| ಮೃತ್ಯುಂಜಯ ಕಪಗಲ್ ಬೆಂಗಳೂರು
ಪಾವಗಡ ಬಹುಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆ ಬಹುತೇಕ ಪೂರ್ಣಗೊಂಡಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಬಳಸಿಕೊಂಡು ಕುಡಿಯುವ ನೀರಿನ ಬವಣೆ ನೀಗಿಸುವುದು ಮಹತ್ವಾಕಾಂಕ್ಷಿ ಯೋಜನೆಯ ತಿರುಳು.
ತುಮಕೂರು, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ ಬರ, ಅಂತರ್ಜಲಬಾಧಿತ ಪ್ರದೇಶಕ್ಕೆ ಪದಾರ್ಪಣೆ ಮಾಡಲು ತುಂಗಭದ್ರೆ ಸಜ್ಜಾಗಿದ್ದಾಳೆ !. ದಶಕಗಳಿಂದ ಪರಿತಪಿಸುತ್ತಿರುವ ಲಕ್ಷಾಂತರ ಜನರ ಕುಡಿಯುವ ನೀರಿನ ದಾಹ ತಣಿಸಲಿದ್ದಾಳೆ. ಯೋಜನೆಯು ತಾಂತ್ರಿಕವಾಗಿ ಸದೃಢತೆಯಲ್ಲಿ ತೇರ್ಗಡೆಯಾಗಿದೆ. ಜುಲೈ ಮೊದಲ ವಾರದಿಂದ ನೀರೆತ್ತುವ, ಹರಿಸುವ, ಶುದ್ಧೀಕರಿಸುವ ಪರೀಕ್ಷೆಯೂ ಯಶಸ್ವಿಯಾಗಿದೆ. ಮುಖ್ಯ ಕೊಳವೆ ಮಾರ್ಗ ವಿತರಣಾ ಜಾಲದ ಸ್ಥಿರತೆ, ಸರಾಗವಾಗಿ ನೀರು ಹರಿಯುವಿಕೆ ಪ್ರಯೋಗ ಜಾರಿಯಲ್ಲಿದೆ.
ಬಾಕಿ ಉಳಿದ ಕಾಮಗಾರಿಗಳ ಜತೆಗೆ ಆಗಸ್ಟ್ ಎರಡನೇ ವಾರದಿಂದ ಹಂತ ಹಂತವಾಗಿ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಿದೆ. ಈ ಕಾರ್ಯಕ್ರಮದ ಪೂರ್ವಸಿದ್ಧತೆಗೆ ಸರ್ಕಾರದ ಒಪ್ಪಿಗೆ ನಿರೀಕ್ಷೆಯಲ್ಲಿ ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ಹೊತ್ತ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಮೂಲಗಳು ತಿಳಿಸಿವೆ. ಪಾವಗಡವರೆಗೂ ಕುಡಿಯುವ ನೀರು ಈ ವರ್ಷದ ಡಿಸೆಂಬರ್ ಒಳಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಇಲಾಖೆ ಅಧಿಕಾರಿಯೊಬ್ಬರು ಉತ್ಸಾಹದಿಂದ ಹೇಳಿದರು.

2,132 ಕೋಟಿ ರೂ. ವೆಚ್ಚ:ಸುಸ್ಥಿರ ಜಲಮೂಲವಾಗಿ ತುಂಗಭದ್ರಾ ಜಲಾಶಯವನ್ನು ಆಶ್ರಯಿಸಲಾಗಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಕೈಗೆತ್ತಿಕೊಂಡಿರುವ ಈ ಯೋಜನೆ ಅಂದಾಜು ವೆಚ್ಚ 2,132.02 ಕೋಟಿ ರೂ.ಗಳಾಗಿವೆ. ವಿನ್ಯಾಸ, ನಿರ್ವಣ, ಕಾರ್ಯಾಚರಣೆ ಮತ್ತು ನಿರ್ವಹಣೆ (ಡಿಬಿಒಟಿ)ಯಡಿ ಒಪ್ಪಂದದಂತೆ ಮೇಘ ಇಂಜಿನಿಯರಿಂಗ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿಗೆ ಗುತ್ತಿಗೆ ನೀಡಲಾಗಿದೆ.
ಈ ಒಪ್ಪಂದ 2018ರ ಡಿಸೆಂಬರ್​ನಲ್ಲಿ ಏರ್ಪಟ್ಟಿದ್ದು, 36 ತಿಂಗಳ ಗಡುವು ನೀಡಲಾಗಿತ್ತು. ಆದರೆ ಕರೊನಾ ಸಾಂಕ್ರಾಮಿಕ ರೋಗದ ಬಾಧೆ, ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರುವಳಿಗಾಗಿ ಎರಡು ವರ್ಷ ವಿಳಂಬವಾಯಿತು.
