ಬೆಂಗಳೂರು:ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು, ಜಗಜ್ಯೋತಿ ಬಸವೇಶ್ವರರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವ ಮಹತ್ವದ ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅಸ್ತು ಎಂದಿದೆ. ಆಮೂಲಕ ಒಂದೆಡೆ ದಲಿತರು, ಮತ್ತೊಂದೆಡೆ ಲಿಂಗಾಯತರನ್ನು ಓಲೈಸಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ‘ಮತ ಲಾಭ’ ಮಾಡಿಕೊಳ್ಳುವ ಜಾಣನಡೆ ಪ್ರದರ್ಶಿಸಿದೆ. ಭೋವಿ, ಬಂಜಾರ, ಕೊರಚ ಮತ್ತು ಕೊರಮ ಸೇರಿ 101 ಸಮುದಾಯಗಳಿಗೆ ಎಸ್​ಸಿ ಪಟ್ಟಿಯಲ್ಲೇ ಮುಂದುವರಿಸುವ ಅಭಯ ನೀಡಿದ್ದು, ವಿಧಾನಸಭೆ ಚುನಾವಣೆ ಕಾಲಕ್ಕೆ ಹಬ್ಬಿದ್ದ ವದಂತಿಗೂ ಶಾಶ್ವತವಾಗಿ ತೆರೆ ಎಳೆದಿದೆ.
ರಾಜಕೀಯ ಚತುರತೆ:ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಚಾರದಲ್ಲಿ ಸರ್ಕಾರ ‘ರಾಜಕೀಯ ಚತುರ’ ನಿರ್ಧಾರ ತೆಗೆದುಕೊಂಡು, ಜವಾಬ್ದಾರಿಯನ್ನು ಕೇಂದ್ರದ ಹೆಗಲಿಗೆ ಹೊರಿಸಿ ‘ಕೈ’ ತೊಳೆದುಕೊಂಡಿದೆ. ಎಸ್​ಸಿ ಮೀಸಲು ವರ್ಗೀಕರಣಕ್ಕಾಗಿ ‘ಸಂವಿಧಾನದ ಪರಿಚ್ಛೇದ 341 ಉಪಬಂಧ 3ಕ್ಕೆ ತಿದ್ದುಪಡಿ ತರಲು ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ತೀರ್ವನಿಸಿದೆ.
ವಸ್ತುಸ್ಥಿತಿ ಪರಾಮರ್ಶೆ:ನ್ಯಾ.ಸದಾಶಿವ ಆಯೋಗದ ವರದಿ, ಉಲ್ಲೇಖಿಸಿದ ಷರತ್ತುಗಳು, ಬಿಜೆಪಿ ಆಡಳಿತಾವಧಿಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಪರಾಮಶಿಸಿತು. ಎಸ್​ಸಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾ.ಸದಾಶಿವ ಆಯೋಗದ ವರದಿಯನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದೆವು ಎಂದು ಸಭೆ ಬಳಿಕ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಅಪ್ರಸ್ತುತ:ವೈಜ್ಞಾನಿಕ, ಸಂವಿಧಾನಬದ್ಧವಾಗಿ ಮೀಸಲು ವರ್ಗೀಕರಿಸುವುದು ಸರ್ಕಾರದ ಇಚ್ಛೆಯಾಗಿತ್ತು. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ರ್ಚಚಿಸಿ, ಬಿಜೆಪಿ ಆಡಳಿತಾವಧಿ ಸಚಿವ ಸಂಪುಟ ನಿರ್ಣಯ ಪರಿಶೀಲಿಸಿತು. ಆಗ ಮೀಸಲು ಹೆಚ್ಚಳ, ವರ್ಗೀಕರಣ ನಿರ್ಧರಿಸಿದ ಅಂದಿನ ಸರ್ಕಾರ, ನ್ಯಾ.ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದು ಹೇಳುವ ಜತೆಗೆ ಸಮಾಪ್ತಿ ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ಎಸ್​ಸಿ ಮೀಸಲು ವರ್ಗೀಕರಣ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಂತಾಗಿದೆ.
ಪಾರ್ಲಿಮೆಂಟ್​ಗೆ ಪರಮಾಧಿಕಾರ:ಮೀಸಲಿಗೆ ಸಂಬಂಧಿಸಿದ ಸಂವಿಧಾನದ ಅನುಚ್ಛೇದಕ್ಕೆ ತಿದ್ದುಪಡಿ ತರುವುದು ಪಾರ್ಲಿಮೆಂಟ್ ಪರಮಾಧಿಕಾರವಾಗಿದೆ. ಸಂವಿಧಾನದ 341ನೇ ವಿಧಿ, ಉಪಬಂಧ 3ಕ್ಕೆ ತಿದ್ದುಪಡಿ ಬಳಿಕ ಮೀಸಲು ವರ್ಗೀಕರಣ ಅಧಿಕಾರ ರಾಜ್ಯಗಳಿಗೆ ಪ್ರಾಪ್ತವಾಗುತ್ತದೆ. ತಿದ್ದುಪಡಿಯಾದ ನಂತರವಷ್ಟೇ ಎಸ್​ಸಿ ಪಟ್ಟಿಯಲ್ಲಿರುವ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ವರ್ಗೀಕರಿಸಲು ಸಾಧ್ಯವಿದೆ ಎಂದರು. ಹೀಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈ ವಿಚಾರದಲ್ಲಿ ನುಣುಚಿಕೊಳ್ಳುವ, ಕಣ್ಣೊರೆಸುವ ತಂತ್ರವೇನಿಲ್ಲವೆಂದು ಮಹದೇವಪ್ಪ ಸಮರ್ಥಿಸಿಕೊಂಡರು.
