| ಡಾ. ಜಿ.ಎಂ. ಹೆಗಡೆ ಧಾರವಾಡ
ಕನ್ನಡದ ಖ್ಯಾತ ವಿಮರ್ಶಕರಾದ ಡಾ. ಜಿ.ಎಸ್. ಆಮೂರರು ಮಾಸ್ತಿ, ಶಿವರಾಮ ಕಾರಂತರಂತೆ 95 ವರ್ಷಗಳ ದೊಡ್ಡ ಬದುಕನ್ನು ನಡೆಸಿದವರು. ಅವರು ಕನ್ನಡ ಮತ್ತು ಇಂಗ್ಲಿಷ್​ಗಳೆರಡರಲ್ಲೂ ಸಮೃದ್ಧ ವಿಮರ್ಶಾ ಸಾಹಿತ್ಯ ರಚಿಸಿದ ವಿದ್ವತ್ತಿನ ಶಿಖರವಾಗಿದ್ದರು. ಜೀವಿತದ ಕೊನೆಯ ಕಾಲದಲ್ಲಿಯೂ ದಕ್ಷಿಣಾಮೂರ್ತಿ ಸ್ತೋತ್ರ ವೇದಾಂತದ ಎರಡು ಸಾವಿರ ಪುಟಗಳ ಬೃಹತ್ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ದೇಶಾದ್ಯಂತ ಶಿಷ್ಯರು, ಸಹೃದಯ ಅಭಿಮಾನಿಗಳನ್ನು ಪಡೆದ ಆಮೂರ ಕನ್ನಡದ ಶ್ರೇಷ್ಠ ಚಿಂತಕರು, ಜ್ಞಾನೋಪಾಸಕರಾಗಿದ್ದರು.
ಸಾಹಿತ್ಯ ಲೋಕದಲ್ಲಿ ಡಾ. ಜಿ.ಎಸ್.ಆಮೂರ ಎಂದೇ ಖ್ಯಾತರಾದ ಗುರುರಾಜ ಶ್ಯಾಮಾಚಾರ್ಯ ಆಮೂರ ಜನಿಸಿದ್ದು ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ (1925 ಮೇ 8). ಸೂರಣಗಿ, ಬೊಮ್ಮನಹಳ್ಳಿ, ಕರ್ಜಗಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹಾವೇರಿಯ ಮುನ್ಸಿಪಲ್ ಹೈಸ್ಕೂಲ್​ನಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿ ಪೂರೈಸಿದರು. 1961ರಲ್ಲಿ ಕರ್ನಾಟಕ ವಿವಿಯಿಂದ ಪಿಎಚ್.ಡಿ ಪದವಿ, ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಯೇಲ್ ವಿಶ್ವವಿದ್ಯಾಲಯಗಳಲ್ಲಿ ಟಿ.ಎಸ್. ಎಲಿಯಟ್ ಕುರಿತು ಸಂಶೋಧನೆ ಕೈಗೊಂಡರು. 1964ರಿಂದ 1968ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಉಪನ್ಯಾಸಕ, 1968ರಿಂದ 1985ರವರೆಗೆ ಔರಂಗಾಬಾದ್​ನ ಮರಾಠವಾಡಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ರೀಡರ್, ಪ್ರೊಫೆಸರ್ ಆಗಿ, ವಿಭಾಗದ ಮುಖ್ಯಸ್ಥರಾಗಿದ್ದರು. ಧಾರವಾಡದಲ್ಲಿ ನಿವೃತ್ತಿ ಜೀವನ ಕಳೆದ ಅವರು, ಕನ್ನಡದಲ್ಲಿ ಭವ್ಯವಾದ ವಿಮರ್ಶೆಯ ವ್ಯವಸಾಯ ನಡೆಸಿದರು.
