| ಕೀರ್ತಿನಾರಾಯಣ ಸಿ. ಬೆಂಗಳೂರು
ಅಂತರ ಜಿಲ್ಲಾ ವರ್ಗಾವಣೆ ಹಾಗೂ ಪತಿ-ಪತ್ನಿ ಪ್ರಕರಣದಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಪೊಲೀಸರಿಗೆ ವರ್ಗಾವಣೆ ಭಾಗ್ಯದ ‘ಗ್ಯಾರಂಟಿ’ ಕೊಟ್ಟು ‘ಕೈ’ ಕೊಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪೊಲೀಸ್ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ವರ್ಗಾವಣೆ ಮಾಡಿ ಇಲ್ಲವೇ ದಯಾಮರಣ ಕೊಡಿ ಎಂದು ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಿ, ಇಲಾಖೆಯ ಎಲ್ಲ ಕೆಳಹಂತದ ಸಿಬ್ಬಂದಿಯಿಂದ ಸಹಿ ಸಂಗ್ರಹ ಪ್ರಕ್ರಿಯೆ ಆರಂಭಿಸಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2022ರಲ್ಲಿ 16 (ಎ) ನಿಯಮ ಮರುಸೇರ್ಪಡೆಗೊಳಿಸುವ ಮೂಲಕ ಸಿ ಮತ್ತು ಡಿ ವೃಂದದ ನೌಕರರಿಗೆ ಅಂತರ ಜಿಲ್ಲಾ ವರ್ಗಾವಣೆಗೆ 2022ರ ನವೆಂಬರ್​ನಲ್ಲಿ ಆಗಿನ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಜತೆಗೆ ಕನಿಷ್ಠ 7 ವರ್ಷ ಸೇವೆ ಪೂರ್ಣಗೊಳಿಸಿರುವ ಪತಿ-ಪತ್ನಿ ಪ್ರಕರಣದಲ್ಲಿ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೂ ಅನುಮತಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ವರ್ಗಾವಣೆ ಮಾಡುವುದಾಗಿ ಪದೇಪದೆ ಭರವಸೆಗಳನ್ನು ಕೊಡುತ್ತಿದೆಯೇ ಹೊರತು ಕಾರ್ಯರೂಪಕ್ಕೆ ತರುವಲ್ಲಿ ಉದಾಸೀನ ತೋರುತ್ತಿರುವುದು ಪೊಲೀಸರಲ್ಲಿ ಅಸಮಾಧಾನ ಸ್ಪೋಟಕ್ಕೆ ಕಾರಣವಾಗಿದೆ.
ಸರ್ಕಾರಿ ನೌಕರರಾಗಿರುವ ಪತ್ನಿ ಅಥವಾ ಪತಿ ಯಾರಾದರೊಬ್ಬರು ಸ್ವಂತ ಕೋರಿಕೆ ಮೇಲೆ ಅರ್ಜಿ ಸಲ್ಲಿಸಿ ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ವರ್ಗಾವಣೆಗೊಳ್ಳಲು ಅವಕಾಶವಿದೆ. ಬೇರೆಲ್ಲ ಇಲಾಖೆಗಳಲ್ಲಿ ಇಂಥ ವರ್ಗಾವಣೆ ಮಾಡಲಾಗಿದೆ. ಅತಿದೊಡ್ಡ ಇಲಾಖೆಯಾದ ಶಿಕ್ಷಣ ಇಲಾಖೆಯಲ್ಲೂ ಶಿಕ್ಷಕ ದಂಪತಿ ವರ್ಗಾವಣೆಯಾಗಿದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಮಾತ್ರವೇ ಸಿಬ್ಬಂದಿಯ ವರ್ಗಾವಣೆ ಬಯಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಪತಿ-ಪತ್ನಿ ಪ್ರಕರಣಗಳಲ್ಲಿ ಅಂದಾಜು 100 ರಿಂದ 130 ಮಂದಿಯಷ್ಟೇ ವರ್ಗಾವಣೆಗಾಗಿ ಕಾದಿದ್ದಾರೆ. ಉಳಿದಂತೆ ಅಂತರ ಜಿಲ್ಲಾ ವರ್ಗಾವಣೆಗೆ ಅಂದಾಜು 5 ಸಾವಿರ ಪೊಲೀಸ್ ಕಾನ್​ಸ್ಟೆಬಲ್​ಗಳು ವರ್ಗಾವಣೆ ಕೇಳಿದ್ದಾರೆ. 5 ಸಾವಿರ ಮಂದಿಯನ್ನು ಒಮ್ಮೆಲೆ ವರ್ಗಾವಣೆ ಮಾಡುವ ಬದಲು ಹಂತಹಂತವಾಗಿ ಟ್ರಾನ್ಸ್​ಫರ್ ಮಾಡಿದರೆ ತೊಂದರೆಯಾಗುವುದಿಲ್ಲ. ಆದರೆ, ಪತಿ-ಪತ್ನಿ ಪ್ರಕರಣದಲ್ಲಿ ಕಡಿಮೆ ಸಿಬ್ಬಂದಿ ಇರುವುದರಿಂದ ತಕ್ಷಣಕ್ಕೆ ಅವರ ಅರ್ಜಿಗಳನ್ನಾದರೂ ಪರಿಗಣಿಸಿ, ಒಟ್ಟಿಗೆ ಬದುಕಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬುದು ಪೊಲೀಸರ ಒಮ್ಮತದ ಅಭಿಪ್ರಾಯವಾಗಿದೆ.