ಮುಂದೇನು?:ಸುಪ್ರೀಂ ಕೋರ್ಟ್​ನ ಏಳು ಸದಸ್ಯರ ಪೀಠದ ಪ್ರಕರಣದ ವಿಚಾರಣೆ ಮುಗಿದು, ತೀರ್ಪು ಹೊರಬೀಳುವ ತನಕ ಎಸ್​ಸಿ ಮೀಸಲು ವರ್ಗೀಕರಣ ಅಸಾಧ್ಯ. ವರ್ಗೀಕರಣದ ಪರವಾಗಿ ಕೇಂದ್ರ ಸರ್ಕಾರವೇ ಅಫಿಡವಿಟ್ ಸಲ್ಲಿಸಿದರೆ ಕಾನೂನು ಹೋರಾಟ ಬೇಗ ಮುಗಿಯಬಹುದು. ಬಿಜೆಪಿ ಸರ್ಕಾರ ಎಸ್​ಸಿ ಮೀಸಲು ಪ್ರಮಾಣ ಕ್ರಮವಾಗಿ ಶೇ.6, ಶೇ.5.5, ಶೇ.4.5 ಮತ್ತು ಶೇ.1 ಗುಂಪುಗಳಲ್ಲಿ ವಿಂಗಡಿಸಿ ಹಂಚಿಕೆ ಮಾಡಿತ್ತು. ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಿಸಿದ್ದರಿಂದ ಆದೇಶ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.
ನ್ಯಾಯಾಂಗ ನಿಂದನೆಯಲ್ಲ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಏಳು ಸದಸ್ಯರ ಪೀಠವು ಎಸ್​ಸಿ ಮೀಸಲು ವರ್ಗೀಕರಣದ ವ್ಯಾಜ್ಯವನ್ನು ಈಗಷ್ಟೇ ಕೈಗೆತ್ತಿಕೊಂಡಿದ್ದು, ವಿಚಾರಣೆ ಇನ್ನೂ ಶುರುವಾಗಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರದ ಶಿಫಾರಸು ನ್ಯಾಯಾಂಗ ನಿಂದನೆಯಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ವಿವರಿಸಿದರು.
ಫೆ.16ಕ್ಕೆ ಬಜೆಟ್ ಮಂಡನೆ:ಈ ವರ್ಷದ ಮೊದಲ ಅಧಿವೇಶನ ಫೆ.12ಕ್ಕೆ ಆರಂಭವಾಗಲಿದೆ. ಅಂದು ರಾಜ್ಯಪಾಲರು ಜಂಟಿ ಸದನ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ.15ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಫೆ.16ರಂದು 2024-25ನೇ ಸಾಲಿನ ಆಯವ್ಯಯವನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಫೆ.23ರವರೆಗೆ ಅಧಿವೇಶನ ಮುಂದುವರಿಯಲಿದೆ.
ಗೃಹಜ್ಯೋತಿ ಷರತ್ತು ಮಾರ್ಪಾಡು:ಗೃಹ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಸಬ್ಸಿಡಿ ಅರ್ಹತೆಯ ಹಿಂದಿನ ಷರತ್ತುಗಳಲ್ಲಿ ಭಾಗಶಃ ಮಾರ್ಪಾಡು ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ಪ್ರತಿ ಗ್ರಾಹಕರಿಗೆ ಕಳೆದ 12 ತಿಂಗಳು ಸರಾಸರಿ ಬಳಕೆ ಜತೆಗೆ, ಹೆಚ್ಚುವರಿ ಶೇ.10 ಯೂನಿಟ್ ನೀಡಲಾಗುತ್ತಿದೆ. ಅಂತೆಯೇ ರಾಜ್ಯದಲ್ಲಿ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯೂನಿಟ್ ಬಳಸುತ್ತಿದ್ದಾರೆ. ಇವರಿಗೆ 58 ಅರ್ಹತಾ ಯೂನಿಟ್ ಆಗಿದೆ. 30 ಯೂನಿಟ್ ಬಳಸುತ್ತಿರುವ ಬಡ ಕುಟುಂಬಗಳಿಗೆ ಈ ಪ್ರಮಾಣ ಕೇವಲ 33 ಯೂನಿಟ್ ಆಗುತ್ತಿದೆ. ಹೀಗಾಗಿ 48 ಯೂನಿಟ್​ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಶೇ.10 ಬದಲಿಗೆ ಹೆಚ್ಚುವರಿ 10 ಅರ್ಹತಾ ಯೂನಿಟ್​ಗಳನ್ನು ಒದಗಿಸಲು ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಅಲ್ಲಮಪ್ರಭು ಮೈದಾನ:ಶಿವಮೊಗ್ಗದ ಹಳೇ ಜೈಲು ಆವರಣದ 46.32 ಎಕರೆ ವಿಸ್ತೀರ್ಣದಲ್ಲಿ ಉದ್ಯಾನಕ್ಕೆ ಕಾಯ್ದಿರಿಸಿದ ಪ್ರದೇಶಕ್ಕೆ ವಚನಕಾರ ‘ಅಲ್ಲಮಪ್ರಭು ಮೈದಾನ’ವೆಂದು ನಾಮಕರಣ ಮಾಡಲು ಸಂಪುಟ ಅಸ್ತು ಎಂದಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಗಜ್ಯೋತಿ ಬಸವಣ್ಣ ಸಾಂಸ್ಕೃತಿಕ ನಾಯಕ:ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ. ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಪ್ರಗತಿಯಲ್ಲಿದೆ. ಪೂರ್ವ ನಿಗದಿ ಪ್ರಕಾರ 2025ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ಈಶ್ವರಖಂಡ್ರೆ ತಿಳಿಸಿದ್ದಾರೆ.