ಬಹುಭಾಷಾ ವಿದ್ವಾಂಸ:ಕನ್ನಡ, ಇಂಗ್ಲಿಷ್, ಸಂಸ್ಕೃತ, ಮರಾಠಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದ ಬಹುಭಾಷಾ ವಿದ್ವಾಂಸ ಆಮೂರ. ಕನ್ನಡ ಸಾಹಿತ್ಯ ಕುರಿತು ಇಂಗ್ಲಿಷ್​ನಲ್ಲಿ ಬರೆದ ವಿರಳ ವಿಮರ್ಶಕರು. ಸಮಕಾಲೀನ ಭಾರತೀಯ ಸಾಹಿತ್ಯದ ವಿಶಿಷ್ಟ ಲೇಖಕರಾಗಿದ್ದ ಆಮೂರರ ವಿಮರ್ಶೆ ಮುಖ್ಯವಾಗಿ 4 ಸ್ತರಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ವಿಮರ್ಶೆ, ಇಂಗ್ಲಿಷ್​ನಲ್ಲಿ ಬಂದ ಭಾರತೀಯ ಸಾಹಿತ್ಯ ವಿಮರ್ಶೆ, ಅಮೆರಿಕನ್ ಸಾಹಿತ್ಯ ವಿಮರ್ಶೆ, ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್​ನಲ್ಲಿ ವಿಮರ್ಶೆ ಎಂದು ವರ್ಗೀಕರಿಸಬಹುದು.
ಸಮಗ್ರ ವಿಮರ್ಶಾ ಪರಂಪರೆಯ ನಿರ್ವಪಕರು ಆಮೂರ. ಕನ್ನಡದ ಪ್ರಮುಖ ಲೇಖಕರ ಸಮಗ್ರ ಸಾಹಿತ್ಯದ ಅಧ್ಯಯನ ನಡೆಸಿ ಈವರೆಗೆ ಬಂದ ವಿಮರ್ಶೆಯನ್ನು ಪರಿಶೀಲಿಸಿ ಸಮತೋಲನ ದೃಷ್ಟಿಯಿಂದ ವಿಮರ್ಶೆ ಬರೆದಿದ್ದಾರೆ. ಬೇಂದ್ರೆ ಬಗೆಗೆ ಅವರು ಬರೆದ ‘ಭುವನದ ಭಾಗ್ಯ’ ಕನ್ನಡದಲ್ಲಿ ಒಂದು ‘ಕ್ಲಾಸಿಕ್’ ಕೃತಿಯಾಗಿದೆ. ‘ಅರಳು ಮರಳು’ವರೆಗಿನ ಬೇಂದ್ರೆ ಕಾವ್ಯದ ಚರ್ಚೆ ಇದುವರೆಗೆ ಆಗುತ್ತಿತ್ತು. ಆದರೆ ಆಮೂರರು ಬೇಂದ್ರೆ ದರ್ಶನದ ಅಖಂಡತೆಯನ್ನು, ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿ ವೈವಿಧ್ಯವನ್ನು ಚಾರಿತ್ರಿಕ ಸಂದರ್ಭದಲ್ಲಿಟ್ಟು ನೋಡಿದ್ದಾರೆ. ಅದೇ ರೀತಿ ಶ್ರೀರಂಗರ ‘ವಿರಾಟ ಪುರುಷ’ ಶ್ರೀರಂಗ ಸಮಗ್ರ ಅಧ್ಯಯನದ ಅಪೂರ್ವ ಗ್ರಂಥವಾಗಿದೆ.