ಕೇಸ್-2
ಏನು ಪಾಪ ಮಾಡಿದ್ವೋ ಗೊತ್ತಿಲ್ಲ..
ನನಗೊಂದು ಕಡೆ, ಪತ್ನಿಗೊಂದು ಕಡೆ ಕೆಲಸ. ಮದುವೆಯಾಗಿ ಎರಡು ವರ್ಷವಾದರೂ ನಮಗಿನ್ನೂ ಮಕ್ಕಳ ಭಾಗ್ಯ ಇಲ್ಲ. ಕಳೆದ ವರ್ಷ ತಂದೆ ತೀರಿ ಹೋದ್ರು. ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾವು ಏನು ಪಾಪ ಮಾಡಿದೆವೋ ಗೊತ್ತಾಗ್ತಿಲ್ಲ. ಈ ವರ್ಗಾವಣೆ ಸಂಬಂಧ ಸಾಕಾಗಿ ಹೋಗಿದೆ. ಮುಪ್ಪಿನ ಕಾಲದಲ್ಲಿ ತಂದೆಯನ್ನಂತೂ ನೊಡ್ಕೊಳ್ಳೋಕೆ ಆಗ್ಲಿಲ್ಲ. ನತದೃಷ್ಟ ಜೀವನ ಅಂತ ತುಂಬಾ ನೋವಾಗುತ್ತಿದೆ.
| ಕಾನ್​ಸ್ಟೆಬಲ್-ಬೆಂಗಳೂರು
ಕೇಸ್-3
ಬ್ರಿಟಿಷರಿಗಿಂತ ಕೀಳಾಗಿ ನೋಡಿಕೊಳ್ತಾರೆ….
ನಮ್ಮದು ಲವ್ ಮ್ಯಾರೇಜ್. ನಮ್ಮನೇಲಿ ಯಾರು ಬರಲ್ಲ. ಅವರ ಮನೆಯಲ್ಲೂ ಯಾರೂ ಬರಲ್ಲ. ಇಬ್ಬರದ್ದೂ ಒಂದೊಂದು ಕಡೆ ಡ್ಯೂಟಿ. ಆಫೀಸರ್​ಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ನಮ್ಮನ್ನು ಬ್ರಿಟಿಷರಿಗಿಂತ ಕೀಳಾಗಿ ನೋಡಿಕೊಳ್ಳುತ್ತಾರೆ.
|ಕಾನ್​ಸ್ಟೆಬಲ್-ಬೆಂಗಳೂರು
ಕೇಸ್-4
ಜೀವನ ತುಂಬಾ ಕಷ್ಟ…
ನನ್ನ ಗಂಡ ಬೀದರ ಜಿಲ್ಲೆಯಲ್ಲಿ ಪೊಲೀಸ್ ಪೇದೆ ಆಗಿದ್ದಾರೆ. ನಾನು ಬೆಂಗಳೂರಲ್ಲಿ ಪೊಲೀಸ್ ಕಾನ್​ಸ್ಟೆಬಲ್. ನಮಗೆ 3 ಮಕ್ಕಳು. ಹನ್ನೊಂದೂವರೆ ವರ್ಷ, 3 ವರ್ಷ ಹಾಗೂ 6 ತಿಂಗಳ ಪಾಪು ಇದೆ. ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಜೀವನ ತುಂಬಾ ಕಷ್ಟ ಆಗುತ್ತಿದೆ. ವರ್ಗಾವಣೆ ಕೊಟ್ಟು ಸಹಾಯ ಮಾಡಲಿ.
