ಬೆಂಗಳೂರು: ಕರೊನಾ ಮಟ್ಟಹಾಕಲು ಜೀವ ಪಣಕ್ಕಿಟ್ಟು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ರಕ್ಷಣೆಗಾಗಿ ಕೊನೆಗೂ ರಾಜ್ಯ ಸರ್ಕಾರ ಕಠಿಣ ಹಾದಿ ತುಳಿದಿದೆ. ಪಾದರಾಯನಪುರ ದಾಂಧಲೆ ಪ್ರಕರಣದ ಬೆನ್ನಲ್ಲೇ ಕರೊನಾ ನಿಯಂತ್ರಣ ಕಾರ್ಯಾಚರಣೆಗೆ ಅಸಹಕಾರ ತೋರುವ, ಬೆದರಿಕೆಯೊಡ್ಡುವವರನ್ನು ಮಟ್ಟಹಾಕಲು ದಡಂ ದಶಗುಣಂ ಸೂತ್ರ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದು ಸುಗ್ರೀವಾಜ್ಞೆ ಅಸ್ತ್ರ ಹಿಡಿದಿದೆ.
‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ’ ಪರಿಷ್ಕರಿಸಿ, ಹೊಸ ಕಾಯ್ದೆ ಜಾರಿ ಮಾಡಲು ಸೋಮವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸುಗ್ರೀವಾಜ್ಞೆ ಗುರಾಣಿ ಬಳಸಿಕೊಳ್ಳಲು ತೀರ್ವನಿಸಲಾಗಿದೆ.
ಕರೊನಾ ನಿರ್ವಹಣೆಯಲ್ಲಿ ಎದುರಾಗುವ ಆಪತ್ತು ಎದುರಿಸಲು ಉತ್ತರ ಪ್ರದೇಶ ಮತ್ತು ಕೇರಳ ಸರ್ಕಾರ ಜಾರಿ ಮಾಡಿದ ಕಾನೂನು ಕ್ರಮಗಳನ್ನು ಒಳಗೊಂಡಂತೆ ಇಲ್ಲಿ ಹೊಸ ಕಾನೂನು ಜಾರಿ ಮಾಡಲಾಗುತ್ತಿದೆ. ಅದರ ಪ್ರಕಾರ, ಕರೊನಾ ನಿರ್ವಹಣೆ ಕಾರ್ಯಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ಹೂಡಲಾಗುತ್ತದೆ. ಜತೆಗೆ ಸರ್ಕಾರಿ ಆಸ್ತಿಪಾಸ್ತಿ ನಷ್ಟ ಮಾಡಿದರೆ ಸಂಬಂದಪಟ್ಟವರಿಂದಲೇ ವಸೂಲಿ ಮಾಡಲಾಗುತ್ತದೆ. ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಈ ಬಗ್ಗೆ ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ಉದ್ದೇಶಿತ ತಿದ್ದುಪಡಿಯಂತೆ ಸರ್ಕಾರದ ಸೂಚನೆಯಂತೆ ಯಾರು ಕಾರ್ಯ ನಿರ್ವಹಿಸುವುದಿಲ್ಲವೋ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಲ್ಲದೆ, ಉದ್ದೇಶಪೂರ್ವಕವಾಗಿ ಈ ರೋಗವನ್ನು ಹರಡಿಸಲು ಪ್ರಯತ್ನ ಪಟ್ಟರೆ ಅದೂ ಕೂಡಾ ಶಿಕ್ಷಾರ್ಹ ಅಪರಾಧವೇ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ, ವದಂತಿ ಸೃಷ್ಟಿಸುವುದು ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ’ ಎಂದರು.