ಆಧುನಿಕ ಕನ್ನಡ ಸಾಹಿತ್ಯದ ಪ್ರಕಾರಗಳ ಬಗೆಗೂ ಸಮಗ್ರ ಅನುಸಂಧಾನದ ವಿಮರ್ಶೆಯನ್ನು ಆಮೂರರು ಬರೆದಿದ್ದಾರೆ. ‘ಕನ್ನಡ ಸಾಹಿತ್ಯ: ಕಾದಂಬರಿ’, ‘ಕನ್ನಡ ಕಥನ ಸಾಹಿತ್ಯ: ಸಣ್ಣಕತೆ’, ‘ಆಧುನಿಕ ಕನ್ನಡ ಕವಿಕಾವ್ಯ ವಿಮರ್ಶೆ’ ‘ಕೊರಳು ಕೊಳಲು’ ಇದಕ್ಕೆ ನಿದರ್ಶನಗಳಾಗಿವೆ. ಆಮೂರರ ವಿಮರ್ಶೆಯ ಕೃತಿಗಳಲ್ಲಿ ಸೈದ್ಧಾಂತಿಕ ವಿಮರ್ಶೆ ಮತ್ತು ಪ್ರಾಯೋಗಿಕ ವಿಮರ್ಶೆಗಳೂ ಸೇರಿವೆ. ಕೃತಿ ಪರೀಕ್ಷೆ, ಅರ್ಥಲೋಕ, ವ್ಯವಸಾಯ, ಕಾಮಿಡಿ, ಸಾತ್ವಿಕಪಥ, ಅಮೃತವಾಹಿನಿ, ಸೀಮೋಲ್ಲಂಘನ, ನಿಂದ ಹೆಜ್ಜೆ, ಸಮಾರಾಧನ, ನಿರಂತರ, ವಿಚಾರಿಕ, ಸಂಭಾವಿತ, ಹಿಂಗಾರು ಮೊದಲಾದ ವಿಮರ್ಶಾ ಕೃತಿಗಳು ಸಾಕ್ಷಿಯಾಗಿವೆ.
ಆಮೂರರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಯುಗದ ಕವಿ ಕುವೆಂಪು, ವಿನಾಯಕ ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ್ ಮತ್ತು ಭಾರತೀಯ ರಂಗಭೂಮಿ ಜೀವನ ಸಮಗ್ರ ಸಾಹಿತ್ಯ ಕುರಿತು ವಿಮರ್ಶೆ ಬರೆದಿದ್ದಾರೆ. ಆದ್ಯ ರಂಗಾಚಾರ್ಯರ ಸಮಗ್ರ ನಾಟಕಗಳ 12 ಸಂಪುಟಗಳು ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣಾರಾಯರ ಸಮಗ್ರ ಸಾಹಿತ್ಯದ ಎರಡು ಬೃಹತ್ ಸಂಪುಟಗಳು, ಮಹಿಳಾ ಕಥಾಸಾಹಿತ್ಯದ ದೊಡ್ಡ ಸಂಪುಟ ಅವಳ ಕತೆಗಳು, ಖಾಸನೀಸ ಸಮಗ್ರ ಕಥೆಗಳು, ಸ್ವಾತಂತ್ರ್ಯೊತ್ತರ ಸಣ್ಣಕತೆಗಳು ಸಂಪುಟಗಳನ್ನು ಸಂಪಾದಿಸಿದ್ದಾರೆ. ವಿ.ಸೀ. ಆಯ್ದ ಬರಹಗಳು ಗ್ರಂಥವನ್ನೂ ಸಿದ್ಧಪಡಿಸಿಕೊಟ್ಟಿದ್ದಾರೆ.
ಇಂಗ್ಲಿಷ್​ನಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಕನ್ನಡ ಹಾಗೂ ಇಂಗ್ಲಿಷ್​ನ ಪ್ರಮುಖ ಪತ್ರಿಕೆಗಳಲ್ಲಿ 400 ಪುಸ್ತಕ ವಿಮರ್ಶೆಯ ಲೇಖನಗಳನ್ನು ಬರೆದಿದ್ದಾರೆ. ಅವರ ವಿಮರ್ಶೆ ಎಂದೂ ವಾದಗ್ರಸ್ತವಾಗಿಲ್ಲ. ಯಾವುದೇ ವಿವಾದ ಸೃಷ್ಟಿಸಿಲ್ಲ. ಸಮಕಾಲೀನ ಲೇಖಕರ ಕೃತಿಗಳಿಗೆ ಅವರು ಬರೆದ ಮುನ್ನುಡಿ, ಪ್ರಸ್ತಾವನೆಗಳು ಹೊಸ ಸಾಹಿತ್ಯದ ಬೆಳವಣಿಗೆಗೆ ಕಾರಣವಾಗಿವೆ.