ಯೋಜನೆಯಡಿ 568 ಓವರ್ ಹೆಡ್ ಟ್ಯಾಂಕ್​ಗಳನ್ನು ಗುತ್ತಿಗೆ ಕಂಪನಿ ನಿರ್ವಿುಸಿದೆ. ಉಳಿದ ಸಾವಿರಕ್ಕೂ ಹೆಚ್ಚು ಇಲಾಖೆ ನಿರ್ವಿುಸಿದ ಓವರ್ ಹೆಡ್ ಟ್ಯಾಂಕ್​ಗಳನ್ನು ನೀರು ಪೂರೈಕೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆರಂಭಿಸಿದ ನಂತರ ಐದು ವರ್ಷಗಳ ಕಾಲ ಕಾರ್ಯಾಚರಣೆ ಮತ್ತು ನಿರ್ವಹಣೆಯು ಗುತ್ತಿಗೆ ಕಂಪನಿಯದು ಎಂದು ಇಲಾಖೆ ಮೂಲಗಳು ವಿವರಿಸಿವೆ.
ಅತಿ ಉದ್ದನೆಯ ಕೊಳವೆ ಮಾರ್ಗ:ತುಂಗಭದ್ರಾ ಜಲಾಶಯದಿಂದ ರಸ್ತೆ ಮಾರ್ಗವಾಗಿ ಪಾವಗಡ 230 ಕಿ.ಮೀ. ದೂರ ಅಂತರದಲ್ಲಿದೆ. ಆದರೆ ನೀರು ಪೂರೈಕೆ, ವಿತರಣೆಗೆ ನಿರ್ವಿುಸಿದ ಕೊಳವೆ ಮಾರ್ಗದ ಜಾಲ ಒಟ್ಟು 2,700 ಕಿ.ಮೀ. ಉದ್ದವಿದೆ. ನೀರೆತ್ತುವ, ಕ್ಲಿಷ್ಟಕರ ತಿರುವು, ಎತ್ತರದ ಪ್ರದೇಶಕ್ಕೆ ಮಾತ್ರ ಪಂಪ್ ಮೋಟಾರ್​ಗಳು ಬಳಕೆಯಾಗಿದ್ದು, ಶೇ.90 ನೀರು ಗುರುತ್ವಾಕರ್ಷಣೆ (ಗ್ರಾವಿಟಿ) ಬಲದಿಂದ ಸಾಗಲಿರುವುದು ಈ ಯೋಜನೆಯ ಮುಖ್ಯಾಂಶ.
ಯೋಜನಾ ಪಥ ಹೀಗಿದೆ:ಯೋಜನೆಗೆ ತುಂಗಭದ್ರಾ ಜಲಾಶಯದ 2.40 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಇದಕ್ಕಾಗಿ ಜಲಾಶಯದ ಹಿನ್ನೀರು (ಹೊಸಪೇಟೆ ತಾಲೂಕು ವೆಂಕಟಾಪುರ ಗ್ರಾಮದ ಬಳಿ) ಹರಿಯಲು 1.5 ಕಿ.ಮೀ. ಉದ್ದದ ಇಂಟೇಕ್ ಕಾಲುವೆ ನಿರ್ವಿುಸಲಾಗಿದೆ. ತಲಾ 1,300 ಅಶ್ವಶಕ್ತಿ ಒಟ್ಟು ಆರು ಪಂಪ್ ಮೋಟಾರ್​ಗಳಿವೆ. ಪ್ರತಿ ಪಂಪ್ ಮೋಟಾರ್ ಒಂದು ತಾಸಿಗೆ 1,728 ಕ್ಯುಬಿಕ್ ಕಚ್ಚಾ ನೀರೆತ್ತಿ ಮುಖ್ಯ ಕೊಳವೆ ಮಾರ್ಗಕ್ಕೆ ಪೂರೈಸುತ್ತದೆ. ರೈಸಿಂಗ್ ಮೇನ್ ಪೈಪ್ 1.35 ಮೀಟರ್ ಸುತ್ತಳತೆ ಹೊಂದಿದೆ. ಇಲ್ಲಿಂದ 28 ಕಿ.ಮೀ.ದೂರದ ಶಿವಪುರ (ಹೊಸಪೇಟೆ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ)ದ ಮುಖ್ಯ ಶುದ್ಧೀಕರಣ ಸ್ಥಾವರಕ್ಕೆ ಈ ನೀರು ಪೂರೈಕೆಯಾಗುತ್ತದೆ.