ಕ್ರಮಕ್ಕೆ ಸಚಿವರ ಪಟ್ಟು: ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣ, ಪಾದರಾಯನಪುರದಲ್ಲಿ ನಡೆದ ದಾಂಧಲೆ ವಿಚಾರ ಸೋಮವಾರದ ಸಂಪುಟ ಸಭೆಯಲ್ಲಿ ಕಾವು ಹೆಚ್ಚಿಸಿತ್ತು. ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಸಂಪುಟದ ಕೆಲವು ಸದಸ್ಯರು ಪಟ್ಟು ಹಿಡಿದರು. ಸಂಪುಟ ಅಜೆಂಡಾದಲ್ಲೂ ಸುಗ್ರೀವಾಜ್ಞೆ ವಿಷಯ ಇರಲಿಲ್ಲ. ಚರ್ಚೆಗೂ ಬಂದಿರಲಿಲ್ಲ. ಆದರೆ, ಸರ್ಕಾರದ ವಿರುದ್ಧ ಸಾರ್ವಜನಿಕರ ಅಭಿಪ್ರಾಯ ಬೇರೆಯಾಗುತ್ತಿದೆ ಮತ್ತು ಪಕ್ಷದ ಕಾರ್ಯಕರ್ತರೇ ಸರ್ಕಾರವನ್ನು ವಿಪರೀತ ಟೀಕಿಸುತ್ತಿದ್ದಾರೆ. ಹೀಗಾಗಿರುವಾಗ ಕಠಿಣ ಕ್ರಮಕೈಗೊಳ್ಳಲೇಬೇಕು, ಈಗಲೇ ನಿರ್ಧಾರ ಆಗಬೇಕೆಂದು ಸಿ.ಟಿ. ರವಿ ಪಟ್ಟು ಹಿಡಿದರೆಂದು ಮೂಲಗಳು ತಿಳಿಸಿವೆ.
ಉ.ಪ್ರ., ಕೇರಳ ಮಾದರಿ ಕಾನೂನು
ರಾಜ್ಯ ಹೊರಡಿಸುತ್ತಿರುವ ಸುಗ್ರೀವಾಜ್ಞೆಗೆ ಕೇರಳ ಸರ್ಕಾರ ಹಾಗೂ ಉತ್ತರ ಪ್ರದೇಶ ತಂದಿರುವ ಕಾನೂನು ಮಾದರಿಯಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರ ವಿರುದ್ಧ ರಾಜ್ಯದಲ್ಲಿ ಇನ್ನು ಮುಂದೆ ಈ ಎರಡು ಸರ್ಕಾರಗಳ ಕಾನೂನು ಬಳಕೆಯಾಗುತ್ತದೆ. ಪೌರತ್ವ ವಿರೋಧಿ ಹೋರಾಟದ ವೇಳೆ ಸಾರ್ವಜನಿಕ ಆಸ್ತಿ ಹಾನಿಗೊಂಡ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರ ಕಠಿಣ ಹೆಜ್ಜೆ ಇಟ್ಟಿತ್ತು. ಯಾರು ಆಸ್ತಿಪಾಸ್ತಿ ಹಾನಿ ಮಾಡುತ್ತಾರೋ ಅವರಿಂದಲೇ ನಷ್ಟ ವಸೂಲಿ ಮಾಡಲು ಸುಗ್ರೀವಾಜ್ಞೆ ಜಾರಿ ಮಾಡಿತು. 2019ರ ಮಾರ್ಚ್​ನಲ್ಲಿ ಜಾರಿ ಮಾಡಿದ ಕಾನೂನಿನ ಪ್ರಕಾರ, ಪ್ರತಿಭಟನೆ, ರಾಜಕೀಯ ಸಮಾವೇಶ, ಮುಷ್ಕರ ಅಥವಾ ಬಂದ್ ಮುಂತಾದವುಗಳಲ್ಲಿ ಭಾಗವಹಿಸುವವರು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಮಾಡಿದರೆ ಆ ವ್ಯಕ್ತಿಯೇ ಅದರ ನಷ್ಟ ತುಂಬಿಸಬೇಕು. ಈ ಸುಗ್ರೀವಾಜ್ಞೆಯು ದಂಗೆ, ಗಲಭೆಗಳ ಸಂದರ್ಭಕ್ಕೂ ಅನ್ವಯವಾಗುತ್ತದೆ. ಹಾಗೆಯೇ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಅಧಿಕಾರವಿರುವ ನಷ್ಟ ವಸೂಲಾತಿ ಮಂಡಳಿಯೊಂದನ್ನು ರಚಿಸಲಾಗುತ್ತದೆ. ಕರ್ನಾಟಕದಲ್ಲೂ ಇದೇ ಮಾರ್ಗ ಅನುಸರಿಸ ಲಾಗುತ್ತದೆ. ಕೇರಳದಲ್ಲಿ ಕರೊನಾ ಕಾಣಿಸಿಕೊಂಡ ಕೂಡಲೇ ಅಲ್ಲಿನ ಸರ್ಕಾರ ಸುಗ್ರೀವಾಜ್ಞೆ ಮೂಲಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತು. ರಾಜ್ಯದ ಲ್ಲಿಯೂ ಸುಗ್ರೀವಾಜ್ಞೆ ಪ್ರಕಾರ ಕರ್ತವ್ಯಕ್ಕೆ ಅಡ್ಡಿ ಮಾಡಿದರೆ 2 ವರ್ಷ ಜೈಲು, 10,000 ರೂ. ದಂಡವಿಧಿಸಲಾಗುತ್ತದೆ. ಅಗತ್ಯ ವಸ್ತು ಸರಬರಾಜಿಗೆ ಸಮಯ ನಿಗದಿ ಮಾಡಲಾಗುತ್ತದೆ.