ಅವರು ಅನುವಾದಿಸಿದ ಬೇಂದ್ರೆ ಕವಿತೆಗಳ ಇಂಗ್ಲಿಷ್ ಅನುವಾದ, ಶಾಂತಿನಾಥ ದೇಸಾಯಿಯವರ ಓಂ ಣಮೋ ಮತ್ತು ರಾಘವೇಂದ್ರ ಪಾಟೀಲರ ತೇರು, ಅನಕೃ ಅವರ ಸಂಧ್ಯಾರಾಗ ಕಾದಂಬರಿಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಒಬ್ಬ ಸೃಜನಶೀಲ ಲೇಖಕರೂ ಆಗಿದ್ದ ಅವರ ಕವಿತೆಗಳ ಸಂಕಲನ ‘ಕೊರಡು ಕೊನರಿದಾಗ’ ಮತ್ತು ಆತ್ಮಚರಿತೆ ‘ನೀರ ಮೇಲಣ ಗುಳ್ಳೆ’ ಕನ್ನಡದ ವಿಶಿಷ್ಟ ಕೃತಿಗಳಾಗಿವೆ. ‘ನಿಮಿತ್ತ ಅನಿಮಿತ್ತ’ ಅಂಕಣ ಲೇಖನಗಳ ಸಂಪುಟವಾಗಿದೆ.
ಆಮೂರರಿಗೆ 80 ತುಂಬಿದಾಗ ಅರ್ಪಿತವಾದ ಸಹೃದಯ ಸಂವಾದ (ಸಂಪಾದಕರು: ಡಾ. ಎಸ್. ವಿದ್ಯಾಶಂಕರ, ಡಾ. ಜಿ.ಎಂ. ಹೆಗಡೆ) ಕನ್ನಡ ವಿಮರ್ಶೆಯ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುವ ವಿಶಿಷ್ಟ ಅಭಿನಂದನ ಗ್ರಂಥವಾಗಿದೆ. ಆಮೂರರಿಗೆ 90ರ ಸಂದರ್ಭದಲ್ಲಿ ಕನ್ನಡ ವಿಮರ್ಶೆಯ ‘ಸ್ವೀಕೃತಿ’ (ಸಂಪಾದಕರು: ಡಾ. ಜಿ.ಎಂ. ಹೆಗಡೆ) ಕನ್ನಡ ಲೇಖಕ ಲೋಕ ಅವರ ವಿಮರ್ಶೆಯನ್ನು ಕುರಿತು ನಡೆಸಿದ ಸಾಂಸ್ಕೃತಿಕ ಬೃಹತ್ ಗೌರವ ಗ್ರಂಥವಾಗಿದೆ. ಇತ್ತೀಚೆಗೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಷ್ಠಿತ ‘ನೃಪತುಂಗ’ ಪ್ರಶಸ್ತಿ ಘೋಷಿಸಿತ್ತು. ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕ ಬಡವಾಗಿದೆ.
ಕೊರಳು-ಕೊಳಲು, ಮಹಾಕವಿ ಮಿಲ್ಟನ್, ಕೃತಿಪರೀಕ್ಷೆ, ಅ.ನ. ಕೃಷ್ಣರಾಯರು, ಭುವನದ ಭಾಗ್ಯ, ವ್ಯವಸಾಯ, ಅರ್ಥಲೋಕ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದ.ರಾ.ಬೇಂದ್ರೆ, ಅಮೃತವಾಹಿನಿ, ಶಾಂತಿನಾಥ ದೇಸಾಯಿ, ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಕಥನ ಶಾಸ್ತ್ರ, ಸೀಮೋಲ್ಲಂಘನ, ಸಮಕಾಲೀನ ಕಥೆ ಕಾದಂಬರಿ,
ಸಂಪಾದಿಸಿದ ಕೃತಿಗಳು:ಶ್ರೀರಂಗ ಸಾರಸ್ವತ (ಸಮಗ್ರ ಕೃತಿಗಳು), ಹುಯಿಲಗೋಳ ನಾರಾಯಣರಾಯರ ಸಮಗ್ರ ಕೃತಿಗಳು; ಅನುವಾದ- ನೆಹರು; ಇಂಗ್ಲಿಷ್ ಕೃತಿಗಳು: Adya Rangachar- A Critical spectrum, Images and Impressions, A.N.Krishnarao, The Concept of Comedy, Poetics of T.S.Eliot, Essays on modern Kannada literature.
ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಅನಕೃ ಪ್ರಶಸ್ತಿ, ನೃಪತುಂಗ ಸಾಹಿತ್ಯ ಪ್ರಶಸ್ತಿ ಮುಂತಾದವು.
ನೋಡಲು ಬಹಳ ಮೃದು. ಗಡಸೂ ಅಲ್ಲದ ಮೃದುವೂ ಅಲ್ಲದ ಧ್ವನಿ. ಮಾತಿನಲ್ಲಿ ಒಂದು ಆತ್ಮವಿಶ್ವಾಸ, ಅದು ಅನುಭವಕ್ಕಿಂತ ಓದಿನಿಂದ ಬಂದಿರುವಂಥದ್ದು. ಪ್ಯಾಂಟು, ಫುಲ್​ತೋಳಿನ ಶರಟು, ಬೆಲ್ಟು, ಕೆಲವೊಮ್ಮೆ ಕೋಟು ಧರಿಸಿ ಸಭೆಗಳಿಗೆ ಆಗಮನ. ಮಾಡಬೇಕಾದ ಭಾಷಣ, ಉಪನ್ಯಾಸಕ್ಕೆ ಪೂರ್ಣ ತಯಾರಿ. ಬೇರೆಯವರ ವಾದಗಳನ್ನು ಮೊದಲು ಕೇಳಿ, ಬಳಿಕ ತಮ್ಮ ನಿಲುವನ್ನು ಮಂಡಿಸುವುದು ಆಮೂರರ ರೀತಿ. ಹೊಸ ತಲೆಮಾರು ನೋಡುವ ವೇಳೆಗೆ ಆಮೂರರು ಸಾಕಷ್ಟು ಹಣ್ಣಾಗಿದ್ದರು. ದಪ್ಪ ಹುಬ್ಬು, ಬಿಳಿ ಕೂದಲು, ಕೈಗೆ ಒಂದು ವಾಕಿಂಗ್ ಕೋಲು ಬಂದಿತ್ತು. ಮನೆಯ ಒಳಹೊಕ್ಕರೆ ಹಜಾರದ ಬಲಭಾಗದಲ್ಲಿರುವ ಕೋಣೆಯಲ್ಲಿ ಪುಸ್ತಕಗಳ ರಾಶಿಯಲ್ಲಿ ಕುಳಿತು ಓದುತ್ತಿದ್ದರು. ಬರೆಯುತ್ತಿದ್ದರು. ಬೇಂದ್ರೆ ಕಾವ್ಯ ಅವರ ಜೀವಮಾನದ ಅಚ್ಚುಮೆಚ್ಚಿನ ವಿಷಯವಾಗಿತ್ತು.