ಈ ಸ್ಥಾವರವು ಪ್ರತಿದಿನ 181.45 ದಶಲಕ್ಷ ಲೀಟರ್ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ತಲಾ 80 ಲಕ್ಷ ಲೀಟರ್ ನೀರು ಶೋಧಿಸುವ ಎರಡು ತಿರುಗುಣಿ ತೊಟ್ಟಿಗಳು, ತಲಾ ಆರು ಲಕ್ಷ ಲೀಟರ್ ನೀರು ಶೋಧಿಸುವ 14 ನೆಲಹಾಸುಗಳು, ನೀರು ಕುಡಿಯಲು ಯೋಗ್ಯವಾಗಿಸುವುದಕ್ಕೆ ಆಲಂ, ಕ್ಲೋರಿನ್ ಮಿಶ್ರಣ, ತಲಾ 1200 ಅಶ್ವಶಕ್ತಿಯ ಆರು ಪಂಪ್ ಮೋಟಾರ್​ಗಳು, 87 ಲಕ್ಷ ಲೀಟರ್ ಶುದ್ಧೀಕರಿಸಿದ ನೀರು ಶೇಖರಿಸುವ ಟ್ಯಾಂಕ್ ವ್ಯವಸ್ಥೆಯಿದೆ. ಶಿವಪುರ ಶುದ್ಧೀಕರಣ ಸ್ಥಾವರದಿಂದ ಕೊಳವೆ ಮಾರ್ಗವಾಗಿ ಜರ್ಮಲಿ ಮತ್ತು ಪಾವಗಡ ಬಳಿ ನಿರ್ವಿುಸಿದ ಮಾಸ್ಟರ್ ಸಮತೋಲನ ಜಲಾಶಯ ಜತೆಗೆ ಯೋಜನಾ ವ್ಯಾಪ್ತಿಯಲ್ಲಿ 20 ವಲಯ ಸಮತೋಲನ ಜಲಾಶಯ, ಎಂಟು ಮಧ್ಯಂತರ ಪಂಪ್ ಮೋಟಾರ್​ಗಳನ್ನು ನಿರ್ವಣವಾಗಿವೆ ಎಂದು ಇಂಜಿನಿಯರ್​ಗಳು ಮಾಹಿತಿ ನೀಡಿದರು.
ಸ್ಕಾಡಾ ಮುಖೇನ ಉಸ್ತುವಾರಿ:ನೀರೆತ್ತುವುದು, ಶುದ್ಧೀಕರಿಸುವುದು, ಪೂರೈಕೆ ವ್ಯವಸ್ಥೆಯು ಕಂಪ್ಯೂಟರ್ ಆಧಾರಿತ ದತ್ತಾಂಶ ಸ್ವಾಧೀನದಡಿ ಮೇಲ್ವಿಚಾರಣೆ ಮತ್ತು ನಿಯಂತ್ರಣ (ಸ್ಕಾಡಾ)ದಲ್ಲಿದೆ. ಜಲಾಶಯದ ಹಿನ್ನೀರು ಪಂಪ್ ಮಾಡಿದ ಬಳಿಕ ಮುಖ್ಯ ಕೊಳವೆ ಮಾರ್ಗಕ್ಕೆ ಪ್ರತಿ ಸೆಕೆಂಡ್​ಗೆ ಹರಿಯುತ್ತಿರುವ ನೀರೆಷ್ಟು ಎನ್ನುವುದು ಫ್ಲೋ ಮೀಟರ್​ನಲ್ಲಿ ದಾಖಲಾಗುತ್ತದೆ.
ವಿಜಯನಗರ: ಚಿಲಕ್ನಹಟ್ಟಿ, 15 ಗ್ರಾಮಗಳು, ನಿತ್ಯ- 40 ಲಕ್ಷ ಲೀಟರ್, ಕೂಡ್ಲಿಗಿ ತಾಲೂಕಿನ 215 ಹಳ್ಳಿಗಳು, ನಿತ್ಯ 23.50 ದಶಲಕ್ಷ ಲೀಟರ್
ಚಿತ್ರದುರ್ಗ ಜಿಲ್ಲೆ:ಮೊಳಕಾಲ್ಮೂರು ಪಟ್ಟಣ ಹಾಗೂ 132 ಗ್ರಾಮಗಳು, ನಿತ್ಯ 22.26 ದಶಲಕ್ಷ ಲೀಟರ್, ಚಳ್ಳಕೆರೆ ತಾಲೂಕಿನ 360 ಹಳ್ಳಿಗಳು, ನಿತ್ಯ 46.52 ದಶಲಕ್ಷ ಲೀ, ತುರುವನೂರು ಹೋಬಳಿ ಕೇಂದ್ರ, 59 ಹಳ್ಳಿಗಳು, ನಿತ್ಯ- 9.28 ದಶಲಕ್ಷ ಲೀಟರ್
ತುಮಕೂರು ಜಿಲ್ಲೆ:ಪಾವಗಡ ತಾಲೂಕಿನ ಪಾವಗಡ ಪಟ್ಟಣ ಮತ್ತು 357 ಗ್ರಾಮಗಳು, ನಿತ್ಯ- 36.46 ದಶಲಕ್ಷ ಲೀಟರ್.
ಪಾವಗಡ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಶೇ.97 ಮುಗಿದಿದೆ. ಸದ್ಯಕ್ಕೆ ಪರೀಕ್ಷಾರ್ಥ ನೀರು ಹರಿಯುವಿಕೆ ಪ್ರಗತಿಯಲ್ಲಿದೆ. ಆಗಸ್ಟ್​ನಿಂದಲೇ ಹಂತ ಹಂತವಾಗಿ ಕುಡಿಯುವ ನೀರು ಪೂರೈಕೆಗೆ ಕಂಪನಿ ಉತ್ಸುಕವಾಗಿದೆ.
| ಎಂ.ಕೋಟೇಶ್ವರರಾವ್ ಯೋಜನಾ ವ್ಯವಸ್ಥಾಪಕ, ಎಂಇಐಎಲ್‘
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
