು ವರ್ಗಾವಣೆ ವಂಚಿತ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುವ ನಿರ್ಧಾರಕ್ಕೂ ಬಂದಿದ್ದಾರೆ.
ಮತ್ತೊಂದೆಡೆ ಲೋಕಸಭೆ ಚುನಾವಣೆಗೂ ಮುನ್ನ 7 ವರ್ಷ ಪೂರೈಸಿರುವ ಎಲ್ಲ ಪೊಲೀಸರನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಪೊಲೀಸ್ ಕುಟುಂಬಗಳು ಎಚ್ಚರಿಸಿದ್ದವು. ಆದರೆ ಈ ಎಚ್ಚರಿಕೆಗೆ ಸರ್ಕಾರ ಕ್ಯಾರೇ ಎನ್ನಲಿಲ್ಲ. ಇದೀಗ ಚುನಾವಣೆ ಮುಗಿದಿರುವುದರಿಂದ 7 ವರ್ಷ ಸೇವೆ ಪೂರ್ಣಗೊಳಿಸಿರುವ 4000 ಹೆಚ್ಚು ಸಿಬ್ಬಂದಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಅರ್ಹತೆ ಹೊಂದಿರುವವರ ಅರ್ಜಿಗಳನ್ನಾದರೂ ಹಂತಹಂತವಾಗಿ ವರ್ಗಾವಣೆಗೆ ಪರಿಗಣಿಸುವಂತೆ ಸರ್ಕಾರಕ್ಕೆ ಪೊಲೀಸ್ ಸಿಬ್ಬಂದಿ ಮನವಿ ಮಾಡಿದ್ದಾರೆ.
ಏಳು ವರ್ಷ ಸೇವೆ ಪೂರೈಸಿದ ಸಾಮಾನ್ಯ ವರ್ಗ, 3 ವರ್ಷ ಪೂರೈಸಿದ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು 2023 ಮಾ.3ರಂದು ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಸಿಬ್ಬಂದಿಗೆ ಅನುಕೂಲವಾಗುವಂತಹ ಒಂದಷ್ಟು ನಿಯಮ ಜಾರಿಗೊಳಿಸಲಾಗಿತ್ತು. ಅದರಂತೆ ಅಂದಾಜು 4000 ಜನರು ಕೆಎಸ್​ಪಿ ಆಪ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಸೇವಾ ಜೇಷ್ಠತೆ ಆಧಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದರೆ ಅಂದಾಜು 300 ರಿಂದ 500 ಸಿಬ್ಬಂದಿಯಷ್ಟೇ ವರ್ಗಾವಣೆಯಾಗಲಿದ್ದು, ಪರಿಗಣಿಸಿ ಎಂದು ಇದೇ ಮೇ 22ರಂದು ಡಿಜಿಪಿಗೆ ಮನವಿ ಕೊಟ್ಟಿದ್ದಾರೆ.

ಜನತಾದರ್ಶನದಲ್ಲೂ ಮನವಿ:2024ರ ಮಾ.13ರಂದು ಬೆಂಗಳೂರಲ್ಲಿ ನಡೆದ ಸಿಎಂ ಜನತಾದರ್ಶನದಲ್ಲೂ ಅಂತರ ಜಿಲ್ಲಾ ವರ್ಗಾವಣೆ ಕೋರಿ ಸಿಬ್ಬಂದಿ ಅಳಲು ತೋಡಿಕೊಂಡಿದ್ದರು. ಆದರೆ ಪೊಲೀಸ್ ಪ್ರಧಾನ ಕಚೇರಿಯಿಂದ ಆದೇಶವಾಗಲಿದೆ. ಆನ್​ಲೈನ್​ನಲ್ಲಿ ಸಲ್ಲಿಕೆಯಾಗಿರುವ ವರ್ಗಾವಣೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಉತ್ತರವಷ್ಟೇ ಸಿಕ್ಕಿತ್ತು.
ಹಿಂಬಡ್ತಿ ಕೊಟ್ಟು ವರ್ಗಾ ಮಾಡಿ:ಪತಿ-ಪತ್ನಿ ಪ್ರಕರಣದಲ್ಲಿ ಅರ್ಹ ಪೊಲೀಸ್ ಕಾನ್​ಸ್ಟೆಬಲ್​ಗಳನ್ನು ವರ್ಗಾವಣೆ ನೀಡುವಂತೆ ಗೃಹಸಚಿವ ಡಾ.ಜಿ. ಪರಮೇಶ್ವರ್ ಲಿಖಿತ ಆದೇಶ ಹೊರಡಿಸಿದ್ದಾರೆ. ಆದರೆ, ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬರೀ ಕಾನ್​ಸ್ಟೆಬಲ್​ಗಳನ್ನು ವರ್ಗಾಯಿಸಿ, ಹೆಡ್ ಕಾನ್​ಸ್ಟೆಬಲ್​ಗಳನ್ನು ಕೈ ಬಿಟ್ಟಿದೆ. ಅಗತ್ಯವಿದ್ದರೆ ಕಾನ್​ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ಕೊಟ್ಟು ನಮ್ಮನ್ನೂ ವರ್ಗಾವಣೆ ಮಾಡುವಂತೆ ಹೆಡ್ ಕಾನ್​ಸ್ಟೆಬಲ್​ಗಳು ಆಗ್ರಹಿಸಿದ್ದಾರೆ. 30 ರಿಂದ 40 ಹೆಡ್ ಕಾನ್​ಸ್ಟೆಬಲ್​ಗಳನ್ನು ವರ್ಗಾವಣೆ ಮಾಡಿದರೆ ಯಾವುದೇ ಸಮಸ್ಯೆ ಆಗಲ್ಲ ಎಂದು ಮನವಿ ಮಾಡಿದ್ದಾರೆ.