ಆಮೂರರು ವಿಮರ್ಶಕರಾಗಿ ಬೆಳೆದಿದ್ದು ಮೊದಲು ಇಂಗ್ಲಿಷ್​ನಲ್ಲಿ. ಕನ್ನಡ ನಾಡಿಗೆ ಬಂದ ಮೇಲೆ ಅವರು ಕನ್ನಡದಲ್ಲಿ ವಿಮರ್ಶೆ ಬರೆಯಲು ಆರಂಭಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರು ಕನ್ನಡದಲ್ಲಿ ವಿಮರ್ಶೆ ಬರೆಯುವ ಪರಿಪಾಠ ಮೊದಲಿನಿಂದಲೂ ಇದೆ. ಬಿಎಂಶ್ರೀ, ಎಸ್.ವಿ. ರಂಗಣ್ಣ ಆರಂಭಿಸಿದ ವಿಮರ್ಶಾ ಪರಂಪರೆಯನ್ನು ಆಮೂರರು ಮುಂದುವರಿಸಿದರು. ಮೊದಲು ಇಂಗ್ಲಿಷ್​ನಲ್ಲಿ ಬಳಿಕ ಕನ್ನಡದಲ್ಲಿ ಸಮೃದ್ಧವಾಗಿ ಬರೆದರು. ಕನ್ನಡ ವಿಮರ್ಶೆಗೆ ಒಂದು ಹೊಸ ಆಯಾಮ ಕಲ್ಪಿಸಿದರು. ಆ ಆಯಾಮವೆಂದರೆ ಒಂದು ವಿಷಯವನ್ನು ಸಮಗ್ರವಾಗಿ ನೋಡಲು ಯತ್ನಿಸುವುದು. ಕೊನೆಯ ವರ್ಷಗಳಲ್ಲಿ ಆಮೂರರನ್ನು ಭಾರತೀಯತೆಯು ಆವರಿಸಿತ್ತು. ಅವರು ಮಹಾಭಾರತದ ಮೂಲಕ ಜೀವನವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರು.
ಆಮೂರರ ವಿಮರ್ಶೆಯಲ್ಲಿ ಶೈಕ್ಷಣಿಕ ಶಿಸ್ತು, ಕೃತಿಯ ಅನುಸಂಧಾನದ ಹೊಸ ಹಾದಿಯನ್ನು ನಾವು ಕಾಣುತ್ತೇವೆ. ಕವಿ ಕೃತಿಗಳ ಬಗೆಗೆ ಈವರೆಗೆ ನಡೆದ ಎಲ್ಲ ವಿಚಾರಗಳನ್ನು ಸಂಶೋಧನೆಯ ಶಿಸ್ತಿನಿಂದ ಆಮೂರರು ಸಾದರಪಡಿಸುತ್ತಾರೆ. ಅವರ ಸದಭಿರುಚಿ, ರಾಗ ದ್ವೇಷಗಳಿಲ್ಲದ ಪರಿಣತ ಮನಸ್ಸಿನ ಪರಿಪಾಕ ವಿಮರ್ಶೆಯಲ್ಲಿ ಅನುಭವಕ್ಕೆ ಬರುತ್ತವೆ. ಅದು ಕೃತಿನಿಷ್ಠವೂ ಸಾಂಸ್ಕೃತಿಕ ಅಧ್ಯಯನವೂ ಆಗಿ ಓದುಗನನ್ನು ಪ್ರಭಾವಗೊಳಿಸುತ್ತದೆ. ಪಾಶ್ಚಾತ್ಯ ಪ್ರಭಾವಗಳಿಗೆ ಒಳಗಾಗದೆ ದೇಶೀಯ ಚಿಂತನಧಾರೆಯಿಂದ ಆಲೋಚಿಸುವ ವಿಮರ್ಶಕರು ಅವರಾಗಿದ್ದರು. ಸಮಗ್ರ ಓದಿನ ಹರಿಕಾರರಾದ ಅವರು, ಕವಿಕೃತಿಗಳ ಮೌಲ್ಯಮಾಪನಕ್ಕಿಂತ ವ್ಯಾಖ್ಯಾನದ ಕಡೆಗೆ ಮಹತ್ವ ನೀಡುತ್ತಾರೆ. ಕನ್ನಡ ಕಥನ ಸಾಹಿತ್ಯ ಕಾದಂಬರಿ ಮತ್ತು ಸಣ್ಣಕತೆಯಲ್ಲಿ ಅದರ ಕೇಂದ್ರ ಪ್ರಮೇಯವನ್ನು ಶೋಧಿಸುವ ವಿಚಾರವಿದೆ. ಆಮೂರರ ವಿಮರ್ಶೆ ಯಾವುದೇ ಸಿದ್ಧಾಂತ, ಪ್ರಣಾಲಿಗೆ ಒಳಗಾಗದೆ ಸಾಹಿತ್ಯದ ಶ್ರೇಷ್ಠತೆಯನ್ನು ಗುರುತಿಸುವ ಪ್ರಾಮಾಣಿಕತೆಗೆ ಸದಾ ತೆರೆದುಕೊಂಡಿದೆ. ಓದುಗ ಕೇಂದ್ರಿತ ನಿಲುವನ್ನು ಅದು ಮಂಡಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಸಮಗ್ರ ಓದನ್ನು ಬಯಸುವವರು ಆಮೂರರ ವಿಮರ್ಶೆ ಓದಲೇಬೇಕು. ಅಷ್ಟು ಅಧಿಕೃತತೆ ಅದಕ್ಕಿದೆ! ಕನ್ನಡದ ಎಲ್ಲ ತಲೆಮಾರಿನ ಲೇಖಕ-ಲೇಖಕಿಯರ ಬಗೆಗೆ ಆಳವಾದ ಒಳನೋಟದ ವಿಮರ್ಶೆ ಬರೆದವರು ಆಮೂರರು.