ಗೂಂಡಾ ಕಾಯ್ದೆ
ಕರೊನಾ ನಿಯಂತ್ರಿಸಲು ಅಡ್ಡಿ ಪಡಿಸುವವರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಸರ್ಕಾರ ಉದ್ದೇಶಿಸಿದೆ. ಮಾದಕ ವಸ್ತು ಮಾರಾಟ, ಸಾಗಾಟ ಮಾಡುವವರು, ಕಳ್ಳಭಟ್ಟಿ ವ್ಯಾಪಾರಿಗಳು, ಪದೇಪದೆ ಅಪರಾಧ ಕೃತ್ಯ ಎಸಗಿರುವವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಿತ್ತು. ಬಳಿಕ ಕಾನೂನು ತಿದ್ದುಪಡಿ ತಂದು ಆಸಿಡ್ ದಾಳಿಕೋರರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಅಕ್ರಮ ಮರಳು ಗಣಿಗಾರಿಕೆ ಸೇರಿ, ಡಿಜಿಟಲ್ ಮೀಡಿಯಾದಲ್ಲಿ ವಂಚಿಸುವವರು, ಭೂಕಬಳಿಕೆದಾರರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿತ್ತು. ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಥವಾ ಪೊಲೀಸ್ ಆಯುಕ್ತರಿಗೆ ಜಾರಿ ಮಾಡಲು ಅಧಿಕಾರವಿದೆ. ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿತನಾದ ಅಪರಾಧಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ.
ಲಾಕ್​ಡೌನ್ 3 ದಿನ ಯಥಾಸ್ಥಿತಿ
ಮೇ 3ರವರೆಗೆ ಲಾಕ್​ಡೌನ್ ಯಥಾಸ್ಥಿತಿಯಲ್ಲಿ ಮುಂದುವರಿಕೆ. ಕೇಂದ್ರದ ಪರಿಷ್ಕೃತ ಮಾರ್ಗಸೂಚಿ ಬಂದ ಬಳಿಕ ಮುಂದಿನ ನಿರ್ಧಾರ. ಕೈಗಾರಿಕೆ, ಐಟಿ ಸೇರಿ ಯಾವುದೇ ಕ್ಷೇತ್ರಕ್ಕೂ ಮೂರು ದಿನ ವಿನಾಯಿತಿ ಇಲ್ಲ. ಕೃಷಿ, ತೋಟಗಾರಿಕೆ, ಅಗತ್ಯ ವಸ್ತು ಉತ್ಪಾದನೆ, ಸಾಗಾಣಿಕೆಗೆ ಅಗತ್ಯ ಕ್ರಮ. ಮುಖ್ಯಮಂತ್ರಿ ಅನಿಲ ಭಾಗ್ಯ, ಅರಣ್ಯ ಇಲಾಖೆಯ ಎಲ್ಪಿಜಿ ಸಂಪರ್ಕ ಪಡೆದುಕೊಂಡ ಒಟ್ಟು ಒಂದು ಲಕ್ಷ ಫಲಾನುಭವಿಗಳಿಗೆ ಮೂರು ತಿಂಗಳು ಉಚಿತ ಸಿಲಿಂಡರ್ ಪೂರೈಕೆ.
ನಾಲ್ಕನೇ ತ್ರೈಮಾಸಿಕದಲ್ಲಿ ಇನ್ಫೊಸಿಸ್​ನ ನಿವ್ವಳ ಲಾಭದಲ್ಲಿ ಸ್ವಲ್ಪ ಇಳಿಕೆ, ಆದಾಯದಲ್ಲಿ ಸ್ವಲ್ಪ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
