ಬೆಂಗಳೂರು:ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವೇ (ಎಸಿಬಿ) ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಗಳೇ ಕಲೆಕ್ಷನ್ ಸೆಂಟರ್​ಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿಗಳಿಗೇ ವರ್ಗಾವಣೆಯ ಬೆದರಿಕೆ ಬಂದಿದೆ. ಹೌದು, ಇಂಥ ಒಂದು ಸ್ಪೋಟಕ ವಿಚಾರವನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರೇ ಬಹಿರಂಗಪಡಿಸಿದ್ದು, ಸಾರ್ವ ಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ ಎಂದಿದ್ದಾರೆ.
ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ, ಎಸಿಬಿ ಕಾರ್ಯವೈಖರಿಯನ್ನು ಮತ್ತೆ ತರಾಟೆಗೆ ತೆಗೆದುಕೊಂಡಿತಲ್ಲದೆ, ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿ, ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಜೂ.29ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಎಸಿಬಿ ಕಚೇರಿಗಳು ‘ವಸೂಲಿ ಕೇಂದ್ರ’ಗಳಾಗಿವೆ. ಸ್ವತಃ ಎಸಿಬಿ ಎಡಿಜಿಪಿ ಕಳಂಕಿತ ಅಧಿಕಾರಿಯಾಗಿದ್ದಾರೆ. ದೊಡ್ಡ ದೊಡ್ಡ ಐಎಎಸ್, ಐಪಿಎಸ್ ಅಧಿಕಾರಿಗಳನ್ನ ಹಿಡಿಯುವುದನ್ನು ಬಿಟ್ಟು ಗುಮಾಸ್ತರನ್ನು ಬಂಧಿಸಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಎಸಿಬಿ ಸ್ಥಾಪನೆಗೊಂಡ ದಿನದಿಂದ ಈವರೆಗೆ ಎಷ್ಟು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ? ಎಷ್ಟು ಬಿ ವರದಿಗಳು ಅಂಗೀಕೃತಗೊಂಡಿವೆ? ಎಂಬ ಬಗ್ಗೆ ವಸ್ತುಸ್ಥಿತಿ ವರದಿಯನ್ನು ಜು.4ರಂದು ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ಎಸಿಬಿಗೆ ತಾಕೀತು ಮಾಡಿತ್ತು.
ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ, ನ್ಯಾಯಾಲಯ ಕೇಳಿದ್ದ ವರದಿಯನ್ನು ಎಸಿಬಿ ಸಲ್ಲಿಸಿರಲಿಲ್ಲ. ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಭಾಗೀಯ ಪೀಠದ ಮುಂದಿದ್ದು, ಈಗಾಗಲೆ ಆ ಪೀಠಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಎಸಿಬಿ ವಕೀಲರು ತಿಳಿಸಿದರು. ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಿದ ಮಾತ್ರಕ್ಕೆ ಇಲ್ಲಿ ವರದಿ ನೀಡಬಾರದು ಎಂದರ್ಥವೇ? ಕಳೆದ ವಿಚಾರಣೆ ವೇಳೆ ವರದಿ ಸಲ್ಲಿಸುವುದಾಗಿ ನೀವೇ ಭರವಸೆ ನೀಡಿದ್ದಿರಿ. ಇದೀಗ ಬಂದು ಬೇರೆ ರೀತಿ ಹೇಳುತ್ತಿದ್ದೀರಿ. ನೀವು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ ಎಂದು ಎಸಿಬಿ ಪರ ವಕೀಲರನ್ನು ತೀಕ್ಷ್ಣವಾಗಿ ಪ್ರಶ್ನಿಸಿತು.