ಹೊಸ ತಲೆಮಾರಿನ ತರುಣ ವಿಮರ್ಶಕರು ಬರೆದ ವಿಮರ್ಶೆಗಳನ್ನೂ ಆಮೂರರು ಆಸಕ್ತಿಯಿಂದ ಓದುತ್ತಿದ್ದರು. ಅವರೊಡನೆ ರ್ಚಚಿಸುತ್ತಿದ್ದರು. ತಮಗಿಂತ ಮುಂದಿನ ತಲೆಮಾರಿನ ವಿಮರ್ಶಕರ ಬರವಣಿಗೆ ಖಚಿತವಾಗಿದೆ ಎಂದು ಮುಕ್ತವಾಗಿ ಹೇಳುತ್ತಿದ್ದರು.
ಆಮೂರರ ಸಾಹಿತ್ಯ ಕೊಡುಗೆ ವಿವರಿಸಲು ಶಬ್ದಗಳು ಸಾಲುವುದಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಕಲಿಯುತ್ತಿದ್ದಾಗ ನಾನು ಅವರ ವಿದ್ಯಾರ್ಥಿಯಾಗಿದ್ದೆ. ಜ್ಞಾನಿ, ದೊಡ್ಡ ವಿದ್ವಾಂಸರಾಗಿದ್ದ ಅವರ ಪಾಠ ಕೇಳಿದ್ದೇ ಒಂದು ಹೆಮ್ಮೆ. ಅವರು ಎಂದೋ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ ಎಂಬ ವ್ಯಥೆ ನಮಗಿತ್ತೇ ಹೊರತು ಅವರೆಂದೂ ಪ್ರಶಸ್ತಿ, ಸ್ಥಾನಮಾನದ ಬಗ್ಗೆ ಯೋಚಿಸಿದವರಲ್ಲ. ಅವರ ನಿಧನದಿಂದ ಅನಾಥಭಾವ ಕಾಡುತ್ತಿದೆ.
| ಡಾ.ವೀಣಾ ಶಾಂತೇಶ್ವರಸಾಹಿತಿ
ಆಮೂರರು ನನ್ನ ಆರಾಧ್ಯ ಗುರುಗಳು. ನಿರಂತರವಾಗಿ ಬೆಳಗುತ್ತಿದ್ದ ಸಾಹಿತ್ಯ ಜ್ಯೋತಿ. ವಿದ್ಯಾರ್ಥಿಗಳಿಗೆ ಅವರ ಮನೆ ಜ್ಞಾನದ ಕಾಶಿಯಂತಿತ್ತು. ಅಧ್ಯಯನ ಕೋಣೆಯಲ್ಲಿ ಪುಸ್ತಕಗಳ ರಾಶಿ ಮಧ್ಯೆ ತಪಸ್ವಿಯಂತೆ ಬರೆಯುತ್ತ ಕೂಡುತ್ತಿದ್ದರು. ತರುಣ, ಹಿರಿಯ ಸಾಹಿತಿಗಳಿಗೆ ಜ್ಞಾನದ ಆಲದ ಮರದಂತಿದ್ದರು. ‘ಸಾಹಿತಿ ಅಂಗಳಕ್ಕೆ ಸಾಹಿತ್ಯ ಅಕಾಡೆಮಿ’ ಕಾರ್ಯಕ್ರಮಕ್ಕೆ ನಾನು ಮೊದಲು ಆರಿಸಿಕೊಂಡಿದ್ದು ಆಮೂರರ ಮನೆಯನ್ನು. ನಿಗರ್ವಿ ಸಾಹಿತಿ, ಸ್ನೇಹಮಯಿ, ಸದಾ ಅಧ್ಯಯನಶೀಲ ವ್ಯಕ್ತಿ. ಅವರಿಲ್ಲದ ಧಾರವಾಡಕ್ಕೆ ಅನಾಥಪ್ರಜ್ಞೆ ಕಾಡುತ್ತಿದೆ.
| ಡಾ.ಮಾಲತಿ ಪಟ್ಟಣಶೆಟ್ಟಿಸಾಹಿತಿ
ಧಾರವಾಡ ಸಾಹಿತ್ಯ ಸಂಭ್ರಮದ ರೂವಾರಿಗಳಲ್ಲಿ ಆಮೂರ ಪ್ರಮುಖರು. ಮನೋಹರ ಗ್ರಂಥಮಾಲೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಮೌಲಿಕ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ಮನೋಹರ ಗ್ರಂಥಮಾಲೆಗಿದೆ. ಅವರು ಬೆಂಗಳೂರಿಗೆ ತೆರಳುವಾಗ ತಮಗೆ ದೊರೆತಿದ್ದ ಪ್ರಶಸ್ತಿಗಳನ್ನು ಗ್ರಂಥಮಾಲೆಗೆ ನೀಡಿ ಹೋಗಿದ್ದಾರೆ. ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸುವ ಹಾಗೂ ಅವರಿಗೆ ಬಂದ ಲೇಖಕರ ಪತ್ರಗಳಿಗೆ ಪುಸ್ತಕ ರೂಪ ನೀಡುವ ಯೋಜನೆ ಇದೆ.
| ಡಾ.ರಮಾಕಾಂತ ಜೋಶಿಸಾಹಿತಿ
ಆಮೂರರು ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು. ಕುವೆಂಪು, ಬೇಂದ್ರೆಯವರ ಸಮಗ್ರ ಸಾಹಿತ್ಯದ ಬಗ್ಗೆ ಬರೆದರು. ನನ್ನ ಸಮಗ್ರ ಕಾವ್ಯಕ್ಕೆ ಅವರೇ ಮುನ್ನುಡಿ ಬರೆದಿದ್ದರು. ಇತ್ತೀಚೆಗೆ ಆಧ್ಯಾತ್ಮಿಕ ಸಾಹಿತ್ಯದತ್ತ ಒಲವು ತೋರಿ ದಕ್ಷಿಣಾಮೂರ್ತಿಸ್ತೋತ್ರದ ವೇದಾಂತ ವ್ಯಾಖ್ಯಾನ ಗ್ರಂಥದ ಎರಡು ಬೃಹತ್ ಸಂಪುಟಗಳ ಕನ್ನಡಾನುವಾದ ಗ್ರಂಥಗಳನ್ನು ಕೊಟ್ಟಿದ್ದು ಬಹುದೊಡ್ಡ ಸಾಧನೆ. ಶ್ರೀರಂಗರ ಉತ್ಕೃಷ್ಟ ನಾಟಕಗಳ ಕುರಿತು ವಿಮರ್ಶೆ ಬರೆದರು. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.
| ಡಾ.ಚನ್ನವೀರ ಕಣವಿಹಿರಿಯ ಸಾಹಿತಿ
(ಲೇಖಕರು ಹಿರಿಯ ಸಾಹಿತಿ, ವಿಮರ್ಶಕ)
ಖ್ಯಾತ ವಿಮರ್ಶಕ ಡಾ.ಜಿ.ಎಸ್​.ಆಮೂರ ಅಸ್ತಂಗತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twelve =
Remember me