| ಮಹಿಳಾ ಕಾನ್​ಸ್ಟೆಬಲ್
ಕೇಸ್-5
ಹೆಂಡತಿ ನೋಟಿಸ್ ಕಳ್ಸಿದ್ದಾಳೆ
ನನ್ನೂರು ಹಾಸನ ಜಿಲ್ಲೆ. ಬೆಂಗಳೂರು ಸಿಎಆರ್ ಘಟಕದಲ್ಲಿ ಪೇದೆಯಾಗಿದ್ದೇನೆ. 2019ರಲ್ಲಿ ಮದುವೆ ಆಗಿದ್ದು, 2.6 ತಿಂಗಳ ಹೆಣ್ಣು ಮಗುವಿದೆ. ಹೆಂಡತಿ, ಮಗು ನೋಡಿಕೊಳ್ಳಲು ಆಗುತ್ತಿಲ್ಲ. ವರ್ಗಾವಣೆಯಾಗಿ ಬರುತ್ತೇನೆಂದು ಸುಳ್ಳು ಹೇಳಿ ಮದುವೆಯಾಗಿದ್ದು, ಈಗ ಬರುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾಳೆ. ನಾನು ಒಬ್ಬನೇ ಮಗ. ತಂದೆ ಇಲ್ಲ. ತಾಯಿಗೆ ವಯಸ್ಸಾಗಿದೆ. ನಮ್ಮ ಬಾಳಲ್ಲಿ ಬಿರುಗಾಳಿ ಎದ್ದಿದೆ.
-ಕಾನ್​ಸ್ಟೆಬಲ್
ಕೇಸ್-6
ಹಲವರ ಸ್ಥಿತಿ ಇದೇ ಆಗಿದೆ
ದಾವಣಗೆರೆಯ ಡಿಎಆರ್ ಘಟಕದ 2011ರ ಬ್ಯಾಚ್​ನ ಗುರುಮೂರ್ತಿ ಅಂತರ ಜಿಲ್ಲಾ ವರ್ಗಾವಣೆಯಾಗದ ಕಾರಣ ಮಾನಸಿಕ ಕಿರುಕುಳಕ್ಕೆ ಒಳಗಾಗಿ ದಾವಣಗೆರೆ ನಗರ ಪಾಲಿಕೆಯಲ್ಲಿ ಗಾರ್ಡ್ ಡ್ಯೂಟಿಯಲ್ಲಿದ್ದಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವರ್ಗಾವಣೆ ಸಿಗದೆ ಹಲವರು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ.
| ಕಾನ್​ಸ್ಟೆಬಲ್
30 ಬಾರಿ ಭೇಟಿ ಕೊಟ್ಟು ಮನವಿಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡುವಂತೆ ಗೃಹ ಸಚಿವರ ಮನೆ ಬಾಗಿಲಿಗೆ 30 ಬಾರಿ ಭೇಟಿ ಕೊಟ್ಟು ಮನವಿ ಕೊಟ್ಟಿದೇವೆ. ಪ್ರತಿಬಾರಿಯೂ ಒಂದೇ ಉತ್ತರ. ವರ್ಗಾವಣೆ ಮಾಡುತ್ತೇವೆ, ಪರಿಶೀಲಿಸುತ್ತೇವೆ, ಪ್ರಕ್ರಿಯೆ ನಡೀತಿದೆ, ನಿಯಮಾನುಸಾರ ವರ್ಗಾವಣೆ ಮಾಡುತ್ತೇವೆ. ಲಕ್ಷ ಲಕ್ಷ ಹಣ ಕೊಡುವ ಸಬ್ ಇನ್​ಸ್ಪೆಕ್ಟರ್​ಗಿಂತ ಮೇಲಿನ ಅಧಿಕಾರಿಗಳಿಗೆ ರಾತ್ರೋರಾತ್ರಿ ವರ್ಗಾವಣೆ ಮಾಡುತ್ತಾರೆ. ಕಾನ್​ಸ್ಟೆಬಲ್​ಗಳಿಗೆ ಮಾತ್ರ ವರ್ಗಾವಣೆ ಮಾಡದೆ ಕಣ್ಣೀರು ಹಾಕಿಸುತ್ತಿದ್ದಾರೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಜೀವಂತವಿದ್ದೂ ಸಾರ್ಥಕವೇನು?