ಅದಾನಿ ವಿದ್ಯುತ್ ಖರೀದಿ ಗೊಂದಲ:ಎಸ್ಕಾಂಗಳಿಗೆ ವಿದ್ಯುತ್ ಪೂರೈಸುತ್ತಿದ್ದ ಉಡುಪಿ ಪವರ್ ಕಾರ್ಪೆರೇಷನ್ ಅದಾನಿ ಪವರ್ ಲಿಮಿಟೆಡ್​ನೊಂದಿಗೆ ಸೇರಿಕೊಂಡಿದೆ. ಹೀಗಾಗಿ ಆ ಸಂಸ್ಥೆಯಿಂದ ಹೊಸದಾಗಿ ವಿದ್ಯುತ್ ಖರೀದಿ ಬಗ್ಗೆ ವಿವರವಾದ ಚರ್ಚೆ ಅವಶ್ಯಕತೆ ಇದೆ ಎಂದು ಸಂಪುಟ ಸಭೆ ನಿರ್ಧರಿಸಿದೆ. ಯುಪಿಸಿಎಲ್​ನಿಂದ ಎಸ್ಕಾಂಗಳು ಮಾಡಿದ ವಿದ್ಯುತ್​ಗೆ ತಡವಾದ ಪಾವತಿ ಕಾರಣಕ್ಕೆ ಸರ್​ಚಾರ್ಜ್ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾಗಿದ್ದು, ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲು ತೀರ್ವನಿಸಲಾಗಿದೆ.
ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಎಸ್​ಸಿ ಮೀಸಲು ವರ್ಗೀಕರಣಕ್ಕಾಗಿ ಸಂವಿಧಾನ ತಿದ್ದುಪಡಿಗೆ ಶಿಫಾರಸು ಮಾಡಲಾಗಿದೆ. ತಿದ್ದುಪಡಿ ಸಂಸತ್ತಿನ ಪರಮಾಧಿ ಕಾರವಾಗಿದ್ದು, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ.
| ಡಾ.ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೋಸದಾಟ ಬಿಡಬೇಕು. ಕೇಂದ್ರಕ್ಕೆ ಶಿಫಾರಸು ಮಾಡಲು ಎಂಟು ತಿಂಗಳು ಬೇಕಾಗಿರಲಿಲ್ಲ. ಆರ್ಟಿಕಲ್ 341 ತಿದ್ದುಪಡಿ ಅಗತ್ಯವೇ ಇಲ್ಲ. ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ನ್ಯಾ.ಅರುಣ್ ಕುಮಾರ್ ಮಿಶ್ರಾ ಹೇಳಿದ್ದಾರೆ.
| ಗೋವಿಂದ ಕಾರಜೋಳ ಮಾಜಿ ಸಚಿವ
ಸಿಎಂ ಸಿದ್ದರಾಮಯ್ಯನವರು ತಮ್ಮ ಅಜ್ಞಾನವನ್ನು ಮತ್ತೊಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಆರ್ಟಿಕಲ್ 341ಕ್ಕೆ ತಿದ್ದುಪಡಿ ವಿಷಯವನ್ನು ಸಂಪುಟದಲ್ಲಿ ರ್ಚಚಿಸುವ ಅಧಿಕಾರ ಸಿಎಂಗೆ ಇಲ್ಲ. ನ್ಯಾ.ಅರುಣ್ ಕುಮಾರ್ ಮಿಶ್ರಾ ತೀರ್ಪಿನ ಪ್ರಕಾರ 341ನೇ ವಿಧಿ ತಿದ್ದುಪಡಿಯಿಲ್ಲದೆ ಮೀಸಲು ವರ್ಗೀಕರಣ ಸಾಧ್ಯ.
– ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