ಎಡಿಜಿಪಿ ಪವರ್​ಫುಲ್:ನ್ಯಾಯಾಲಯ ಮೇಲ್ವಿಚಾರಣೆ ನಡೆಸಿದ ನಂತರವೇ ದೊಡ್ಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈಗ ನ್ಯಾಯಾಲಯಕ್ಕೇ ಬೆದರಿಕೆ ಹಾಕುವ ಪರಿಸ್ಥಿತಿ ಉದ್ಭವಿಸಿದೆ. ನನ್ನನ್ನೇ ವರ್ಗಾವಣೆ ಮಾಡುವ ಕುರಿತು ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬ ಪವರ್​ಫುಲ್ ಆಗಿದ್ದಾರಂತೆ, ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧರಿಸಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಬೆದರಿಕೆಯನ್ನೂ ಆದೇಶ ದಲ್ಲಿ ಬರೆಸುತ್ತೇನೆ. ಯಾವುದೇ ರೀತಿಯ ಬೆದರಿಕೆ ಎದುರಿಸಲೂ ಸಿದ್ಧ ನಿದ್ದೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ಯಾರ ಬಗ್ಗೆಯೂ ನನಗೆ ಭಯವಿಲ್ಲ. ಬೆಕ್ಕಿಕೆ ಗಂಟೆ ಕಟ್ಟಲು ನಾನು ಸಿದ್ಧನಿದ್ದೇನೆ ಎಂದು ನ್ಯಾಯಮೂರ್ತಿಗಳು ಆಕ್ರೋಶದಿಂದ ನುಡಿದರು.
ಸಂವಿಧಾನಕ್ಕಷ್ಟೇ ಬದ್ಧ:ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ನನ್ನ ತಂದೆ ನನಗಾಗಿ ಮಾಡಿರುವ ಭೂಮಿ ಇದೆ. ಅದನ್ನು ಉಳುಮೆ ಮಾಡಿಕೊಂಡು ಬದುಕಲೂ ಸಿದ್ಧನಿದ್ದೇನೆ. ನನಗೆ 500 ರೂ.ಗಳಲ್ಲಿ ಜೀವನ ನಡೆಸುವುದೂ ಗೊತ್ತು, 5 ಸಾವಿರ ರೂ.ಗಳಲ್ಲಿ ಬದುಕುವುದಕ್ಕೂ ಗೊತ್ತು. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ, ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಾಗಿಲ್ಲ. ಸಂವಿಧಾನಕ್ಕೆ ಮಾತ್ರ ಬದ್ಧನಾಗಿದ್ದೇನೆ ಎಂದು ನ್ಯಾಯಮೂರ್ತಿಗಳು ನುಡಿದರು.
ಬೇಲಿಯೇ ಎದ್ದು ಹೊಲ ಮೇಯ್ದಂತೆ:ಬಿ ವರದಿ ಕುರಿತು ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠ, ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನು ರಕ್ಷಿಸುತ್ತಿದ್ದೀರಾ? ಭ್ರಷ್ಟಾಚಾರ ಕ್ಯಾನ್ಸರ್​ನಂತಾಗಿದೆ. ಅದನ್ನು ಮೊದಲ ಅಥವಾ ಎರಡನೇ ಹಂತದಲ್ಲಿರುವಾಗಲೇ ಗುಣಪಡಿಸಬೇಕು. 4ನೇ ಹಂತಕ್ಕೆ ಹೋಗಲು ಬಿಡಬಾರದು. ಆದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು ಎಂದು ಅಸಮಾಧಾನದಿಂದ ನುಡಿಯಿತಲ್ಲದೆ, ಭ್ರಷ್ಟಾಚಾರಿಗಳ ವಿರುದ್ಧ ಶೋಧನಾ ವಾರಂಟ್ ಹೊರಡಿಸಿ, ನಂತರ ಅದನ್ನು ಮುಂದಿಟ್ಟುಕೊಂಡು ವಸೂಲಿ ಮಾಡಲಾಗುತ್ತಿದೆ. ಆದರೆ, ಶೋಧನಾ ವಾರಂಟ್ ಅನ್ನು ಕಾರ್ಯರೂಪಕ್ಕೆ ತರುವುದೇ ಇಲ್ಲ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಬಿದ್ದವರಿಗೂ ಬಿ ರಿಪೋರ್ಟ್ ಹಾಕಲಾಗಿದೆ. ದಾಳಿ ವೇಳೆ ಲಂಚದ ಹಣ ಸಿಕ್ಕ ಪ್ರಕರಣಗಳಲ್ಲೂ ವಿಚಾರಣೆ ನಡೆಸದೆ ಬಿ ವರದಿ ಹಾಕಲು ಹೇಗೆ ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿತು.
