ಬೆಂಗಳೂರುಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಆಗಸ್ಟ್ 25ರಂದು ನಡೆಸಲು ನಿರ್ಧರಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆ ದಿನವೇ ಐಬಿಪಿಎಸ್‌ನ ಬ್ಯಾಂಕ್ ಕ್ಲರಿಕಲ್ ಹುದ್ದೆಗಳ ಪರೀಕ್ಷೆ ನಡೆಸುತ್ತಿರುವ ಕಾರಣ ಕೆಎಎಸ್ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಗೆ 2,10,541 ಮಂದಿ ನೋಂದಣಿ ಮಾಡಿಕೊಂಡಿದ್ದು, ಐಬಿಪಿಎಸ್ ಕ್ಲರಿಕಲ್ ಹುದ್ದೆಗೆ 50 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಎರಡೂ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಒಂದು ಪರೀಕ್ಷೆಯು ಕೈತಪ್ಪಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಭ್ಯರ್ಥಿಗಳ ದೃಷ್ಟಿಯಿಂದ ಕೆಎಎಸ್ ಪರೀಕ್ಷೆ ಮುಂದೂಡಿದರೆ ರಾಜ್ಯದವರಿಗೇ ಲಾಭವಾಗಲಿದೆ. ಇಲ್ಲವಾದಲ್ಲಿ ಕೇಂದ್ರ ಸರ್ಕಾರದ ಹುದ್ದೆಗಳ ವಿಚಾರದಲ್ಲಿ ರಾಜ್ಯದ ಉದ್ಯೋಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ ಎನ್ನುತ್ತಾರೆ ಅಭ್ಯರ್ಥಿ ರಾಜೇಶ್.
ಕೆಎಎಸ್ ಪರೀಕ್ಷೆ ನಿಗದಿಗೂ ಮೊದಲೇ ಐಬಿಪಿಎಸ್ ಪರೀಕ್ಷೆ ನಿಗದಿಯಾಗಿದೆ. ಅಲ್ಲದೆ, ಕನ್ನಡ ಭಾಷೆಯಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ ಸ್ಥಳೀಯವಾಗಿ 50 ಸಾವಿರಕ್ಕೂ ಹೆಚ್ಚಿನ ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಬೇಕೆಂದು ಕೆಪಿಎಸ್ಸಿ ಅಧ್ಯಕ್ಷರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೆಎಎಸ್, ಐಬಿಪಿಎಸ್ ಪರೀಕ್ಷೆ ಜತೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜಂಟಿ ಸಿಎಸ್‌ಐಆರ್ ಯುಜಿಸಿ ನೆಟ್ ಪರೀಕ್ಷೆ ಕೂಡ ಅದೇ ದಿನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳು ದೇಶಾದ್ಯಂತ ನಡೆಯಲಿದೆ. ಕೆಎಎಸ್ ಪರೀಕ್ಷೆಯು ರಾಜ್ಯದ ಮಟ್ಟಿಗೆ ಮಾತ್ರ ನಡೆಯಲಿದೆ. ರಾಜ್ಯದವರ ದೃಷ್ಟಿಯಿಂದ ಕೆಎಎಸ್ ಪರೀಕ್ಷೆ ಮುಂದೂಡುವುದು ಉತ್ತಮವೆಂದು ಖಾನಾಪುರ ಶಾಸಕ ವಿಠ್ಠಲ್ ಎಸ್ ಹಲಗೇಕರ್ ಕೂಡ ಪತ್ರ ಬರೆದಿದ್ದಾರೆ.
ಅದೇ ರೀತಿ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿ ಹಲವರು ಮುಖ್ಯಮಂತ್ರಿಗೆ ಪತ್ರ ಬರೆದು ಪರೀಕ್ಷೆ ಮುಂದೂಡಲು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 2023-24ನೇ ಸಾಲಿನ 384 ಕೆಎಎಸ್ ಜೆಗೆಟೆಡ್ ಪ್ರೊಬೇಷನರಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲ್ಲಿಯಲ್ಲಿ ಜು.21ಕ್ಕೆ ಮುಂದೂಡಲಾಯಿತು. ಬಳಿಕ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಿದ್ದರಿಂದ ಅರ್ಜಿ ಸಲ್ಲಿಸಲು 15 ದಿನಗಳ ಅವಕಾಶ ನೀಡಿ ಪರೀಕ್ಷೆಯನ್ನು ಆ.25ಕ್ಕೆ ಮರು ನಿಗದಿ ಮಾಡಲಾಗಿದೆ.
ಆಯೋಗವು ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ದಿನಾಂಕವನ್ನು ನಿಗದಿ ಮಾಡುವ ಮುನ್ನ ಯುಪಿಎಸ್ಸಿ, ಎಸ್‌ಎಸ್‌ಸಿ ಹಾಗೂ ಕೆಇಎ ವಿವಿಧ ಪ್ರಾಧಿಕಾರಗಳನ್ನು ಪರಿಶೀಲಿಸಿದ ನಂತರವೇ ಪರೀಕ್ಷಾ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಆ.25ರಂದು ಯಾವುದೇ ಪರೀಕ್ಷೆಗಳು ನಿಗದಿಯಾಗದಿರುವ ಕಾರಣ ಪರೀಕ್ಷೆಯನ್ನು ನಿಗದಿ ಮಾಡಲಾಗಿದೆ. ರಾಜ್ಯದ 700 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ.ಅಧಿಸೂಚನೆ ಹೊರಡಿಸಿದ ಒಂದು ವರ್ಷದೊಳಗೆ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸೇರಿ ಮೂರು ಹಂತದಲ್ಲಿ ಪ್ರಕ್ರಿಯೆ ನಡೆಸಬೇಕಿದೆ. ಒಂದು ವೇಳೆ ಮತ್ತೊಮ್ಮೆ ಪರೀಕ್ಷೆ ಮುಂದೂಡಿದರೆ, ನಿಗದಿತ ಕಾಲಮಿತಿಯಲ್ಲಿ ಪರೀಕ್ಷೆ ನಡೆಸಲು ಕಷ್ಟವಾಗಲಿದೆ ಎಂಬುದು ಕೆಪಿಎಸ್ಸಿ ವಾದವಾಗಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one × 1 =
Remember me