ಸರ್ ಗಂಡ-ಹೆಂಡತಿ ಬೇರೆ ಬೇರೆ ಜಿಲ್ಲೆಯಲ್ಲಿ ಕರ್ತವ್ಯ ಮಾಡುತ್ತಿದ್ದೇವೆ. ಮದುವೆಯಾಗಿ 8 ವರ್ಷ ಪೂರೈಸಿದ್ದರೂ ಮಕ್ಕಳಾಗದೆ ಪರಿತಪಿಸುವಂತಾಗಿದೆ. ವಯಸ್ಸಾಗುತ್ತಿದ್ದು, ಸರಿಯಾದ ಸಮಯದಲ್ಲಿ ದಂಪತಿ ಜತೆಯಲ್ಲಿರದಿದ್ದರೆ ಹೇಗೆ? 39 ವರ್ಷ ತುಂಬಿ 40ನೇ ವರ್ಷಕ್ಕೆ ಬಂದಿದ್ದೇನೆ. ಈಗಲೂ ಜತೆಯಾಗಿ ಬಾಳದಿದ್ದರೆ ನಾವು ಜೀವಂತವಾಗಿದ್ದು ಏನು ಸಾರ್ಥಕ? ಈಗಲಾದರೂ ವರ್ಗಾವಣೆ ಮಾಡಿಕೊಡಲಿ.
| ಹೆಡ್ ಕಾನ್​ಸ್ಟೆಬಲ್ ಶಿವಮೊಗ್ಗ
ಆಕ್ರೋಶ ಏಕೆ?
* ಪೊಲೀಸ್ ಇಲಾಖೆಯಲ್ಲಿ 3 ವರ್ಷಗಳಿಂದ ಯಾವುದೇ ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.
* ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಹಾಗೂ ಕೆಸಿಎಸ್​ಆರ್ ನಿಯಮ ಪಾಲಿಸುತ್ತಿಲ್ಲ.
* ಶೀಘ್ರದಲ್ಲೇ ವರ್ಗಾವಣೆ ಮಾಡುತ್ತೇವೆ ಎಂಬುದು ಗೃಹಸಚಿವರು-ಡಿಜಿಪಿ ಹೇಳಿಕೆಗಷ್ಟೇ ಸೀಮಿತವಾಗಿದೆ
* 10-15 ವರ್ಷಗಳಿಂದ ತಂದೆ-ತಾಯಿ, ಹೆಂಡತಿ ಮಕ್ಕಳನ್ನು ಬಿಟ್ಟು ಬೇರೆಲ್ಲೋ ಕೆಲಸ ಮಾಡುತ್ತಿರುವ ಸಂಕಟ
* ಒಟ್ಟಿಗೆ ಇರಲಾಗದೆ ದಾಂಪತ್ಯದಲ್ಲಿ ಬಿರುಕು ಬಿಟ್ಟು ವಿಚ್ಛೇದನ, ವಿಚ್ಛೇದನ ಹಂತಕ್ಕೆ ತಲುಪಿರುವ ಪ್ರಕರಣಗಳಿವೆ.
* ಪತಿ-ಪತ್ನಿ ಬೇರೆಬೇರೆ ಜಿಲ್ಲೆಗಳಲ್ಲಿ ಕೆಲಸದಲ್ಲಿರುವುದರಿಂದ ಐದಾರು ವರ್ಷ ಕಳೆದರೂ ಮಕ್ಕಳಾಗದ ವ್ಯಥೆ
* ಪೊಲೀಸ್ ಇಲಾಖೆಯಲ್ಲಷ್ಟೇ 2021ರಿಂದ ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆಯನ್ನೇ ನಡೆಸದ್ದಕ್ಕೆ ಆಕ್ರೋಶ
ಭಾರತದ ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಲಕ್ಷಾಧಿಪತಿ ಮಹಿಳೆಯರು! ಲಕ್ಷದ್ವೀಪದಲ್ಲಿ ಒಬ್ಬರೂ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 10 =
Remember me