ಹಣ ಕೊಟ್ಟು ಬಂದವರು ಜನರ ರಕ್ತ ಹೀರುತ್ತಾರೆ:ಅರ್ಜಿ ವಿಚಾರಣೆಯನ್ನು ಜು.7ಕ್ಕೆ ಮುಂದೂಡಿದಾಗ ಸರ್ಕಾರಿ ವಕೀಲರು, ಪಿಎಸ್​ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೂ ಅಂದೇ ವಿಚಾರಣೆಗೆ ನಿಗದಿಯಾಗಿದೆ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಎರಡೂ ಅರ್ಜಿಗಳು ಒಟ್ಟಿಗೇ ವಿಚಾರಣೆಗೆ ಬರಲಿ ಬಿಡಿ. ಆ ಪ್ರಕರಣದಲ್ಲೂ ಒಎಂಆರ್ ಶೀಟ್ ಮತ್ತು ಎಫ್​ಎಸ್​ಎಲ್ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಆ ವರದಿಗಳು ಸಲ್ಲಿಕೆಯಾಗಲಿ ಎಂದರು. ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ ಎಂದು ಕೋರ್ಟ್​ಗೆ ತಿಳಿಸಿದರು. ಆಗ ನ್ಯಾಯಪೀಠ, 545 ಪಿಐಎಸ್ ಹುದ್ದೆಗಳಲ್ಲಿ ಕನಿಷ್ಠ 400 ಹುದ್ದೆಗಳು ಮಾರಾಟವಾಗಿವೆ. ಇವರೆಲ್ಲ ಪಿಎಸ್​ಐಗಳಾಗಿ ಏನು ಮಾಡುತ್ತಾರೆ. ಹಣ ಹೂಡಿಕೆ ಮಾಡಿ ಹುದ್ದೆ ಪಡೆದವರು ಮುಂದೆ ಆ ಹಣ ವಸೂಲಿ ಮಾಡಲು ಜನರ ರಕ್ತ ಹೀರುತ್ತಾರಷ್ಟೆ. ಇದೇ ಕಾರಣಕ್ಕೆ ಹೇಳುತ್ತಿದ್ದೇನೆ. ಭ್ರಷ್ಟಾಚಾರ ಕ್ಯಾನ್ಸರ್​ನಂತೆ ಹರಡುತ್ತಿದೆ. ನಾಲ್ಕನೇ ಹಂತ ತಲುಪಲು ಬಿಡಬಾರದು ಎಂದು ಮಾರ್ವಿುಕವಾಗಿ ನುಡಿದರು.
7ರೊಳಗೆ ಮಾಹಿತಿ ಸಲ್ಲಿಕೆಗೆ ತಾಕೀತು:ಎಸಿಬಿ ಸಲ್ಲಿಸಿರುವ ಬಿ ವರದಿಗಳ ಮಾಹಿತಿ ನೀಡಿಲ್ಲವೇಕೆ, ಮಾಹಿತಿ ನೀಡಲು ಏಕೆ ಹಿಂಜರಿಯುತ್ತಿದ್ದೀರಿ. ಎಸಿಬಿ ಎಡಿಜಿಪಿಯ ಸರ್ವೀಸ್ ರೆಕಾರ್ಡ್ ಏಕೆ ಹಾಜರುಪಡಿಸಿಲ್ಲ. ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ವ್ಯಕ್ತಿ ಗುತ್ತಿಗೆ ನೌಕರನಾಗಿದ್ದಾನೆ. ಆತನನ್ನು ಯಾರು ನೇಮಕ ಮಾಡಿದ್ದು ಎಂಬ ಬಗ್ಗೆ ವಿವರ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಪೀಠ, ಎಸಿಬಿ ಎಡಿಜಿಪಿ ಸರ್ವೀಸ್ ರೆಕಾರ್ಡ್ ಹಾಜರುಪಡಿಸಲು ಡಿಪಿಎಎಆರ್ ಕಾರ್ಯದರ್ಶಿ ಮಧ್ಯಾಹ್ನ 2.30ಕ್ಕೆ ಖುದ್ದು ಹಾಜರಾಗಬೇಕೆಂದು ನಿರ್ದೇಶಿಸಿತು. ಮಧ್ಯಾಹ್ನ ವಿಚಾರಣೆಗೆ ಹಾಜರಾದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಎಸಿಬಿ ಎಡಿಜಿಪಿಯ ವಿವರ ನೀಡಿ, ಸಂಜೆಯೊಳಗೆ ಸರ್ವೀಸ್ ರೆಕಾರ್ಡ್ ನೀಡುವುದಾಗಿ ತಿಳಿಸಿದರು. ಡಿಸಿ ಕಚೇರಿಯ ಗುತ್ತಿಗೆ ನೌಕರನ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಏನಿದೆ? ಇಲ್ಲಿ ಏನು ನಡೆಯುತ್ತಿದೆ ಅಡ್ವೊಕೆಟ್ ಜನರಲ್ ಅವರೇ. ದುಡ್ಡು ವಸೂಲಿ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಫೋನ್​ನಲ್ಲಿ ನಡೆಸಿರುವ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಡಿಸಿ ಒಪ್ಪಿಗೆ ಇಲ್ಲದೆ ಆತ 5 ಲಕ್ಷ ರೂ. ಲಂಚ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿತು. ಅದಕ್ಕುತ್ತರಿಸಿದ ಎಜಿ, ಎಸಿಬಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸುತ್ತೇವೆ. ಬಿ ವರದಿಗಳ ಕುರಿತ ಸಂಪೂರ್ಣ ಮಾಹಿತಿ ನೀಡುತ್ತೇವೆ. ನ್ಯಾಯಾಲಯದ ಆದೇಶವನ್ನು ಸರ್ಕಾರ ಚಾಚೂ ತಪ್ಪದೆ ಪಾಲಿಸಲಿದೆ. ನನ್ನ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಳ್ಳಬಹುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಅದನ್ನು ದಾಖಲಿಸಿಕೊಂಡ ಪೀಠ, ಎಸಿಬಿ ಸ್ಥಾಪನೆಗೊಂಡ ದಿನದಿಂದ ಈವರೆಗೆ ಸಲ್ಲಿಸಿರುವ ಬಿ ರಿಪೋರ್ಟ್​ಗಳೆಷ್ಟು, ಎಷ್ಟು ವರದಿಗಳು ಅಂಗೀಕೃತಗೊಂಡಿವೆ ಎಂಬ ಮಾಹಿತಿಯನ್ನು ಜು.7ರೊಳಗೆ ಸಲ್ಲಿಸಬೇಕು ಎಂದು ಎಸಿಬಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.
ಅಧಿಕಾರಿಗಳದ್ದೇ ದರ್ಬಾರ್:ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ 4.5 ಕೋಟಿ ಹಣ ಮತ್ತು 6 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದೆ. ಇದನ್ನು ಪ್ರಶ್ನಿಸಿದ ನ್ಯಾಯಾಧೀಶರನ್ನೇ ವರ್ಗಾಯಿಸಲಾಗಿದೆ. ಬೇರೆ ನ್ಯಾಯಾಧೀಶರು ಬಂದ ನಂತರ ಬಿ ರಿಪೋರ್ಟ್ ಅಂಗೀಕರಿಸಲಾಗಿದೆ. ಇದನ್ನೆಲ್ಲ ನೋಡಿ ಕಣ್ಮುಚ್ಚಿ ಕೂರುವುದಾದರೂ ಹೇಗೆ? ಎಸಿಬಿಯ ಹಾಲಿ ಎಡಿಜಿಪಿ ಬಂದ ನಂತರ ಎಷ್ಟು ಬಿ ರಿಪೋರ್ಟ್ ಆಗಿದೆ, ಐಎಎಸ್ -ಐಪಿಎಸ್ ಲಾಬಿಗೆ ಒಳಗಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೇ ದರ್ಬಾರ್ ನಡೆಸಲು ಬಿಡಲಾಗಿದೆ. ಸರ್ಕಾರವೂ ಅಪರಾಧದ ಭಾಗವಾಗಿರುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