1. ಬಹುತೇಕ ಸಿಬ್ಬಂದಿ ರೈತರ ಮಕ್ಕಳಾಗಿದ್ದು, ವಯಸ್ಸಾದ ತಂದೆ-ತಾಯಿಯಿಂದ ದೂರವಿದ್ದಾರೆ
2. ಮಕ್ಕಳು ಜತೆಗಿರದ ಕಾರಣ ಪಾಲಕರು ಪ್ರತಿಯೊಂದಕ್ಕೂ ಬೇರೊಬ್ಬರನ್ನು ಅವಲಂಬಿಸಬೇಕಿದೆ
3. ಪಾಲಕರನ್ನು ನೋಡಿಕೊಳ್ಳದ ಮಕ್ಕಳ ವಿರುದ್ಧ ದೂರು ಬಂದರೆ ಅವರನ್ನು ಪ್ರಶ್ನಿಸಲಾಗದ ಸ್ಥಿತಿ
4. ವರ್ಗಾವಣೆ ನಿರೀಕ್ಷೆಯಲ್ಲಿ ಮಕ್ಕಳಿಗೆ ಸ್ವಂತ ಜಿಲ್ಲೆ ಶಾಲೆಗಳಲ್ಲಿ ಪ್ರವೇಶ ಕೊಡಿಸಿದ್ದಾರೆ
5. ಆರ್ಥಿಕವಾಗಿ ಸಬಲರಲ್ಲದ ಕಾರಣ ಪೊಲೀಸ್ ಕೆಲಸ ತೊರೆಯಲಾಗದೆ ಮಾನಸಿಕ ಯಾತನೆ
6. ಕುಟುಂಬದ ಜತೆಗಿರಲು ಆಗುತ್ತಿಲ್ಲವಲ್ಲ ಎಂಬ ನೋವಿನಲ್ಲೇ ಹಲವರು ಹೃದಯಾಘಾತಕ್ಕೆ ತುತ್ತು
1. ಇಲಾಖೆ ಪೋರ್ಟಲ್​ನಲ್ಲಿ ವರ್ಗಾವಣೆ ಬಯಸಿ 4000 ಅರ್ಜಿ ಸಲ್ಲಿಕೆ
2. ಜಿಲ್ಲಾವಾರು ಸ್ವೀಕೃತಿ ಅರ್ಜಿಗಳಿಗೆ ಸೀನಿಯಾರಿಟಿ ನಂಬರ್ ವಿತರಣೆ
3. ಅರ್ಜಿ ಸಲ್ಲಿಸಿದವರ ಷರತ್ತು ಪೂರ್ಣ ಗೊಳಿಸಿರುವ ಬಗ್ಗೆ ಮಾಹಿತಿ ಸಂಗ್ರಹ
4. 4000 ಪೊಲೀಸರಲ್ಲಿ 300-500 ಸಿಬ್ಬಂದಿಗೆ ವರ್ಗಾವಣೆ ಅರ್ಹತೆ
5. ಹಂತಹಂತದ ವರ್ಗಾವಣೆಯಿಂದ ಸೇವೆಗೆ ಅಡ್ಡಿಯಾಗುವುದಿಲ್ಲ
6. ಸೇವಾ ಜೇಷ್ಠತೆ ಆಧಾರಿತ ವರ್ಗಾ ವಣೆಯಿಂದ ಸಿಬ್ಬಂದಿ ಕೊರತೆ ಆಗಲ್ಲ
7. ಜಿಲ್ಲೆಗಳಲ್ಲಿ ಹೊಸ ಸಿಬ್ಬಂದಿ ನೇಮಕಾತಿ ಆಗಿರುವುದರಿಂದ ಸಿಬ್ಬಂದಿ ಸಮಸ್ಯೆ ಇಲ್ಲ
8. ಪತಿ-ಪತ್ನಿ ಕೇಸಲ್ಲಿ ಕಾನ್​ಸ್ಟೆಬಲ್​ಗಳಿಗೆ ಕೊಟ್ಟ ವರ್ಗ ಹೆಡ್ ಕಾನ್​ಸ್ಟೆಬಲ್​ಗೇಕಿಲ್ಲ?
1. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಿಬ್ಬಂದಿ ಹೆಚ್ಚಿದ್ದಾರೆ
2. ಒಂದೇ ಬಾರಿಗೆ ವರ್ಗಾವಣೆ ಮಾಡಿದರೆ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತದೆ
3. ಕರ್ತವ್ಯ ನಿರ್ವಹಣೆಗೆ ಸಮಸ್ಯೆ ಆಗುವುದರಿಂದ ಪರಿಸ್ಥಿತಿ ಪರಿಶೀಲಿಸಿ ವರ್ಗಾವಣೆ
ಕೆ-ಸೆಟ್ ಪರೀಕ್ಷೆ ಫಲಿತಾಂಶ ಪ್ರಕಟ: 41 ವಿಷಯಗಳಲ್ಲಿ 6,675 ಮಂದಿ ಅರ್ಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
